Hijab Ban: 7 ತಿಂಗಳಿಂದ ಅಧಿಕಾರದಲ್ಲಿದ್ದೀರಿ, ಹಿಜಾಬ್ ನಿಷೇಧ ಆದೇಶ ಹಿಂಪಡೆಯೋಕೆ ಹಿಂದೇಟು ಯಾಕೆ; ಸಿಎಂ ಸಿದ್ದರಾಮಯ್ಯಗೆ ಓವೈಸಿ ಪ್ರಶ್ನೆ
ಕನ್ನಡ ಸುದ್ದಿ  /  ಕರ್ನಾಟಕ  /  Hijab Ban: 7 ತಿಂಗಳಿಂದ ಅಧಿಕಾರದಲ್ಲಿದ್ದೀರಿ, ಹಿಜಾಬ್ ನಿಷೇಧ ಆದೇಶ ಹಿಂಪಡೆಯೋಕೆ ಹಿಂದೇಟು ಯಾಕೆ; ಸಿಎಂ ಸಿದ್ದರಾಮಯ್ಯಗೆ ಓವೈಸಿ ಪ್ರಶ್ನೆ

Hijab Ban: 7 ತಿಂಗಳಿಂದ ಅಧಿಕಾರದಲ್ಲಿದ್ದೀರಿ, ಹಿಜಾಬ್ ನಿಷೇಧ ಆದೇಶ ಹಿಂಪಡೆಯೋಕೆ ಹಿಂದೇಟು ಯಾಕೆ; ಸಿಎಂ ಸಿದ್ದರಾಮಯ್ಯಗೆ ಓವೈಸಿ ಪ್ರಶ್ನೆ

ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ಬಳಿಕ, ಅವರ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿದೆ. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಆದೇಶ ಹಿಂಪಡೆಯಲು ಒತ್ತಡ ಹೆಚ್ಚಾಗಿದೆ.

ಎಐಎಂಐಎಂ ಮುಖ್ಯಸ್ತ ಅಸಾದುದ್ದೀನ್ ಓವೈಸಿ
ಎಐಎಂಐಎಂ ಮುಖ್ಯಸ್ತ ಅಸಾದುದ್ದೀನ್ ಓವೈಸಿ (Mohammed Aleemuddin)

ಹಿಜಾಬ್ ನಿಷೇಧ ಆದೇಶ ಹಿಂಪಡೆಯಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಏಳು ತಿಂಗಳಿಂದ ಕರ್ನಾಟಕದಲ್ಲಿ ಆಳ್ವಿಕೆ ನಡೆಸುತ್ತಿದೆ. ನಿಮ್ಮಿಷ್ಟದ ಉಡುಪು ಧರಿಸಿ ಎಂದು ಸಿಂಪಲ್ ಆಗಿ ಒಂದು ಆದೇಶ ಜಾರಿಗೊಳಿಸಿದರೆ ಸಾಕಾಗಿತ್ತು ಎಂದು ಅಸಾದುದ್ದೀನ್‌ ಓವೈಸಿ ಸೋಮವಾರ ಹೇಳಿದ್ದಾರೆ.

ಕರ್ನಾಟಕದಲ್ಲಿ ಕಳೆದ ಏಳು ತಿಂಗಳಿಂದ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದೆ. ಕರ್ನಾಟಕದಲ್ಲಿ ಯಾವುದೇ ಡ್ರೆಸ್ ಕೋಡ್ ಇಲ್ಲ ಎಂದು ಅವರು ಆದೇಶ ನೀಡಬೇಕು. ಆ ಮೂಲಕ ಕರ್ನಾಟಕದಲ್ಲಿ ಜನರು ತಮಗೆ ಬೇಕಾದ, ತಮ್ಮಿಷ್ಟದ ಉಡುಪು ಧರಿಸುವುದಕ್ಕೆ ಅವಕಾಶ ನೀಡಬೇಕು. ಇಂತಹ ಆದೇಶ ನೀಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಭಯಪಡುತ್ತಿದ್ದಾರೆ. ಆ ಭಯ ಬಿಟ್ಟು ಆದೇಶ ಜಾರಿಗೊಳಿಸಿ ದಿಟ್ಟತನ ಪ್ರದರ್ಶಿಸಬೇಕು ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಒತ್ತಾಯಿಸಿದರು.

ಇದೇ ವೇಳೆ, ಬಿಆರ್‌ಎಸ್‌ ಎಂಎಲ್ಸಿ ಕೆ.ಕವಿತಾ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷ ಗೊಂದಲದಲ್ಲಿದೆ. ಭರವಸೆ ನೀಡಿರುವುದನ್ನು ಅದು ಈಡೇರಿಸುತ್ತಿಲ್ಲ ಎಂದು ಹೇಳಿದ್ದಾರೆ.

