Breaking News: ಮೊಬೈಲ್ ಬಳಸಬೇಡ ಎಂಬ ಪೋಷಕರ ಮಾತಿಗೆ ಬೇಸರ; ಹುಬ್ಬಳ್ಳಿಯಲ್ಲಿ ಬಾಲಕ ಆತ್ಮಹತ್ಯೆ
Hubli News ಮೊಬೈಲ್ ಬಳಸದಂತೆ ಬುದ್ದಿವಾದ ಹೇಳಿದ್ದರಿಂದ ಮನನೊಂದ ಹುಬ್ಬಳ್ಳಿಯ ಬಾಲಕ ಆತ್ಮಹತ್ಯೆಗೆ ಶರಣಾಗಿದ್ಧಾನೆ.ವರದಿ: ಪ್ರಸನ್ನಕುಮಾರ್ ಹಿರೇಮಠ, ಹುಬ್ಬಳ್ಳಿ
ಹುಬ್ಬಳ್ಳಿ : ಮಕ್ಕಳು ನಿತ್ಯ ಮನೆಯಲ್ಲಿ ಮೊಬೈಲ್ ಆಟವಾಡಿಕೊಂಡು ಕಳೆಯುವುದು ಸಾಮಾನ್ಯವಾಗಿದೆ. ಬಾಲಕರು, ಬಾಲಕಿಯರೂ ಕೂಡ ಮೊಬೈಲ್ ಹಿಂದೆ ಬಿದ್ದಿರುವ ಸನ್ನಿವೇಶಗಳಿವೆ. ಮನೆಯಲ್ಲಿ ಇದೇ ವಿಚಾರವಾಗಿ ಆಗಾಗ ಜಗಳಗಳೂ ಆಗುವುದುಂಟು. ಎಷ್ಟೋ ಬಾರಿ ಪೋಷಕರ ಬುದ್ದಿಮಾತಿಗೆ ಕೆಲವರು ಒಪ್ಪಿ ಪಾಲಿಸುವುದೂ ಉಂಟು. ಇನ್ನು ಕೆಲವರು ಮನಸ್ಸಿಗೆ ಹಚ್ಚಿಕೊಂಡು ಜೀವ ಕಳೆದುಕೊಂಡ ಪ್ರಸಂಗಗಳೂ ನಡೆದಿವೆ. ಇಂತಹದ್ದೇ ಘಟನೆಯೊಂದಿಗೆ ಹುಬ್ಬಳ್ಳಿ ಮಹಾನಗರದಲ್ಲಿ ವರದಿಯಾಗಿದೆ. ಮೊಬೈಲ್ ಬಳಕೆ ಮಾಡಬೇಡಾ ಎಂದು ಪಾಲಕರು ಬುದ್ದಿ ಮಾತು ಹೇಳಿದ್ದಕ್ಕೆ ಬಾಲಕನೊಬ್ಬ ಮಾಡಿಕೊಂಡಿರುವ ಘಟನೆ ಇಲ್ಲಿನ ಬೈರಿದೇವರಕೊಪ್ಪ-ಗಾಮನಗಟ್ಟಿ ರಸ್ತೆಯಲ್ಲಿರುವ ರಾಧಿಕಾ ಪಾರ್ಕ್‌ನಲ್ಲಿ ನಡೆದಿದೆ.
ಸಮೃದ್ಧ ಎಂಬ ಬಾಲಕನೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ಮೊಬೈಲ್ ಹೆಚ್ಚು ಬಳಸಬೇಡ.ಸರಿಯಾಗಿ ವಿದ್ಯಾಭ್ಯಾಸ ಮಾಡು ಎಂದು ಬಾಲಕನ ಪಾಲಕರು ತಿಳಿಹೇಳಿದ್ದಕ್ಕೆ ಬೇಸರಗೊಂಡು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಾಲಕ ಆತ್ಮಹತ್ಯಗೆ ಶರಣಾಗಿದ್ದಾನೆ. ಬಾಲಕನ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸೋಮವಾರ ಶಾಲೆಯಿಂದ ಬಂದವರು ಮೊಬೈಲ್ ಹಿಡಿದುಕೊಂಡಿದ್ದ. ಹೋಂ ವರ್ಕ್ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಮೊಬೈಲ್ ಬಳಕೆಯಿಂದ ಓದಿನ ಮೇಲೆ ಆಗುವ ಪರಿಣಾಮದ ಬಗ್ಗೆಯೂ ಬುದ್ದಿವಾದ ಹೇಳಿದ್ದರು. ಇದೇ ವೇಳೆ ಮನೆಯವರು ಏನನ್ನೋ ತರಲು ಹೊರಗೆ ಹೋದಾಗ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಸಮೃದ್ದ. ಹೊರಗಿನಿಂದ ಬಂದು ನೋಡಿದಾಗ ಬಾಗಿಲು ಹಾಕಿಕೊಂಡ ಸ್ಥಿತಿಯಲ್ಲಿದ್ದಾಗ ಅನುಮಾನಗೊಂಡು ನೋಡಿದರು. ಆಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಕುಟುಂಬವದವರು ಮಾಹಿತಿ ನೀಡಿದರು.
ಘಟನೆ ಕುರಿತು ಎಪಿಎಂಸಿ-ನವನಗರ ಪೊಲೀಸ್ ಠಾಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
(ವರದಿ: ಪ್ರಸನ್ನಕುಮಾರ್ ಹಿರೇಮಠ, ಹುಬ್ಬಳ್ಳಿ)
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.
ವಿಭಾಗ