ಕನ್ನಡ ಸುದ್ದಿ  /  Karnataka  /  India News Bengaluru Railway Dept To Construct <Span Class='webrupee'>₹</span>270 Cr New Depot At Thanisandra To Hold Vb Sleeper Coaches Prk

ವಂದೇ ಭಾರತ್ ಸ್ಲೀಪರ್ ಕೋಚ್‌ ಯೋಜನೆ; ಬೆಂಗಳೂರು ಥಣಿಸಂದ್ರದಲ್ಲಿ ನಿರ್ಮಾಣವಾಗಲಿದೆ 270 ಕೋಟಿ ರೂಪಾಯಿ ವೆಚ್ಚದ ನೂತನ ಡಿಪೋ

ವಂದೇ ಭಾರತ್ ಸ್ಲೀಪರ್ ಕೋಚ್‌ ಯೋಜನೆಗೆ ಪೂರಕವಾಗಿ ಬೆಂಗಳೂರು ಥಣಿಸಂದ್ರದಲ್ಲಿ 270 ಕೋಟಿ ರೂಪಾಯಿ ವೆಚ್ಚದ ನೂತನ ಡಿಪೋ ನಿರ್ಮಾಣವಾಗಲಿದೆ. ಈ ಯೋಜನೆಯ ಸ್ಥಿತಿಗತಿ, ವಂದೇ ಭಾರತ್ ಸ್ಲೀಪರ್ ಕೋಚ್‌ ಶುರುಮಾಡುವುದಕ್ಕೆ ಅಗತ್ಯ ಮೂಲಸೌಕರ್ಯ ಕುರಿತಾದ ಮಾಹಿತಿ ಇಲ್ಲಿದೆ.(ವರದಿ- ಪ್ರಿಯಾಂಕಾ, ಬೆಂಗಳೂರು)

ವಂದೇ ಭಾರತ್‌ ಸ್ಲೀಪರ್ ಕೋಚ್‌ ಯೋಜನೆ (ಸಾಂಕೇತಿಕ ಚಿತ್ರ)
ವಂದೇ ಭಾರತ್‌ ಸ್ಲೀಪರ್ ಕೋಚ್‌ ಯೋಜನೆ (ಸಾಂಕೇತಿಕ ಚಿತ್ರ)

ಬೆಂಗಳೂರು: ದೇಶದಲ್ಲಿ ರೈಲ್ವೇ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ. ಮಂಗಳವಾರದಂದು (ಮಾರ್ಚ್ 12) ಪ್ರಧಾನಿ ನರೇಂದ್ರ ಮೋದಿ ಒಟ್ಟು 85,000 ಕೋಟಿ ರೂ. ಮೌಲ್ಯದ ರೈಲ್ವೇ ಯೋಜನೆಗಳಿಗೆ ಚಾಲನೆ ನೀಡಿದ್ದರು. ಅಲ್ಲದೆ, ಮೈಸೂರು-ಚೆನ್ನೈ ನಡುವೆ ಎರಡನೇ ವಂದೇಭಾರತ್ ಎಕ್ಸ್ ಪ್ರೆಸ್ ಚಾಲನೆಗೂ ಹಸಿರು ನಿಶಾನೆ ತೋರಿದರು. ಈ ನಡುವೆ ವಂದೇ ಭಾರತ್‌ನ ಸ್ಲೀಪರ್ ಕೋಚ್‌ಗಳನ್ನು ನಿರ್ವಹಿಸುವ ಯೋಜನೆ ರೈಲ್ವೇ ಇಲಾಖೆಯ ಪರಿಶೀಲನೆಯಲ್ಲಿದೆ.

ಹೌದು, ವಂದೇ ಭಾರತ್‌ನ ಸ್ಲೀಪರ್ ಕೋಚ್‌ಗಳನ್ನು ನಿರ್ವಹಿಸಲು ಬೆಂಗಳೂರು ರೈಲ್ವೆ ವಿಭಾಗವು ಥಣಿಸಂದ್ರ ರೈಲು ನಿಲ್ದಾಣದ ಬಳಿ 270 ಕೋಟಿ ರೂಪಾಯಿ ವೆಚ್ಚದ ಹೊಸ ಡಿಪೋ ಕಮ್ ವರ್ಕ್‌ಶಾಪ್ ಅನ್ನು ನಿರ್ಮಿಸಲು ತೀರ್ಮಾನಿಸಿದೆ ಎಂದು ಬೆಂಗಳೂರು ರೈಲ್ವೆ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‌ಪುರಿ ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಭಾರತ್ ಅರ್ಥ್ ಮೂವರ್ಸ್‌ನಲ್ಲಿ ಸ್ಲೀಪರ್ ಕೋಚ್‌ ನಿರ್ಮಾಣ

