ಭಾರತದ ಕೃಷಿ ತಜ್ಞ,ಕನ್ನಡಿಗ ಅಯ್ಯಪ್ಪನ್‌ ಕಾವೇರಿ ನದಿಯಲ್ಲಿ ನಿಗೂಢ ಸಾವು; ಪೊಲೀಸ್‌ ತನಿಖೆ, ಪರಿಚಯಸ್ಥರಿಗೆ ಆಘಾತ
ಕನ್ನಡ ಸುದ್ದಿ  /  ಕರ್ನಾಟಕ  /  ಭಾರತದ ಕೃಷಿ ತಜ್ಞ,ಕನ್ನಡಿಗ ಅಯ್ಯಪ್ಪನ್‌ ಕಾವೇರಿ ನದಿಯಲ್ಲಿ ನಿಗೂಢ ಸಾವು; ಪೊಲೀಸ್‌ ತನಿಖೆ, ಪರಿಚಯಸ್ಥರಿಗೆ ಆಘಾತ

ಭಾರತದ ಕೃಷಿ ತಜ್ಞ,ಕನ್ನಡಿಗ ಅಯ್ಯಪ್ಪನ್‌ ಕಾವೇರಿ ನದಿಯಲ್ಲಿ ನಿಗೂಢ ಸಾವು; ಪೊಲೀಸ್‌ ತನಿಖೆ, ಪರಿಚಯಸ್ಥರಿಗೆ ಆಘಾತ

ಭಾರತದ ಕೃಷಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿ, ಕೃಷಿ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿರುವ ಡಾ.ಅಯ್ಯಪ್ಪನ್‌ ಅವರು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದು,ಕಾರಣಕ್ಕಾಗಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕೃಷಿ ತಜ್ಞ, ಕನ್ನಡಿಗ ಪದ್ಮಶ್ರೀ ಡಾ.ಎಸ್‌.ಅಯ್ಯಪ್ಪನ್‌ ಅವರ ಸಾವಿನ ನಿಗೂಢತೆ ಬಯಲಾಗಿಲ್ಲ.
ಕೃಷಿ ತಜ್ಞ, ಕನ್ನಡಿಗ ಪದ್ಮಶ್ರೀ ಡಾ.ಎಸ್‌.ಅಯ್ಯಪ್ಪನ್‌ ಅವರ ಸಾವಿನ ನಿಗೂಢತೆ ಬಯಲಾಗಿಲ್ಲ.

ಮೈಸೂರು: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಂಗಳೂರು- ಮೈಸೂರು ಹೆದ್ದಾರಿ ಸಮೀಪದ ಕಾವೇರಿಯಲ್ಲಿ ಮೃತಪಟ್ಟಿರುವ ಭಾರತದ ಕೃಷಿ ತಜ್ಞ, ಪದ್ಮಶ್ರೀ ಡಾ.ಎಸ್‌.ಅಯ್ಯಪ್ಪನ್‌ ಅವರ ಸಾವಿನ ನಿಗೂಢತೆ ಇನ್ನೂ ಬಯಲಾಗಿಲ್ಲ. ಶ್ರೀರಂಗಪಟ್ಟಣ ಹಾಗೂ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸರು ಅವರ ಸಾವಿನ ಕುರಿತು ಕುಟುಂಬದವರು, ಪರಿಚಯಸ್ಥರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆಕಸ್ಮಿಕವಾಗಿ ಸಾವಾಗಿದೆಯೋ ಅಥವಾ ಆತ್ಮಹತ್ಯೆಯನ್ನೇನಾದರೂ ಮಾಡಿಕೊಂಡರೋ ಇಲ್ಲವೇ ಬೇರೆ ರೀತಿಯಲ್ಲಿ ತೊಂದರೆಗೆ ಒಳಗಾಗಿ ಸಾವಿಗೀಡಾದರೋ ಎನ್ನುವ ಚರ್ಚೆಗಳು ಅಯ್ಯಪ್ಪನ್‌ ಅವರ ಆಪ್ತ ವಲಯದಲ್ಲಿ ನಡೆದಿವೆ.

