ಛಂದ ಪುಸ್ತಕ ಸ್ಪರ್ಧೆಗೆ ಹಸ್ತಪ್ರತಿ ಆಹ್ವಾನ; ಹೊಸ ಕತೆಗಾರರಿಗೆ ಅವಕಾಶ, ವಿಜೇತರಿಗೆ 40 ಸಾವಿರ ರೂ. ಬಹುಮಾನ
ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ಸಾಲಿನ 'ಛಂದ ಪುಸ್ತಕ ಬಹುಮಾನ'ಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಒಂದು ಕತೆಗೆ 40,000 ರೂ. ಬಹುಮಾನದ ಜೊತೆಗೆ ಆ ಕಥಾಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುವುದಾಗಿ ಹೇಳಿದೆ.
ಕನ್ನಡದ ಜನಪ್ರಿಯ ಲೇಖಕ-ಕತೆಗಾರ ವಸುಧೇಂದ್ರ ಅವರು, ‘ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆ’ಗೆ ಕತೆಗಳನ್ನು ಆಹ್ವಾನಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ಸಾಲಿನ ಛಂದ ಪುಸ್ತಕ ಬಹುಮಾನಕ್ಕೆ ಕತೆಗಳನ್ನು ಆಹ್ವಾನಿಸಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಕತೆಗಾರರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದ್ದು, ಸ್ಪರ್ಧೆಯ ನಿಯಮಗಳು ಹಾಗೂ ವಿಜೇತರಿಗೆ ನೀಡುವ ಬಹುಮಾನದ ಕುರಿತಾಗಿ ವಸುಧೇಂದ್ರ ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಸ್ಪರ್ಧೆಗೆ ಎಂಟರಿಂದ ಹತ್ತು ಸ್ವಂತ ಕತೆಗಳನ್ನು ಕಳುಹಿಸಬೇಕಾಗಿದ್ದು, ಒಬ್ಬ ಬಹುಮಾನಿತರ ಜೊತೆ ಇನ್ನೂ ಐವರ ಹಸ್ತಪ್ರತಿಗೂ ಬಹುಮಾನಗಳನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಫಲಿತಾಂಶವನ್ನು ಸಮಾರಂಭವೊಂದರಲ್ಲಿ ಘೋಷಿಸುವ ಲೆಕ್ಕಾಚಾರವನ್ನು ಛಂದ ಪುಸ್ತಕ ಹಾಕಿಕೊಂಡಿದ್ದು, ಕಳೆದ ವರ್ಷ ನಡೆಯದ ಸ್ಪರ್ಧೆ ಈ ಬಾರಿ ಮತ್ತೆ ಬರಹಗಾರರ ಗಮನ ಸೆಳೆದಿದೆ. ಈ ಬಾರಿ ನಿಯಮಗಳನ್ನು ತುಸು ಬಿಗಿ ಮಾಡಿದ್ದಾಗಿ ಛಂದ ಪುಸ್ತಕ ತಿಳಿಸಿದ್ದು, ಬಹುಮಾನಿತ ಹಸ್ತಪ್ರತಿಯ ಪುಸ್ತಕ ಪ್ರಕಟಣೆಯನ್ನೂ ಮಾಡಲಾಗುತ್ತಿದೆ. ಈ ಕುರಿತಾಗಿ ವಸುಧೇಂದ್ರ ಅವರ ಫೇಸ್‌ಬುಕ್ ಪೋಸ್ಟ್ ಹೀಗಿದೆ.
