ಬೆಂಗಳೂರು ಸಿಇಒ ಸುಚನಾ ಸೇಠ್‌ ಮಗನ ಹತ್ಯೆಗೈದ ಕೇಸ್‌; ಆಘಾತದಿಂದ ಮಗುವಿನ ಸಾವು, ಚಾರ್ಜ್‌ಶೀಟ್ ಸಲ್ಲಿಸಿದ ಗೋವಾ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಸಿಇಒ ಸುಚನಾ ಸೇಠ್‌ ಮಗನ ಹತ್ಯೆಗೈದ ಕೇಸ್‌; ಆಘಾತದಿಂದ ಮಗುವಿನ ಸಾವು, ಚಾರ್ಜ್‌ಶೀಟ್ ಸಲ್ಲಿಸಿದ ಗೋವಾ ಪೊಲೀಸರು

ಬೆಂಗಳೂರು ಸಿಇಒ ಸುಚನಾ ಸೇಠ್‌ ಮಗನ ಹತ್ಯೆಗೈದ ಕೇಸ್‌; ಆಘಾತದಿಂದ ಮಗುವಿನ ಸಾವು, ಚಾರ್ಜ್‌ಶೀಟ್ ಸಲ್ಲಿಸಿದ ಗೋವಾ ಪೊಲೀಸರು

ಬೆಂಗಳೂರು ಸಿಇಒ ಸುಚನಾ ಸೇಠ್‌ ಮಗನ ಹತ್ಯೆಗೈದ ಕೇಸ್‌ನಲ್ಲಿ ಮಗುವಿನ ಸಾವು ಆಘಾತದಿಂದ ಸಂಭವಿಸಿದೆ ಎಂದು ಗೋವಾ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ. ಈ ಕೇಸ್ ಸಂಬಂಧ 642 ಪುಟಗಳ ಚಾರ್ಜ್‌ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದಾರೆ.

ಗೋವಾ ಪೊಲೀಸ್ ವಶದಲ್ಲಿರುವ ಸುಚನಾ ಸೇಠ್, (ಕಡತ ಚಿತ್ರ)
ಗೋವಾ ಪೊಲೀಸ್ ವಶದಲ್ಲಿರುವ ಸುಚನಾ ಸೇಠ್, (ಕಡತ ಚಿತ್ರ) (HT News )

ಬೆಂಗಳೂರು: ತನ್ನ ನಾಲ್ಕು ವರ್ಷದ ಮಗನನ್ನು ಅಪಾರ್ಟ್‌ಮೆಂಟ್‌ನಲ್ಲಿ ಕೊಂದ ಆರೋಪ ಎದುರಿಸುತ್ತಿರುವ ಬೆಂಗಳೂರು ಎಐ ಸ್ಟಾರ್ಟ್‌ಅಪ್‌ನ ಸಿಇಒ ವಿರುದ್ಧ ಗೋವಾ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದರು. ಸುಚನಾ ಸೇಠ್‌ ಅವರ ಪುತ್ರ ಆಘಾತದಿಂದ ಮೃತಪಟ್ಟಿರುವುದಾಗಿ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಭೀಕರ ಹತ್ಯೆಯ ಹಲವು ಕಲಾತ್ಮಕ ವಿವರಗಳನ್ನು ಚಾರ್ಜ್‌ಶೀಟ್ ಬಹಿರಂಗಪಡಿಸಿದೆ. ಸುಚನಾ ಸೇಠ್ ತನ್ನ ಪತಿಯೊಂದಿಗೆ ಮಗನ ಹೊಣೆಗಾರಿಕೆ ಕುರಿತಾದ ಕಾನೂನು ಸಮರ ನಡೆಸುತ್ತಿದ್ದ ಸಂದರ್ಭದಲ್ಲಿ ಗೋವಾದ ಹೋಟೆಲ್ ಕೋಣೆಯಲ್ಲಿ ತನ್ನ ಮಗನನ್ನು ಕೊಂದಿದ್ದರು ಎಂಬುದು ಅವರ ಮೇಲಿನ ಆರೋಪ. ಚಿತ್ರದುರ್ಗದಲ್ಲಿ ಅವರನ್ನು ಬಂಧಿಸಲಾಗಿತ್ತು.

ಸುಚನಾ ಸೇಠ್ (39) ತಮ್ಮ 4 ವರ್ಷದ ಮಗನ ಶವವನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟುಕೊಂಡು ಪ್ರಯಾಣಿಸುತ್ತಿದ್ದ ವೇಳೆ, ಜನವರಿ 8 ರಂದು ಕರ್ನಾಟಕದ ಚಿತ್ರದುರ್ಗದ ಐಮಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಯಿತು. ಕಲಾಂಗಗುಟ್ ಪೊಲೀಸರು ಸುಚನಾ ಸೇಠ್ ವಿರುದ್ಧ 642 ಪುಟಗಳ ಚಾರ್ಜ್‌ಶೀಟ್ ಅನ್ನು ಗೋವಾದ ಮಕ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದರು.

