ಕನ್ನಡ ಸುದ್ದಿ  /  Karnataka  /  India News Bengaluru International Airport Terminal 2 Introduces Ctx Machines For Hassle Free Checks Security Check Rst

ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ; ಬೆಂಗಳೂರು ಏರ್‌ಪೋರ್ಟ್‌ ಟರ್ಮಿನಲ್‌ 2ರಲ್ಲಿ ಸಿಟಿಎಕ್ಸ್‌ ಯಂತ್ರ ಅಳವಡಿಕೆ; ಭದ್ರತಾ ತಪಾಸಣೆಯಿನ್ನು ಸುಲಭ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2ರಲ್ಲಿ ಸಿಟಿಎಕ್ಸ್‌ ಯಂತ್ರವನ್ನು ಅಳವಡಿಸಲಾಗಿದೆ. ಇದರಿಂದ ಇನ್ನು ಮುಂದೆ ಪ್ರಯಾಣಿಕರು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಬ್ಯಾಗ್‌ನಲ್ಲಿ ಇರಿಸಿಕೊಂಡಾಗ ಎದುರಾಗುವ ಸಮಸ್ಯೆ ಇರುವುದಿಲ್ಲ. ಈ ಮಷಿನ್‌ನ ಇನ್ನಿತರ ಪ್ರಯೋಜನ ತಿಳಿಯಿರಿ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (News 18)

ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನ ಪ್ರಯಾಣಿಕರಿಗೆ ಒಂದು ಖುಷಿ ಸಮಾಚಾರವಿದೆ. ಕೆಇಎ (ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌) ಇದೇ ಮೊದಲ ಬಾರಿಗೆ ಟರ್ಮಿನಲ್‌ 2 ರಲ್ಲಿ ಕಂಪ್ಯೂಟರ್‌ ಟೊಮೊಗ್ರಫಿ ಎಕ್ಸ್‌-ರೇ (ಸಿಟಿಎಕ್ಸ್‌ CTX) ಯಂತ್ರಗಳನ್ನು ಅಳವಡಿಸಿದೆ. ಇದು ಪ್ರಯಾಣಿಕರ ಸಮಯ ಉಳಿತಾಯ ಮಾಡಲಿದೆ. ತಡೆ ರಹಿತ ಪ್ರಯಾಣಕ್ಕೆ ಈ ಸಿಟಿಎಕ್ಸ್‌ ಅನುವು ಮಾಡಿಕೊಡಲಿದೆ. ಇನ್ನು ಮುಂದೆ ಪ್ರಯಾಣಿಕರು ತಮ್ಮ ಬ್ಯಾಗ್‌ನಲ್ಲಿರುವ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತೆಗೆಯದೇ ಮುಂದೆ ಸಾಗಬಹುದು, ಅಂದರೆ ಈ ಯಂತ್ರವು ಬ್ಯಾಗ್‌ನಲ್ಲಿರುವ ಎಲೆಕ್ಟ್ರಾನಿಕ್‌ ಉಪಕರಣ ಹೊರ ತೆಗೆಯದೇ ಸ್ಕ್ಯಾನ್‌ ಮಾಡಲು ಸಹಾಯ ಮಾಡುತ್ತದೆ. ಇದು ದೇಶದಲ್ಲೇ ಮೊದಲಿಗೆ ಏರ್‌ಪೋರ್ಟ್‌ನಲ್ಲಿ ಈ ಸುಧಾರಿತ ತಂತ್ರಜ್ಞಾನದ ಅಳವಡಿಕೆ ಮಾಡಲಾಗಿದೆ. ಈ ಯಂತ್ರವು ಇನ್ನು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಇನ್ನು ಮುಂದೆ ಟರ್ಮಿನಲ್‌ 2ರ ಮೂಲಕ ಪ್ರಯಾಣಿಸವು ಪ್ರಯಾಣಿಕರು ಬೋರ್ಡಿಂಗ್‌ಗೂ ಮೊದಲು ತಪಾಸಣೆಯ ವೇಳೆ ಫೋನ್‌, ಲ್ಯಾಪ್‌ಟಾಪ್‌, ಚಾರ್ಜರ್‌ ಯಾವುದನ್ನೂ ಹೊರ ತೆಗೆಯಬೇಕು ಎಂದಿಲ್ಲ.

ಮನಿ ಕಂಟ್ರೋಲ್‌ನ ಇತ್ತೀಚಿನ ವರದಿಯ ಪ್ರಕಾರ, ಸದ್ಯ ಸಿಟಿಎಕ್ಸ್‌ ಯಂತ್ರದ ಪ್ರಯೋಗ ನಡೆಯುತ್ತಿದೆ. ಆರಂಭದಲ್ಲಿ ಡೊಮೆಸ್ಟಿಕ್‌ ಗೇಟ್‌ನಲ್ಲಿ ಇದು ಕಾರ್ಯರಂಭ ಮಾಡಲಿದೆ. ಒಟ್ಟಾರೆ ತಡೆರಹಿತ ಹಾಗೂ ಪರಿಣಾಮಕಾರಿ ಭದ್ರತಾ ಅನುಭವ ನೀಡಲಿದೆ.

ಈ ಸುಧಾರಿತ ಸಿಟಿಎಕ್ಸ್‌ ಯಂತ್ರಗಳನ್ನು ಸ್ವಯಂಚಾಲಿತ ಟ್ರೇ ಮೂಲಕ ಮರುಪಡೆಯುವಿಕೆಯ ಸಿಸ್ಟಂನೊಂದಿಗೆ ಸಂಯೋಜಿಸವಾಗಿದೆ. ಇದು ಭದ್ರತಾ ತಪಾಸಣೆಯ ಸಮಯದಲ್ಲಿ ಪ್ರಯಾಣಿಕರು ತಮ್ಮ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಪ್ರತ್ಯೇಕ ಟ್ರೇಗಳಲ್ಲಿ ಇರಿಸುವ ಅಗತ್ಯವನ್ನು ನಿವಾರಿಸುತ್ತದೆ. ಭದ್ರತಾ ಅಧಿಕಾರಿಗಳು ಸಿಟಿಎಕ್ಸ್‌ ಯಂತ್ರಗಳ ಮೂಲಕವೇ ಬ್ಯಾಗ್‌ನಲ್ಲಿರುವ ವಸ್ತುಗಳನ್ನು ಪರಿಶೀಲನೆ ಮಾಡಲು ಸಾಧ್ಯವಾಗುತ್ತದೆ. ಈ ಯಂತ್ರದಲ್ಲಿ ಬ್ಯಾಗ್‌ ಅನ್ನು ಭಿನ್ನ ಆಯಾಮದಲ್ಲಿ ಪರೀಕ್ಷಿಸಲು ಸಾಧ್ಯವಾಗುತ್ತದೆ. ಆ ಕಾರಣಕ್ಕೆ ಮತ್ತೆ ಬ್ಯಾಗ್‌ ಅನ್ನು ಪುರ್ನಪರಿಶೀಲಿಸುವುದು ಹಾಗೂ ಭೌತಿಕ ತಪಾಸಣೆಗಳ ಅಗತ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಈ ವಸ್ತುಗಳಿಗೂ ಅನುಮತಿ

ಈ ಹೊಸ ವ್ಯವಸ್ಥೆಯು ಪ್ರಯಾಣಿಕರು ತಮ್ಮ ಬ್ಯಾಗ್‌ಗಳಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ಲ್ಯಾಗ್‌ (ಲಿಕ್ವಿಡ್‌, ಏರೋಸಾಲ್‌ ಹಾಗೂ ಜೆಲ್‌) ಗಳನ್ನು ಇರಿಸಲು ಅನುಮತಿ ನೀಡುತ್ತದೆ. ಅಲ್ಲದೆ ಸ್ಕ್ರೀನಿಂಗ್‌ ಪ್ರಕ್ರಿಯೆಯನ್ನೂ ಸುಗಮಗೊಳಿಸುತ್ತದೆ. ಇದು ಸೆಕ್ಯೂರಿಟಿ ಚೆಕ್‌ ಪಾಯಿಂಟ್‌ಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಲು ನೆರವಾಗುತ್ತದೆ.

ಬ್ಯೂರೋ ಆಫ್‌ ಸಿವಿಲ್‌ ಏವಿಯೇಷನ್‌ ಸೆಕ್ಯೂರಿಟಿ (BCAS) 50 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳು ವರ್ಷದ ಅಂತ್ಯದ ವೇಳೆಗೆ ಕ್ಯಾಬಿನ್‌ ತಪಾಸಣೆಗಾಗಿ 3ಡಿ ಸಿಟಿಎಕ್ಸ್‌ ಯಂತ್ರಗಳನ್ನು ಅಳವಡಿಸಬೇಕು ಎಂಬುದನ್ನು ಕಡ್ಡಾಯಗೊಳಿಸಿದೆ. ಇದು ವಾಯುಮಾನ ಭದ್ರತೆಯಲ್ಲಿನ ತಾಂತ್ರಿಕ ಪ್ರಗತಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಟರ್ಮಿನಲ್‌ 2ಕ್ಕೆ ʼಟರ್ಮಿನಲ್‌ ಇನ್‌ ಗಾರ್ಡನ್‌ʼ ಎಂದು ಸೂಚ್ಯವಾಗಿ ಹೆಸರಿಸಲಾಗಿದೆ. 2022ರ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ಈ ಟರ್ಮಿನಲ್‌ ಅನ್ನು ಉದ್ಘಾಟಿಸಿದರು. ಜನವರಿ 15, 2023 ರಿಂದ ದೇಶಿಯ ಕಾರ್ಯಾಚರಣೆ ಅಂದರೆ ದೇಶದೊಳಗೆ ಸಂಚರಿಸುವ ವಿಮಾನಗಳನ್ನು ಹಾರಿಸಲಾಗಿತ್ತು. ನಂಗೆ ಅಂದರೆ 2023ರ ಸೆಪ್ಟೆಂಬರ್‌ 12 ರಂದು ಅಂತರರಾಷ್ಟ್ರೀಯ ಮಟ್ಟದ ಸೇವೆ ಆರಂಭವಾಗಿತ್ತು. ಟರ್ಮಿನಲ್ 2 ರ ನಿರ್ಮಾಣದ ಮೊದಲ ಹಂತವು 13,000 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ, ಸುಮಾರು 2.5 ಲಕ್ಷ ಚದರ ಮೀಟರ್‌ನ ಬಿಲ್ಟ್-ಅಪ್ ಪ್ರದೇಶವನ್ನು ಒಳಗೊಂಡಿದೆ, ಎರಡನೇ ಹಂತಕ್ಕೆ ಹೆಚ್ಚುವರಿ 4.41 ಲಕ್ಷ ಚದರ ಮೀಟರ್‌ಗಳನ್ನು ಯೋಜಿಸಲಾಗಿದೆ.