ಕಳೆದ ಹದಿನೆಂಟು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ಸಾಲಿನ 'ಛಂದ ಪುಸ್ತಕ ಬಹುಮಾನ'ಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಕತೆಗಾರರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಗಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು ಎಂಟರಿಂದ ಹತ್ತು ಸ್ವಂತ ಕತೆಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ, ಮುದ್ರಿತ ಪುಟಗಳನ್ನು ಕೊರಿಯರ್ ಮೂಲಕ ಕಳುಹಿಸಬೇಕು. ಮುದ್ರಿತ ಪುಟಗಳು A4 ನಲ್ಲಿ ಕನಿಷ್ಠ 50 ಪುಟಗಳಿರಲಿ. ಇ-ಮೇಲ್ ಮುಖಾಂತರ ಕತೆಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಯತಕಾಲಿಕಗಳಲ್ಲಿ ಪ್ರಕಟವಾದ ಅಥವಾ ಅಪ್ರಕಟಿತ ಕತೆಗಳೆರಡನ್ನೂ ಪರಿಗಣಿಸಿದರೂ, ಅಪ್ರಕಟಿತ ಕತೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತದೆ.
40,000 ರೂಪಾಯಿ ಬಹುಮಾನ
ಆಯ್ಕೆಯಾದ ಒಬ್ಬ ಕತೆಗಾರನಿಗೆ/ಳಿಗೆ 40000 ರೂಪಾಯಿ ಬಹುಮಾನ ಕೊಟ್ಟು, ಅವರ ಕಥಾಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ. ಇದಲ್ಲದೆ ಉತ್ತಮವೆನಿಸುವ ಇನ್ನೂ ಐದು ಕಥಾಸಂಕಲನಗಳನ್ನು ಗುರುತಿಸಿ, ಅವುಗಳ ಪುಸ್ತಕ ಪ್ರಕಟಿಸದಿದ್ದರೂ, 2000 ರೂಪಾಯಿ ಬಹುಮಾನ ನೀಡಿ ಮೆಚ್ಚುಗೆಯ ಪತ್ರವನ್ನು ನೀಡಲಾಗುತ್ತದೆ. ಸುಂದರವಾದ ಸಮಾರಂಭದಲ್ಲಿ ಫಲಿತಾಂಶವನ್ನು ಘೋಷಿಸಲಾಗುವುದು. ಅನಂತರ ಪ್ರಥಮ ಬಹುಮಾನಿತ ಪುಸ್ತಕವನ್ನು ಮುದ್ರಿಸಲಾಗುವುದು. ಯಾರ ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ. ಆದ್ದರಿಂದ ಮೂಲಪ್ರತಿಯನ್ನು ಕಳುಹಿಸಕೂಡದೆಂದು ಕೋರುತ್ತೇವೆ. ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿರ್ಧಾರ.
ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆ ನಿಯಮಗಳು
- ಕತೆಗಳು ನಿಮ್ಮ ಸ್ವಂತದ್ದಾಗಿರಬೇಕು. ಯಾವುದೇ ಕತೆಯ ಅನುವಾದ ಅಥವಾ ಅನುಕರಣೆಯಾಗಿರಬಾರದು. ಛಂದ ಪುಸ್ತಕವು ಕೃತಿಚೌರ್ಯವನ್ನು ತೀಕ್ಷ್ಮವಾಗಿ ವಿರೋಧಿಸುತ್ತದೆ. ಯಾವುದೇ ಕಾರಣಕ್ಕೆ ಕತೆಗಳು ಕೃತಿಚೌರ್ಯ ಎಂದು ಕಂಡು ಬಂದಲ್ಲಿ, ಫಲಿತಾಂಶ ಘೋಷಿಸಿದ ನಂತರವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕವಾಗಿ ಕೃತಿಚೌರ್ಯವನ್ನು ಪುರಾವೆಯೊಂದಿಗೆ ಘೋಷಿಸಿಸುತ್ತೇವೆ ಮತ್ತು ಮುಂದೆಂದೂ ಆ ಲೇಖಕರ ಕೃತಿಗಳನ್ನು ಛಂದ ಪುಸ್ತಕದಿಂದ ಪ್ರಕಟಿಸುವುದಿಲ್ಲ.
