Cauvery Water: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಆಘಾತ, 5000 ಕ್ಯುಸೆಕ್ ಬಿಡುಗಡೆಗೆ ಆದೇಶ
Cauvery Water: ಬರಪರಿಸ್ಥಿತಿಯ ಕಾರಣ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲೇ, ಪ್ರತಿ ನಿತ್ಯ 5000 ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೋಮವಾರ (ಸೆ.18) ಆದೇಶ ನೀಡಿದೆ.
ನವದೆಹಲಿ: ಕರ್ನಾಟಕದ ಬಹುತೇಕ ತಾಲೂಕುಗಳು ಮಳೆ ಕೊರತೆ ಕಾರಣ ಬರ ಪರಿಸ್ಥಿತಿ ಎದುರಿಸುತ್ತಿರುವಾಗಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority) ಕರ್ನಾಟಕಕ್ಕೆ ಆಘಾತ ನೀಡಿದೆ. ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯುಸೆಕ್ ನೀರಿ ಬಿಡುಗಡೆ ಮಾಡಬೇಕು ಎಂದು ಪ್ರಾಧಿಕಾರ ಇಂದು (ಸೆ.18) ಕರ್ನಾಟಕಕ್ಕೆ ಆದೇಶ ನೀಡಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇಂದು (ಸೆ.18) ನಡೆಯಿತು. ಕಾವೇರಿ ನದಿ ಹರಿಯುವ ರಾಜ್ಯಗಳು ನೀರು ಹಂಚಿಕೆಗೆ ಸಂಬಂಧಿಸಿ ಪ್ರಾಧಿಕಾರದ ಆದೇಶವನ್ನು ಪಾಲಿಸಬೇಕಾದ್ದು ನಿಯಮ. ಇದರಂತೆ, ಮುಂದಿನ 15 ದಿನಗಳ ಕಾಲ ನಿತ್ಯವೂ 5000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಕರ್ನಾಟಕ ಬಿಡಬೇಕು ಎಂಬ ಆದೇಶವನ್ನು ಪ್ರಾಧಿಕಾರ ನೀಡಿದೆ.
ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷ ವಿನೀತ್ ಗುಪ್ತಾ ಕೂಡ ಹಾಜರಿದ್ದರು. ಇದು ಪ್ರಾಧಿಕಾರದ 24ನೇ ಸಭೆಯಾಗಿತ್ತು. ಇದರಲ್ಲಿ ತಮಿಳುನಾಡು ಜಲಸಂಪನ್ಮೂಲ ಕಾರ್ಯದರ್ಶಿ ಸಂದೀಪ್ ಸಕ್ಸೇನಾ, ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಮಣಿಯನ್, ಕೇರಳದ ಅಧಿಕಾರಿಗಳೂ ಇದ್ದರು.
ಸಭೆ ಶುರುವಾಗುತ್ತಿದ್ದಂತೆ, ನಿತ್ಯವೂ ತನಗೆ 12500 ಕ್ಯುಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ತಮಿಳುನಾಡಿನ ಪ್ರತಿನಿಧಿಗಳು ಪಟ್ಟುಹಿಡಿದಿದ್ದರು. ಆದರೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಮುಂದುವರಿಸುವಂತೆ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ಅಲ್ಲದೆ, ಪ್ರಾಧಿಕಾರ 5000 ಕ್ಯುಸೆಕ್ ನೀರು ಬಿಡುಗಡೆ ಮಾಡಲು ಆದೇಶ ನೀಡಿರುವುದು ಕರ್ನಾಟಕಕ್ಕೆ ಆಘಾತವನ್ನು ಉಂಟುಮಾಡಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಹಿಂದಿನ ಸಭೆಗಳ ತೀರ್ಮಾನ ಹೀಗಿತ್ತು
ಕಾವೇರಿ ನೀರು ನಿಯಂತ್ರಣ ಸಮಿತಿಯು ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆಗಸ್ಟ್ 29ರಂದು ಕರ್ನಾಟಕಕ್ಕೆ ಶಿಫಾರಸ್ಸು ಮಾಡಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಆಗಸ್ಟ್ 28ರಂದು ನಡೆಸಿದ ಸಭೆಯಲ್ಲಿ ಸೆಪ್ಟೆಂಬರ್ 21ರ ವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಇದರಿಂದ ಪ್ರಾಧಿಕಾರ ನಿಗದಿಪಡಿಸಿದಷ್ಟು ನೀರನ್ನು ತಮಿಳುನಾಡಿಗೆ ಕರ್ನಾಟಕ ಬಿಡುಗಡೆ ಮಾಡಿದೆ.
ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಕರ್ನಾಟಕ
ಕಾವೇರಿ ಹಾಗೂ ಕೃಷ್ಣ ಕಣವೆಯಲ್ಲಿ ಭೀಕರ ಬರದ ಸನ್ನಿವೇಶ ಕಾಣಿಸಿಕೊಂಡಿದೆ. ಹೀಗಾಗಿ ಸೆಪ್ಟೆಂಬರ್ 12ರ ನಂತರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ, ಸುಪ್ರೀಂಕೋರ್ಟ್ಗೆ ಈಗಾಗಲೇ ಅಫಿಡೆವಿಟ್ ಸಲ್ಲಿಸಿದೆ. ಇದರ ವಿಚಾರಣೆ ಸೆಪ್ಟೆಂಬರ್ 21ರಂದು ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ (ಸೆ.17) ಕಲಬುರಗಿಯಲ್ಲಿ ಮಾತನಾಡುತ್ತ, ಈಗಿರುವ ಸನ್ನಿವೇಶದಲ್ಲಿ ಒಂದು ಹನಿ ನೀರನ್ನೂ ತಮಿಳುನಾಡಿಗೆ ಬಿಡುವುದು ಸಾಧ್ಯವಾಗದು ಎಂದು ಹೇಳಿದ್ದರು.
ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಟ್ವೀಟ್
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗೂ ಮುನ್ನ ಬಿಜೆಪಿಯ ರಾಜ್ಯ ಸಭಾ ಸದಸ್ಯ ಲೆಹರ್ ಸಿಂಗ್ ಮಾಡಿರುವ ಟ್ವೀಟ್ ಗಮನಸೆಳೆದಿದೆ.
ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಮಾತುಕತೆ ನಡೆಸಿ ಕಾವೇರಿ ನೀರು ಹಂಚಿಕೆ ವಿಚಾರ ಇತ್ಯರ್ಥ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೇ ಸಿದ್ದರಾಮಯ್ಯ ಅವರ ಬಳಿಯೂ ಕೇಳಿಕೊಂಡಿದ್ದಾರೆ.