ಕನ್ನಡ ಸುದ್ದಿ  /  Karnataka  /  Importance Of Karnataka Polls Why Karnataka Assembly Elections Are Important 4 Key Reasons

Importance of Karnataka polls: ಕರ್ನಾಟಕ ವಿಧಾನಸಭಾ ಚುನಾವಣೆ ಯಾಕಿಷ್ಟು ಮಹತ್ವ- ಗಮನಿಸಬೇಕಾದ ನಾಲ್ಕು ಅಂಶಗಳು

Importance of Karnataka polls: ಈ ಚುನಾವಣೆ ಬಹಳ ಮಹತ್ವ ಪಡೆದುಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಒಂದೆಡೆಯಾದರೆ, ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಈ ಚುನಾವಣೆ ಪ್ರಮುಖ. ಜೆಡಿಎಸ್‌ಗೆ ಕೂಡ ಇದು ಅಸ್ತಿತ್ವದ ಪ್ರಶ್ನೆಯಾದರೆ, ಬಿಜೆಪಿಗೆ ದಕ್ಷಿಣ ಭಾರತದಲ್ಲಿ ನೆಲೆಗಟ್ಟಿಮಾಡಿಕೊಳ್ಳಲು ಈ ಚುನಾವಣೆ ಬಹಳ ಮುಖ್ಯವಾದುದು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (HT)

ಬಹುನಿರೀಕ್ಷಿತ ಕರ್ನಾಟಕ ಚುನಾವಣೆ ಮೇ 10 ರಂದು ನಡೆಯಲಿದ್ದು, ಮೇ 13ರಂದು ಫಲಿತಾಂಶವೂ ಪ್ರಕಟವಾಗಲಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಈ ಚುನಾವಣೆ ಬಹಳ ಮಹತ್ವ ಪಡೆದುಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಒಂದೆಡೆಯಾದರೆ, ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಈ ಚುನಾವಣೆ ಪ್ರಮುಖ. ಜೆಡಿಎಸ್‌ಗೆ ಕೂಡ ಇದು ಅಸ್ತಿತ್ವದ ಪ್ರಶ್ನೆಯಾದರೆ, ಬಿಜೆಪಿಗೆ ದಕ್ಷಿಣ ಭಾರತದಲ್ಲಿ ನೆಲೆಗಟ್ಟಿಮಾಡಿಕೊಳ್ಳಲು ಈ ಚುನಾವಣೆ ಬಹಳ ಮುಖ್ಯವಾದುದು.

ಈ ಬಾರಿ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆಯಿದ್ದು, ಜನತಾ ದಳ-ಜಾತ್ಯತೀತ (ಜೆಡಿ-ಎಸ್) ಸಂಭಾವ್ಯ ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸುವ ನಿರೀಕ್ಷೆ ಎಲ್ಲೆಡೆ ವ್ಯಕ್ತವಾಗುತ್ತಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಈ ಸಲ, ರಾಜಕೀಯ ಸ್ಥಿರತೆ, ಆರ್ಥಿಕವಾಗಿ ಪ್ರಮುಖ ರಾಜ್ಯಗಳಲ್ಲಿ ಒಂದಾದ ಟಿಪ್ಪು ಸುಲ್ತಾನ್ ಮತ್ತು ಹಿಂದುತ್ವ ಸಿದ್ಧಾಂತ ಕಾರಣ ಗಮನಸೆಳೆದಿದೆ. ಅದಲ್ಲದೆ, ಇನ್ನೂ ಹಲವಾರು ಸೂಕ್ಷ್ಮ ಒಳಸುಳಿಗಳನ್ನೂ ಮುಂದಿನ ದಿನಗಳಲ್ಲಿ ಗಮನಿಸಬಹುದಾಗಿದೆ.

ಕರ್ನಾಟಕ ಅಸೆಂಬ್ಲಿ ಚುನಾವಣೆ - ಯಾಕಿಷ್ಟು ಮಹತ್ವ?

