Sri Ram Sena: ನಮಾಜ್‌ಗೆ ಅವಕಾಶ ಕೊಟ್ಟರೆ ವಿಧಾನಸಭೆಯೊಳಗೆ ನುಗ್ಗಿ ಹನುಮಾನ್ ಚಾಲೀಸಾ ಪಠಣ ಮಾಡ್ತೀವಿ; ಶ್ರೀರಾಮಸೇನೆ ಎಚ್ಚರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Sri Ram Sena: ನಮಾಜ್‌ಗೆ ಅವಕಾಶ ಕೊಟ್ಟರೆ ವಿಧಾನಸಭೆಯೊಳಗೆ ನುಗ್ಗಿ ಹನುಮಾನ್ ಚಾಲೀಸಾ ಪಠಣ ಮಾಡ್ತೀವಿ; ಶ್ರೀರಾಮಸೇನೆ ಎಚ್ಚರಿಕೆ

Sri Ram Sena: ನಮಾಜ್‌ಗೆ ಅವಕಾಶ ಕೊಟ್ಟರೆ ವಿಧಾನಸಭೆಯೊಳಗೆ ನುಗ್ಗಿ ಹನುಮಾನ್ ಚಾಲೀಸಾ ಪಠಣ ಮಾಡ್ತೀವಿ; ಶ್ರೀರಾಮಸೇನೆ ಎಚ್ಚರಿಕೆ

ಕಾಂಗ್ರೆಸ್ ಸರ್ಕಾರ ಮುಸ್ಲಿಂರ ತುಷ್ಟೀಕರಣ ಮಾಡುತ್ತಲೇ ಅಧಿಕಾರ ಹಿಡಿದಿದ್ದು, ಈಗ ಇದೇ ಪಕ್ಷದ ಶಾಸಕ ಫಾರೂಕ್ ಎಂಬುವರು ವಿಧಾನಸಭೆಯಲ್ಲಿ ನಮಾಜ್‌ಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಮುಖಂಡರು ಹೇಳಿದ್ದಾರೆ.

 ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ದಾವಣಗೆರೆ: ಇತ್ತೀಚಿಗೆ ಕಾಂಗ್ರೆಸ್ ಶಾಸಕ ಎಂ.ಬಿ. ಫಾರೂಕ್ ವಿಧಾನಸಭೆಯೊಳಗೆ ನಮಾಜ್ ಮಾಡಲು ಅವಕಾಶ ಕೇಳಿರುವುದನ್ನು ಖಂಡಿಸಿರುವ ಶ್ರೀರಾಮಸೇನೆ (Sri Ram Sena) ಕಾರ್ಯಕರ್ತರು, ಹಾಗೊಂದು ವೇಳೆ ನಮಾಜ್‌ಗೆ (Namaz) ಅವಕಾಶ ಮಾಡಿಕೊಟ್ಟರೆ ವಿಧಾನಸಭೆಯೊಳಗೆ (Karnataka Assembly) ನುಗ್ಗಿ ಹನುಮಾನ್ ಚಾಲಿಸ ಪಠಣ (Chanting of Hanuman Chalisa) ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ (Davangere) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಕಾಂಗ್ರೆಸ್ ಸರ್ಕಾರ (Congress Govt) ಮುಸ್ಲಿಂರ ತುಷ್ಟೀಕರಣ ಮಾಡುತ್ತಲೇ ಅಧಿಕಾರ ಹಿಡಿದಿದ್ದು, ಈಗ ಇದೇ ಪಕ್ಷದ ಶಾಸಕ ಫಾರೂಕ್ ವಿಧಾನಸಭೆಯಲ್ಲಿ ನಮಾಜ್‌ಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸ್ಪೀಕರ್ ಒಂದು ವೇಳೆ ನಮಾಜ್‌ಗೆ ಅವಕಾಶ ಮಾಡಿಕೊಟ್ಟರೆ ಶ್ರೀರಾಮಸೇನೆಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದಿದ್ದಾರೆ.

ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲವಿದ್ದಂತೆ. ಇಲ್ಲಿ ಧರ್ಮಾತೀತವಾಗಿ ನಡೆದುಕೊಳ್ಳಬೇಕು. ಫಾರೂಕ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ದೊಡ್ಡ ಉದ್ಯಮಿಯೂ ಹೌದು. ಇವರು ಅಸಂಬದ್ಧವಾಗಿ ಮಾತನಾಡಿದರೆ ನಾವು ಸಹಿಸುವುದಿಲ್ಲ. ವಿಧಾನಸಭಾಧ್ಯಕ್ಷರು ಕಡತದಿಂದ ಈ ಮಾತು ತೆಗೆಯಬೇಕು. ಕೂಡಲೇ ಫಾರೂಕ್ ರಾಜ್ಯದ ಜನರ ಕ್ಷಮೆಯಾಚಿಸುವಂತೆ ಆದೇಶ ನೀಡಬೇಕು. ಇಲ್ಲದಿದ್ದರೆ ಸದನದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದ್ದಾರೆ.

