ರಾಜ್ಯದ ಅಕ್ರಮ ಗಣಿಗಾರಿಕೆ ಪ್ರಕರಣ ವಿಚಾರಣೆ; ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಜನಾರ್ದನ ರೆಡ್ಡಿ ಶಿಫ್ಟ್
ಈಗಾಗಲೇ ಸಿಬಿಐ ಕೋರ್ಟ್‌ನಿಂದ ಏಳು ವರ್ಷಗಳ ಶಿಕ್ಷೆಗೊಳಗಾಗಿರುವ ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಅವರನ್ನು ವಿಚಾರಣೆಗೆ ಅನುಕೂಲವಾಗುವಂತೆ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲು ವಿಶೇಷ ನ್ಯಾಯಾಲಯ ಆದೇಶ ನೀಡಿದೆ. (ವರದಿ: ಎಚ್. ಮಾರುತಿ)

ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನರ್ಹಗೊಂಡಿರುವ ಬಿಜೆಪಿ ಮಾಜಿ ಶಾಸಕ ಜನಾರ್ದನ ರೆಡ್ಡಿ ಅವರನ್ನು ಚಂಚಲಗೂಡ ಜೈಲಿನಿಂದ ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಅಕ್ರಮ ಗಣಿಕಾರಿಕೆ ಕುರಿತ ಐದು ಪ್ರಕರಣಗಳ ವಿಚಾರಣೆಗೆ ಅನುಕೂಲವಾಗುವಂತೆ ಮಾಡಲು ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲು ವಿಶೇಷ ನ್ಯಾಯಾಲಯದ ನ್ಯಾ. ಸಂತೋಷ್ ಗಜಾನನ್ ಭಟ್ ಅವರು ಈ ಆದೇಶ ಹೊರಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಮುಂದಿನ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿಕೆ ಮಾಡಿದರು.
ಇಂದು ಬಾಡಿ ವಾರಂಟ್ ಮೇಲೆ ಜನಾರ್ದನ ರೆಡ್ಡಿ ಅವರನ್ನು ಹೈದರಾಬಾದ್ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತೆಲಂಗಾಣದಲ್ಲಿ ದಾಖಲಾಗಿದ್ದ ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣಗಳ ವಿಚಾರಣೆ ನಡೆಸಿದ ಹೈದರಾಬಾದ್ ನ ಸಿಬಿಐ ವಿಶೇಷ ನ್ಯಾಯಾಲಯ ಮೇ. 6ರಂದು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ವಿಶೇಷ ನ್ಯಾಯಾಲಯದಲ್ಲಿ ಬಾಕಿ ಇರುವ ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣಗಳ ವಿಚಾರಣೆಗೆ ಪ್ರತಿ ಬಾರಿಯೂ ಹೈದರಾಬಾದ್‌ನ ಚಂಚಲಗೂಡ ಜೈಲಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಕಷ್ಟವಾಗುತ್ತದೆ ಎಂದು ಮಾಜಿ ಸಚಿವರೂ ಆಗಿರುವ ಜನಾರ್ದನ ರೆಡ್ಡಿ ಮನವಿ ಮಾಡಿಕೊಂಡಿದ್ದರು.
