India Post: ಸದ್ದಿಲ್ಲದೇ ಬುಕ್ ಪ್ಯಾಕೆಟ್‌ ಸೇವೆ ನಿಲ್ಲಿಸಿದ ಭಾರತೀಯ ಅಂಚೆ, ಸಂಕಷ್ಟಕ್ಕೆ ಒಳಗಾದ್ರು ಪ್ರಕಾಶಕರು
ಕನ್ನಡ ಸುದ್ದಿ  /  ಕರ್ನಾಟಕ  /  India Post: ಸದ್ದಿಲ್ಲದೇ ಬುಕ್ ಪ್ಯಾಕೆಟ್‌ ಸೇವೆ ನಿಲ್ಲಿಸಿದ ಭಾರತೀಯ ಅಂಚೆ, ಸಂಕಷ್ಟಕ್ಕೆ ಒಳಗಾದ್ರು ಪ್ರಕಾಶಕರು

India Post: ಸದ್ದಿಲ್ಲದೇ ಬುಕ್ ಪ್ಯಾಕೆಟ್‌ ಸೇವೆ ನಿಲ್ಲಿಸಿದ ಭಾರತೀಯ ಅಂಚೆ, ಸಂಕಷ್ಟಕ್ಕೆ ಒಳಗಾದ್ರು ಪ್ರಕಾಶಕರು

India Post Book Packet: ಭಾರತೀಯ ಅಂಚೆ ಇಲಾಖೆಯ ಬುಕ್ ಪ್ಯಾಕೆಟ್ ಸೇವೆ ಸದ್ದಿಲ್ಲದೇ ಸ್ಥಗಿತವಾಗಿದೆ. ಈ ಸೇವೆ ಕಡಿಮೆ ವೆಚ್ಚದಲ್ಲಿ ಪುಸ್ತಕ ಕಳುಹಿಸುವ ನಿಟ್ಟಿನಲ್ಲಿ ಪ್ರಕಾಶಕರಿಗೆ ವರದಾನವಾಗಿತ್ತು. ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಪ್ರಕಾಶಕರಿಗೆ ಸಂಕಷ್ಟಕ್ಕೆ ಶುರುವಾಗಿದೆ. ಅದರ ವಿವರ ಇಲ್ಲಿದೆ.

ಸದ್ದಿಲ್ಲದೇ ಬುಕ್ ಪ್ಯಾಕೆಟ್‌ ಸೇವೆ ನಿಲ್ಲಿಸಿದ ಭಾರತೀಯ ಅಂಚೆ, ಪ್ರಕಾಶಕರು ಸಂಕಷ್ಟಕ್ಕೆ ಒಳಗಾದ್ರು .
ಸದ್ದಿಲ್ಲದೇ ಬುಕ್ ಪ್ಯಾಕೆಟ್‌ ಸೇವೆ ನಿಲ್ಲಿಸಿದ ಭಾರತೀಯ ಅಂಚೆ, ಪ್ರಕಾಶಕರು ಸಂಕಷ್ಟಕ್ಕೆ ಒಳಗಾದ್ರು .

