Heat Wave: ಕರ್ನಾಟಕ ಸೇರಿ 5 ರಾಜ್ಯಗಳಿಗೆ ಏಪ್ರಿಲ್‌ನಲ್ಲಿ ಶಾಖದ ಅಲೆಗಳ ಆಘಾತ, ಏನಿದು ಶಾಖದ ಅಲೆಗಳು, ಎಲ್ಲೆಲ್ಲಿ ಪರಿಣಾಮ
Heat Wave: ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಳದ ಪರಿಣಾಮ ಕಾಡಿರುವಾಗಲೇ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ನೀಡಿದೆ. ಕರ್ನಾಟಕದ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಇನ್ನು ಮೂರು ತಿಂಗಳು ಶಾಖತರಂಗದ ತೀವ್ರತೆ ಹೆಚ್ಚಾಗಲಿದೆ ಎಂದು ಹೇಳಿದೆ. ಇದರ ವಿವರ ಇಲ್ಲಿದೆ.

ನವದೆಹಲಿ: ಭಾರತದಲ್ಲಿ ಬಿಸಿಲಿನ ಬೇಗೆ, ತೀವ್ರ ತಾಪಮಾನ ಮಾರ್ಚ್ ತಿಂಗಳಲ್ಲಿ ಇದ್ದಂತೆ ಏಪ್ರಿಲ್‌ನಲ್ಲಿ ಇರಲ್ಲ. ತಾಪಮಾನ ಮತ್ತು ಶಾಖದ ಅಲೆಗಳ (ಶಾಖತರಂಗ) ತೀವ್ರತೆ ಹೆಚ್ಚಾಗಲಿದೆ. ವಿಶೇಷವಾಗಿ ಕರ್ನಾಟಕದ ಉತ್ತರ ಒಳನಾಡು, ಮಹಾರಾಷ್ಟ್ರ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಶಾಖದ ಅಲೆಗಳ ತೀವ್ರತೆ ಹೆಚ್ಚಾಗತೊಡಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ತಾಪಮಾನ ಏರಿಕೆ ಪರಿಣಾಮ ಈಗಾಗಲೇ ಕರ್ನಾಟಕದ ಬಹುತೇಕ ಪ್ರದೇಶಗಳನ್ನು ಕಾಡುತ್ತಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ತಾಪಮಾನ ಏರಿಕೆಯ ಜೊತೆಗೆ ನೀರಿನ ಸಮಸ್ಯೆಯನ್ನೂ ಎದುರಿಸುತ್ತಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದರೆ, ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಉಷ್ಣಾಂಶ 33- 36ರ ನಡುವೆ ಇದೆ.
ಏನಿದು ಶಾಖತರಂಗ/ ಶಾಖದ ಅಲೆಗಳು
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಶಾಖದ ತರಂಗವು ಗುಣಾತ್ಮಕವಾಗಿ ಗಾಳಿಯ ಉಷ್ಣತೆಯ ಸ್ಥಿತಿ. ಅದು ತೀವ್ರಗೊಂಡಾಗ ಮಾನವ ದೇಹಕ್ಕೆ ಮಾರಕವಾಗುತ್ತದೆ. ನಿಜವಾದ ತಾಪಮಾನ ಅಥವಾ ಸಾಮಾನ್ಯ ತಾಪಮಾನದಿಂದ ಅದರ ನಿರ್ಗಮನದ ವಿಷಯದಲ್ಲಿ ಒಂದು ಪ್ರದೇಶದ ಮೇಲಿನ ತಾಪಮಾನದ ಮಿತಿಯನ್ನು ಆಧರಿಸಿ ಇದಕ್ಕೆ ಪರಿಮಾಣಾತ್ಮಕ ವ್ಯಾಖ್ಯಾನ ನೀಡಲಾಗುತ್ತದೆ. ಕೆಲವು ದೇಶಗಳಲ್ಲಿ ತಾಪಮಾನ ಮತ್ತು ಆರ್ದ್ರತೆಯ ಆಧಾರದ ಮೇಲೆ ಅಥವಾ ತಾಪಮಾನದ ತೀವ್ರ ಶೇಕಡಾವಾರು ಆಧಾರದ ಮೇಲೆ ಶಾಖ ಸೂಚ್ಯಂಕದಲ್ಲಿ ಇದನ್ನು ವ್ಯಾಖ್ಯಾನಿಸಲಾಗಿದೆ.