ಈಗಾಗಲೇ ಮರಣೋತ್ತರ ಪರೀಕ್ಷೆಯ ಬಳಿಕ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಮೈಸೂರಿನ ಜೆಪಿನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ.

ಭಾರತದ 'ನೀಲಿ ಕ್ರಾಂತಿ'ಯಲ್ಲಿ ಪಾತ್ರ ವಹಿಸಿದ ಕೀರ್ತಿಗೆ ಪಾತ್ರರಾದ ಅಯ್ಯಪ್ಪನ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅಯ್ಯಪ್ಪನ್‌ ಅವರು ಉನ್ನತ ಹುದ್ದೆಯಲ್ಲಿದ್ದರೂ ನಿವೃತ್ತಿ ಬಳಿಕ ಮೈಸೂರಿನಲ್ಲಿ ನೆಲೆಸಿದ್ದರು. ಅತ್ಯಂತ ಸರಳವಾಗಿ ಬದುಕುತ್ತಿದ್ದರು. ತಮ್ಮದೇ ಬೈಕ್‌ನಲ್ಲಿ ಖುದ್ದು ಚಲಾಯಿಸಿಕೊಂಡು ಎಲ್ಲೆಡೆ ಹೋಗುತ್ತಿದ್ದರು ಎಂದು ಆತ್ಮೀಯರು ನೆನಪಿಸಿಕೊಳ್ಳುತ್ತಾರೆ. ಶ್ರೀರಂಗಪಟ್ಟಣದ ಕಾವೇರಿ ನದಿಯ ದಡದಲ್ಲಿರುವ ಸಾಯಿಬಾಬಾ ಆಶ್ರಮದಲ್ಲಿ ಅವರು ಆಗಾಗ್ಗೆ ಧ್ಯಾನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಣವಾದರೂ ಏನಿರಬಹುದು

ಇಷ್ಟು ಸರಳವಾಗಿ ಇದ್ದ ಅವರಿಗೆ ಆರೋಗ್ಯ ಸಮಸ್ಯೆ ಏನಾದರೂ ಇತ್ತಾ.ಮನೆಯಲ್ಲಿ ಏನಾದರೂ ಸಮಸ್ಯೆಗಳು ಇದ್ದವಾ ಎನ್ನುವ ಆಯಾಮದಲ್ಲಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಾವಿನ ನೋವಿನಲ್ಲಿ ಅವರ ಕುಟುಂಬದವರಿಂದ ಹೆಚ್ಚಿನ ಮಾಹಿತಿ ಪಡೆಯಲು ಆಗಿಲ್ಲ. ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದು ಮೈಸೂರಿನ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಮಾಜಿ ಮಹಾನಿರ್ದೇಶಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಬ್ಬಣ್ಣ ಅಯ್ಯಪ್ಪನ್ ಅವರು ಶ್ರೀರಂಗಪಟ್ಟಣದ ಬಳಿಯ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.ಅಯ್ಯಪ್ಪನ್ (70) ಕೃಷಿ ಮತ್ತು ಮೀನುಗಾರಿಕೆ (ಜಲಚರ ಸಾಕಣೆ) ವಿಜ್ಞಾನಿಯಾಗಿದ್ದರು.

ಶನಿವಾರ ಅವರ ಶವ ಕಾವೇರಿ ನದಿಯಲ್ಲಿ ತೇಲುತ್ತಿರುವುದನ್ನು ಜನರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆನಂತರ ಶವವನ್ನು ಹೊರತೆಗೆಯಲಾಗಿತ್ತು.