1) ಲೋಕಸಭೆ ಚುನಾವಣೆ 2024ರ ಮೇಲೆ ಕರ್ನಾಟಕ ಚುನಾವಣೆಯ ಪರಿಣಾಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ 224 ಸದಸ್ಯ ಬಲದ ವಿಧಾನಸಭೆಯಲ್ಲಿ 119 ಶಾಸಕರನ್ನು ಹೊಂದಿದೆ. 2008 ರಲ್ಲಿ ಕೇಸರಿ ಪಕ್ಷವು ಇಲ್ಲಿ ಅಧಿಕಾರವನ್ನು ಗಳಿಸಿತು. ಪಕ್ಷದ ಗೆಲುವಿನ ರೂವಾರಿ ಬಿಎಸ್ ಯಡಿಯೂರಪ್ಪ ಆಗಿದ್ದು, ಅವರಿಗೆ ಈ ಎಲ್ಲ ಗೌರವ ಇಂದಿಗೂ ಸಿಗುತ್ತಿದೆ. ಅವರು ಕರ್ನಾಟಕದಲ್ಲಿ ಇನ್ನು ಕೂಡಾ ಪಕ್ಷದ ಪ್ರಭಾವಿ ನಾಯಕರಾಗಿ ಮುಂದುವರಿದಿದ್ದಾರೆ. ಅವರು ಈ ಸಲ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದು, ಪುತ್ರನನ್ನು ಕಣಕ್ಕೆ ಇಳಿಸುವ ಆಲೋಚನೆಯಲ್ಲಿದ್ದಾರೆ.

ರಾಜ್ಯದಲ್ಲಿ 2013ರಲ್ಲಿ ಜೆಡಿಎಸ್‌ 40 ಸ್ಥಾನ ಗೆದ್ದುಕೊಂಡಿತ್ತು. ಕಾಂಗ್ರೆಸ್‌ಗೆ 122 ಸ್ಥಾನಗಳ ಸ್ಪಷ್ಟ ಜನಾದೇಶ ಸಿಕ್ಕಿತ್ತು. ಬಿಜೆಪಿ ಕೂಡ 40 ಸ್ಥಾನ ಗೆದ್ದುಕೊಂಡಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಇದಾಗಿ, 2018ರಲ್ಲಿ ಜನಾದೇಶ ಅತಂತ್ರವಾಗಿತ್ತು. ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ನೇರ ಸರ್ಕಾರ ರಚನೆ ಅಸಾಧ್ಯವಾಗಿತ್ತು. ಬಿಜೆಪಿ 104 ಸ್ಥಾನ ಇತ್ತಾದರೂ, ಸರಳ ಬಹುಮತಕ್ಕೆ 9 ಕೊರತೆ ಇತ್ತು. ಇದೇ ವೇಳೆ, 37 ಸ್ಥಾನ ಗೆದ್ದ ಜೆಡಿಎಸ್‌ ಮತ್ತು 80 ಸದಸ್ಯ ಬಲದ ಕಾಂಗ್ರೆಸ್‌ ಜತೆಗೂಡಿ ಜೆಡಿಎಸ್‌ ನೇತೃತ್ವದ ಸರ್ಕಾರ ರಚನೆ ಆಯಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.

ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಸರ್ಕಾರ ರಚಿಸಲು ವಿಫಲವಾಯಿತು. ಒಂದು ವರ್ಷದೊಳಗೆ ಅಂದರೆ 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ 15 ಶಾಸಕರು ರಾಜೀನಾಮೆ ನೀಡಿದರು. ಮತ್ತೊಂದು ಮಹತ್ವದ ಉಪಚುನಾವಣೆ ಎದುರಾಯಿತು. ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪಡೆದು ಗೆದ್ದ ಶಾಸಕರು ಬಿಜೆಪಿಗೆ 12 ಸ್ಥಾನ ಬಲ ತುಂಬಿದರು. ಪರಿಣಾಮ, 116 ಶಾಸಕರ ಬೆಂಬಲದೊಂದಿಗೆ ಬಿಎಸ್ ವೈ ಮುಖ್ಯಮಂತ್ರಿಯಾದರು. ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ, ರಾಜ್ಯದ ರಾಜಕೀಯ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರುವಂಥದ್ದೇ ಆಗಿದೆ.