"ಚುನಾವಣೆಯಲ್ಲಿ ಗೆದ್ದ ತಕ್ಷಣ ಕಾಂಗ್ರೆಸ್ ಎಲ್ಲಾ ಭರವಸೆಗಳನ್ನು ಮರೆತುಬಿಡುತ್ತದೆ. ಕಾಂಗ್ರೆಸ್ ಕರ್ನಾಟಕದಲ್ಲಿ ಆರು ಭರವಸೆಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿಯವರೆಗೆ ಅಲ್ಲಿ ಅದು ಏನನ್ನೂ ಮಾಡಿಲ್ಲ. ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ತೆಗೆದುಹಾಕುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಈಗ ಅದರ ಬಗ್ಗೆ ಕಾಂಗ್ರೆಸ್ ಸರ್ಕಾರವೇ ಗೊಂದಲದಲ್ಲಿ ಬಿದ್ದಿದೆ. ಅವರು ನೀಡಿದ ಭರವಸೆಯನ್ನು ಅನುಷ್ಠಾನಗೊಳಿಸುವುದಿಲ್ಲ. ಅದು ಅವರ ಡಿಎನ್ಎಯಲ್ಲೇ ಇದೆ " ಎಂದು ಕೆ ಕವಿತಾ ಟೀಕಿಸಿದರು.

ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಆದೇಶ ರದ್ದು ವಿಚಾರ - ಯಾರು ಏನು ಹೇಳಿದ್ದರು..

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಶುಕ್ರವಾರ (ಡಿ.22) ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ವಿವಾದಿತ ಹಿಜಾಬ್ ನಿಷೇಧ ಆದೇಶವನ್ನು ವಾಪಸ್ ಪಡೆಯಲು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು.

ಶನಿವಾರ ಮತ್ತೆ ಪುನಃ ಈ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿವಾದಿತ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ನಿರ್ಧಾರ ಪರಿಶೀಲನೆಯಲ್ಲಿದೆ. ಇದುವರೆಗೂ ನಿಷೇಧ ಆದೇಶ ಹಿಂಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೇ ವೇಳೆ ಅವರ ಸಚಿವ ಸಂಪುಟ ಸಹೋದ್ಯೋಗಿಗಳಾದ ಪ್ರಿಯಾಂಕ್ ಖರ್ಗೆ, ಹೆಚ್‌ ಕೆ ಪಾಟೀಲ್, ಮಧು ಬಂಗಾರಪ್ಪ ಅವರು ಕೂಡ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವ ವಿಚಾರಕ್ಕೆ ಪೂರಕವಾಗಿ ಮಾತನಾಡಿದ್ದರು.

ಕರ್ನಾಟಕ ಸರ್ಕಾರ ಏನೇ ಮಾಡಿದರೂ ಸಂವಿಧಾನದ ಕಾನೂನು ಮತ್ತು ಚೌಕಟ್ಟಿನಲ್ಲಿರುತ್ತದೆ. ಕರ್ನಾಟಕದ ಅಭಿವೃದ್ಧಿಗೆ ಹಾನಿಕಾರಕವಾದ ಯಾವುದೇ ನೀತಿಯನ್ನು ಪರಿಶೀಲಿಸಲಾಗುತ್ತದೆ. ಅಗತ್ಯವಿದ್ದರೆ ಆದೇಶವನ್ನು ರದ್ದುಗೊಳಿಸಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸದ್ಯದಲ್ಲೇ ನಿರ್ಧಾರ ಪ್ರಕಟಿಸಲಾಗುವುದು. ಆದರೆ, ಸಿಎಂ ಚಿಂತನೆಯ ಧಾಟಿ ಸರ್ಕಾರ ಮತ್ತು ಪಕ್ಷಕ್ಕೆ ಹೊಂದಿಕೆಯಾಗಿದೆ. ಹಿಜಾಬ್ ಬಗ್ಗೆ ಕಳೆದ ಸರ್ಕಾರದ ನಿರ್ಧಾರವು ಪಕ್ಷಪಾತದಿಂದ ಕೂಡಿದ್ದು, ದೇಶದ ಜಾತ್ಯತೀತ ಚಿಂತನೆಗೆ ಹೊಂದಿಕೆಯಾಗಿರಲಿಲ್ಲ. ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.

ರಾಜ್ಯದ ಶಿಕ್ಷಣ ನೀತಿಯು ಸಂಸ್ಕೃತಿ, ಅಧ್ಯಯನಗಳು ಮತ್ತು ಇತರ ವಿಷಯಗಳನ್ನು ಒಳಗೊಂಡಿದೆ. ಇಂತಹ ಪರಿಸರದಲ್ಲಿ ಹಿಜಾಬ್ ನಿಷೇಧ ಆದೇಶ ಪಡೆಯುವ ವಿಚಾರ ರಾಜಕೀಯಕ್ಕೆ ಬಳಕೆಯಾಗಬಾರದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಸಿದ್ದರಾಮಯ್ಯ ಅನುಸರಿಸುತ್ತಿರುವ ಮಾದರಿ ನೋಡಿದರೆ... ಕಳೆದ ಆರು ತಿಂಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಜನರಲ್ಲಿ ಅಸಮಾಧಾನವಿದೆ. ರಾಜ್ಯದಲ್ಲಿ ಬರಗಾಲವಿದೆ, ಕಾವೇರಿ ಸಮಸ್ಯೆಯೂ ಇದೆ. ಸುಪ್ರೀಂ ಕೋರ್ಟ್‌ನಲ್ಲಿರುವ ಈ ಹಳೆಯ ಸಮಸ್ಯೆಯನ್ನು ಕೆದಕುವುದನ್ನೇ ಕೆಲಸವನ್ನಾಗಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Whats_app_banner