ಕರ್ನಾಟಕದಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಆರಂಭ; ಡೀಸೆಲ್ ದರ ಇಳಿಕೆ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಆಗ್ರಹ
ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ರಾಜ್ಯ ಮಾಲೀಕರ ಹಾಗೂ ಏಜೆಂಟ್ಸ್ ಅಸೋಸಿಯೇಷನ್ ವತಿಯಿಂದ ಏ. 14ರ ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಆರಂಭವಾಗಿದೆ.

ಡೀಸೆಲ್ ಬೆಲೆ ಏರಿಕೆ ಹಿಂಪಡೆಯುವುದು ಮತ್ತು ಇತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಏಪ್ರಿಲ್ 14ರ ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ ಆರಂಭವಾಗಿದೆ. ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ಗಳ ಸಂಘದ ನೇತೃತ್ವದಲ್ಲಿ ಈ ಮುಷ್ಕರ ನಡೆಯುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ತೈಲಗಳ ಬೆಲೆ ಏರಿಕೆ ರಾಜ್ಯದಲ್ಲಿ ಸಂಕಷ್ಟ ತಂದಿದೆ. ಡೀಸೆಲ್ ಬೆಲೆ ಏರಿಕೆಯಾಗಿರುವುದು ಸರಕು ಸಾಗಾಣಿಕೆ ಮೇಲೆ ಪರಿಣಾಮ ಬೀರಿದೆ.
ಡೀಸೆಲ್ ಬೆಲೆ ಏರಿಕೆ ಹಿಂಪಡೆಯಬೇಕು
ಡೀಸೆಲ್ ಬೆಲೆ ಏರಿಕೆ ಹಿಂಪಡೆಯಬೇಕು ಮತ್ತು ಟೋಲ್ ಶುಲ್ಕವನ್ನು ಕಡಿಮೆ ಮಾಡಬೇಕು ಎನ್ನುವ ಬೇಡಿಕೆಯನ್ನಿಟ್ಟು ಲಾರಿ ಮುಷ್ಕರ ಆರಂಭಿಸಲಾಗಿದೆ. ಮುಷ್ಕರದ ಬಗ್ಗೆ ಮಾತನಾಡಿರುವ ಎಫ್‌ಕೆಎಸ್‌ಎಲ್‌ಒಎ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಸುಮಾರು ಆರು ಲಕ್ಷ ಟ್ರಕ್‌ಗಳು ಮುಷ್ಕರಕ್ಕೆ ಬೆಂಬಲ ಕೊಟ್ಟಿವೆ ಎಂದು ಹೇಳಿದ್ದಾರೆ. ಡೀಸೆಲ್ ದರ ಇಳಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಲಾರಿ ಮಾಲೀಕರು ಏ.14ರವರೆಗೆ ಗಡುವು ನೀಡಿದ್ದರು. ಆದರೆ ಇಷ್ಟು ದಿನಗಳಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡದೇ ಇರುವುದನ್ನು ಗಮನಿಸಿ ಲಾರಿ ಮುಷ್ಕರ ಆರಂಭಿಸಲಾಗಿದೆ.
ಮಧ್ಯರಾತ್ರಿಯಿಂದಲೇ ಬಹುತೇಕ ವಾಣಿಜ್ಯ ವಾಹನ ಓಡಾಟ ಸ್ಥಗಿತಗೊಂಡಿವೆ. ಕೆಲವು ಸಂಘಟನೆಗಳಿಂದ ನೈತಿಕ ಬೆಂಬಲ ಲಾರಿ ಮುಷ್ಕರಕ್ಕೆ ಲಭ್ಯವಾಗಿದೆ. ಲಾರಿ ಮುಷ್ಕರ ಮಾಡುತ್ತೇವೆ ಎಂದು ಹೇಳಿದಾಗಿನಿಂದ ಈಗಿನವರೆಗೂ ರಾಜ್ಯ ಸರ್ಕಾರದಿಂದ ಈ ಕುರಿತು ಯಾವುದೇ ಸ್ಪಂದನೆಯೂ ಲಭ್ಯವಾಗಿಲ್ಲ. ದಿನಸಿ, ತರಕಾರಿ, ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ರೀತಿಯ ಸರಕುಗಳನ್ನು ಸಾಗಿಸಲು ಕೆಲಸ ಮಾಡುತ್ತಿದ್ದ ಲಾರಿಗಳು ತಮ್ಮ ಕಾರ್ಯ ನಿಲ್ಲಿಸಿದರೆ ತೊಂದರೆ ಆಗುತ್ತದೆ.
ದರ ವಿವರ
2024ಜೂನ್ ತಿಂಗಳಲ್ಲಿ ಡಿಸೇಲ್ ದರ 3ರೂ. ಹೆಚ್ಚಳ ಮಾಡಿದೆ. 2025 ಏ. 1ರಿಂದ ಏಕಾಏಕಿ ಡಿಸೇಲ್ ಮತ್ತೆ 2 ರೂ. ಹೆಚ್ಚಳ ಮಾಡಿದೆ. ಇದರಿಂದ ಲಾರಿ ಉದ್ಯಮದ ಮೇಲೆ ಬರೆ ಬಿದ್ದಿದೆ. ಹೊರರಾಜ್ಯದ ಲಾರಿಗಳು ನಮ್ಮ ರಾಜ್ಯದಲ್ಲಿ ಲಕ್ಷಾಂತರ ಲೀಟರ್ ಡಿಸೇಲ್ ತುಂಬಿಸಿ ಕೊಳ್ಳುತ್ತಿದ್ದವು. ದರ ಹೆಚ್ಚಳದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಡಿಸೇಲ್ ದರವನ್ನು ಕೂಡಲೇ ಹಿಂದೆಪಡೆಯಬೇಕೆಂದು ಆಗ್ರಹಿಸಲಾಗಿದೆ.
ರಾಜ್ಯದಲ್ಲಿ ಒಟ್ಟಾರೆ 18 ರಾಜ್ಯ ಹೆದ್ದಾರಿ ಟೋಲ್ ಬೂತ್‌ಗಳಿವೆ. ಅನಧಿಕೃತವಾಗಿ ವಾಹನಗಳಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಚಾಲಕರಿಗೆ ಮೂಲಭೂತ ಸೌಕರ್ಯ ಹಾಗೂ ರಸ್ತೆ ಅಪಘಾತ ತಡೆಯದೇ, ಟೋಲ್ ಗಳಿಗೆ ಕೇವಲ ಬಣ್ಣ ಬಳಿದು, ಶುಲ್ಕ ವಸೂಲಿ ಮಾಡುತ್ತಿರುವುದನ್ನು ಸಹ ಖಂಡಿಸುತ್ತೇವೆ. ಸರಕು ಸಾಗಣೆ ವೆಚ್ಚವು ದುಬಾರಿಯಾಗಿದೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ನಾವು ಅನಿವಾರ್ಯವಾಗಿ ಹೋರಾಟದ ಹಾದಿ ತುಳಿದಿದ್ದೇವೆ ಎಂದು ಈ ಹಿಂದೆಯೇ ಅಸೋಸಿಯೇಷನ್ ಅಧ್ಯಕ್ಷ ಡಾ.ಜಿ.ಆರ್.ಷಣ್ಮುಗಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