2) ಭಾರತದ ಜಿಡಿಪಿಗೆ ಕರ್ನಾಟಕದ ಕೊಡುಗೆ:

ಭಾರತದ ಅರ್ಥ ವ್ಯವಸ್ಥೆಗೆ ಹೆಚ್ಚಿನ ಕೊಡುಗೆ ನೀಡುವ ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಇದು ದೇಶದ ಜಿಡಿಪಿಗೆ ಶೇಕಡ 8 ರಷ್ಟು ಕೊಡುಗೆ ನೀಡುತ್ತದೆ.

ಇದು ಜೈವಿಕ ತಂತ್ರಜ್ಞಾನ, ಏರೋಸ್ಪೇಸ್, ​​ಮಾಹಿತಿ ತಂತ್ರಜ್ಞಾನ (IT) ಮತ್ತು ರಕ್ಷಣೆಯಂತಹ ಹಲವಾರು ಪ್ರಮುಖ ಕ್ಷೇತ್ರಗಳಲ್ಲೂ ತನ್ನ ಕೊಡುಗೆಯನ್ನು ಕೊಡುತ್ತಿದೆ.

ರಸ್ತೆ ಅಭಿವೃದ್ಧಿ ಸೇರಿ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ಕರ್ನಾಟಕವು ನಿರ್ಮಾಣ ಉದ್ಯಮಕ್ಕೆ ದೊಡ್ಡ ವ್ಯಾಪಾರ ಅವಕಾಶಗಳನ್ನು ಒದಗಿಸುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳುತ್ತಲೇ ಇದ್ದಾರೆ.

ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಮಧ್ಯ ಕರ್ನಾಟಕದ ಆರು ಹೊಸ ಹೈಟೆಕ್ ಸಿಟಿಗಳು ಮತ್ತು ಬೆಂಗಳೂರು ಬಳಿ ಆರು ತಿಂಗಳೊಳಗೆ ನಿರ್ಮಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

3) ಟಿಪ್ಪು ಸುಲ್ತಾನ್‌ ಮತ್ತು ಹಿಂದುತ್ವ ಪ್ರತಿಪಾದನೆ: ಕರ್ನಾಟಕದ ವಿಧಾನಸಭಾ ಚುನಾವಣೆಗಳು ಧರ್ಮಗಳ ಮೇಲಿನ ಧ್ರುವೀಕರಣದ ಪ್ರಚಾರದ ಫಲಿತಾಂಶವನ್ನು ಪ್ರತಿಬಿಂಬಿಸುತ್ತವೆ. ಇದರಲ್ಲಿ ಹಿಜಾಬ್‌ನಲ್ಲಿ ಮುಸ್ಲಿಮರನ್ನು ಗುರಿಯಾಗಿಸುವುದು, ಬಲವಂತದ ಮತಾಂತರ ಆರೋಪ, ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ಮತ್ತು 18 ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರ ಮೇಲಿನ ಚರ್ಚೆಗಳು ಮತ ಧ್ರುವೀಕರಣದ ಮೇಲೆ ಪರಿಣಾಮ ಬೀರುವಂಥವು.

ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಕಳೆದ ತಿಂಗಳು, ಟಿಪ್ಪು ಸುಲ್ತಾನ್ ವೃತ್ತಕ್ಕೆ ವೀರ್ ಸಾವರ್ಕರ್ ಹೆಸರನ್ನು ಮರುನಾಮಕರಣ ಮಾಡುವ ಕುರಿತುಉದ್ವಿಗ್ನತೆ ಉಂಟಾಗಿತ್ತು. ಈ ವೃತ್ತಕ್ಕೆ ಅನಧಿಕೃತವಾಗಿ ಟಿಪ್ಪು ಸುಲ್ತಾನ್ ಹೆಸರನ್ನು ಇಡಲಾಗಿದೆ ಎಂದು ಆರೋಪಿಸಿ 'ಸಾವರ್ಕರ್ ಸರ್ಕಲ್' ಎಂದು ಹೆಸರಿಸಬೇಕೆಂದು ಕೆಲವು ಬಲಪಂಥೀಯ ಸಂಘಟನೆಗಳು ಒತ್ತಾಯಿಸಿದ್ದವು.

ಈ ಘಟನೆಗೂ ಮುನ್ನ, ಟಿಪ್ಪು ಬೆಂಬಲಿಗರು 2010ರಲ್ಲಿ ಅನಧಿಕೃತವಾಗಿ ಟಿಪ್ಪು ಸುಲ್ತಾನ್ ಹೆಸರನ್ನು ವೃತ್ತಕ್ಕೆ ಅನಧಿಕೃತವಾಗಿ ಇಟ್ಟಿದ್ದಾರೆ ಎಂದು ಹಿಂದು ಪರ ಸಂಘಟನೆ ಶಿವಾಜಿ ಮಹಾರಾಜ್ ಸಂಘಟನೆ ಆರೋಪಿಸಿತ್ತು. ಅಲ್ಲದೆ, ವೀರ್ ಸಾವರ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡುವಂತೆ ಒತ್ತಾಯಿಸಿತ್ತು.

4) ಕರ್ನಾಟಕದಲ್ಲಿ ಕಾಂಗ್ರೆಸ್ ಸಾಧನೆ: ಕರ್ನಾಟಕ ರಾಜಕೀಯದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದಲ್ಲಿ ಮೊದಲ ಬಾರಿಗೆ 1952ರಲ್ಲಿ ಚುನಾವಣೆ ನಡೆದಾಗ, ಕಾಂಗ್ರೆಸ್‌ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಿತು. ಅಲ್ಲಿಂದೀಚೆಗೆ ಹಲವು ಬಾರಿ ಕಾಂಗ್ರೆಸ್‌ ಆಡಳಿತ ನಡೆಸಿದೆ.

ರಾಜ್ಯ ವಿಧಾನ ಸಭೆಯ 2008ರ ಚುನಾವಣೆಯಲ್ಲಿ 224 ಅಸೆಂಬ್ಲಿ ಸ್ಥಾನಗಳಲ್ಲಿ ಕೇವಲ 80 ಸ್ಥಾನಗಳನ್ನು ಗೆದ್ದು , ಕಾಂಗ್ರೆಸ್‌ ಪಕ್ಷವು ದೊಡ್ಡ ಸೋಲನ್ನು ಅನುಭವಿಸಿತು. ಆದರೆ 2013ರಲ್ಲಿ ಮತ್ತೆ ಪುಟಿದೆದ್ದು 122 ಸ್ಥಾನಗಳಲ್ಲಿ ಬಹುಮತ ಗಳಿಸಿತು. ಹಿಂದಿನ ಚುನಾವಣೆಯಲ್ಲಿ, ಅದು 80 ಸ್ಥಾನಗಳನ್ನು ಗೆದ್ದು ಜೆಡಿಎಸ್‌ ಜತೆಗೂಡಿ ಸರ್ಕಾರ ರಚಿಸಿತ್ತು. ಪ್ರಸ್ತುತ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಎಂಬುದು ನಿರ್ವಿವಾದಿತ ವಿಚಾರ.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹೆಸರುಗಳಿವೆ. ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಮತ್ತು ಶಿವಕುಮಾರ್ ಕನಕಪುರದಿಂದ ಸ್ಪರ್ಧಿಸಲಿದ್ದಾರೆ. ಈಗ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವ ಭರವಸೆಯೊಂದಿಗೆ ಕಾಂಗ್ರೆಸ್‌ ನಾಯಕರು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.

IPL_Entry_Point