ಅಯ್ಯೋ ಓಲ್ಡ್ ಫ್ಯಾಷನ್ ಎಂದು ಅಭಿವೃದ್ಧಿ ಹೆಸರಲ್ಲಿ ಬಿಟ್ಟು ಬಂದವೆಲ್ಲವನ್ನೂ ಮರಳಿ ಅಪ್ಪುವ ಸಮಯ ಬಂದಾಯಿತು: ರಂಗಸ್ವಾಮಿ ಮೂಕನಹಳ್ಳಿ ಅಭಿಮತ
ದಿನೇದಿನೇ ಜಗತ್ತು ಬಹಳ ಸ್ಪರ್ಧಾತ್ಮಕವಾಗಿ ಮುಂದುವರಿಯುತ್ತಿದ್ದು, ಬದುಕಿನ ಉದ್ದೇಶ ಅರ್ಥವಾಗದೇ ಪರಿತಪಿಸುವ ಸಂದರ್ಭ. ಲೇಖಕ ರಂಗಸ್ವಾಮಿ ಮೂಕನಹಳ್ಳಿ ಈ ಬಗ್ಗೆ ಗಮನಸೆಳೆದಿದ್ದು, ಅಯ್ಯೋ ಓಲ್ಡ್ ಫ್ಯಾಷನ್ ಎಂದು ಅಭಿವೃದ್ಧಿ ಹೆಸರಲ್ಲಿ ಬಿಟ್ಟು ಬಂದವೆಲ್ಲವನ್ನೂ ಮರಳಿ ಅಪ್ಪುವ ಸಮಯ ಬಂದಾಯಿತು ಎಂದಿದ್ದಾರೆ.

ಸುಧಾರಿತ ತಂತ್ರಜ್ಞಾನಗಳು ನಿತ್ಯ ಬದುಕಿನೊಳಗೆ ಸ್ಥಾನ ಪಡೆದುಕೊಳ್ಳುತ್ತ ಸಾಗುತ್ತಿರುವಾಗ ಮನುಷ್ಯರ ಬದುಕು ನಿತ್ಯವೂ ಎಂಬಂತೆ ಬದಲಾಗುತ್ತ ಸಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ಬಿಟ್ಟು ಬಂದ ಎಷ್ಟೋ ವಿಚಾರಗಳು ಈಗ ಮತ್ತೆ ಮುನ್ನೆಲೆಗೆ ಬರುತ್ತಿವೆ. ಇದೇ ವಿಚಾರವಾಗಿ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರು ಗಮನಸೆಳೆದಿದ್ದು, ಯಾವುದೆಲ್ಲ ವಿಚಾರವನ್ನು ಅಯ್ಯೋ ಓಲ್ಡ್ ಫ್ಯಾಷನ್ ಎಂದು ಹೇಳುತ್ತ ಅಭಿವೃದ್ಧಿ ಹೆಸರಲ್ಲಿ ಬಿಟ್ಟು ಬಂದಿದ್ದೆವೋ ಅವೆವನ್ನೂ ಈಗ ಮರಳಿ ಅಪ್ಪುವ ಸಮಯ ಬಂದಾಯಿತು ಎಂಬುದನ್ನು ವಿವರಿಸಿದ್ದಾರೆ. ಇಲ್ಲಿದೆ ಅವರ ಅಭಿಮತ.
ಅಯ್ಯೋ ಓಲ್ಡ್ ಫ್ಯಾಷನ್ ಮರಳಿ ಅಪ್ಪುವ ಸಮಯ
ನಿಮಗೆಲ್ಲಾ ಗೊತ್ತಿರಲಿ , 2035ರ ವೇಳೆಗೆ ಜಗತ್ತು ಪೂರ್ಣವಾಗಿ AI ತೆಕ್ಕೆಗೆ ಸಿಲುಕಿರುತ್ತದೆ. ಅವತ್ತಿಗೆ ಬದುಕಿನಲ್ಲಿ ಅತ್ಯಂತ ಪ್ರಮುಖ ಅಂಶವಾಗಿ ಉಳಿಯುವುದು ಉದ್ದೇಶ ಮಾತ್ರ ! ಅಂದರೆ ನಾವು ಪರ್ಪಸ್ ಎಂದು ಏನು ಹೇಳುತ್ತೇವೆ ಅದು. ಜೀವನಕ್ಕೊಂದು ಉದ್ದೇಶ ಈಗಾಗಲೇ ಇಲ್ಲವಾಗುತ್ತಿದೆ. ಹೆಚ್ಚುತ್ತಿರುವ ಖಿನ್ನತೆ (ಡಿಪ್ರೆಶನ್ ) ಇದಕ್ಕೊಂದು ತಾಜಾ ಉದಾಹರಣೆ. ಬದುಕಿಗೆ ಒಂದು ಗುರಿ ಇಲ್ಲವಾದಾಗ ಸಹಜವಾಗೇ ಖಿನ್ನತೆ ಉತ್ಪನ್ನವಾಗುತ್ತದೆ. ಪ್ರತಿ ಬೆಳಗು ಎದ್ದಾಗ ಇವತ್ತಿನ ಉದ್ದೇಶವೇನು? ಏನು ಮಾಡಬೇಕು? ಎನ್ನುವುದು ಇಲ್ಲದೆ ಹೋದರೆ ಅದಕ್ಕಿಂತ ನೀರಸ ಜೀವನ ಬೇರೊಂದಿಲ್ಲ.