ಮುಂದಿನ 3 ತಿಂಗಳು ತಾಪಮಾನದ ಸಂಕಷ್ಟ ಹೆಚ್ಚು
"ಮುಂದಿನ ಮೂರು ತಿಂಗಳಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಶಾಖದ ದಿನಗಳು ಕಾಡಲಿವೆ. ಮಾರ್ಚ್ ವೇಳೆಗೆ ಅಂದರೆ ಈ ತಿಂಗಳ ಅಂತ್ಯದೊಳಗೆ ಪೂರ್ವ-ಮಧ್ಯ ರಾಜ್ಯಗಳಾದ ಒಡಿಶಾ, ಮಹಾರಾಷ್ಟ್ರ ಮತ್ತು ಈಶಾನ್ಯ ಪರ್ಯಾಯ ದ್ವೀಪದ ಭಾರತಗಳಾದ ಕರ್ನಾಟಕ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಬಿಸಿಗಾಳಿ, ಶಾಖದ ಅಲೆರಗಳು ಅಪ್ಪಳಿಸಬಹುದು ಎಂದು ಐಎಂಡಿ ಹವಾಮಾನ ಮಹಾನಿರ್ದೇಶಕ ಡಾ.ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಭಾರತದ ಕೆಲವು ಭಾಗಗಳು ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ದಿನಗಳ ಪ್ರಭಾವಕ್ಕೆ ಒಳಗಾಗುತ್ತವೆ. ಈ ಭಾಗಗಳು ಈಶಾನ್ಯ ಪರ್ಯಾಯ ದ್ವೀಪದ ಭಾರತದ - ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಉತ್ತರ ಒಳನಾಡು (ಬಾಗಲಕೋಟೆ, ಬೆಳಗಾವಿ, ಬೀದರ್, ರಾಯಚೂರು, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ - ಕರ್ನಾಟಕದ ಉತ್ತರ ಒಳನಾಡಿನಲ್ಲಿರುವ ಜಿಲ್ಲೆಗಳಿವು.) ಮತ್ತು ಮಹಾರಾಷ್ಟ್ರ ಮತ್ತು ಒಡಿಶಾದ ಅನೇಕ ಭಾಗಗಳನ್ನು ಒಳಗೊಂಡಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಿಶೇಷವೆಂದರೆ, ಇದೇ ಅವಧಿಯಲ್ಲಿ ಅಂದರೆ ಏಪ್ರಿಲ್‌ನಿಂದ ಜೂನ್ ತಿಂಗಳಲ್ಲಿ ಲೋಕಸಭಾ ಚುನಾವಣೆಗೆ ಭಾರತೀಯರು ಮತ ಚಲಾಯಿಸಲಿದ್ದಾರೆ. 18ನೇ ಲೋಕಸಭಾ ಚುನಾವಣೆ ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ.
ಭಾರತದ ಕೆಲವು ರಾಜ್ಯಗಳಲ್ಲಿ ಆರೆಂಜ್ ಅಲರ್ಟ್
ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಮಾರ್ಚ್ 21 ರಂದು ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ ಮತ್ತು ಒಡಿಶಾದಲ್ಲಿ ಗುಡುಗು, ಮಿಂಚು, ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ
ತೆಲಂಗಾಣ, ಕರಾವಳಿ ಆಂಧ್ರಪ್ರದೇಶ, ಯಾಣಂನಲ್ಲಿ ಮಾರ್ಚ್ 20 ಮತ್ತು 21 ರಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಉಪ ಹಿಮಾಲಯನ್ ಪಶ್ಚಿಮ ಬಂಗಾಳ, ಸಿಕ್ಕಿಂ ಮಾರ್ಚ್ 20-26 ರ ಅವಧಿಯಲ್ಲಿ ಅರುಣಾಚಲ ಪ್ರದೇಶದ ಮೇಲೆ ಭಾರಿ ಮಳೆ ಅಥವಾ ಹಿಮಪಾತವಾಗುವ ಸಾಧ್ಯತೆಯಿದೆ. - ಮಾರ್ಚ್ 20 ಮತ್ತು 23 ರಂದು ಸಿಕ್ಕಿಂನಲ್ಲಿ ಇದೇ ರೀತಿಯ ಹವಾಮಾನ ಪರಿಸ್ಥಿತಿಗಳು ಉಳಿಯುತ್ತವೆ
ಕರ್ನಾಟಕದ ಹವಾಮಾನ ಅಪ್‌ಡೇಟ್
ಉತ್ತರ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವಾಮಾನದ ಸಾಧ್ಯತೆ ಇದೆ. ಕರ್ನಾಟಕದ ಒಳನಾಡುಗಳ ಪೈಕಿ ಬಾಗಲಕೋಟೆ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಕರ್ನಾಟಕ ಹವಾಮಾನದ ಇನ್ನಷ್ಟು ಸುದ್ದಿ - ಕರ್ನಾಟಕ ಹವಾಮಾನ ಮಾರ್ಚ್ 21; ಕೊಡಗು, ಮಂಡ್ಯ ಸೇರಿ 23 ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ, ಬೆಂಗಳೂರಲ್ಲಿ ಭಾಗಶಃ ಮೋಡ
(This copy first appeared in Hindustan Times Kannada website. To read more like this please logon to kannada.hindustantimes.com)