ಸುಚನಾ ಸೇಠ್ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ದಾಖಲಾಗಿರುವ 10 ಅಂಶಗಳು

1) ಸುಚನಾ ಸೇಠ್ ಅವರು ತಮ್ಮ ಪತಿ ವೆಂಕಟ್ ರಾಮನ್ ಅವರೊಂದಿಗೆ ಮಗ ಯಾರ ಜೊತೆಗೆ ಇರಬೇಕು ಎಂಬ ಕಾನೂನು ಹೋರಾಟ ನಡೆಸಿದ್ದರು. ಜನವರಿ 6 ರಂದು ಮಾತನಾಡುವಾಗ, ಮರುದಿನ ಮಗನನ್ನು ಭೇಟಿಯಾಗಬಹುದು ಎಂದು ತನ್ನ ವಿಚ್ಛೇದಿತ ಪತಿಗೆ ಸುಚನಾ ಸೇಠ್‌ ತಿಳಿಸಿದ್ದರು. ಆದರೆ ಬೆಂಗಳೂರಿಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ.

2) ಮಗನನ್ನು ತಂದೆ ಜೊತೆಗೆ ಭೇಟಿ ಮಾಡಿಸಲು ಇಷ್ಟವಿಲ್ಲದ ಕಾರಣ ಸುಚನಾ ಸೇಠ್ ಮಗನನ್ನು ಕರೆದುಕೊಂಡು ಗೋವಾಗೆ ಹೋಗಿ ಕಾಂಡೋಲಿಮ್‌ನ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಜನವರಿ 6 ರಂದು ತಂಗಿದ್ದರು. ಜನವರಿ 10 ರವರೆಗೆ ಸರ್ವೀಸ್ ಅಪಾರ್ಟ್‌ಮೆಂಟ್ ಬುಕ್ ಮಾಡಿದ್ದರು. ಆದರೆ ಜನವರಿ 7 ರಂದು, ಬೆಂಗಳೂರಿನಲ್ಲಿ ಕೆಲವು ತುರ್ತು ಕೆಲಸದ ಕಾರಣಕ್ಕಾಗಿ ಕ್ಯಾಬ್ ಅನ್ನು ಬಾಡಿಗೆಗೆ ತೆಗೆದುಕೊಂಡು ಏಕಾಂಗಿಯಾಗಿ ಚೆಕ್ ಔಟ್ ಮಾಡಿದ್ದರು.

3) ಸುಚನಾ ಸೇಠ್ ನಡವಳಿಕೆಯಿಂದ ಅನುಮಾನಗೊಂಡ ಸರ್ವೀಸ್ ಅಪಾರ್ಟ್‌ಮೆಂಟ್‌ ಸಿಬ್ಬಂದಿ, ಜತೆಗೆ ಇದ್ದ ಮಗು ಕಾಣದೇ ಇರುವಾಗ ಮಗುವಿನ ಬಗ್ಗೆ ಪ್ರಶ್ನಿಸಿದ್ದರು. ಆಗ ಆಕೆ ಮಗುವನ್ನು ಸ್ನೇಹಿತೆ ಮನೆಯಲ್ಲಿ ಬಿಟ್ಟುಬಂದಿರುವುದಾಗಿ ಹೇಳಿದ್ದರು. ಇದಾಗಿ ಅವರು ಟ್ಯಾಕ್ಸಿ ಬುಕ್ ಮಾಡಿಕೊಟ್ಟಿದ್ದರು.

4) ಬಳಿಕ ಅನುಮಾನಗೊಂಡ ಸರ್ವೀಸ್ ಅಪಾರ್ಟ್‌ಮೆಂಟ್‌ ಸಿಬ್ಬಂದಿ, ಆಕೆ ತಂಗಿದ್ದ ಕೊಠಡಿ ಸಮೀಪ ಹೋದಾಗ ಅಲ್ಲಿ ರಕ್ತದ ಕಲೆಗಳು ಕಂಡಿದ್ದವು. ಪೊಲೀಸರಿಗೂ ಮಾಹಿತಿ ನೀಡಿದರು.

5) ಪೊಲೀಸರು ಸ್ಥಳಕ್ಕೆ ಆಗಮಿಸಿ, ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿದ್ದರು. ಮಗುವಿನ ಬಗ್ಗೆ ಸುಚನಾ ಬಳಿ ವಿಚಾರಿಸುವಂತೆ ಹೇಳಿದ್ದರು. ಆಗ ಸುಚನಾ ಸೇಠ್‌ ಅವರು ಮಗ ಸ್ನೇಹಿತೆಯ ಮನೆಯಲ್ಲಿರುವುದಾಗಿ ಮಡ್‌ಗಾಂವ್‌ನ ಒಂದು ಮನೆಯ ವಿಳಾಸ ನೀಡಿದ್ದರು. ಆ ವಿಳಾಸದಲ್ಲಿ ವಿಚಾರಿಸಿದಾಗ ಅದು ನಕಲಿ ಎಂಬುದು ಧೃಡಪಟ್ಟಿದೆ.