5 ಲಕ್ಷ ಸಹಿ ಸಂಗ್ರಹ ಅಭಿಯಾನ

ಸಮಾನ ನಾಗರಿಕ ಕಾನೂನು ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ 5 ಲಕ್ಷ ಸಹಿ ಸಂಗ್ರಹಿಸುವ ಅಭಿಯಾನವನ್ನು ಜುಲೈ 18 ರಿಂದ 28 ರವರೆಗೆ ನಡೆಸಲು ಶ್ರೀರಾಮಸೇನೆ ತೀರ್ಮಾನಿಸಿದೆ. ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ 5 ಲಕ್ಷ ಸಹಿ ಸಂಗ್ರಹ ಮಾಡಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಅವರಿಗೆ ಸಲ್ಲಿಸಲಾಗುವುದು. ಗಣ್ಯ ವ್ಯಕ್ತಿಗಳು, ಸ್ವಾಮೀಜಿಗಳು, ವಕೀಲರು, ವೈದ್ಯರು ಸೇರಿದಂತೆ ಗಣ್ಯರು ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋ ಶಾಲೆಗಾಗಿ ಆರೆಸ್ಸೆಸ್‌ಗೆ 35 ಎಕರೆ ಭೂಮಿಯನ್ನು ನೀಡಲಾಗಿತ್ತು. ಆದರೆ, ಗೋ ಸಂರಕ್ಷಣೆಗಾಗಿ ಕೊಟ್ಟಿರುವ ಜಾಗವನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿರುವುದು ಖಂಡನೀಯ. ಅದೇನೂ ಪಬ್, ರೆಸ್ಟೋರೆಂಟ್ ನಿರ್ಮಾಣಕ್ಕಾಗಿ ಜಾಗಕೊಟ್ಟಿರಲಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ವಕ್ಫ್ ಬೋರ್ಡ್ ಸಾವಿರಾರು ಎಕರೆ ಭೂಮಿ ಕಬಳಿಸಿರುವ ಬಗ್ಗೆ ದಾಖಲೆ ಸಮೇತ ಸರ್ಕಾರಕ್ಕೆ ವರದಿ ಕೊಡಲಾಗಿದ್ದು, ಈ ಆಸ್ತಿ ವಾಪಸ್ ಪಡೆಯಲಿ ಎಂದು ಸವಾಲು ಹಾಕಿದರು.

ಲವ್ ಜಿಹಾದ್: ದಾವಣಗೆರೆಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ದೊಡ್ಡ ಕುಟುಂಬಗಳನ್ನ ಟಾರ್ಗೆಟ್ ಮಾಡಿ ಇಂಥ ಕೃತ್ಯ ನಡೆಸಲಾಗುತ್ತಿದೆ. ಲವ್ ಜಿಹಾದ್, ಮತಾಂತರ ತಡೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಪ್ರಯತ್ನಿಸಿದ್ದರು.

ಪೊಲೀಸ್ ಇಲಾಖೆ ಕೂಡಲೇ ಮಹಿಳಾ ಪೊಲೀಸ್ ತಂಡ ರಚಿಸಿ ಲವ್ ಜಿಹಾದ್, ಮತಾಂತರ ತಡೆಯಲು ಮುಂದಾಗಬೇಕು. ಇಲ್ಲದಿದ್ದರೆ ಶ್ರೀರಾಮಸೇನೆ ರಸ್ತೆಗಿಳಿದು ಹೋರಾಟ ನಡೆಸಲಿದೆ. ಹಾಗೊಂದು ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಂದರೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಸಾಗರ್, ಜಿಲ್ಲಾ ಉಪಾಧ್ಯಕ್ಷ ಆಲೂರು ರಾಜಶೇಖರ್, ಜಿಲ್ಲಾ ಖಜಾಂಚಿ ಶ್ರೀಧರ್, ಡಿಬಿ ವಿನೋದ್ ರಾಜ್, ಬಿಜಿ ರಾಹುಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Whats_app_banner