Kannada News  /  Karnataka  /  India News Imd Predicts Normal Monsoon Rains Karnataka Agriculture Bengaluru Weather Predictions Weather Update Rst
ಮುಂಗಾರು ಮಳೆಯಲ್ಲಿ ವ್ಯತ್ಯಯವಿಲ್ಲ; ಭಾರತಕ್ಕೆ ಮಳೆರಾಯನ ಕೃಪೆ
ಮುಂಗಾರು ಮಳೆಯಲ್ಲಿ ವ್ಯತ್ಯಯವಿಲ್ಲ; ಭಾರತಕ್ಕೆ ಮಳೆರಾಯನ ಕೃಪೆ

Monsson Forecast: ಮುಂಗಾರು ಮಳೆಯಲ್ಲಿ ವ್ಯತ್ಯಯವಿಲ್ಲ; ಭಾರತಕ್ಕೆ ಮಳೆರಾಯನ ಕೃಪೆ, ರೈತರಿಗೆ ಖುಷಿಕೊಟ್ಟ ಹವಾಮಾನ ಇಲಾಖೆ ಭವಿಷ್ಯ

26 May 2023, 13:00 ISTReshma
26 May 2023, 13:00 IST

ಈ ಬಾರಿ ಮುಂಗಾರು ಮಳೆ ಸಾಮಾನ್ಯವಾಗಿರಲಿದ್ದು, ಜೂನ್‌ ಹಾಗೂ ಸೆಪ್ಟೆಂಬರ್‌ ನಡುವೆ ಶೇ 96 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಕೃಷಿಕರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪ ಜೋರಾಗಿಯೇ ಇದೆ. ಸುಡು, ಸುಡು ಬಿಸಿಲಿಗೆ ನಾವು ಈ ವರ್ಷ ಸಾಕ್ಷಿಯಾಗಿದ್ದೇವೆ. ಇದರೊಂದಿಗೆ ಎಲ್‌ ನಿನೋ ಕಾರಣದಿಂದಲೂ ಅಪಾಯವನ್ನು ಎದುರಿಸುತ್ತಿರುವ ಕೃಷಿ ಆರ್ಥಿಕತೆಗೆ ಶುಭಸುದ್ದಿಯೊಂದಿದೆ.

ಈ ವರ್ಷ ಮುಂಗಾರು ಮಳೆ ಸಾಮಾನ್ಯವಾಗಿರಲಿದ್ದು, ಜೂನ್‌ ಹಾಗೂ ಸೆಪ್ಟೆಂಬರ್‌ ನಡುವೆ ಶೇ 96 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆಯು 2023ರ 2ನೇ ಹಂತದ ನೈಋತ್ಯ ಮಾನ್ಸೂನ್‌ ಸ್ಥಿತಿಯನ್ನು ಪ್ರಕಟಿಸಿದ್ದು, ಜೂನ್‌ ಹಾಗೂ ಸೆಪ್ಟೆಂಬರ್‌ ಅವಧಿಯಲ್ಲಿ ದೀರ್ಘಾವಧಿಯ ಸರಾಸರಿ ಶೇ 96 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಏಪ್ರಿಲ್‌ ತಿಂಗಳಿನಲ್ಲಿ ಹವಾಮಾನ ಇಲಾಖೆಯು ಈ ವರ್ಷದ ಮುಂಗಾಳೆ ಮಳೆಯ ದೀರ್ಘಾವಧಿ ಸರಾಸರಿ ಶೇ 96 ಎಂದು ಊಹಿಸಿತ್ತು. ಆದರೆ, ದೀರ್ಘಕಾಲ ಸರಾಸರಿಯಲ್ಲಿ ಶೇಕಡ 5ರಷ್ಟು ಹೆಚ್ಚು ಕಡಿಮೆಯಾಗಬಹುದು ಎಂದು ಅಂದಾಜಿಸಿತ್ತು.

ಜೂನ್‌ನಿಂದ ಪ್ರಾರಂಭವಾಗುವ ನಾಲ್ಕು ತಿಂಗಳ ಮಳೆಗಾಲದ ಅವಧಿಯಲ್ಲಿ ಕಳೆದ 50 ವರ್ಷಗಳ ಸರಾಸರಿಯಲ್ಲಿ ಶೇ 96 ರಿಂದ ಶೇ 104ರಷ್ಟು ಮಳೆಯಾಗಿತ್ತು.

ಆದರೆ ದೇಶದ ವಾಯುವ್ಯ ಭಾಗದಲ್ಲಿ ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಭಾರತದ ಈಶಾನ್ಯ ಭಾಗ, ಮಧ್ಯಭಾರತ ಹಾಗೂ ದಕ್ಷಿಣ ಭಾರತದ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಐಎಂಡಿ ಅಂದಾಜಿಸಿದೆ.

ಮುಂಗಾರಿನ ಋತುವಿನಲ್ಲಿ ಎಲ್‌ ನಿನೋ ಪರಿಸ್ಥಿತಿಗಳ ಬೆಳವಣಿಗೆಯ ಸಾಧ್ಯತೆಯೂ ಹೆಚ್ಚಿದೆ. ಆದರೆ, ಎಲ್ ನಿನೊ ಮತ್ತು ಮಾನ್ಸೂನ್ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

ʼಮಳೆ ಹಂಚಿಕೆ ಸಮಾನವಾಗಿದ್ದರೆ ಉತ್ತಮ. ಆದರೆ ಮಾನ್ಸೂನ್‌ ಮಳೆಯನ್ನು ಹಾಗೆ ಅಂದಾಜಿಸಲು ಆಗುವುದಿಲ್ಲ. ನಾವು ಸಮಾನ ಹಂಚಿಕೆಯನ್ನು ಪಡೆದರೆ ಈ ವರ್ಷ ಭಾರತದಲ್ಲಿ ಕೃಷಿಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲʼ ಎಂದು ಐಎಂಡಿ ವಿಜ್ಞಾನಿ ಡಿಎಸ್‌ ಪೈ ಹೇಳಿದ್ದಾರೆ.

ಈ ವರ್ಷ ಮುಂಗಾರು ಮಳೆಯು ಮೊದಲೇ ನಿರೀಕ್ಷಿಸಿದಂತೆ ಜೂನ್‌ 4 ರಂದು ಕೇರಳದ ಪ್ರವೇಶಿಸಲಿದೆ ಎಂದು ನಿರೀಕ್ಷಿಸಲಾಗಿದೆ.