ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಭಾರಿ ಅನಾಹುತ, ಭಾರಿ ಗಾಳಿ ಮಳೆಗೆ ಧರೆಗುರುಳಿದವು ಗಗನಚುಂಬಿ ತೇರುಗಳು, ಇಬ್ಬರ ದುರ್ಮರಣ
ಕನ್ನಡ ಸುದ್ದಿ  /  ಕರ್ನಾಟಕ  /  ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಭಾರಿ ಅನಾಹುತ, ಭಾರಿ ಗಾಳಿ ಮಳೆಗೆ ಧರೆಗುರುಳಿದವು ಗಗನಚುಂಬಿ ತೇರುಗಳು, ಇಬ್ಬರ ದುರ್ಮರಣ

ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಭಾರಿ ಅನಾಹುತ, ಭಾರಿ ಗಾಳಿ ಮಳೆಗೆ ಧರೆಗುರುಳಿದವು ಗಗನಚುಂಬಿ ತೇರುಗಳು, ಇಬ್ಬರ ದುರ್ಮರಣ

Huskur Madduramma Jatre Tragedy: ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಶನಿವಾರ ಸಂಜೆ ಭಾರಿ ದುರಂತ ಸಂಭವಿಸಿದೆ. ಭಾರಿ ಗಾಳಿ ಮಳೆಗೆ ದೊಡ್ಡನಾಗಮಂಗಲ ಮತ್ತು ರಾಯಸಂದ್ರ ತೇರುಗಳು ನೆಲಕ್ಕೆ ಉರುಳಿ ಕಾರಣ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 5 ಜನ ಗಾಯಗೊಂಡಿದ್ದಾರೆ.

ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಭಾರಿ ಅನಾಹುತ ಸಂಭವಿಸಿದ್ದು, ಭಾರಿ ಗಾಳಿ ಮಳೆಗೆ ಗಗನಚುಂಬಿ ತೇರುಗಳು ಧರೆಗುರುಳಿದ ಕಾರಣ ಇಬ್ಬರು ದುರ್ಮರಣಕ್ಕೀಡಾದರು.
ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಭಾರಿ ಅನಾಹುತ ಸಂಭವಿಸಿದ್ದು, ಭಾರಿ ಗಾಳಿ ಮಳೆಗೆ ಗಗನಚುಂಬಿ ತೇರುಗಳು ಧರೆಗುರುಳಿದ ಕಾರಣ ಇಬ್ಬರು ದುರ್ಮರಣಕ್ಕೀಡಾದರು.

Huskur Madduramma Jatre Tragedy: ಆನೇಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಶನಿವಾರ ಸಂಜೆ ಭಾರಿ ದುರಂತ ಸಂಭವಿಸಿದೆ. ಭಾರಿ ಗಾಳಿ ಮಳೆಗೆ ದೊಡ್ಡನಾಗಮಂಗಲ ಮತ್ತು ರಾಯಸಂದ್ರ ತೇರುಗಳು ನೆಲಕ್ಕೆ ಉರುಳಿ ಕಾರಣ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 5 ಜನ ಗಾಯಗೊಂಡಿದ್ದಾರೆ. ಚಿಕ್ಕನಾಗಮಂಗಲ ಸಮೀಪ ದೊಡ್ಡನಾಗಮಂಗಲ ತೇರು ಹಾಗೂ ದೇವಸ್ಥಾನದ ಸಮೀಪ ರಾಯಸಂದ್ರದ ತೇರು ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಭಾರಿ ಗಾಳಿ ಮಳೆಗೆ ಧರೆಗುರುಳಿದವು ಹುಸ್ಕೂರು ಮದ್ದೂರುಮ್ಮನ ಗಗನಚುಂಬಿ ತೇರುಗಳು, ಇಬ್ಬರ ದುರ್ಮರಣ

