IndiGo Passengers: ಬೆಂಗಳೂರಿನಿಂದ 8 ಯಾತ್ರಿಕರನ್ನು ಚೆನ್ನೈಗೆ ಕರೆದೊಯ್ಯದ ಇಂಡಿಗೋ, ಟೀಕೆ ಬಳಿಕ ಕ್ಷಮೆಯಾಚನೆ
ಕನ್ನಡ ಸುದ್ದಿ  /  ಕರ್ನಾಟಕ  /  Indigo Passengers: ಬೆಂಗಳೂರಿನಿಂದ 8 ಯಾತ್ರಿಕರನ್ನು ಚೆನ್ನೈಗೆ ಕರೆದೊಯ್ಯದ ಇಂಡಿಗೋ, ಟೀಕೆ ಬಳಿಕ ಕ್ಷಮೆಯಾಚನೆ

IndiGo Passengers: ಬೆಂಗಳೂರಿನಿಂದ 8 ಯಾತ್ರಿಕರನ್ನು ಚೆನ್ನೈಗೆ ಕರೆದೊಯ್ಯದ ಇಂಡಿಗೋ, ಟೀಕೆ ಬಳಿಕ ಕ್ಷಮೆಯಾಚನೆ

ಭಾರತದಲ್ಲಿ ಪ್ರಾದೇಶಿಕ ವಿಮಾನ ಯಾನ ಕಂಪನಿ ಇಂಡಿಗೋ ಒಂದಿಲ್ಲೊಂದು ಕಾರಣಕ್ಕೆ ಇತ್ತೀಚೆಗೆ ಸುದ್ದಿಯಲ್ಲಿದೆ. ಕಳೆದ ಭಾನುವಾರ (ನ.19) 8 ಪ್ರಯಾಣಿಕರನ್ನು ಚೆನ್ನೈಗೆ ಕರೆದೊಯ್ಯದೆ ಟೀಕೆಗೊಳಗಾಗಿರುವ ಇಂಡಿಗೋ ಈಗ ಆ ಕೃತ್ಯಕ್ಕೆ ಕ್ಷಮೆಯಾಚಿಸಿದೆ.

ಇಂಡಿಗೋ ವಿಮಾನ (ಸಾಂಕೇತಿಕ ಚಿತ್ರ)
ಇಂಡಿಗೋ ವಿಮಾನ (ಸಾಂಕೇತಿಕ ಚಿತ್ರ) (REUTERS)

ಬೆಂಗಳೂರು: ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ ಎಂದು ಚೆನ್ನೈಗೆ ಕರೆದೊಯ್ಯದೇ ಸೇವಾ ಲೋಪ ತೋರಿದ ಇಂಡಿಗೋ ವರ್ತನೆ ವ್ಯಾಪಕ ಟೀಕೆಗೆ ಒಳಗಾಗಿದೆ. ಟೀಕೆಗಳ ಕಾರಣ ಇಂಡಿಗೋ ಕೊನೆಗೂ ಪ್ರಯಾಣಿಕರ ಕ್ಷಮೆಯಾಚಿಸಿದೆ.

ಅಮೃತಸರದಿಂದ ಚೆನ್ನೈಗೆ ಹೊರಟ ಇಂಡಿಗೋ ವಿಮಾನ ಬೆಂಗಳೂರಿಗೆ ನವೆಂಬರ್ 19ಕ್ಕೆ ಬೆಂಗಳೂರು ತಲುಪಿದೆ. ಚೆನ್ನೈಗೆ ಹೋಗಲು 8 ಪ್ರಯಾಣಿಕರಷ್ಟೇ ಇದ್ದ ಕಾರಣ ಅವರನ್ನು ಕರೆದೊಯ್ಯದೆ ಬೆಂಗಳೂರಿನಲ್ಲೇ ಇಳಿಸಿತ್ತು. ಅವರಿಗೆ ಸಕಾರಣವನ್ನೂ ಕೊಟ್ಟಿರಲಿಲ್ಲ. ಈ ಪ್ರಕರಣ ಈಗ ವ್ಯಾಪಕ ಟೀಕೆಗೆ ಒಳಗಾಗಿದೆ. ಹೀಗಾಗಿ, ನಮ್ಮಿಂದ ತಪ್ಪಾಗಿದೆ, ಕ್ಷಮಿಸಿ ಎಂದು ಇಂಡಿಗೋ ತನ್ನ ಪ್ರಯಾಣಿಕರಲ್ಲಿ ಕೇಳಿಕೊಂಡಿದೆ.

