ನಾನು ಆರ್‌ಎಸ್‌ಎಸ್‌ನಿಂದ ಬಂದವನು, ಕಾಂಗ್ರೆಸ್‌ಗೆ ಯಾಕ್ರೀ ಹೋಗ್ಲಿ, ಬಕೆಟ್‌ ಹಿಡಿಯೋದು ಗೊತ್ತಿಲ್ಲ, ಸಿದ್ದರಾಮಯ್ಯ ಜಾತಿವಾದಿ: ಪ್ರತಾಪಸಿಂಹ
ಕನ್ನಡ ಸುದ್ದಿ  /  ಕರ್ನಾಟಕ  /  ನಾನು ಆರ್‌ಎಸ್‌ಎಸ್‌ನಿಂದ ಬಂದವನು, ಕಾಂಗ್ರೆಸ್‌ಗೆ ಯಾಕ್ರೀ ಹೋಗ್ಲಿ, ಬಕೆಟ್‌ ಹಿಡಿಯೋದು ಗೊತ್ತಿಲ್ಲ, ಸಿದ್ದರಾಮಯ್ಯ ಜಾತಿವಾದಿ: ಪ್ರತಾಪಸಿಂಹ

ನಾನು ಆರ್‌ಎಸ್‌ಎಸ್‌ನಿಂದ ಬಂದವನು, ಕಾಂಗ್ರೆಸ್‌ಗೆ ಯಾಕ್ರೀ ಹೋಗ್ಲಿ, ಬಕೆಟ್‌ ಹಿಡಿಯೋದು ಗೊತ್ತಿಲ್ಲ, ಸಿದ್ದರಾಮಯ್ಯ ಜಾತಿವಾದಿ: ಪ್ರತಾಪಸಿಂಹ

ಮೈಸೂರು ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪಸಿಂಹ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನಾನು ಆರ್‌ಎಸ್‌ಎಸ್‌ ನಿಂದ ಬಂದವನು ಎಂದು ಹೇಳಿಕೊಂಡಿದ್ದಾರೆ.

ನಾನೇಕೆ ಕಾಂಗ್ರೆಸ್‌ಗೆ ಹೋಗ್ಲಿ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.
ನಾನೇಕೆ ಕಾಂಗ್ರೆಸ್‌ಗೆ ಹೋಗ್ಲಿ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.

ಮೈಸೂರು: ಕಾಂಗ್ರೆಸ್ ನಿಂದ ಬಿಜೆಪಿಗೆ ಬರುವ ಅನಿವಾರ್ಯತೆ ಬೇರೆಯವರಿಗೆ ಇದೆ. ಪ್ರತಾಪ‌ಸಿಂಹಗೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಅನಿವಾರ್ಯತೆ ಬಂದಿಲ್ಲ. ನಮ್ಮಪ್ಪನೂ ಜನಸಂಘ. ಪ್ರತಾಪ್ ಸಿಂಹನೂ ಜನಸಂಘದ ಹೊಸ ಅವತಾರ. ನಾನು ಈಗಲೂ ಬಿಜೆಪಿಯಲ್ಲಿದ್ದೇನೆ. ನಾನು ಸೈದ್ಧಾಂತಿಕವಾಗಿ ಬದ್ಧತೆಯಿಂದ ಬಂದವನು. ಕಾಂಗ್ರೆಸ್ ನಿಂದ ನನಗೆ ಯಾರ್ಯಾರು ಟಿಕೆಟ್ ಆಫರ್ ಮಾಡಿದರೋ ಅವರನ್ನು ಕೇಳಿ. ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಾಗಿದ್ದರೇ ಚುನಾವಣೆಯ ಸಮಯದಲ್ಲೇ ಹೋಗುತ್ತಿದ್ದೆ. ಈಗ ಹೋಗುವ ದರ್ದು ಇಲ್ಲ. ಸಿದ್ದರಾಮಯ್ಯ ಅವರಿಂದ ಅತಿ ಹೆಚ್ಚು ತೊಂದರೆಗೊಳಗಾದ ಹಳೇ ಮೈಸೂರು ಭಾಗದ ರಾಜಕಾರಣಿ ನಾನು. ಸಿದ್ದರಾಮಯ್ಯ ಹಿಂದು ವಿರೋಧಿ. ಸಿದ್ದರಾಮಯ್ಯ ಜಾತಿ ವಾದಿ. ಇದು ಮೈಸೂರು ಕೊಡಗು ಮಾಜಿ ಸಂಸದ ಪ್ರತಾಪಸಿಂಹ ಮೈಸೂರಿನಲ್ಲಿ ಡಿ. 30ರ ಸೋಮವಾರ ನಡೆಸಿದ ವಾಗ್ದಾಳಿ.

