ಹೆಚ್ಚುತ್ತಿದೆ ಅಭದ್ರತೆಯ ಭಾವ; ವಿಮಾನ ನಿಲ್ದಾಣದಿಂದ ತಡರಾತ್ರಿ ಪ್ರಯಾಣಿಸುವಾಗ ಆದ ಕೆಟ್ಟ ಅನುಭವ ಹಂಚಿಕೊಂಡ ಮಹಿಳೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಡರಾತ್ರಿ ಕ್ಯಾಬ್‌ನಲ್ಲಿ ಬರುವಾಗ ಮಹಿಳೆಯೊಬ್ಬರು ಎದುರಿಸಿದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಡರಾತ್ರಿ ಕ್ಯಾಬ್‌ನಲ್ಲಿ ಬರುವಾಗ ಮಹಿಳೆಯೊಬ್ಬರು ಎದುರಿಸಿದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್‌ನಲ್ಲಿ ವಿವರವಾದ ಪೋಸ್ಟ್ ಹಂಚಿಕೊಂಡಿದ್ದು, ಶ್ರವಿಕಾ ಜೈನ್ ಅವರು ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಪ್ರಯಾಣಿಸುವಾಗ ತಮ್ಮ ಕ್ಯಾಬ್ ಚಾಲಕ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.
ಇಲ್ಲಿದೆ ವಿವರ
ಜನರು ಹೇಳುತ್ತಾರೆ ಬೆಂಗಳೂರು ಸೇಫ್ ಅಂತ ಆದರೆ, ಇಲ್ಲಿ ಸುರಕ್ಷತೆ ಇಲ್ಲ ಎಂಬ ಮಾತು ಕೇಳಿ ಬಂದಿದೆ. ವಿಮಾನ ನಿಲ್ದಾಣದಿಂದ ರಾತ್ರಿ ಕ್ಯಾಬ್ ಮೂಲಕ ಪ್ರಯಾಣ ಮಾಡುತ್ತಿರುವಾಗ ಆದ ಕಹಿ ಘಟನೆಯೊಂದನ್ನು ಶ್ರವಿಕಾ ಜೈನ್ ಹಂಚಿಕೊಂಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಪ್ರಯಾಣ ಪ್ರಾರಂಭವಾದ ಕೂಡಲೇ ಚಾಲಕ ಅವಳನ್ನು ವಿಚಿತ್ರರೀತಿಯಲ್ಲಿ ನೋಡಲಾರಂಭಿಸಿದ್ದನಂತೆ. ಆಕೆಗೆ ಕನ್ನಡ ಗೊತ್ತಿದೆಯೇ ಎಂದು ಪ್ರಶ್ನೆ ಮಾಡಲಾಗಿ ನಂತರ ಹಾಡನ್ನು ದೊಡ್ಡದಾಗಿ ಹಾಕಿದ್ದನೆಂದು ಬರೆದುಕೊಂಡಿದ್ದಾರೆ. ಆ ಧ್ವನಿ ಪ್ರಯಾಣ ಮಾಡುವವರಿಗೆ ಇಷ್ಟ ಇಲ್ಲ ಎಂದು ತಿಳಿದರೂ ಮತ್ತದನ್ನೇ ಮಾಡಿದ್ದಾನೆ ಎಂದು ಹೇಳಲಾಗಿದೆ. ತಾನೂ ಕೂಡ ಹಾಡನ್ನು ಹಾಡುತ್ತಿದ್ದನು ಎಂದು ಹೇಳಿದ್ದಾರೆ.
