ಕನ್ನಡ ಸುದ್ದಿ  /  ಕರ್ನಾಟಕ  /  Mango: ಭಾರತದಲ್ಲಿರುವ ಮಾವಿನ ತಳಿಗಳ ಸಂಖ್ಯೆ ಎಷ್ಟಿರಬಹುದು, ಬಳಕೆ ಪ್ರಮಾಣ ಎಷ್ಟು?

Mango: ಭಾರತದಲ್ಲಿರುವ ಮಾವಿನ ತಳಿಗಳ ಸಂಖ್ಯೆ ಎಷ್ಟಿರಬಹುದು, ಬಳಕೆ ಪ್ರಮಾಣ ಎಷ್ಟು?

Fruit King ಮಾವನ್ನು( Mango) ಹಣ್ಣಿನ ರಾಜ ಎನ್ನಲಾಗುತ್ತದೆ. ವಿಶ್ವದಲ್ಲೇ ಹೆಚ್ಚು ಮಾವಿನ ತಳಿಗಳು ಇರುವುದು ಭಾರತದಲ್ಲಿಯೇ. ಅವುಗಳ ವಿವರ ಇಲ್ಲಿದೆ.

ಮಾವಿನ ತಳಿಗಳು ಬಗೆಬಗೆಯವು.
ಮಾವಿನ ತಳಿಗಳು ಬಗೆಬಗೆಯವು.

ಬೆಂಗಳೂರು: ಇದು ಮಾವಿನ ಹಣ್ಣಿನ ಕಾಲ. ಈಗ ಎಲ್ಲಿ ನೋಡಿದರೂ ಮಾವಿನ ವಾಸನೆ ನಮ್ಮನ್ನು ಆಕರ್ಷಿಸುತ್ತದೆ. ಮಾರುಕಟ್ಟೆಯಲ್ಲಿ ಹೋದರೂ ಮಾವಿನ ಪರಿಮಳ. ಮನೆಗಳಿಗೆ ಹೋದರೂ ಊಟದೊಂದಿಗೆ ಇಲ್ಲವೇ ಊಟದ ನಂತರ ಮಾವು ಕಾಯಂ. ಏಕೆಂದರೆ ಹಣ್ಣುಗಳ ರಾಜ ಎಂದು ಕರೆಯಿಸಿಕೊಳ್ಳುವ ಮಾವಿನ ಮೇಳ ಎಲ್ಲೆಡೆ ಜೋರಾಗಿಯೇ ನಡೆದಿದೆ. ಭಾರತದಲ್ಲಿ 1000 ಕ್ಕೂ ಹೆಚ್ಚಿನ ವಿವಿಧ ತಳಿಯ ಮಾವುಗಳಿವೆ. ಅವುಗಳಲ್ಲಿ 20 ತಳಿಯ ಹಣ್ಣುಗಳನ್ನು ಮಾತ್ರ ವಾಣಿಜ್ಯಿಕವಾಗಿ ಬೆಳೆಯಲಾಗುತ್ತದೆ. ಪ್ರಪಂಚದ ಒಟ್ಟು ಮಾವಿನ ಉತ್ಪಾದನೆಯಲ್ಲಿ ಭಾರತದ ಪಾಲು ಬರೋಬರಿ 36%. ಭಾರತದಲ್ಲಿ ವಾರ್ಷಿಕವಾಗಿ 18 ಮಿಲಿಯನ್ ಟನ್‌ಗಳಷ್ಟು ಮಾವು ಬೆಳೆಯಲಾಗುತ್ತದೆ. ಮಾವಿನ ಬೆಳವಣಿಗೆಯಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾ ಬೆಳೆಯುವ ಮಾವಿನ ಪ್ರಮಾಣ ಕೇವಲ 4 ಮಿಲಿಯನ್ ಟನ್ ಮಾತ್ರ. ಈ ಹಿನ್ನಲೆಯಲ್ಲಿ ಮಾವು ಅಕ್ಷರಶಃ ಭಾರತದ ಹಣ್ಣು.

