LPG Price Cut: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ, ಹೊಸ ವರ್ಷದ ಮೊದಲ ದಿನ ಶುಭ ಸುದ್ದಿ
LPG Price Cut: ಹೊಸ ವರ್ಷದ ಮೊದಲ ದಿನ ಎಲ್‌ಪಿಜಿ ದರ ತುಸು ಇಳಿಕೆಯಾಗಿದೆ. ದೆಹಲಿ, ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ದರ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ದರ ಎಷ್ಟಿದೆ ಎಂಬ ಮಾಹಿತಿಯೂ ಇಲ್ಲಿದೆ.
LPG Price: ವಿವಿಧ ತೈಲ ಕಂಪನಿಗಳು 19-ಕೆಜಿ ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳಿಗೆ ಜನವರಿ 1, 2025ರಿಂದ ಜಾರಿಗೆ ಬರುವಂತೆ ದರ ಕಡಿತ ಮಾಡಿವೆ. ದೆಹಲಿಯಲ್ಲಿ 2024ರ ಡಿಸೆಂಬರ್‌ನಲ್ಲಿ 1,818.50 ರೂ ದರವಿತ್ತು. ಜನವರಿ 1ರಂದು 1,804 ರೂ.ಗೆ ಇಳಿಕೆಯಾಗಿದೆ. ಇತರ ಪ್ರಮುಖ ಮಹಾನಗರಗಳಾದ್ಯಂತ ಇದೇ ರೀತಿ ದರ ಇಳಿಕೆಯಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿಯೂ ಎಲ್‌ಪಿಜಿ ದರ ಬದಲಾವಣೆ ಕುರಿತು ಮಾಹಿತಿ ಸದ್ಯದಲ್ಲಿಯೇ ಹೊರಬೀಳುವ ಸೂಚನೆಯಿದೆ. ದರ ಇಳಿಕೆ ಪ್ರಮಾಣ ಕಡಿಮೆ ಮಟ್ಟದಲ್ಲಿದ್ದರೂ ಹೋಟೆಲ್, ರೆಸ್ಟೋರೆಂಟ್‌ಗಳು ಮತ್ತು ಇತರೆ ವಾಣಿಜ್ಯ ಸಿಲಿಂಡರ್ ಬಳಕೆದಾರರರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಜನವರಿ 1ರಂದು 19 ಕೆಜಿ ವಾಣಿಜ್ಯ ಸಿಲಿಂಡರ್ 1,880.50 ರೂಪಾಯಿ ಇದೆ. ಡಿಸೆಂಬರ್ 1ರಂದು 1,895 ರೂ ಇತ್ತು. ದರ 14.50 ಕಡಿಮೆಯಾಗಿದೆ.
ದೆಹಲಿ: ಜನವರಿ 1ರಿಂದ 19 ಕೆಜಿ ವಾಣಿಜ್ಯ ಸಿಲಿಂಡರ್ ದರ 1804 ರೂ. ಇರಲಿದೆ. ಡಿಸೆಂಬರ್ 1, 2024ರಂದು 1818.50 ರೂ. ಇತ್ತು. ಹೀಗಾಗಿ, 14.50 ರೂಪಾಯಿ ಕಡಿಮೆಯಾಗಿದೆ.
ಕೋಲ್ಕತಾ: ಜನವರಿ 1ರಂದು ಎಲ್‌ಪಿಜಿ ಕಮರ್ಷಿಯಲ್ ಸಿಲಿಂಡರ್ ದರ 1911 ರೂಪಾಯಿ ಇದೆ. ಡಿಸೆಂಬರ್ 1ರಂದು 1927 ರೂಪಾಯಿ ಇತ್ತು. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 16 ರೂಪಾಯಿ ಕಡಿಮೆಯಾಗಿದೆ.
ಮುಂಬೈ: ಭಾರತದ ಹಣಕಾಸು ರಾಜಧಾನಿ ಮುಂಬೈನಲ್ಲಿಯೂ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ದರ 15 ರೂಪಾಯಿ ಕಡಿಮೆಯಾಗಿದೆ. ಜನವರಿ 1ರಂದು 1756 ರೂಪಾಯಿ ಇದೆ. ಡಿಸೆಂಬರ್ 2024ರಲ್ಲಿ 1771 ರೂಪಾಯಿ ಇತ್ತು.
ಚೆನ್ನೈ: ಚೆನ್ನೈನಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ದರ ಇಂದು 1966 ರೂಪಾಯಿ ಇದೆ. ಕಳೆದ ತಿಂಗಳು 1980.50 ರೂಪಾಯಿ ಇತ್ತು. ಇಲ್ಲಿ ದರ 14.5 ರೂಪಾಯಿ ಕಡಿಮೆಯಾಗಿದೆ.
ಎಲ್‌ಪಿಜಿ ಮಾತ್ರವಲ್ಲದೆ ಜೆಟ್ ಇಂಧನ ಅಥವಾ ವಾಯುಯಾನ ಟರ್ಬೈನ್ ಇಂಧನದ ದರ ಶೇಕಡ 1.54 ಕಡಿತವಾಗಲಿದೆ. ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ದರ ಪ್ರತಿ ಕಿಲೋ ಲೀಟರ್‌ಗೆ 1,401.37 ರೂಪಾಯಿ ಅಥವಾ ಶೇಕಡ 1.54ರಷ್ಟು ಕಡಿಮೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಜೆಟ್ ಇಂಧನ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯನ್ನು ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಮಾಸಿಕವಾಗಿ ಪರಿಷ್ಕರಣೆ ಮಾಡುವುದಾಗಿ ಘೋಷಿಸಿದವು.