- ಸುಮಾರು 8-10 ಕತೆಗಳು ಸಾಕು. ಯಾವುದೇ ಕತೆಗೂ ಪದಮಿತಿ ಇಲ್ಲದಿದ್ದರೂ, ಎಲ್ಲಾ ಕತೆಗಳು ಸೇರಿ ಕನಿಷ್ಠ 20000 ಪದಗಳನ್ನು ಮೀರಿದ್ದರೆ ಅನುಕೂಲ. ಯಾವುದೇ ಗರಿಷ್ಠ ಪದಮಿತಿ ಇರುವುದಿಲ್ಲ.
- ಹಸ್ತಪ್ರತಿಯನ್ನು ಖಂಡಿತಾ ಹಿಂತಿರುಗಿಸಲಾಗುವುದಿಲ್ಲ. ದಯವಿಟ್ಟು ಮೂಲಪ್ರತಿಯನ್ನು ಕಳುಹಿಸಬೇಡಿ. ಪ್ರಥಮ ಬಹುಮಾನ ಪಡೆಯದ ಹಸ್ತಪ್ರತಿಯ ಮೇಲೆ ಛಂದ ಪುಸ್ತಕಕ್ಕೆ ಯಾವುದೇ ಹಕ್ಕು ಇರುವುದಿಲ್ಲ.
- ಕೈಬರಹದ ಪ್ರತಿಯನ್ನು ಸ್ವೀಕರಿಸುವುದಿಲ್ಲ. ಫಲಿತಾಂಶ ಮಾಡುವ ನಿರ್ಣಾಯಕರಿಗೆ ಕೈಬರಹವನ್ನು ಓದಲು ಅನನುಕೂಲ ಆಗುವುದರಿಂದ, ಕಂಪ್ಯೂಟರ್‌ನಲ್ಲಿ ಕೀಲಿಸಿದ, ಮುದ್ರಿತ ಪ್ರತಿಗಳನ್ನು ಮಾತ್ರ ಸ್ವೀಕರಿಸಲಾಗುವುದು. ಪಠ್ಯವು ಪುಟದ ಒಂದು ಬದಿಗೆ ಮಾತ್ರ ಮುದ್ರಿತವಾಗಿದ್ದರೆ ಅನುಕೂಲ.
- ಯಾವುದೇ ಮುನ್ನುಡಿ, ಬೆನ್ನುಡಿ, ನನ್ನ ಮಾತು, ಫೋಟೋ – ಕಳುಹಿಸಬೇಡಿ. ನಿಮ್ಮ ಹಸ್ತಪ್ರತಿ ಆಯ್ಕೆಯಾದರೆ, ನಾವೇ ಅವುಗಳ ಏರ್ಪಾಟು ಮಾಡುತ್ತೇವೆ.
- ನಿಮ್ಮ ವಿಳಾಸ, ಸಂಪರ್ಕ ಸಂಖ್ಯೆ, ಸ್ವವಿವರವುಳ್ಳ ಒಂದು ಪುಟವನ್ನು ಹಸ್ತಪ್ರತಿಯ ಜೊತೆಯಲ್ಲಿ ಕಳುಹಿಸಿ.
- ಪ್ರಕಾಶಕರ ಮತ್ತು ನಿರ್ಣಾಯಕರ ಆಯ್ಕೆಯೇ ಅಂತಿಮವಾಗಿರುತ್ತದೆ.
- ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: ಡಿಸೆಂಬರ್ 30, 2024
ಕತೆಗಳನ್ನು ಕಳಿಸಬೇಕಾದ ವಿಳಾಸ
ಛಂದ ಪುಸ್ತಕ, C/O ವಸುಧೇಂದ್ರ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು -560 076 (ವಾಟ್ಸಾಪ್ ಸಂಖ್ಯೆ: 98444 22782).
ವಸುಧೇಂದ್ರ ಅವರ ಫೇಸ್‌ಬುಕ್ ಪೋಸ್ಟ್
ವಿಭಾಗ