India Post Book Packet: ಭಾರತೀಯ ಅಂಚೆ ಇಲಾಖೆಯು ಸದ್ದಿಲ್ಲದೇ ಬುಕ್ ಪ್ಯಾಕೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲದ ಪ್ರಕಾಶಕರು ಮತ್ತು ಅಂಚೆ ಇಲಾಖೆ ಸಿಬ್ಬಂದಿ ಬುಕ್ ಪ್ಯಾಕೆಟ್‌ ಸೇವೆ ಆಯ್ಕೆ ಮಾಡಲು ಒದ್ದಾಡಿ, ತಾಂತ್ರಿಕ ದೋಷ ಇರಬಹುದು ಎಂದು ಹೇಳಿಕೊಂಡಿದ್ದರು. ಆದರೆ, ಆ ಸೇವೆಯನ್ನೇ ಅಂಚೆ ಇಲಾಖೆ ಸ್ಥಗಿತಗೊಳಿಸಿದೆ ಎಂಬುದು ಅವರಿಗೆ ತಡವಾಗಿ ಅರಿವಾಗಿದೆ. ಅನೇಕರು ಅಂಚೆ ಕಚೇರಿಗೆ ಹೋಗಿ ಬುಕ್ ಪ್ಯಾಕೆಟ್ ಸೇವೆ ಸಿಗದೆ ರಿಜಿಸ್ಟರ್ಡ್‌ ಪೋಸ್ಟ್‌ನಲ್ಲಿ ಪುಸ್ತಕ ಕಳುಹಿಸಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಇದರಿಂದಾಗಿ, ಮೊದಲೇ ಸಂಕಷ್ಟದಲ್ಲಿರುವ ಕಿರು ಪುಸ್ತಕ ಉದ್ಯಮದ ಮೇಲೆ ಇನ್ನಷ್ಟು ಆರ್ಥಿಕ ಹೊರೆ ಬಿದ್ದಂತಾಗಿದೆ ಎಂದು ಪ್ರಕಾಶಕರು ಹೇಳತೊಡಗಿದ್ದಾರೆ.

ಬುಕ್‌ ಪ್ಯಾಕೆಟ್ ಸೇವೆ ಸ್ಥಗಿತಗೊಳಿಸಿದ ಭಾರತೀಯ ಅಂಚೆ, ಏನಿದು

ಇಂಡಿಯಾ ಪೋಸ್ಟ್ ತನ್ನ ದೀರ್ಘಾವಧಿಯ ಬುಕ್ ಪ್ಯಾಕೆಟ್ ಸೇವೆಯನ್ನು ಹಿಂಪಡೆಯಲು ಡಿಸೆಂಬರ್ ಮಧ್ಯಭಾಗದಲ್ಲೇ ನಿರ್ಧರಿಸಿತು. ಬುಕ್ ಪ್ಯಾಕೆಟ್ ಸೇವೆ ಎಂಬುದು ಕಡಿಮೆ ಶುಲ್ಕ ಪಾವತಿಸಿ ಪುಸ್ತಕಗಳನ್ನು ಗ್ರಾಹಕರಿಗೆ ಕಳುಹಿಸುವುದಕ್ಕೆ ಸ್ವತಂತ್ರ ಪುಸ್ತಕ ಪ್ರಕಾಶಕರಿಗೆ ಅನುಕೂಲ ಮಾಡಿಕೊಟ್ಟಿತ್ತು. ಬುಕ್ ಪ್ಯಾಕೆಟ್‌ ಬಿಟ್ಟು ಬೇರೆ ಸೇವೆ ಮೂಲಕ ಪುಸ್ತಕ ಕಳುಹಿಸಲು ಹೊರಟರೆ ಆಗ ಅದರ ಅಂಚೆ ವೆಚ್ಚವು ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚಾಗುತ್ತದೆ. ಈಗ ಬದಲಾದ ಸನ್ನಿವೇಶದಲ್ಲಿ ಕರ್ನಾಟಕದ ಪುಸ್ತಕ ಪ್ರಕಾಶಕರು ಹೆಚ್ಚುವರಿ ಅಂಚೆ ಶುಲ್ಕದ ಹೊರೆಯಿಂದ ಚಿಂತಿತರಾಗಿದ್ದಾರೆ.