ಸ್ಲೀಪರ್ ಕೋಚ್‌ಗಳನ್ನು ಶನಿವಾರ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪರಿಶೀಲಿಸಿದರು. ಈಗಾಗಲೇ ಈ ಯೋಜನೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಇದೀಗ ಕಾರ್ಯಾಗಾರಕ್ಕಾಗಿ ಸಮೀಕ್ಷೆ ನಡೆಸುತ್ತಿದ್ದೇವೆ. ವರ್ಷಾಂತ್ಯದ ವೇಳೆಗೆ ತರಬೇತುದಾರರು ನಿರ್ವಹಣೆಗಾಗಿ ಇಲ್ಲಿಗೆ ಬರುವ ನಿರೀಕ್ಷೆಯಿದೆ. ಆ ವೇಳೆಗೆ ಕಾರ್ಯಾಗಾರವನ್ನು ಸಿದ್ಧವಾಗಿಡಲು ಬಯಸುತ್ತೇವೆ ಎಂದು ಮೋಹನ್ ಪುರಿ ತಿಳಿಸಿದರು.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರ ಮಂಗಳವಾರದಂದು, ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಕಲಬುರಗಿ-ಬೆಂಗಳೂರು ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಈ ಮೂಲಕ ಕಲಬುರಗಿ ಜನತೆಯ ಬಹುದಿನಗಳ ಕನಸು ನನಸಾಗಿದೆ.

ದೊಡ್ಡಬಳ್ಳಾಪುರ ಸಮೀಪದ ಒಡ್ಡರಹಳ್ಳಿಯಲ್ಲಿ ಗತಿಶಕ್ತಿ ಮಲ್ಟಿಮೋಡಲ್ ಕಾರ್ಗೋ ಟರ್ಮಿನಲ್ ಜೊತೆಗೆ, ಸುಧಾರಿತ ಮೂಲಸೌಕರ್ಯಗಳೊಂದಿಗೆ ಪುನರಾಭಿವೃದ್ಧಿಗೊಂಡ ಪೆನುಕೊಂಡದಲ್ಲಿ ಗೂಡ್ಸ್ ಶೆಡ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂದು ಅವರು ಹೇಳಿದರು.

ಅಲ್ಲದೆ, ಟರ್ಮಿನಲ್ ರೈಲು ಸರಕು ಸಂಚಾರವನ್ನು ವೇಗಗೊಳಿಸುತ್ತದೆ. ಈ ಮೂಲಕ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಬೆಂಗಳೂರು ರೈಲ್ವೆ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‌ಪುರಿ ತಿಳಿಸಿದರು.

ರೈಲು ನಿಲ್ದಾಣದಲ್ಲಿ ಜನೌಷಧಿ ಕೇಂದ್ರಕ್ಕೆ ಚಾಲನೆ

ಇನ್ನು, ಮಂಗಳವಾರದಂದು ಹಲವು ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ ನೆರವೇರಿಸಿದ ಪ್ರಧಾನಿ ಮೋದಿ, ಬೆಂಗಳೂರಿನ ಎಸ್ಎಂವಿಟಿ ಹಾಗೂ ಬಂಗಾರಪೇಟೆ ರೈಲು ನಿಲ್ದಾಣಗಳಲ್ಲಿ ಭಾರತೀಯ ಜನೌಷಧಿ ಕೇಂದ್ರಗಳನ್ನು (ಅಗ್ಗದ ಬೆಲೆಯಲ್ಲಿ ಜೆನೆರಿಕ್ ಔಷಧಿಗಳ ಮಾರಾಟ) ಔಪಚಾರಿಕವಾಗಿ ಉದ್ಘಾಟಿಸಿದ್ದಾರೆ.

ಹೆಚ್ಚುವರಿಯಾಗಿ ಬೆಂಗಳೂರು ವಿಭಾಗದ 40 ರೈಲು ನಿಲ್ದಾಣಗಳಲ್ಲಿ, ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆಗಳನ್ನು ಕಾರ್ಯಾರಂಭ ಮಾಡಲಾಗುವುದು. ಅಲ್ಲಿ ಸ್ಟಾಲ್‌ಗಳನ್ನು ನಿಯೋಜಿಸಲಾಗುವುದು. ವಿಡಿಯೋ ಕಾನ್ಫರೆನ್ಸ್ ಮೂಲಕ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಮೋದಿ, ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಮೈಸೂರು ರೈಲು ನಿಲ್ದಾಣದಲ್ಲೂ ಜನೌಷಧಿ ಕೇಂದ್ರ ತೆರೆಯಲು ಚಾಲನೆ ನೀಡಿದ್ದಾರೆ.

(ವರದಿ- ಪ್ರಿಯಾಂಕಾ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)