ಗಗನಚುಂಬಿ ತೇರುಗಳನ್ನು ಹುಸ್ಕೂರಿನತ್ತ ಎಳೆದೊಯ್ಯುತ್ತಿದ್ದ ವೇಳೆ ಭಾರಿ ಗಾಳಿ ಬೀಸಿದ ಕಾರಣ ನಿಯಂತ್ರಣ ತಪ್ಪಿ ಎರಡು ತೇರುಗಳು ಮಗುಚಿಬಿದ್ದಿವೆ. ಈ ಪೈಕಿ ದೇವಾಲಯದ ಬಳಿಯ ರಾಯಸಂದ್ರದ ತೇರು ಜನರ ಮೇಲೆ ಉರುಳಿದೆ. ಈ ತೇರಿನ ಕೆಳಗೆ ಸಿಲುಕಿದ ಇಬ್ಬರು ಭಕ್ತರು ಸಾವನ್ನಪ್ಪಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತರನ್ನು ತಮಿಳುನಾಡು ಹೊಸೂರಿನ ಲೋಹಿತ್‌ (24) ಮತ್ತು ಬೆಂಗಳೂರು ಕೆಂಗೇರಿ ಮೂಲದ ಜ್ಯೋತಿ (14) ಎಂದು ಗುರುತಿಸಲಾಗಿದೆ. ಲಕ್ಕಸಂದ್ರದ ರಾಕೇಶ್ ಹಾಗೂ ಒಬ್ಬ ಮಹಿಳೆ ಸೇರಿ 5 ಜನರಿಗೆ ಗಾಯಗಳಾಗಿದೆ ಎಂದು ಮೂಲಗಳು ತಿಳಿಸಿವೆ.

ದೊಡ್ಡನಾಗಮಂಗಲ ಗ್ರಾಮಸ್ಥರು 110 ಅಡಿಗೂ ಹೆಚ್ಚು ಎತ್ತರದ ತೇರನ್ನು ಕಟ್ಟಿ ಎತ್ತುಗಳ ಮೂಲಕ ಎಳೆದುಕೊಂಡು ಹುಸ್ಕೂರಿನತ್ತ ಹೊರಟಿದ್ದರು. ಚಿಕ್ಕನಾಗಮಂಗಲ ಸಮೀಪ ತೇರು ಆಯತಪ್ಪಿ ದಿಢೀರನೇ ಧರೆಗುರುಳಿತು. ತೇರು ನೆಲಕ್ಕೆ ಉರುಳುತ್ತಿದ್ದಂತೆ ಜನರು ಧಿಕ್ಕಾಪಾಲಾಗಿ ಓಡಿದರು. ದೊಡ್ಡನಾಗಮಮಂಗಲ ತೇರು ನೆಲಕ್ಕುರುಳಿದ ಕೆಲ ತಾಸಿನಲ್ಲಿಯೇ ಮತ್ತೊಂದು ರಾಯಸಂದ್ರ ತೇರು ಬಿರುಗಾಳಿಯಿಂದಾಗಿ ನೆಲಕ್ಕೆ ಉರುಳಿತು.