ಬುಕ್‌ ಪ್ಯಾಕೆಟ್ ಸೇವೆ ಬಳಸಿದರೆ 200 ಪುಟಗಳ ಪುಸ್ತಕವನ್ನು 20 - 25 ರೂಪಾಯಿ ಅಂಚೆ ವೆಚ್ಚದಲ್ಲಿ ಭಾರತದಲ್ಲಿ ಎಲ್ಲಿಗೆ ಬೇಕಾದರೂ ಕಳುಹಿಸುವುದು ಸಾಧ್ಯವಿತ್ತು. ಈಗ ಪುಸ್ತಕದ ತೂಕದ ಮೇಲೆ ಹಣ ಪಾವತಿಸಬೇಕಾಗಿದೆ. ಸಾಮಾನ್ಯವಾಗಿ ಯಾವುದೇ ಪುಸ್ತಕದ ಅಂಚೆ ವೆಚ್ಚ 20-25 ರೂಪಾಯಿಗಿಂತ ಹೆಚ್ಚಿದ್ದರೆ ಅದನ್ನು ಭರಿಸುವುದು ಕಷ್ಟವಾಗುತ್ತದೆ. ಈಗ ಅನಿವಾರ್ಯವಾಗಿ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ಡ್‌ ಪೋಸ್ಟ್‌ ಅನ್ನು ಅವಲಂಬಿಸಬೇಕಾಗಿದೆ. ಅದಕ್ಕೆ ಕನಿಷ್ಠ 45 ರೂಪಾಯಿ ಕೊಡಬೇಕು ಎಂಬುದು ಪ್ರಕಾಶಕರ ಅಹವಾಲು.

ಅಂಚೆ ಸೇವೆಗಳಲ್ಲಿನ ಈ ಬದಲಾವಣೆಗಳು 2023 ರ ಪೋಸ್ಟ್ ಆಫೀಸ್ ಕಾಯಿದೆಯ ಭಾಗವಾಗಿ ಜಾರಿಗೊಂಡಿದೆ. ಇದು ಜೂನ್ 18ರಂದು ಜಾರಿಯಾಗಿದೆ. ಇದಕ್ಕೂ ಮೊದಲಿದ್ದ 1898 ರ ಭಾರತೀಯ ಅಂಚೆ ಕಚೇರಿ ಕಾಯಿದೆ ಈಗಿಲ್ಲ.

ಪ್ರಿಂಟೆಡ್‌ ಬುಕ್ಸ್ ಆಯ್ಕೆ ಬೇಕು, ಅಂಚೆ ಇಲಾಖೆಗೆ ಮನವರಿಕೆ ಮಾಡಬೇಕು

ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕ ವಿಘ್ನೇಶ್ವರ ಭಟ್‌ ಕೂಡ ಇದೇ ವಿಷಯವಾಗಿ ನಡೆದ ಘಟನೆಯೊಂದನ್ನು ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿರುವುದು ಹೀಗೆ -

"ಈ ಸಮಸ್ಯೆ ಉದ್ಭವವಾದದ್ದು ಡಿಸೆಂಬರ್ 17ನೇ ತಾರೀಖು. ಅಂದು ಬೆಳಗ್ಗೆ 9.15ರ ಸುಮಾರಿಗೆ ನಾನು ಅಂಚೆ ಕಚೇರಿಗೆ ತಲಪಿದಾಗ ಅದಾಗಲೇ ಶಿವರಾಮ್ ಕಾನ್‌ಸೆನ್‌ ಪುಸ್ತಕವೊಂದನ್ನು ಹಿಡಿದು ನಿಂತಿದ್ದರು. ಹದಿನೈದು ಇಪ್ಪತ್ತು ನಿಮಿಷ ಪೋಸ್ಟ್ ಮಾಸ್ಟರ್ ಸಹಿತ ಸಿಬ್ಬಂದಿಯೆಲ್ಲ ತಿಣುಕಾಡಿದರೂ ಹಿಂದಿನ ದಿನದವರೆಗೂ ಇದ್ದ ಪ್ರಿಂಟೆಡ್ ಬುಕ್ಸ್‌ (Printed Books) ಎನ್ನುವ ಆಯ್ಕೆ ಕಾಣಲಿಲ್ಲ. ಕೊನೆಗೆ, 'ಏನೊ ತಾಂತ್ರಿಕ ತೊಂದರೆ ಇರಬೇಕು, ಸಾಫ್ಟ್‌ವೇರ್ ಸಮಸ್ಯೆ ಇರಬಹುದು, ಎರಡು ಗಂಟೆ ಬಿಟ್ಟು ನೋಡೋಣ' ಎಂದುಕೊಂಡು ಅಲ್ಲಿಂದ ಹೊರಟಿದ್ದಾಯಿತು.