ಪ್ರತಾಪ್ ಸಿಂಹ ಒಬ್ಬನೇ ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಿರುವವನು. ಕಳೆದ ಎದರು ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಂಡವರು ಯಾರ್ಯಾರು ಎಲ್ಲಿದ್ದಾರೆ ನೋಡಿ. ನಾನು ನರೇಂದ್ರ ಮೋದಿ ಹೆಸರನ್ನು ಹೇಳಿಕೊಂಡು ರಾಜಕಾರಣಕ್ಕೆ ಬಂದಿರುವವನು. ನನ್ನ ನಿಷ್ಠೆ ಹಾಗೂ ಬದ್ಧತೆ ಬಗ್ಗೆ ಚರ್ಚೆ ಮಾಡಲು ಹೋಗಬೇಡಿ. ನಾನು ಕಡೆಯವರೆಗೆ ಬಿಜೆಪಿಯಲ್ಲೇ ಇರುತ್ತೇನೆಎಂದು ಪಕ್ಷದಲ್ಲಿರುವ ವಿರೋಧಿಗಳಿಗೆ ಪ್ರತಾಪ್ ಸಿಂಹ ಟಾಂಗ್ ನೀಡಿದರು.

ಸಿದ್ದರಾಮಯ್ಯರನ್ನು ವಿರೋಧಿಸಿಕೊಂಡೇ ಬಂದಿರುವೆ

ಸಿದ್ದರಾಮಯ್ಯ ಹೆಸರಿಡಲು ಮಹಾನಗರಪಾಲಿಕೆ ಮುಂದಾಗಿದೆ ಎಂಬ ವಿಚಾರ ತಿಳಿದು ಪಾಲಿಕೆಯಲ್ಲಿ ವಿಚಾರಿಸಿದೆ. ಪಾಲಿಕೆ ಅಸ್ತಿತ್ವಕ್ಕೆ ಬಂದ ಮೇಲೆ ರಸ್ತೆಗೆ ಯಾವ ಹೆಸರನ್ನು ಇಟ್ಟಿಲ್ಲ ಎಂದು ಹೇಳಿದರು. ಹೀಗಾಗಿ ಸಿದ್ದರಾಮಯ್ಯ ಹೆಸರು ಇಟ್ಕೊಳ್ಳಲಿ ಬಿಡಿ ಅಂಥ ಹೇಳಿದೆ. ಈ ಹೇಳಿಕೆ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಪಡೆದುಕೊಂಡಿದೆ. ನಾನು ಕಾಂಗ್ರೆಸ್ ಸೇರುತ್ತೇನೆ, ಸಿದ್ದರಾಮಯ್ಯ ಪರವಾಗಿ ಪ್ರತಾಪ ಸಿಂಹ ಸಾಫ್ಟ್ ಆಗಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಎಲ್ಲರಿಗೂ ಸ್ಪಷ್ಟವಾಗಿ ಹೇಳುತ್ತೇನೆ. ಕಳೆದ 11 ವರ್ಷಗಳಿಂದ ಸಿದ್ದರಾಮಯ್ಯ ಅವರನ್ನು ಸೈದ್ದಾಂತಿಕವಾಗಿ ಧರ್ಮದ ವಿಚಾರವಾಗಿ ವಿರೋಧ ಮಾಡುತ್ತಾ ಬಂದಿದ್ದೇನೆ. ಸಿದ್ದರಾಮಯ್ಯ ಜಾತಿವಾದದ ಬಗ್ಗೆ ಖಡಾಖಂಡಿತವಾಗಿ ವಿರೋಧ ಮಾಡಿದವನು ಪ್ರತಾಪ ಸಿಂಹ ಒಬ್ಬನೇ. ಸಿದ್ದರಾಮಯ್ಯರ ಕೆಲ ವಿಚಾರಗಳಿಗೆ ಆಕ್ಷೇಪ ಮಾಡಿದ್ದೇನೆ. ಸಿದ್ದರಾಮಯ್ಯ ಮೈಸೂರು ಏರ್ ಪೋರ್ಟ್ ಗೆ ಟಿಪ್ಪು ಹೆಸರಿಡಲು ಮುಂದಾಗಿದ್ದರು. ಹೀಗಾಗಿ ಬೊಮ್ಮಾಯಿ ಸರ್ಕಾರದಲ್ಲಿ‌ 311 ಕೋಟಿ ಹಣ ಕೊಡಿಸಿ ಏರ್ ಪೋರ್ಟ್ ಗೆ ಹೆಸರಿಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿಸಿದೆ. ಮಹಾರಾಣಿ ಅವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಾಫರ್ ಷರೀಫ್ ರೈಲಿಗೆ ಟಿಪ್ಪು ಹೆಸರಿಟ್ಟಿದ್ದರು. ಇದಕ್ಕೆ ಯಾರು ವಿರೋಧ ಮಾಡಿರಲಿಲ್ಲ. ನಾನು ಸಂಸದನಾದ ಮೇಲೆ ಹೆಸರನ್ನು ಬದಲಾವಣೆ ಮಾಡಿಸಿದೆ. ಇತಿಹಾಸದಲ್ಲೇ ಯಾರು ಈ ಕೆಲಸವನ್ನು ಮಾಡಿಲ್ಲ. ಇದಕ್ಕೆ ಅರಮನೆಯಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌. ಒಡೆಯರ್ ಎಕ್ಸ್ ಪ್ರೆಸ್ ಹೆಸರಿಡಿಸಿದ್ದು ನಾನು. ಮಹಿಷ ದಸರಾಗೆ ವಿರೋಧ ಮಾಡಿದ್ದು ನಾನೊಬ್ಬನೇ‌. ಇದಕ್ಕೆ ನಮ್ಮ ಪಕ್ಷದ ನಾಯಕರೇ ನನ್ನ ಜೊತೆಗೆ ಬರಲಿಲ್ಲ. ಇದು ನನ್ನ ಬದ್ದತೆ‌. ಮೈಸೂರಿನಲ್ಲಿ ಜನರು ಈಗಾಗಲೇ ಇಟ್ಟಿರುವ ಹೆಸರನ್ನು ಯಾರು ಬಳಸುವುದಿಲ್ಲ. ರೂಢಿಗತವಾದ ಹೆಸರನ್ನು ಬಳಸುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯ ಜಾತಿ ವಾದಿ ಅಷ್ಟೇ ಅಲ್ಲ ಹಿಂದು ವಿರೋಧಿ. ವರುಣ ವಿಧಾನಸಭೆ ಕ್ಷೇತ್ರದ ಚುನಾವಣೆ ವೇಳೆ ಹೋರಾಟ ಮಾಡಿದ್ದಕ್ಕೆ ಎರಡು ಕೇಸ್ ಹಾಕಿಸಿದ್ದಾರೆ. ಈಗ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ 5 ಕೇಸ್ ಹಾಕಿಸಿದ್ದಾರೆ‌. ಮೂರು ತಿಂಗಳಿನಲ್ಲಿ 5 ಎಫ್ಐಆರ್ ಯಾವ ಲೀಡರ್ ಗೂ ಹಾಕಿಲ್ಲ. ಮೈಸೂರಿನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡುವುದಕ್ಕೆ ಸಿದ್ದರಾಮಯ್ಯ ತಡೆದರು. ಮೈಸೂರು ನಗರದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಲು ಎರಡು ವರ್ಷದಿಂದ ಕಲಾಮಂದಿರದ ಮುಂಭಾಗದಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. 25 ಲಕ್ಷ ಖರ್ಚು ಮಾಡಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಆದರೆ ಒಂದುವರೆ ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಪ್ರತಿಮೆ ಹಾಕಲು ಬಿಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ರಸ್ತೆ ಹೆಸರು ಬದಲಿಸಬೇಡಿ