ಪೊಲೀಸರ ಪ್ರಕಾರ, ಅವರ ದ್ವಿಚಕ್ರ ವಾಹನವು ನದಿಯ ದಡದಲ್ಲಿ ಪತ್ತೆಯಾಗಿದೆ ಮತ್ತು ಅವರು ನದಿಗೆ ಹಾರಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ತನಿಖೆಯಿಂದ ಮಾತ್ರ ಅವರ ಸಾವಿಗೆ ಕಾರಣವನ್ನು ಕಂಡುಹಿಡಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರಿನ ವಿಶ್ವೇಶ್ವರ ನಗರ ಕೈಗಾರಿಕಾ ಪ್ರದೇಶದ ನಿವಾಸಿಯಾಗಿದ್ದ ಅಯ್ಯಪ್ಪನ್ ಮೇ 7ರಂದು ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಒಡನಾಡಿಗಳು, ಆತ್ಮೀಯರ ನೆನಪು

ನಮ್ಮ ಮನೆಗೆ ಪತ್ನಿ ಸಮೇತವಾಗಿ ಅಯ್ಯಪ್ಪನ್ ಬಂದಿದ್ದಾರೆ. ಸರಳತೆಯ ಸಾಕಾರಮೂರ್ತಿಯಂತೆ ಇದ್ದರು.‌ ಬೈಕ್‌ನಲ್ಲಿಯೇ ಬರುತ್ತಿದ್ದರು. ಅವರು ದೆಹಲಿಯಲ್ಲಿ ಐಸಿಎಆರ್‌ ಮಹಾನಿರ್ದೇಶಕರಾಗಿದ್ದಾಗ ಕೃಷಿ ವಿಚಾರವಾಗಿ ಕರೆ ಮಾಡಿದಾಗ ಅತ್ಯಂತ ಪ್ರೀತಿಯಿಂದ ಮಾತನಾಡಿ ಅದಕ್ಕೆ ಸ್ಪಂದಿಸುತ್ತಿದ್ದರು ಎಂದು ಅರಣ್ಯ , ಪರಿಸರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ ನೆನಪಿಸಿಕೊಂಡರು.

ಅವರು ರಾಮಕೃಷ್ಣ ಆಶ್ರಮದ ಭಕ್ತರಾಗಿದ್ದರು. ಹದಿನೈದು ದಿನಕ್ಕೊಮ್ಮೆ ಆಶ್ರಮದ ಧ್ಯಾನ ಮಂದಿರದಲ್ಲಿ ತಮ್ಮ ಪಾಡಿಗೆ ಧ್ಯಾನ ಮಾಡಿ ಹೋಗೋರು. ಕೆಲವೊಮ್ಮೆ ನನ್ನನ್ನು ಭೇಟಿ ಮಾಡಿ ಮಾತನಾಡೋರು. ಏನಾಯಿತೋ ಅನ್ನುವುದು ಗೊತ್ತಿಲ್ಲ. ಅವರ ಅಕಾಲಿಕ ಸಾವು ಬೇಸರ ತರಿಸಿದೆ ಎಂದವರು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‌.

ಡಾ. ಸುಬ್ಬಣ್ಣ ಅಯ್ಯಪ್ಪನ್ ಅವರು ಕೃಷಿ ಕ್ಷೇತ್ರದಲ್ಲಿ ಅಪಾರಜ್ಞಾನವುಳ್ಳವರು. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಕ್ಷೇತ್ರದಲ್ಲಿ ಅನುಪಮಾ ಸೇವೆ ಸಲ್ಲಿಸಿದವರು. ವರ್ಷದ ಹಿಂದೆಯಷ್ಟೇ ವಿಜಯಪುರ ಜಿಲ್ಲೆಯ ಸಿಂದಗಿಯ ಸಾರಂಗಮಠದ ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ ಖ್ಯಾತ ವಿಜ್ಞಾನಿಗಳಿಗೆ ಕೊಡ ಮಾಡುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅವರ ನಿಧನ ನಿಜಕ್ಕೂ ಕೃಷಿ ಕ್ಷೇತ್ರಕ್ಕೆ ಮತ್ತು ಭಾರತ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದವರು ವಿಧಾನಪರಿಷತ್‌ ಮಾಜಿ ಸದಸ್ಯ ಅರುಣ್‌ ಶಹಾಪುರ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.