ನೀವೇನೇ ಹೇಳಿ ಬದುಕಿಗೆ ಒಂದು ರೊಟಿನ್ ಬೇಕೇ ಬೇಕು. ಹಿಂದೆ ನಮ್ಮ ಪೂರ್ವಜರನ್ನು ನೋಡಿ , ಅವರು ಯಾವ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಕೆಲಸ ಮಾಡಲಿಲ್ಲ. ಆದರೂ ಅವರ ಜೀವನ ಇವತ್ತಿನಷ್ಟು ಭಯಾನಕವಾಗಿರಲಿಲ್ಲ. ಆರಾಮವಾಗಿ ಕುಕ್ಕರಕಾಲಿನಲ್ಲಿ ಕುಳಿತು ಹಾಲು ಕರೆಯುತ್ತಿದ್ದರು. ನೆಲ ಸಾರಿಸುವುದು, ಗುಡಿಸುವುದು, ನೀರು ಸೇದುವುದು ಹೀಗೆ ಎಲ್ಲವನ್ನೂ ಲೀಲಾಜಾಲವಾಗಿ ಮಾಡುತ್ತಿದ್ದರು. ಇಂದು ನಾವು ಕಾರ್ಪೊರೇಟ್ ಕೆಲಸಕ್ಕೆ ಬಿದ್ದಿದೇವೆ, ಈ ಎಲ್ಲಾ ಕೆಲಸಗಳನ್ನು ಮರೆತಿದ್ದೇವೆ. ಹೀಗಾಗಿ ಇವತ್ತು ಕುಕ್ಕರಕಾಲಿನಲ್ಲಿ ಕೂರುವುದು ಒಂದು ಆಸನ ಎನ್ನುವಂತಾಗಿದೆ.
ಕೃಷಿ ಭೂಮಿ ಇದ್ದವರೇ ಸಾಹುಕಾರರು
ತಂಗಳು ಅನ್ನವನ್ನು ಫ್ರಿಡ್ಜ್‌ನಲ್ಲಿಟ್ಟು ಅದಕ್ಕೆ ಮೊಸರು ಈರುಳ್ಳಿ ಮೆಣಸಿನಕಾಯಿ ಹಾಕಿಕೊಂಡು ಬೆಳಿಗ್ಗೆ ತಿನ್ನುವುದು ಆರೋಗ್ಯಕರ ಎನ್ನುವ ಕೂಗು ಹೆಚ್ಚಾಗುತ್ತಿದೆ. ಹಿಂದೆ ನಮ್ಮ ಹಿರಿಯರು ತಿನ್ನುತ್ತಿದ್ದದ್ದು ಇದೆ ಅಲ್ಲವೇ ? ಯಾವುದೆಲ್ಲವನ್ನೂ ಅಯ್ಯೋ ಓಲ್ಡ್ ಫ್ಯಾಷನ್ ಎಂದು ನಾವು ಅಭಿವೃದ್ಧಿ ಹೆಸರಿನಲ್ಲಿ ಬಿಟ್ಟು ಬಂದೆವೂ ಅವುಗಳನ್ನು ಮರಳಿ ಅಪ್ಪಿಕೊಳ್ಳುವ ಸಮಯ ಬಂದಾಗಿದೆ.
ಹೀಗಾಗಿ ಕೃಷಿ ಭೂಮಿಯಿದ್ದರೆ ನಿಮ್ಮಷ್ಟು ಸಾಹುಕಾರರು ಈ ಭೂಮಿ ಮೇಲೆ ಬೇರಾರೂ ಇಲ್ಲ. ಇಲ್ಲದಿದ್ದರೆ ಒಂದು ತುಂಡು ಭೂಮಿ ಕೊಳ್ಳುವ ಪ್ರಯತ್ನ ಮಾಡಿ. ಇದ್ದದ್ದನ್ನು ಮಾರುವ ಲೆಕ್ಕಾಚಾರಕ್ಕೆ ಮಾತ್ರ ಹೋಗಬೇಡಿ. ಯಾವುದನ್ನು ನಾವು ಕಷ್ಟ ಎಂದು ಬಿಟ್ಟೆವು ಅದಕ್ಕೆ ಅಂದರೆ ಕೃಷಿಕ ಜೀವನಕ್ಕೆ ಇನ್ನಿಲ್ಲದ ಡಿಮ್ಯಾಂಡ್ ಬರುತ್ತದೆ. ಮಾರ್ಕ್ ಮೈ ವರ್ಡ್ಸ್ ಪ್ಲೀಸ್ .
ಇನ್ನು ಇದು ಫಲಿತಾಂಶದ ಭರಾಟೆ ದಿನಗಳು . ಪಿಯುಸಿ ಆಯ್ತು . ಇನ್ನು ಹತ್ತನೇ ತರಗತಿ ಫಲಿತಾಂಶ ಬಾಕಿಯಿದೆ. ಹತ್ತು ಮತ್ತು ಹನ್ನೆರಡರ ನಂತರ ಮುಂದೇನು ಎನ್ನುವುದು ಬಹು ದೊಡ್ಡ ಪ್ರಶ್ನೆ. ಅವೆರೆಡೂ ಮಕ್ಕಳ ಬಾಳಿನಲ್ಲಿ ತಿರುವಿನ ಹಂತಗಳು. ಹೀಗಾಗಿ ಒಂದಷ್ಟು ಆತಂಕ ಸಹಜ. ಆದರೆ ಗಮನಿಸಿ ಮೊದಲ ಸಾಲಿನಲ್ಲಿ ಹೇಳಿದಂತೆ 2035 ರ ವೇಳೆಗೆ ಎಲ್ಲವನ್ನು , ಆಲ್ಮೋಸ್ಟ್ ಎಲ್ಲವನ್ನೂ AI ಮಾಡಿ ಮುಗಿಸುತ್ತದೆ. ಜಗತ್ತಿನ 70 ಪ್ರತಿಶತ ಜನರಿಗೆ ಕೆಲಸವಿರುವುದಿಲ್ಲ. ಉಳಿದ 30 ಪ್ರತಿಶತ ಜನ ಬದಲಾವಣೆಗೆ ಒಗ್ಗಿ ಕೊಳ್ಳುವ ಕಾರಣ ಕೆಲಸ ಉಳಿಸಿ ಕೊಳ್ಳುತ್ತಾರೆ. ಅದೇನು? ಎನ್ನುವುದನ್ನು ಇಂದು ಮನಗಾಣಬೇಕು. ಅದು ಬಿಟ್ಟು ಹುಚ್ಚು ಹುಚ್ಚಾಗಿ ಇಷ್ಟು ಅಂಕ ಗಳಿಸಿದರು ಎನ್ನುವುದು ಮತ್ತೆ ಅದದೇ ಔಟ್ ಡೇಟೆಡ್ ಕೋರ್ಸ್ ಗಳ ಹಿಂದೆ ಬೀಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಪೋಷಕರಿಗೆ ಇದರ ಅರಿವಿಲ್ಲದ ಕಾರಣ ಇದರ ಲಾಭ ಪಡೆದ ಶಿಕ್ಷಣ ಸಂಸ್ಥೆಗಳು ಹಗಲು ದರೋಡೆಗೆ ಇಳಿದಿವೆ. ಇದು ಹೊಸತಲ್ಲ , ಆದರೆ ಇಂದಿಗೆ ಶಿಕ್ಷಣದ ವೆಚ್ಚವಿದೆಯಲ್ಲ ಅದು ಕಣ್ಣಲ್ಲಿ ನೀರಿನ ಜಾಗದಲ್ಲಿ ರಕ್ತ ಬರಿಸುತ್ತದೆ. ಸಾಮಾನ್ಯ ಬಿಎಸ್ಸಿ ಮಾಡಲು ಕೂಡ ವರ್ಷಕ್ಕೆ ಐದು ಲಕ್ಷ ಬೇಕು ಎನ್ನುವ ಮಟ್ಟಕ್ಕೆ ಶಿಕ್ಷಣ ವೆಚ್ಚ ಹೆಚ್ಚಾಗಿದೆ. ಇನ್ನು ಕೆಲಸಕ್ಕೆ ಬಾರದ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ , AI ಕೋರ್ಸ್ ಗಳಿಗೆ ನಾಲ್ಕು ವರ್ಷಕ್ಕೆ ಕೋಟಿ ಬೇಕು ಎನ್ನುವ ಮಟ್ಟಕ್ಕೆ ಬಂದು ಕುಳಿತಿದೆ. ಇಷ್ಟೆಲ್ಲಾ ವೆಚ್ಚ ಮಾಡಿ ಹತ್ತರಲ್ಲಿ ಹನ್ನೊಂದು ಎನ್ನುವಂತಹ ವ್ಯಕ್ತಿತ್ವವಿದ್ದರೆ ಅಲ್ಲಿಗೆ ದಿ ಎಂಡ್ . ನಿಮ್ಮ ಮಗ ಅಥವಾ ಮಗಳಿಗೆ ಪ್ರಮಾಣ ಮಾಡಿ ಹೇಳುತ್ತೇನೆ ಕೆಲಸ ಸಿಕ್ಕುವುದಿಲ್ಲ. ನೀವು ಇಂದು ಅವರ ಶಿಕ್ಷಣಕ್ಕೆ ಮಾಡಿದ ಖರ್ಚನ್ನು ಸಹ ಅವರು ಹುಟ್ಟಿಸಲಾರರು ಇದು ಸತ್ಯ .
ಈ ಸಾಲುಗಳನ್ನು ಯಾರನ್ನೂ ಹೆದರಿಸಲು ಬರೆಯುತ್ತಿಲ್ಲ. ಬದುಕು ಮುಂದೆ ಬದಲಾಗುವ ಬಗೆಯನ್ನು ಹೇಳಿದ್ದೇನೆ. ನಿಜ ಹೇಳಬೇಕೆಂದರೆ ಈ ಕ್ಷಣದಿಂದಲೇ ಈ ಬದಲಾವಣೆ ಮಾಡಬಹುದು ಅಷ್ಟರ ಮಟ್ಟಿನ ತಂತ್ರಜ್ಞಾನ ಈಗಾಗಲೇ ಸಿದ್ಧವಿದೆ. ಆದರೆ ಒಮ್ಮೆಲೇ ಮಾಡಿದರೆ ಅದಕ್ಕೆ ಜನರಿನ್ನೂ ಸಿದ್ದವಿಲ್ಲ. ಹೀಗಾಗಿ ಇನ್ನೊಂದು ಹತ್ತು ವರ್ಷದಲ್ಲಿ ಪೂರ್ಣ ಜಗತ್ತಿನ ಬದುಕುವ ರೀತಿ ಬದಲಾಗಲಿದೆ. ನಾವೀಗ ಇರುವುದು ನೋಟೀಸ್ ಪಿರಿಯಡ್ನಲ್ಲಿ ! ಈಗಲೂ ಎಚ್ಚೆತ್ತು ಕೊಳ್ಳದೆ ಮಕ್ಕಳನ್ನು ಇನ್ನೂ ಅದದೇ ಕೋರ್ಸ್ ತೆಗೆದುಕೊಳ್ಳಲು ಹೇಳುವುದು , ಜಿದ್ದಿಗೆ ಬಿದ್ದವರಂತೆ ಪ್ರತಿಷ್ಠಿತ ಕಾಲೇಜೇ ಬೇಕು ಎಂದು ಹಣ ವ್ಯಯಿಸುವುದು ನೋಡಿದಾಗ ಕರುಳು ಚುರ್ ಎಂದಿತು ಹೀಗಾಗಿ ಬರೆದೆ.
ಶುಭವಾಗಲಿ
ಹೋಗುವ ಮುನ್ನ: ಬಡತನವಿದ್ದ ಕಾಲದಲ್ಲಿ ಮುಕ್ಕಾಲು ಪಾಲು ತಂಗಳು ಎನ್ನುವುದು ಸರ್ವೇ ಸಾಮಾನ್ಯ. ನಿಖರವಾಗಿ ಇಷ್ಟೇ ಎಂದು ಮಾಡಲಾಗದ ಕಾರಣ ಅನ್ನವಂತೂ ಉಳಿಯುತ್ತಿತ್ತು. ಅನ್ನವೇ ಪರಬ್ರಹ್ಮ . ಕಾರ್ಬೋ ಬಿಟ್ಟು ಪ್ರೊಟೀನ್ ಎನ್ನುವ ಪದದ ಅರ್ಥ ಕೂಡ ಗೊತ್ತಿರಲಿಲ್ಲ . ಮೊಸರಿನಲ್ಲಿ ಪ್ರೊಟೀನ್ ಇದೆ ಎನ್ನುವುದು ಕೂಡ ತಿಳಿದಿರಲಿಲ್ಲ. ಅವತ್ತು ತಂಗಳು ಅನ್ನಕ್ಕೆ ಮೊಸರು ಬೆರೆಸಿ ಸ್ವಲ್ಪ ಹಸಿ ಈರುಳ್ಳಿ, ಮೆಣಸಿನಕಾಯಿ ಹಾಕಿ ತಿನ್ನುವುದು ಅವಮಾನ, ಬಡವ ಎನ್ನುವಂತೆ ಸಮಾಜ ನೋಡುತ್ತಿತ್ತು . ನಮಗೂ ಮನಸ್ಸಿನಲ್ಲಿ ಇನ್ನಿಲದ ನೋವು! ಅಯ್ಯೋ ನಿತ್ಯ ತಂಗಳು ತಿನ್ನಬೇಕು ಎನ್ನುವುದು ಅಪಮಾನ. ಇವತ್ತು ಬೇಕೆಂದು ಅನ್ನ ಹೆಚ್ಚು ಮಾಡಿ ಅದನ್ನು ಫ್ರಿಡ್ ನಲ್ಲಿಟ್ಟು ಮೊಸರು, ಈರುಳ್ಳಿ, ಮೆಣಸಿನಕಾಯಿ ಬೆರೆಸಿ ತಿನ್ನುತ್ತೇವೆ. ಮತ್ತು ಇಂತಹ ಪ್ರಕ್ರಿಯೆಗೆ ಖುಷಿಯಿಂದ ಅಭಿವೃದ್ಧಿ ಹೆಸರಿಟ್ಟಿದ್ದೇವೆ.
ಹಳೆಯದು ಎಂದದ್ದೆಲ್ಲಾ ಮುನ್ನೆಲೆಗೆ ಬರುತ್ತದೆ, ಯಾವುದು ಬರಲಿ ಅಥವಾ ಬಿಡಲಿ, ಕೃಷಿ ಭೂಮಿ ಕೊಳ್ಳುವುದು ಮರೆಯಬೇಡಿ. ಇನ್ನು ಹತ್ತು ವರ್ಷದಲ್ಲಿ ನಿಮ್ಮ ಬಳಿ ಕೊಳ್ಳುವ ಹಣವಿದ್ದರೂ ಮಾರುವವರು ಇರುವುದಿಲ್ಲ. ಅಂದ ಹಾಗೆ ಹೇಳುವುದು ಮರೆತ್ತಿದ್ದೆ ಇದನ್ನು ನೋಡಿ ಕೃಷಿ ಭೂಮಿ ಕೊಳ್ಳುವವರು ಪ್ರಾಮಾಣಿಕವಾಗಿ ಆಮೇಲೆ ನಮಗೆ ಫೀಸ್ ಕೊಡಿ ಆಯ್ತಾ 🙂
ಚಿತ್ರದಲ್ಲಿ ಇಂದಿನ ನನ್ನ ಗಂಜಿ ಊಟ ಕಾಣಬಹುದು
| ಲೇಖಕರು- ರಂಗಸ್ವಾಮಿ ಮೂಕನಹಳ್ಳಿ, ಬೆಂಗಳೂರು,
(ಗಮನಿಸಿ: ಲೇಖನದಲ್ಲಿರುವ ಎಲ್ಲ ಅಭಿಪ್ರಾಯಗಳೂ ಲೇಖಕರದ್ದೇ ಹೊರತು, ಹಿಂದೂಸ್ತಾನ್ ಟೈಮ್ಸ್ ಕನ್ನಡ ತಾಣದಲ್ಲ.)