ಮೈಸೂರಿನ ಕೆ ಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರವಾಗಿ ದಾಖಲೆಗಳಲ್ಲಿ ಪ್ರಿನ್ಸೆಸ್ ರಸ್ತೆ ಎಂದು ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ. ಕೆ ಆರ್ ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ಮಹಾರಾಜರ ಕಾಲದಲ್ಲೇ ಹೆಸರಿತ್ತು ಎನ್ನುವುದಾದರೆ ದಯವಿಟ್ಟು ಬದಲಾವಣೆ ಮಾಡುವುದು ಬೇಡ. ಇದಕ್ಕೆ ತಕರಾರು ಇಲ್ಲ.

ಎಲ್ಲೆ ಮೀರಬೇಡಿ

ಪ್ರತಾಪ್ ಸಿಂಹ ಬಕೆಟ್ ಹಿಡಿಯುತ್ತಿದ್ದಾರೆ ಎಂದು ರಘು ಕೌಟಿಲ್ಯ ಹೇಳಿಕೆ ವಿಚಾರ‌ಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್‌, ಸಭ್ಯತೆಯ ಗೆರೆಯನ್ನು ಮೀರಿದಂತಹ ಕೆಲವು ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಯಾರು ಹೇಳಿಕೆ ಕೊಟ್ಟಿದ್ದಾರೋ, ಅವರು ಯಾವ ಪಕ್ಷದಿಂದ ಬಂದಿದ್ದಾರೆ, ಅವರು ಸ್ಥಾನಮಾನಗಳಿಗಾಗಿ ಯಾವ್ಯಾವ ದಾರಿಯನ್ನು ಹಿಡಿದರು ಎಂಬುದು ಇಡೀ ಮೈಸೂರಿಗೆ ಗೊತ್ತಿದೆ. ಹೀಗಾಗಿ ಇಂತಹ ಹೇಳಿಕೆಗೆ, ಟೀಕೆಗೆ ಉತ್ತರ ಕೊಡಲು ಹೋಗುವುದಿಲ್ಲ. ಹಿರಿಯ ರಾಜಕಾರಣಿ ಅಂದುಕೊಂಡಿರುವವರು ಸಭ್ಯತೆಯ ಗೆರೆಯನ್ನು ಮೀರಿ ಹೇಳಿಕೆ ಕೊಡಬಾರದು. ನಾನು ನೇರವಾಗಿ ಮಾತನಾಡುತ್ತೇನೆ ಎಂದರು.

Whats_app_banner