ಈ ಕುರಿತು ಜಿಪಿಒಗೆ ಕೇಳಿದಾಗಲೂ ಸ್ಪಷ್ಟ ಉತ್ತರ ದೊರೆಯಲಿಲ್ಲ. ಅಲ್ಲಿನ ಕೌಂಟರಿನಲ್ಲಿದ್ದವರಿಗೆ ಈ ವಿಷಯವೇ ಗೊತ್ತಿರಲಿಲ್ಲ. ಅವರೂ ಒಮ್ಮೆ ಆಯ್ಕೆಗಳನ್ನೆಲ್ಲ ನೋಡಿ, ಪ್ರಿಂಟೆಡ್ ಬುಕ್ಸ್‌ ಆಯ್ಕೆ ಕಾಣುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿದರು; ತಾಂತ್ರಿಕ ವಿಭಾಗದವರನ್ನು ಕೇಳಬೇಕು ಎಂದರು. ಮಧ್ಯಾಹ್ನವಾದರೂ ತಾಂತ್ರಿಕರು ಸಿಗಲಿಲ್ಲ. ಕೊನೆಗೆ, 'ಪ್ರಿಂಟೆಡ್ ಬುಕ್ಸ್ ಆಯ್ಕೆಯನ್ನು ರದ್ದುಪಡಿಸಲಾಗಿದೆ ಎಂದು ಯಾರಿಗೊ ಮೆಸೇಜು ಬಂದಿದೆಯಂತೆ, ಅಧಿಕೃತವಾಗಿ ಏನೂ ಮಾಹಿತಿಯಿಲ್ಲ' ಎಂದರು, ಜಿಪಿಒನಲ್ಲಿದ್ದ ಸಿಬ್ಬಂದಿ.

ಅಂತಿಮವಾಗಿ, ಅಂದು ಮಧ್ಯಾಹ್ನ ಎರಡೂವರೆ ಸುಮಾರಿಗೆ, ಈ ವಿವರಗಳ ಜೊತೆಗೆ ಪ್ರಿಂಟೆಡ್ ಬುಕ್ಸ್‌ ಆಯ್ಕೆಯಲ್ಲಿದ್ದ ದರಕ್ಕೂ ಈಗ ಅದರ ಬದಲಿಗೆ ಆಯ್ಕೆ ಮಾಡಿಕೊಳ್ಳಬಹುದಾದ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ಡ್ ಬುಕ್ ಪೋಸ್ಟ್ ಅಥವಾ ರಿಜಿಸ್ಟರ್ಡ್ ಪಾರ್ಸೆಲ್ ಗಳ ದರಕ್ಕೂ ಆಗಬಹುದಾದ ವ್ಯತ್ಯಾಸವನ್ನೂ ಉಲ್ಲೇಖಿಸಿ, ಒಂದಿಬ್ಬರು ಸಂಸದರ ಕಚೇರಿಗೂ ಆಡಳಿತ ಪಕ್ಷದ ಪ್ರಮುಖರಿಗೂ ಮಾಹಿತಿ ನೀಡಿ, ವಿರಮಿಸಿದ್ದಾಯಿತು.

ಸಂಬಂಧಿಸಿದವರಿಗೆ, ಸರಕಾರಕ್ಕೆ ಇದೊಂದು ಮಹತ್ತ್ವದ ಸಂಗತಿ ಎಂದೆನಿಸಿದರೆ ಬರುವ ದಿನಗಳಲ್ಲಿ ಮತ್ತೆ ಈ ಮೊದಲಿನ ಪ್ರಿಂಟೆಡ್ ಬುಕ್ಸ್ ಆಯ್ಕೆ ದೊರೆಯಬಹುದು.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner