ಕನ್ನಡ ಸುದ್ದಿ  /  Karnataka  /  I Am Healthy Will Visit Party Office Soon Says Former Prime Minister Hd Deve Gowda

HD Devegowda: ನಾನು ಆರೋಗ್ಯವಾಗಿದ್ದೇನೆ; ಶೀಘ್ರದಲ್ಲೇ ಪಕ್ಷದ ಕಚೇರಿಗೆ ಭೇಟಿ - ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ನನ್ನ ಆರೋಗ್ಯ ಉತ್ತಮವಾಗಿದ್ದು, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿ ಹಾಗೂ ಹಲವು ಸಚಿವರು ಇತ್ತೀಚೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಡಿ ಮಾಡಿ ಆರೋಗ್ಯ ವಿಚಾರಿಸಿದ್ದರು.
ಸಿಎಂ ಬೊಮ್ಮಾಯಿ ಹಾಗೂ ಹಲವು ಸಚಿವರು ಇತ್ತೀಚೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಡಿ ಮಾಡಿ ಆರೋಗ್ಯ ವಿಚಾರಿಸಿದ್ದರು.

ಬೆಂಗಳೂರು: ನನ್ನ ಆರೋಗ್ಯ ಉತ್ತಮವಾಗಿದ್ದು, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಪ್ರಧಾನಮಂತ್ರಿಗಳು, ಸ್ವಲ್ಪ ಪ್ರಮಾಣದಲ್ಲಿ ಅನಾರೋಗ್ಯ ಉಂಟಾದ ಕಾರಣಕ್ಕೆ ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದ್ದರು. ಆದಕಾರಣ ಕೆಲ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಾಯಿತು. ಇನ್ನು ಕೆಲ ದಿನ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮನೆಯಿಂದಲೇ ನನ್ನೆಲ್ಲಾ ರಾಜಕೀಯ, ಸಂಸದೀಯ ಹಾಗೂ ಪಕ್ಷದ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಲಿದ್ದೇನೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೆಲವು ದಿನಗಳ ಮಟ್ಟಿಗೆ ನನ್ನ ಭೇಟಿಗೆ ಬರುವುದು ಬೇಡ ಎಂದು ದೇವೇಗೌಡ್ರು ಮನವಿ ಮಾಡಿದ್ದಾರೆ.

ಇನ್ನು ಕೆಲ ದಿನಗಳ ನಂತರ ನಾನೇ ಖುದ್ದು ಪಕ್ಷದ ಕಚೇರಿಗೆ ಭೇಟಿ ನೀಡುವುದರ ಜತೆಗೆ, ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದೇನೆ. ಯಾವುದೇ ಕಾರಣಕ್ಕೂ ಮುಖಂಡರು, ಕಾರ್ಯಕರ್ತರು ಅನ್ಯತಾ ಭಾವಿಸಬಾರದು ಎಂದು ಕೋರುತ್ತೇನೆ ಅಂತಲೂ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ನನ್ನ ನಿವಾಸಕ್ಕೆ ಭೇಟಿ ನೀಡಿ ನನ್ನ ಆರೋಗ್ಯ ವಿಚಾರಿಸಿದ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕಂದಾಯ ಸಚಿವ ಅಶೋಕ್ ಸೇರಿದಂತೆ ಇತರೆ ಎಲ್ಲಾ ಸಚಿವರು, ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಹಾಗೆಯೇ, ನನ್ನ ಆರೋಗ್ಯಕ್ಕಾಗಿ ನಾಡಿನ ದೇವಾಲಯಗಳಲ್ಲಿ ಪೂಜೆ, ಹರಕೆ ಮಾಡಿಕೊಂಡು ಅನ್ನದಾನ ಇತ್ಯಾದಿಗಳನ್ನು ಮಾಡಿದ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ನನ್ನ ಹೃದಯ ತುಂಬಿ ಬಂದಿದೆ. ಅವರೆಲ್ಲರಿಗೂ ನನ್ನ ಶುಭ ಹಾರೈಕೆಗಳು ಎಂದು ದೊಡ್ಡ ಗೌಡ್ರು ಹೇಳಿದ್ದಾರೆ.

ನಿನ್ನೆಯಷ್ಟೇ (ಸೆಪ್ಟೆಂಬರ್ 21) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ‘ದೇವೇಗೌಡರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಬಹಳ ಆತ್ಮೀಯವಾಗಿ, ಲವಲವಿಕೆಯಿಂದ ಮಾತನಾಡಿದ್ದಾರೆ. ಸಾಕಷ್ಟು ಹಳೆಯ ವಿಚಾರಗಳನ್ನು ಮೆಲಕು ಹಾಕಿದರಲ್ಲದೆ ರಾಜ್ಯಕ್ಕೆ ಒಳ್ಳೆಯದು ಮಾಡಬೇಕೆಂಬ ನಿಟ್ಟಿನಲ್ಲಿ ಅವರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಆರೋಗ್ಯ ಚೆನ್ನಾಗಿರಲಿ, ನೂರ್ಕಾಲ ಚೆನ್ನಾಗಿ ಬಾಳಲಿ. ರಾಜ್ಯಕ್ಕೆ ಅವರಿಂದ ಇನ್ನಷ್ಟು ಮಾರ್ಗದರ್ಶನ ಸಿಗುವಂತಾಗಲಿ ಎಂದು ತಿಳಿಸಿದರು.

ಇದಕ್ಕೂ ಮುನ್ನ ಅಂದರೆ ಸೆಪ್ಟೆಂಬರ್ 19 ರಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.

ಹಿರಿಯರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ.

ಬಹಳ ದಿನಗಳ ನಂತರ ದೇವೇಗೌಡರನ್ನು ಭೇಟಿಯಾದದ್ದು ಸಂತೋಷವಾಯಿತು.

ಮಾಜಿ ಸಚಿವರಾದ ಆರ್ ವಿ ದೇಶಪಾಂಡೆ, ಜಮೀರ್ ಅಹಮ್ಮದ್ ಖಾನ್, ಮಾಜಿ ಶಾಸಕರಾದ ಅಶೋಕ ಪಟ್ಟಣ ಸೇರಿದಂತೆ ಹಲವರು ಈ ವೇಳೆ ನನ್ನೊಂದಿಗಿದ್ದರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

IPL_Entry_Point