ಟ್ರೆಂಡಿಂಗ್​ ಸುದ್ದಿ

ಭಾರತದಲ್ಲಿ ಬೆಳೆಯುವ ಒಟ್ಟು ಮಾವಿಹಣ್ಣುಗಳಲ್ಲಿ ಶೇ. 23 ಉತ್ತರ ಪ್ರದೇಶದಲ್ಲಿ ಬೆಳೆದರೆ, ಆಂಧ್ರದಲ್ಲಿ ಶೇ. 22 ಮತ್ತು ಕರ್ನಾಟಕದಲ್ಲಿ ಶೇ.11 ಬೆಳೆಯಲಾಗುತ್ತದೆ. ಕೇವಲ ಈ ಮೂರು ರಾಜ್ಯಗಳು ದೇಶದ ಒಟ್ಟಾರೆ ಮಾವಿನ ಹಣ್ಣುಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ಬೆಳೆಯುತ್ತವೆ ಎನ್ನುವುದು ಪರಿಸರ ಪರಿವಾರ ಬಳಗದ ವಿವರಣೆ.

ಮಾವಿನ ಕೆಲವು ಪ್ರಮುಖ ತಳಿಗಳ ವಿವರ ತಿಳಿಯಬಹುದು. ಇದರಲ್ಲಿ ಪ್ರಮುಖ ತಳಿಗಳಿವು.

ಅಲ್ಫೊನ್ಸೋ (ಬಾದಾಮಿ): ಈ ತಳಿಯ ಹಣ್ಣಿಗೆ ಕರ್ನಾಟಕದಲ್ಲಿ ಬಾದಾಮಿ ಮತ್ತು ಮಹಾರಾಷ್ಟ್ರದಲ್ಲಿ ಅಪ್ಪುಸ್ ಎಂದು ಕರೆಯಲಾಗುತ್ತದೆ. ಅಲ್ಫೋನ್ಸೋಸ್ ಅನ್ನು "ಮಾವಿನ ರಾಜ" (king of mangoes) ಎಂದು ಕರೆಯಲಾಗುತ್ತದೆ. ಬಾದಾಮ್ , ಮಲ್ಲಿಕಾ ಕೂಡ ಕರ್ನಾಟಕದ ಪ್ರಮುಖ ತಳಿಗಳು.

ತೋತಾಪುರಿ: ದೊಡ್ಡಗಾತ್ರದ ಉದ್ದನೆಯ ಈ ತಳಿ ನಮ್ಮ ಕರ್ನಾಟಕ ಮೂಲದ್ದು. ಹಳದಿ‌ ಮಿಶ್ರಿತ ಕೆಂಬಣ್ಣದ ಈ ತಳಿ ಕಾಯಿ ಇದ್ದಾಗಲೂ ಹೆಚ್ಚಾಗಿ ಬಳಸುತ್ತಾರೆ. ಸಂಸ್ಕರಣೆ ಮಾಡಲು ಕೂಡ ವ್ಯಾಪಕವಾಗಿ ಬಳಸಲಾಗುತ್ತದೆ.

ಬಂಗನಪಲ್ಲಿ: ಸಫೇದಾ ಎಂದೂ ಕರೆಯಲ್ಪಡುವ ಇದು ಆಂಧ್ರ ಮತ್ತು ತಮಿಳುನಾಡಿನ ವಾಣಿಜ್ಯ ತಳಿಯಾಗಿದೆ.

ದಶೇರಿ: ಲಕ್ನೋ ಬಳಿಯ ದಶೆಹರಿ ಎಂಬ ಹಳ್ಳಿಯಿಂದ ಈ ತಳಿಯ ಹೆಸರು ಬಂದಿದೆ. ತನ್ನ ಸಿಹಿ ಮತ್ತು ವಿಶಿಷ್ಟ ರುಚಿಯಿಂದ ಖ್ಯಾತಿ ಗಳಿಸಿದೆ.

ಹಿಮ್ಸಾಗರ್: ಇದು ಬಂಗಾಳದ ಸ್ಥಳೀಯ ತಳಿಯಾಗಿದ್ದು, ಆ ಭಾಗದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ.

ಕೇಸರ್: ಇದು ಗುಜರಾತ್‌ನ ಮೂಲದ ಕೇಸರ್ ದೇಶದ ದುಬಾರಿ ಬೆಲೆಯ ಮಾವಿನ ತಳಿಗಳಲ್ಲಿ ಪ್ರಮುಖವಾದ್ದದ್ದಾಗಿದೆ. ಮಧ್ಯಮ ಗಾತ್ರದ ಈ ಹಣ್ಣು ಹೆಚ್ಚು ಉದ್ದವಾಗಿದ್ದು ಹೆಚ್ಚು ದಿನ ಸಂಗ್ರಹಿಸಿಡಬಹುದಾಗಿದೆ.