ಪ್ರತಿದಿನವೂ ವಿಚಾರಣೆ ನಡೆಯುವುದರಿಂದ ಹೈದರಾಬಾದ್ ಹಳೇ ನಗರದಲಿರುವ ಚಂಚಲಗೂಡ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ನಂ. 6 ಜಿ. ಜನಾರ್ದನ ರೆಡ್ಡಿ ಮತ್ತು ಆರೋಪಿ ನಂ7 ಮೆಹ್ರೂಜ್ ಆಲಿ ಖಾನ್ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ರೆಡ್ಡಿ ಮತ್ತು ಖಾನ್ ಅವರಿಗೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಸಿಬಿಐನ ಹಿರಿಯ ವಕೀಲರು ರೆಡ್ಡಿ ಅವರ ವಿರುದ್ಧ ಕರ್ನಾಟಕದಲ್ಲಿಯೂ ಪ್ರಕರಣಗಳು ಬಾಕಿ ಇರುವುದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದ ಗಮನಕ್ಕೆ ತಂದಿದ್ದರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಸಿಬಿಐ ವಕೀಲರ ಮನವಿಯಂತೆ ಮೇ 8ರಂದು ರೆಡ್ಡಿ ಮತ್ತು ಖಾನ್ ಅವರನ್ನು ಹಾಜರುಪಡಿಸುವಂತೆ ವಿಶೇಷ ನ್ಯಾಯಾಲಯ ತೆಲಂಗಾಣದ ಬಂಧೀಖಾನೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
2009-10 ರಲ್ಲಿ ರೆಡ್ಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅರಣ್ಯದಿಂದ ಕಬ್ಬಿಣದ ಅದಿರಿನ ಗಣಿಗಾರಿಕೆ ಆಡಿದ ಆರೋಪವನ್ನು ಎದುರಿಸುತ್ತಿದ್ದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ 38.66 ಕೋಟಿ ರೂ. ನಷ್ಟ ಉಂಟು ಮಾಡಿದ್ದ ಆರೋಪ ಕೇಳಿ ಬಂದಿತ್ತು. 2009-2011 ರ ಅವಧಿಯಲ್ಲಿ ಪರವಾನಗಿ ಇಲ್ಲದಿದ್ದರೂ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ 24 ಲಕ್ಷ ಮೆಟ್ರಿಕ್ ಟನ್ ಅದಿರನ್ನು ತೆಗೆದು 218 ಕೋಟಿ ರೂ. ಲಾಭ ಮಾಡಿಕೊಂಡಿದ್ದ ಆರೋಪ ದಾಖಲಾಗಿತ್ತು.
ಮೂರನೇ ಪ್ರಕರಣದಲ್ಲಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯದ ಬೊಕ್ಕಸಕ್ಕೆ ರೂ. 198 ಕೋಟಿ ನಷ್ಟ ಉಂಟು ಮಾಡಿದ್ದ ಆರೋಪ ರೆಡ್ಡಿ ವಿರುದ್ಧ ದಾಖಲಿಸಲಾಗಿತ್ತು. ಮತ್ತೊಂದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲೂ ರೂ. 100 ಕೋಟಿ ಮೌಲ್ಯದ ಕಬಿಣದ ಅದಿರನ್ನು ತೆಗೆದ ಆರೋಪವಿತ್ತು. 58 ವರ್ಷದ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ರಾಜಕೀಯವಾಗಿ ಮೂಲೆಗುಂಪಾಗಿದ್ದರು. ನಂತರ 2024 ರಲ್ಲಿ ಬಿಜೆಪಿಗೆ ಮರಳಿದ್ದರು. ರೆಡ್ಡಿ ನಾಯಕತ್ವದಲ್ಲಿ ರಾಜ್ಯದಲ್ಲಿ 2006-2011ರ ನಡುವೆ ರೂ. 12,228 ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ರಫ್ತು ಮಾಡಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ 2010-11 ರಲ್ಲಿ ವರದಿ ನೀಡಿತ್ತು.
ಲೋಕಾಯುಕ್ತ ವರದಿ ಆಧರಿಸಿ 2008-13ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಈ ಪ್ರಕಾರ ತನಿಖೆ ಕೈಗೊಂಡ ಸಿಬಿಐ ರೆಡ್ಡಿ ವಿರುದ್ಧ ಒಂಭತ್ತು ಪ್ರಕರಣಗಳನ್ನು ದಾಖಲಿಸಿತ್ತು. ಈ ಪ್ರಕರಣದಲ್ಲಿ ಸಿಬಿಐ ಇನ್ನೂ ಅಂತಿಮ ಘಟ್ಟ ತಲುಪಿಲ್ಲ.