CM Bommai on reservation: ಮೀಸಲಾತಿ ಹೆಚ್ಚಳ ದಿಟ್ಟ ನಿರ್ಧಾರ, ನಾನು ಅಂಬೇಡ್ಕರ್ ವಾದಿ ಎಂದ ಸಿಎಂ ಬೊಮ್ಮಾಯಿ
ನಾನು ಅಂಬೇಡ್ಕರ್ ವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಯಚೂರು: ಈ ಜನಾಂಗಕ್ಕೆ ನ್ಯಾಯ ನೀಡಬೇಕು ಎಂದು ಮೀಸಲಾತಿ ಹೆಚ್ಚಳ ಮಾಡುವ ದಿಟ್ಟ ನಿರ್ಧಾರ ಮಾಡಲಾಗಿದೆ ಶಿಕ್ಷಣ, ಉದ್ಯೋಗ ಮೀಸಲಾತಿ ನೀಡುವ ಮೂಲಕ ಸ್ವಾಭಿಮಾನಿ ಬದುಕು ಬದುಕಬೇಕೆಂಬ ಅಂಬೇಡ್ಕರ್ ಅವರ ದೂರದೃಷ್ಟಿಯಿಂದ ಇದು ಸಾಧ್ಯವಾಗಿದೆ. ನಾನು ಅಂಬೇಡ್ಕರ್ ವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ರಾಯಚೂರಿನಲ್ಲಿ ಪರಿಶಿಷ್ಟ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಹಿಂದಿನ ಸರ್ಕಾರಗಳು ಈ ನಿರ್ಧಾರ ಯಾಕೆ ಮಾಡಲಿಲ್ಲ? ಸಾಮಾಜಿಕ ನ್ಯಾಯವನ್ನು ಕೇವಲ ಭಾಷಣದಲ್ಲಿ ಹೇಳಿದರು. ಪರಿಶಿಷ್ಟರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ
ಭಾರತದ ಜನಸಂಖ್ಯೆ 130 ಕೋಟಿ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆರು ಜಾತಿಗಳು ಎಸ್ .ಸಿ ಗೆ ಸೇರಿದ್ದವು. ಈಗ 103 ಜಾತಿಗಳಿವೆ. ಜನಸಂಖ್ಯೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಾಗಿರಲಿಲ್ಲ. ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ಆದರೆ ಮೀಸಲಾತಿ ಹೆಚ್ಚಿಸುವ ಪ್ರಯತ್ನ ಮಾಡಲಿಲ್ಲ. ಸಂವಿಧಾನದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಲು ಅಂಬೇಡ್ಕರ್ ಹೇಳಿದ್ದು, ಆ ಕೆಲಸವಾಗಿಲ್ಲ. ಬೇರೆ ರಾಜ್ಯಗಳಲ್ಲಿ 25 / 30 ರಷ್ಟಿಲ್ಲ. ಇಂದಿರಾ ಸಹಾನಿ ಪ್ರಕರಣದ ತೀರ್ಪನ್ನು ನಾಗಮೋಹನ್ ದಾಸ್ ಸಮಿತಿ ಎತ್ತಿ ಹಿಡಿದು ಶಿಫಾರಸ್ಸು ಮಾಡಿದ ನ್ಯಾ. ಸುಭಾಷ್ ಅಡಿ ನೇತೃತ್ವದ ಸಮಿತಿ ತನ್ನ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಸರ್ಕಾರ ಮೀಸಲಾತಿ ಹೆಚ್ಚಿಸಿದೆ ಎಂದರು.
ಮುಕ್ತಿ ದೊರೆಯಬೇಕು
ಶಿಕ್ಷಣ, ಉದ್ಯೋಗ ಇಲ್ಲದಿದ್ದರೆ ಸಾಮಾಜಿಕವಾಗಿ ಗುಲಾಮರಾಗಿ ಬದುಕುವ ರೀತಿಗೆ ಮುಕ್ತಿ ತರಬೇಕು. ಮೀಸಲಾತಿ ಮುಟ್ಟಲು ಸಾಧ್ಯವಿಲ್ಲ. ರಾಜಕೀಯ ಜಾಗೃತಿ ಅಗತ್ಯ. ಬಡತನದಲ್ಲಿ ಹುಟ್ಟಿದವರು ಬಡತನದಲ್ಲಿಯೇ ಸಾಯಬೇಕೆಂಬ ಕಾನೂನಿಲ್ಲ. ಅವರೂ ಮುಂದೆ ಬಂದ ಸಬಲರಾಗಬೇಕು. ಬಡತನ ಮುಕ್ತ ಬದುಕು , ಸ್ವಾಭಿಮಾನದ ಬದುಕು ಬದುಕಬೇಕು ಎಂದು ಹೇಳಿದರು.
ಜನ ಜಾಗೃತರಾಗಿದ್ದಾರೆ
ಹಿಂದುಳಿದ ಸಮುದಾಯ ಜಾಗೃತವಾಗಿದೆ, ನಮ್ಮವರು ಯಾರು ಹೋರಾಟಕ್ಕೆ ಯಾರು ಬೆಲೆ ಕೊಡುತ್ತಾರೆ, ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಾರೆ, ನಮ್ಮ ದ್ವನಿಯನ್ನು ಕೇಳುತ್ತಾರೆ, ಯಾರು ನಮ್ಮ ಪರವಾಗಿ ಸಂಕಷ್ಟದಲ್ಲಿ ನಿಲ್ಲುತ್ತಾರೆ, ರಕ್ಷಣೆಯನ್ನು ಕೊಡುತ್ತಾರೆಯೋ ಅವರಿಗೆ ಮತ ನೀಡಬೇಕು ಎಂದರು.
ನಾಟಕ ನಡೆಯುವುದಿಲ್ಲ
ಅಭಿವೃದ್ದಿ, ಶಿಕ್ಷಣ, ಉದ್ಯೋಗ ನಮ್ಮ ಹಕ್ಕುಗಳನ್ನ ಕೊಡುವವರು, ಅವರೇ ನಮ್ಮವರು ಎಂಬ ಜಾಗೃತಿ ಮೂಡಬೇಕು. ಹೀಗಾಗಿ ನಮ್ಮ ಮುಂದೆ ಇನ್ನು ನಾಟಕ ನಡೆಯುವುದಿಲ್ಲ, ಬದಲಾವಣೆಯಾಗಿದೆ, ಇನ್ನು ಮುಂದೆ ಯಾರು ನಮ್ಮ ಪರವಾಗಿ ನಿಲ್ಲುತ್ತಾರೆ ಅವರಿಗೆ ನಮ್ಮ ಮತ ಎಂಬ ತೀರ್ಮಾನ ಜನಗಳು ಮಾಡಬೇಕು. ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗುತ್ತಿದೆ, ಯುವಕರಲ್ಲಿ ಜಾಗೃತಿ ಮೂಡಿದೆ ಎಂದರು.
ರಾಜಕೀಯ ಇಚ್ಛಾಶಕ್ತಿಯಿಂದ ಮಾಡಿರುವ ತೀರ್ಮಾನದ ಲಾಭ ಪಡೆಯಬೇಕು. ಈ ವಿಚಾರವನ್ನು ಮನೆ ಮನೆಗೆ ತಿಳಿಸಿ ಸಾಮಾಜಿಕ ಕ್ರಾಂತಿ ಮಾಡಬೇಕು ಎಂದು ಕರೆ ನೀಡಿದರು.