ಲಾಂಗ್ರಾ: ಉತ್ತರ ಪ್ರದೇಶದ ವಾರಣಾಸಿ ಪ್ರದೇಶದ ಸ್ಥಳೀಯ ಮೂಲದ ತಳಿ. ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ಈ ತಳಿಯ ಒಂದು ಪ್ರಾಚೀನ ಮಾವಿನ ಮರ ಈಗಲೂ ಇದ್ದು, ಆ ಮರದ ಮಾಲೀಕನ ಹೆಸರು ಈ‌ ತಳಿಗೆ ಬಂದಿದೆ ಎಂದು ಹೇಳಲಾಗುತ್ತದೆ.

ಅಂಬಿಕಾ: ಇದು ಅಮ್ರಪಾಲಿ ಮತ್ತು ಜನಾರ್ದನ್ ಪಸಂದ್ ತಳಿಗಳಿಂದ ಅಭಿವೃದ್ಧಿ ಪಡಿಸಿದ ಮಿಶ್ರತಳಿ. ಈ ತಳಿಯನ್ನು ವಾಣಿಜ್ಯ ಕೃಷಿಗಾಗಿ 2000 ರಲ್ಲಿ ಅಭಿವೃದ್ಧಿ ಪಡಿಸಲಾಯಿತು.

ಮುಲ್ಗೋವಾ: ಇದು ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ತಳಿಯಾಗಿದೆ. ಉತ್ತಮ ಗುಣಮಟ್ಟದ ಕಾರಣದಿಂದಾಗಿ ಮಾವಿನ ಪ್ರಿಯರಲ್ಲಿ ಇದು ಸಾಕಷ್ಟು ಜನಪ್ರಿಯವಾಗಿದೆ.

ವನರಾಜ್: ಇದು ಗುಜರಾತ್‌ನ ವಡೋದರ ಜಿಲ್ಲೆಯ ದುಬಾರಿ ಬೆಲೆಯ ತಳಿಯಾಗಿದ್ದು, ಕೃಷಿಕರಿಗೆ ಉತ್ತಮ ಆದಾಯವನ್ನು ನೀಡುತ್ತದೆ. ಹಣ್ಣು ಮಧ್ಯಮ ಗಾತ್ರದಲ್ಲಿರುತ್ತದೆ.

ಸುವರ್ಣರೇಖಾ: ಇದು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ವಾಣಿಜ್ಯ ತಳಿಯಾಗಿದೆ.

ಚೌಸಾ : ಈ ತಳಿಯು ಉತ್ತರ ಪ್ರದೇಶದ ಸ್ಯಾಂಡಿಲಾ ಜಿಲ್ಲೆಯ ಹರ್ಡೋಯಿಯ ತೋಟವೊಂದರಲ್ಲಿ ಆಕಸ್ಮಿಕವಾಗಿ ಅಭಿವೃದ್ಧಿ ಹೊಂದಿದ ತಳಿ ಎನ್ನಲಾಗಿದೆ.ಚೌಸಾ : ಈ ತಳಿಯು ಉತ್ತರ ಪ್ರದೇಶದ ಸ್ಯಾಂಡಿಲಾ ಜಿಲ್ಲೆಯ ಹರ್ಡೋಯಿಯ ತೋಟವೊಂದರಲ್ಲಿ ಆಕಸ್ಮಿಕವಾಗಿ ಅಭಿವೃದ್ಧಿ ಹೊಂದಿದ ತಳಿ ಎನ್ನಲಾಗಿದೆ.

ರಸಪುರಿ: ಸಿಹಿ ಮಾವಿನ ಹಣ್ಣು ಹಣ್ಣುಗಳ ರಾಣಿ ರಸಪುರಿ, ಇದು ಹೋಳಿಗೆ, ಚಪಾತಿಯೊಂದಿಗೆ ಸೇವಿಸುವ ಸೀಕರಣೆಗೆ ಹೇಳಿ ಮಾಡಿಸಿದ ತಳಿ. ಹೆಚ್ಚು ಸೇವಿಸುವ ತಳಿಯೂ ಹೌದು.

ಕರಿ ಇಷಾಡ: ಕರ್ನಾಟಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಭಾಗದಲ್ಲಿ ಮಾತ್ರ ಬೆಳೆಯುವ ಕರಿ ಇಷಾಡ ತಳಿ ಬಲು ರುಚಿ. ಇದಕ್ಕೆ ಜಾಗತಿಕ ಸೂಚ್ಯಂಕದ ಮಾನ್ಯತೆಯೂ ಈ ಹಿಂದೆಯೇ ಲಭಿಸಿದೆ.


(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024