ಹಾಡಿನ ಧ್ವನಿ ಕಡಿಮೆ ಮಾಡುವಂತೆ ಕೇಳಿಕೊಂಡಾಗ ಸ್ವಲ್ಪ ಮಾತ್ರವೇ ಕಡಿಮೆ ಮಾಡಿದ್ದಾನೆ ಎಂದಿದ್ದಾರೆ. ಚಾಲಕ ಇದ್ದಕ್ಕಿದ್ದಂತೆ ಕ್ಯಾಬ್ ಒಳಗೆ ಧೂಮಪಾನ ಮಾಡಲು ಪ್ರಾರಂಭಿಸಿದನು ಎಂದು ಅವರು ಆರೋಪಿಸಿದ್ದಾರೆ. ಧೂಮಪಾನ ಮಾಡಬೇಡಿ ಎಂದು ಕೇಳಿಕೊಂಡರೂ ಆತ ಅದನ್ನೇ ಮುಂದುವರೆಸಿದ್ದ ಎಂದು ಹೇಳಿದ್ದಾರೆ. "ನಾನು ಒಬ್ಬಂಟಿಯಾಗಿದ್ದೆ, ರಾತ್ರಿ ತಡವಾಗಿತ್ತು ನನಗೆ ಭಯವಾಗುತ್ತಿತ್ತು. ಮೂವರು ಸ್ನೇಹಿತರು ಕರೆ ಮಾಡಿ ನನ್ನ ಸ್ಥಳವನ್ನು ಟ್ರ್ಯಾಕ್ ಮಾಡುತ್ತಿದ್ದರು" ಎಂದು ಅವರು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೊಂದು ಆತಂಕಕಾರಿ ತಿರುವು ಪಡೆದುಕೊಂಡಿದ್ದು, ಚಾಲಕ ಕಾರನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ, ಚಹಾ ಕುಡಿಯಲು ಬಯಸುತ್ತೇನೆ ಎಂದು ಹೇಳಿದಾಗ. ಅಂತಹ ಸಂದರ್ಭದಲ್ಲಿ ಆತಂಕ ಹೆಚ್ಚುವುದು ಸಹಜ. ರಾತ್ರಿಯಾಗಿ ಈಗಾಗಲೇ ಸಾಕಷ್ಟು ತಡವಾಗಿದೆ. ಮೊದಲು ನನ್ನನ್ನು ನನ್ನ ಮನೆಗೆ ಬಿಟ್ಟು ನಂತರ ನೀವು ಚಹಾ ಕುಡಿಯಿರಿ ಎಂದು ಮಹಿಳೆ ಕೇಳಿಕೊಂಡಿದ್ದಾರೆ. ಆದರೂ ಅತ ಅದನ್ನು ನಿರಾಕರಿಸಿ ಕಾರು ನಿಲ್ಲಿಸಿ ಹೋಗಿದ್ದಾನೆ. ಅದಾದ ಹತ್ತು ನಿಮಿಷಗಳ ಬಳಿಕ ಆತ ಬಂದಿದ್ದಾನೆ. ಅಷ್ಟೇ ಅಲ್ಲ ಕಾರ್ ಡ್ರೈವ್ ಮಾಡುವಾಗಲೂ ಆತ ಪದೇ ಪದೇ ಹಿಂದಿರುಗಿ ನೋಡುತ್ತಿದ್ದ ಎಂದು ಹೇಳಲಾಗಿದೆ.
"ನಾನು ಭಯಭೀತಳಾಗಿದ್ದೆ, ಸುರಕ್ಷಿತವಾಗಿ ಮನೆಗೆ ತಲುಪಬೇಕೆಂದು ಪ್ರಾರ್ಥಿಸಿದೆ" ಎಂದು ಅವರು ಬರೆದಿದ್ದಾರೆ. ಅದೃಷ್ಟವಶಾತ್ ಸುರಕ್ಷಿತವಾಗಿ ಮನೆಗೆ ತಲುಪಿದ್ದೇನೆ ಎಂಬುದನ್ನೂ ಸಹ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
"ಈ ಯಾವುದೇ ಅಪ್ಲಿಕೇಶನ್ಗಳು ಕಿರುಕುಳ ಅಥವಾ ಸುರಕ್ಷತೆಯ ದೂರುಗಳನ್ನು ಪರಿಹರಿಸಲು ಎಂದಿಗೂ ಪ್ರಯತ್ನಿಸುವುದಿಲ್ಲ. ಅವರು ಗ್ರಾಹಕರಿಗೆ ಸರಿಯಾದ ಉತ್ತರ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವ್ಯವಸ್ಥೆಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸಬೇಕು ಎಂದವರಿದ್ದಾರೆ.