ಏನಿದು ಪ್ರಕರಣ

ನವೆಂಬರ್ 19ಕ್ಕೆ ಅಮೃತಸರದಿಂದ ಚೆನ್ನೈಗೆ ಹೋಗುವ ಪ್ರಯಾಣಿಕರಿಗೆ ಬೆಂಗಳೂರು ಮೂಲಕ ಸಂಚರಿಸುವ ಇಂಡಿಗೋದ 6ಇ478 ವಿಮಾನದಲ್ಲಿ ಟಿಕೆಟ್ ನೀಡಲಾಗಿತ್ತು. ಇದರಲ್ಲೇ ಆ 8 ಪ್ರಯಾಣಿಕರು ಪ್ರಯಾಣಿಸಿದ್ದರು. ಈ ಪೈಕಿ ಆರು ಪ್ರಯಾಣಿಕರು ಬೆಂಗಳೂರಿನಿಂದ ವಿಮಾನ ಏರಿದ್ದರು. ಇವರ ಪೈಕಿ ಇಬ್ಬರು ವೃದ್ಧರು.

ಆದರೆ ಕೆಲವೇ ಕ್ಷಣದಲ್ಲಿ ವಿಮಾನದ ಗ್ರೌಂಡ್ ಸಿಬ್ಬಂದಿ, ಸ್ವಲ್ಪ ಸಮಸ್ಯೆ ಇದೆ ಎಂದು ಈ ಎಂಟೂ ಪ್ರಯಾಣಿಕರನ್ನು ಕೆಳಗಿಳಿಸಿದ್ದರು. ಇಷ್ಟಾದ ಬಳಿಕ ಇಬ್ಬರು ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ 13 ಕಿ.ಮೀ. ದೂರದ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟಿತ್ತು ಇಂಡಿಗೋ. ಆದರೆ ಉಳಿದ 6 ಪ್ರಯಾಣಿಕರು ಬೆಂಗಳೂರಿನಿಂದ ವಿಮಾನವೇರಿದ ಕಾರಣ ಅವರನ್ನು ವಿಚಾರಿಸುವ ಗೋಜಿಗೆ ಹೋಗಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಇಂಡಿಗೋ ಸಮಜಾಯಿಷಿ ಏನು

ಇಂಡಿಗೋ ವಿಮಾನ ಅಮೃತಸರದಿಂದ ಬೆಂಗಳೂರಿಗೆ ತಲುಪಿದಾಗಲೇ ತಡವಾಗಿತ್ತು. ಹೀಗಾಗಿ, ಚೆನ್ನೈಗೆ ಹೋಗುವ ಇನ್ನೊಂದು ವಿಮಾನ ತಪ್ಪಿ ಹೋಗಿದೆ. ಪ್ರಯಾಣಿಕರಿಗೆ ನೆರವು ನೀಡುವ ಎಲ್ಲ ಪ್ರಯತ್ನಗಳನ್ನು ನಿಲ್ದಾಣದಲ್ಲಿರುವ ಇಂಡಿಗೋ ಸಿಬ್ಬಂದಿ ಮಾಡಿದ್ದಾರೆ. ಆದರೆ ಸಮಯದ ಅಭಾವದ ಕಾರಣ ಅವರಿಗೆ ವಿಮಾನ ಸಿಕ್ಕಿಲ್ಲ ಎಂದು ಇಂಡಿಗೋ ಸಮಜಾಯಿಷಿ ನೀಡಿದೆ.