ಹುಸ್ಕೂರು ಮದ್ದೂರಮ್ಮನ ಜಾತ್ರೆಗೆ ಈ ಬಾರಿ 6 ತೇರುಗಳು

ಸಾಮಾನ್ಯವಾಗಿ ಮದ್ದೂರಮ್ಮ ಜಾತ್ರಿಗೆ 15ಕ್ಕೂ ಹೆಚ್ಚು ಗ್ರಾಮಗಳ ಗಗನಚುಂಬಿ ತೇರುಗಳು ಬರುತ್ತಿದ್ದವು. ಕಾಲಾನುಕ್ರಮದಲ್ಲಿ ತೇರುಗಳ ಸಂಖ್ಯೆಯಲ್ಲಿ ಏರಿಳಿತ ಕಂಡಿದೆ. ಈ ಬಾರಿ ರೈಲ್ವೆ ವಿದ್ಯುದ್ದೀಕರಣದಿಂದಾಗಿ ತೇರುಗಳ ಸಂಖ್ಯೆ 6ಕ್ಕೆ ಇಳಿಕೆಯಾಗಿದೆ. ಈ ಪೈಕಿ ಎರಡು ತೇರುಗಳು ದಾರಿ ಮಧ್ಯೆ ಉರುಳಿ ಬಿದ್ದಿವೆ. ಇನ್ನೊಂದು ರಥದ ಚಕ್ರದಲ್ಲಿ ಸಮಸ್ಯೆಯಾಗಿ ದೇವಸ್ಥಾನ ತಲುಪುವುದು ಕಷ್ಟವಾಗಿತ್ತು. ಎರಡು ರಥಗಳು ದೇವಸ್ಥಾನ ತಲುಪಿದ್ದು ಜಾತ್ರೆ ಸುಗಮವಾಗಿ ನಡೆಯಿತು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಸುತ್ತಮುತ್ತಲಿನ ಗ್ರಾಮಗಳಲ್ಲಿ 100 ಅಡಿಗೂ ಎತ್ತರದ ತೇರುಗಳನ್ನು ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಭಕ್ತರು ಸಿದ್ಧಪಡಿಸುತ್ತಾರೆ. ಈ ಬಾರಿ ಶುಕ್ರವಾರ (ಮಾರ್ಚ್ 21) ತಮ್ಮ ಗ್ರಾಮಗಳಲ್ಲಿ ಈ ತೇರು (ಕುರುಜು)ಗಳಿಗೆ ಪೂಜೆ ಸಲ್ಲಿಸಿ ಶನಿವಾರ ಮಧ್ಯಾಹ್ನ 1ರ ವೇಳೆಗೆ ತಮ್ಮ ಗ್ರಾಮದಿಂದ ಹುಸ್ಕೂರು ಮದ್ದೂರಮ್ಮ ದೇವಾಲಯದ ಆವರಣಕ್ಕೆ ತೇರುಗಳನ್ನು ಎಳೆದು ತಂದರು. ತೇರುಗಳನ್ನು ಎಳೆಯುವುದಕ್ಕೆ ಎತ್ತುಗಳನ್ನು ಬಳಸುತ್ತಾರೆ. ಅವುಗಳಿಗೆ ಆಹಾರ ನೀಡುವ ಕೆಲಸವನ್ನು ದಾರಿಯುದ್ದಕ್ಕೂ ಗ್ರಾಮಸ್ಥರು ಮಾಡಿಕೊಂಡಿದ್ದರು.

ಗಗನಚುಂಬಿ ತೇರು ಉರುಳುವುದು ಹೊಸದಲ್ಲ

ಹುಸ್ಕೂರು ಮದ್ದೂರಮ್ಮ ದೇವಿಯ ಜಾತ್ರೆಗೆ ಆಗಮನಿಸುವ ಗಗನಚುಂಬಿ ತೇರುಗಳು ಧರೆಗೆ ಉರುಳುವುದು ಹೊಸದಲ್ಲ. 100ಕ್ಕೂ ಹೆಚ್ಚು ಅಡಿ ಎತ್ತರದ ತೇರುಗಳನ್ನು ಎಳೆದು ತರುವಾಗ ಗಾಳಿ ಮತ್ತು ಇತರೆ ಅಪಾಯಗಳನ್ನು ಪರಿಗಣಿಸಬೇಕಾಗುತ್ತದೆ. ಆದರೂ ಜನರ ಸಂಭ್ರಮ, ಸಡಗರಕ್ಕೆ ಅವ್ಯಾವುದೂ ಅಡ್ಡಿಯಾಗಿಲ್ಲ. ಕಳೆದ ವರ್ಷ ಅಂದರೆ, 2024ರಲ್ಲಿ ಹೀಲಲಿಗೆ ತೇರು, 2012ರಲ್ಲಿ ರಾಯಸಂದ್ರ ತೇರು, 2013ರಲ್ಲಿ ಕಗ್ಗಲಿಪುರ ತೇರು, 2018ರಲ್ಲಿ ನಾರಾಯಣಘಟ್ಟ ತೇರುಗಳು ವಿವಿಧ ಕಾರಣಗಳಿಂದಾಗಿ ನೆಲಕ್ಕೆ ಉರುಳಿದ್ದವು ಎಂಬುದನ್ನು ಸ್ಥಳೀಯರು ನೆನಪಿಸಿಕೊಂಡಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner