Actor Rishab Shetty: ನೂತನ ಸರಕಾರಿ ಶಾಲೆ ಉದ್ಘಾಟನೆ, ಖುಷಿಪಟ್ಟ ಕಾಂತಾರ ನಟ ರಿಷಭ್ ಶೆಟ್ಟಿ
ಇದು ನಿಜಕ್ಕೂ ದೇವರ ಕೆಲಸವಾಗಿದೆ. ಇಲ್ಲಿರುವ ಮೂಲಸೌಕರ್ಯಗಳನ್ನು ನೋಡಿ ನಾನು ಚಕಿತನಾಗಿದ್ದೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಬ್ರಹ್ಮಣ್ಯ ನಗರದಲ್ಲಿ ನಿರ್ಮಿಸಿರುವ ನೂತನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಭಾನುವಾರ ಉದ್ಘಾಟನೆಗೊಂಡಿತು.
"ಅಶ್ವತ್ಥನಾರಾಯಣ ಅವರು ತಮ್ಮ ಕ್ಷೇತ್ರದಲ್ಲಿಅತ್ಯುತ್ತಮ ಸರಕಾರಿ ಶಾಲೆಗಳು ಇರುವಂತೆ ನೋಡಿಕೊಂಡಿದ್ದಾರೆ. ಇದು ನಿಜಕ್ಕೂ ದೇವರ ಕೆಲಸವಾಗಿದೆ. ಇಲ್ಲಿರುವ ಮೂಲಸೌಕರ್ಯಗಳನ್ನು ನೋಡಿ ನಾನು ಚಕಿತನಾಗಿದ್ದೇನೆ" ಎಂದು 'ಕಾಂತಾರ' ಖ್ಯಾತಿಯ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
"ಸರಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ತಾತ್ಸಾರವಿದೆ. ಆದರೆ ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಹೆಚ್ಚು ಪ್ರತಿಭಾವಂತರು ಎನ್ನುವುದು ಎಲ್ಲ ಸಮೀಕ್ಷೆಗಳಲ್ಲೂ ಸಾಬೀತಾಗಿದೆ. ಆದ್ದರಿಂದ ಸರಕಾರಿ ಶಾಲೆಗಳನ್ನು ಬಲಪಡಿಸಬೇಕು" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
"ಕೇವಲ ಸಿನಿಮಾ ಮಾಡುವುದರಿಂದ ಸರಕಾರಿ ಶಾಲೆಗಳ ಕಡೆಗಿನ ನನ್ನ ಜವಾಬ್ದಾರಿ ಮುಗಿದಿಲ್ಲ. ಇಂತಹ ಉಪಕ್ರಮಗಳಲ್ಲಿ ನಮ್ಮನ್ನೂ ಅಶ್ವತ್ಥ ನಾರಾಯಣ ಅವರು ತೊಡಗಿಸಿಕೊಳ್ಳಬೇಕು. ಏಕೆಂದರೆ, ನಾನು ಕೂಡ ಸರಕಾರಿ ಶಾಲೆಯಲ್ಲೇ ಓದಿದವನು" ಎಂದು ಅವರು ಹೇಳಿದರು.
"ಮಲ್ಲೇಶ್ವರ ಕ್ಷೇತ್ರದಲ್ಲಿ ಅಶ್ವತ್ಥನಾರಾಯಣ ಅವರು ಶಿಕ್ಷಣ ಕ್ಷೇತ್ರವನ್ನು ಆಮೂಲಾಗ್ರವಾಗಿ ಬದಲಿಸಿದ್ದಾರೆ. ಜತೆಗೆ ಆರೋಗ್ಯ ಕ್ಷೇತ್ರದ ಚಿತ್ರಣ ಕೂಡ ಸಮಗ್ರವಾಗಿ ಸುಧಾರಿಸಿದೆ. ಇವು ನಿಜವಾದ ಜನಪರ ಕೆಲಸಗಳಾಗಿವೆ" ಎಂದು ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಶ್ಲಾಘಿಸಿದರು.
"ಧರ್ಮವು ಉಳಿದರೆ ಮಾತ್ರ ರಾಷ್ಟ್ರವು ಉಳಿಯುತ್ತದೆ. ಕಳೆದ ಎಂಟು ವರ್ಷಗಳಲ್ಲಿ ಭಾರತದ ಶಕ್ತಿ ಏನೆಂಬುದು ಜಗತ್ತಿಗೆ ಗೊತ್ತಾಗಿದೆ. ನಮ್ಮ ಮಲ್ಲೇಶ್ವರ ಮಾದರಿಯಲ್ಲಿ ನಮ್ಮ ಸುಬ್ರಹ್ಮಣ್ಯ ನಗರ ಕೂಡ ಸೇರಿಕೊಂಡಿದೆ ಎಂದು ಅವರು ನುಡಿದರು.
ಸದ್ಯದಲ್ಲೇ ಸರಕಾರಿ ಪ್ರೌಢಶಾಲೆ ಆರಂಭ
"ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿ ಇದು 24ನೇ ಸರಕಾರಿ ಶಾಲೆಯಾಗಿದೆ. ಸದ್ಯದಲ್ಲೇ ಇಲ್ಲಿಂದ ಕೂಗಳತೆ ದೂರದಲ್ಲಿ ಸರಕಾರಿ ಪ್ರೌಢಶಾಲೆ ಆರಂಭಿಸಲಾಗುವುದು" ಎಂದು ಸಚಿವ ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
"ನಾನು ಕೂಡ ಓರ್ವ ಶಿಕ್ಷಕರ ಮಗ. ನನಗೆ ಶಿಕ್ಷಣದ ಶಕ್ತಿ ಏನೆಂದು ಗೊತ್ತಿದೆ. 15 ವರ್ಷಗಳ ಹಿಂದೆ ಶಾಸಕನಾಗಿ ಆಯ್ಕೆಯಾದಾಗ ನಾನು ಕೆಲಸ ಮಾಡಲು ತೊಡಗಿದ್ದೇ ಶಾಲೆಗಳ ಮೂಲಕ. ಇಂದು ಇದರಲ್ಲಿ ಮಲ್ಲೇಶ್ವರ ಮಾದರಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ" ಎಂದರು.
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ ಮತ್ತು ಕಲಿಕೆಗೆ ಒತ್ತು ಕೊಡಲಾಗಿದೆ. ಡಿಜಿಟಲೀಕರಣಕ್ಕೆ ಆದ್ಯತೆ ಇದ್ದು, ಇಲ್ಲಿನ ಕಲಿಕೆಯು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ" ಎಂದು ಅವರು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಮಲ್ಲೇಶ್ವರ ಬಿಜೆಪಿ ಮಂಡಲ ಅಧ್ಯಕ್ಷೆ ಕಾವೇರಿ ಕೇದಾರನಾಥ್, ಶಿಕ್ಷಣ ಫೌಂಡೇಶನ್ ಸಂಸ್ಥಾಪಕ ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.