6) ಪೊಲೀಸರು ಪುನಃ ಆ ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಕೊಂಕಣಿ ಭಾಷೆಯಲ್ಲಿ ಮಾತನಾಡುತ್ತ, ಹತ್ತಿರದ ಐಮಂಗಲ ಪೊಲೀಸ್ ಠಾಣೆಗೆ ಕಾರು ಚಲಾಯಿಸುವಂತೆ ನಿರ್ದೇಶಿಸಿದ್ದಾರೆ. ಅಲ್ಲಿ ಪೊಲೀಸ್ ವಿಚಾರಣೆ ಬಳಿಕ ಗೋವಾ ಪೊಲೀಸರು ಆಕೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಬಂಧನ ದಾಖಲಿಸಿದರು.

7) ಸುಚನಾ ಅವರ ಲಗೇಜ್‌ನಲ್ಲಿ ಸಿಕ್ಕ ಟಿಶ್ಯೂ ಪೇಪರ್‌ನಲ್ಲಿ 5 ವಾಕ್ಯಗಳ ಟಿಪ್ಪಣಿ ಇತ್ತು. ಅದರಲ್ಲಿ ಸುಚನಾ ಅವರು ತಮ್ಮ ಪತಿಗೆ ಮಗನನ್ನು ಇರಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಬರೆದಿದ್ದರು.

8) ಸರ್ವೀಸ್ ಅಪಾರ್ಟ್‌ಮೆಂಟ್‌ನ ಕೊಠಡಿಯೊಳಗೆ ಸುಚನಾ ಸೇಠ್ ತನ್ನ ಮಣಿಕಟ್ಟಿನ ನರವನ್ನು ತುಂಡರಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆ ರಕ್ತದ ಕಲೆಗಳನ್ನು ಕಂಡು ಸರ್ವೀಸ್ ಅಪಾರ್ಟ್‌ಮೆಂಟ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು.

9) ಸರ್ವೀಸ್ ಅಪಾರ್ಟ್‌ಮೆಂಟ್‌ ಕೊಠಡಿಯಲ್ಲಿ ಕಫ್‌ ಸಿರಪ್‌ನ ಎರಡು ಬಾಟಲಿಗಳಿದ್ದವು. ಮಗುವಿಗೆ ಅಧಿಕ ಡೋಸ್‌ ಸಿರಪ್ ಕೊಟ್ಟು ಕೃತ್ಯವೆಸಗಿರುವ ಸಾಧ್ಯತೆ ಇದೆ. ಬಳಿಕ ಆಗಿರುವ ಆಘಾತದಲ್ಲಿ ಮಗು ಮೃತಪಟ್ಟಿದೆ.

10) ಸುಚನಾ ಸೇಠ್ 2022ರಲ್ಲಿ ಪತಿ ವೆಂಕಟರಾಮನ್‌ ವಿರುದ್ಧ ಕೌಟುಂಬಿಕ ಹಿಂಸಾಚಾರದ ಕೇಸ್ ದಾಖಲಿಸಿದ್ದರು. ಇದು ವಿಚಾರಣೆ ಹಂತದಲ್ಲಿರುವಾಗ ಈ ಕೃತ್ಯವೆಸಗಿದ್ದಾರೆ. ಪತಿ ವೆಂಕಟರಾಮನ್‌ ಕೇರಳದವರು. ಸುಚನಾ ಸೇಠ್ ಪಶ್ಚಿಮ ಬಂಗಾಳದವರು. ಬೆಂಗಳೂರಲ್ಲಿ ನೆಲೆಸಿದ್ದರು.

ಸುಚನಾ ಸೇಠ್‌ ಯಾರು : ಲಿಂಕ್ಡ್‌ಇನ್‌ನಲ್ಲಿ ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ ಪುಟದಲ್ಲಿ ಸಿಕ್ಕ ಮಾಹಿತಿ ಪ್ರಕಾರ, ಸುಚನಾ ಸೇಠ್ 2021ರ 100 ಬ್ರಿಲಿಯಂಟ್‌ ವುಮೆನ್ ಇನ್‌ ಎಐ ಎಥಿಕ್ಸ್‌ ಪಟ್ಟಿಯಲ್ಲಿದ್ದರು. ಸುಚನಾ ಸೇಠ್ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಬರ್ಕ್‌ಮನ್ ಕ್ಲೈನ್ ​​ಸೆಂಟರ್‌ನಲ್ಲಿ ಸಹವರ್ತಿ ಮತ್ತು ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ 12 ವರ್ಷಗಳ ಅನುಭವ ಹೊಂದಿರುವ ಡೇಟಾ ವಿಜ್ಞಾನಿ.

Whats_app_banner