ನಿಜವಾದ ಕಾರಣವೇನು, ಇಂಡಿಗೋ ಅಧಿಕಾರಿಗಳು ಹೇಳಿದ್ದು ಇಷ್ಟು

ಇಂಡಿಗೋ ವಿಮಾನ 8 ಪ್ರಯಾಣಿಕರನ್ನು ಇಳಿಸಿದ ಪ್ರಕರಣದ ಕುರಿತು ಹೆಸರು ಹೇಳಲು ಇಚ್ಛಿಸದೇ ಪ್ರತಿಕ್ರಿಯೆ ನೀಡಿರುವ ಇಂಡಿಗೋ ಅಧಿಕಾರಿಗಳು, ಕಡಿಮೆ ಪ್ರಯಾಣಿಕರನ್ನು ಹೊತ್ತು ವಿಮಾನ ಸಂಚರಿಸುವುದು ಲಾಭದಾಯಕವಲ್ಲ ಎಂಬ ಕಾರಣಕ್ಕೆ ಆ ಪ್ರಯಾಣಿಕರನ್ನು ಇಳಿಸಲಾಗಿತ್ತು. ಅವರಿಗೆ ಈ ಕಾರಣವನ್ನು ಕೊಟ್ಟಿಲ್ಲ.

ಆದರೆ, ಪ್ರಯಾಣಿಕರಿಗೆ ವಾಸ್ತವ್ಯ ಒದಗಿಸಲು ಮತ್ತು ಮುಂದಿನ ವಿಮಾನದಲ್ಲಿ ಅವರನ್ನು ಚೆನ್ನೈಗೆ ಕಳುಹಿಸಲು ಇಂಡಿಗೋ ಸಿಬ್ಬಂದಿ ಶ್ರಮಿಸಿದ್ದಾರೆ. ಆದಾಗ್ಯೂ, ಪ್ರಯಾಣಿಕರಿಗೆ ಆಗಿರುವ ತೊಂದರೆ ಕುರಿತು ವಿಷಾದವಿದೆ. ಈ ಕುರಿತು ಕ್ಷಮೆಯಾಚಿಸುವುದಾಗಿ ಇಂಡಿಗೋ ಹೇಳಿಕೆ ತಿಳಿಸಿದೆ.

ಪ್ರಾದೇಶಿಕ ವಿಮಾನ ಯಾತ್ರಿಗಳ ಸಂಖ್ಯೆ ಏರಿಕೆ

ಭಾರತದಲ್ಲಿ ಪ್ರಾದೇಶಿಕ ವಿಮಾನ ಯಾನ ಪ್ರಗತಿ ಸಾಧಿಸಿದ್ದು, ಯಾತ್ರಿಗಳ ಸಂಖ್ಯೆಯಲ್ಲಿ ಏರಿಕೆ ಕಾಣತೊಡಗಿದೆ. ಮಂಗಳವಾರ ಬಿಡುಗಡೆಯಾದ ದತ್ತಾಂಶದ ಪ್ರಕಾರ, ಪ್ರಾದೇಶಿಕ ವಿಮಾನ ಯಾತ್ರಿಗಳ ಸಂಖ್ಯೆಯ ವಾರ್ಷಿಕ ಬೆಳವಣಿಗೆ ಅಕ್ಟೋಬರ್‌ನಲ್ಲಿ ಶೇಕಡ 11 ಏರಿದ್ದು, 1.26 ಕೋಟಿ ತಲುಪಿದೆ. ಸೆಪ್ಟೆಂಬರ್‌ನಲ್ಲಿ ಇದು 1.22 ಕೋಟಿ ಇತ್ತು. 2022ರ ಅಕ್ಟೋಬರ್‌ನಲ್ಲಿ 1.14 ಕೋಟಿ ಯಾತ್ರಿಗಳು ಪ್ರಾದೇಶಿಕ ವಿಮಾನ ಯಾನ ಸೇವೆ ಬಳಸಿದ್ದರು.

ನಾಗರಿಕ ವಿಮಾನ ಯಾನ ಸಚಿವಾಲಯದ ದತ್ತಾಂಶ ಪ್ರಕಾರ, ಇಂಡಿಗೋ ವಿಮಾನಗಳು ಅಕ್ಟೋಬರ್ ತಿಂಗಳಲ್ಲಿ 79.07 ಲಕ್ಷ ಯಾತ್ರಿಗಳನ್ನು ಕರೆದೊಯ್ದಿದೆ. ಪ್ರಾದೇಶಿಕ ಮಾರುಕಟ್ಟೆಯಲ್ಲಿ ಇಂಡಿಗೋ ವಿಮಾನದ ಪಾಲು ಶೇಕಡ 62.6. ಸೆಪ್ಟೆಂಬರ್‌ನಲ್ಲಿ ಶೇಕಡ 63.4 ಇತ್ತು.

Whats_app_banner