Karwar News: ಕಾರವಾರ ಸಮೀಪ ಎಂಜಿನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ಹಡಗು: 8 ವಿಜ್ಞಾನಿಗಳ ಸಹಿತ 36 ಮಂದಿ ರಕ್ಷಣೆ
Indian Coast Guard ಆರ್‌ವಿ ಸಿಂಧೂ ಸಾಧನಾ ಹೆಸರಿನ ಹಡಗು ಎಂಜಿನ್ ವೈಫಲ್ಯದಿಂದಾಗಿ ಕಾರವಾರದ ಸಮೀಪದಲ್ಲಿ ಅಪಾಯಕ್ಕೆ ಸಿಲುಕಿತ್ತು. ಹಡಗಿನ ತೈಲ ಸೋರಿಕೆಗೆ ಕಾರಣವಾಗಬಹುದು ಎಂದು ಹಡಗಿನ ಅಧಿಕಾರಿಗಳು ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದರು. ಕೋಸ್ಟ್ ಗಾರ್ಡ್ ತಂಡ ಎರಡು ಹಡಗು ಬಳಸಿ ರಕ್ಷಣೆ ಮಾಡಿತು.
ಕಾರವಾರ: ಎಂಜಿನ್ ವೈಫಲ್ಯದಿಂದಾಗಿ ಅಪಾಯಕ್ಕೆ ಸಿಲುಕಿದ್ದ 8 ಖ್ಯಾತ ವಿಜ್ಞಾನಿಗಳು ಸೇರಿದಂತೆ ಸಿಎಸ್‌ಐಆರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ ಆಫ್ ಓಷಿಯಾನೋಗ್ರಫಿ ಸಂಶೋಧನಾ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಗುರುವಾರ ರಕ್ಷಿಸಿದ್ದಾರೆ.
ಆರ್‌ವಿ ಸಿಂಧೂ ಸಾಧನಾ ಹೆಸರಿನ ಹಡಗು ಎಂಜಿನ್ ವೈಫಲ್ಯದಿಂದಾಗಿ ಕಾರವಾರದ ಸಮೀಪದಲ್ಲಿ ಅಪಾಯಕ್ಕೆ ಸಿಲುಕಿತ್ತು. ಹಡಗಿನ ತೈಲ ಸೋರಿಕೆಗೆ ಕಾರಣವಾಗಬಹುದು ಎಂದು ಹಡಗಿನ ಅಧಿಕಾರಿಗಳು ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದರು.
ಅದರಂತೆ ಕಡಲತೀರದಿಂದ ಸುಮಾರು 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದ ಹಡಗನ್ನು ಸಂಪರ್ಕಕ್ಕೆ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಈ ಆಧುನಿಕ ಸಂಶೋಧನಾ ನೌಕೆಯು 8 ಹಿರಿಯ ವಿಜ್ಞಾನಿಗಳು ಮೌಲ್ಯಯುತ ವೈಜ್ಞಾನಿಕ ಉಪಕರಣಗಳು ಮತ್ತು ಸಂಶೋಧನಾ ಮಾಹಿತಿ ಸೇರಿದಂತೆ 36 ಜನರನ್ನು ಹೊತ್ತೊಯ್ಯುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗಿತ್ತು. ಸವಾಲಿನ ಹವಾಮಾನ ಪರಿಸ್ಥಿತಿಗಳ ನಡುವೆಯೂ ಐಸಿಜಿ ತಂಡವೂ ಸುರಕ್ಷಿತವಾಗಿ ಗೋವಾಕ್ಕೆ ಹಡಗನ್ನು ಎಳೆದುಕೊಂಡು ತೆರಳಲು ರಕ್ಷಣಾ ಕಾರ್ಯಾಚರಣೆ ನಡೆಸಿತು. ಹಡಗಿನಲ್ಲಿರುವ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರವಾರಕ್ಕೆ ಬಂದಿದ್ದ ತಂಡ ಗೋವಾಕ್ಕೆ ವಾಪಾಸಾಗುತಿತ್ತು. ಶುಕ್ರವಾರ ಬೆಳಿಗ್ಗೆ ಗೋವಾದ ಮಡಗಾಂವ್ ಬಂದರು ತಲುಪಬೇಕಿತ್ತು. ಈ ಮಧ್ಯೆ ತಾಂತ್ರಿಕ ಅಡಚಣೆಯಾದ ಮಾಹಿತಿ ಬಂದಿತು. ಅದರಲ್ಲಿ ಮಹತ್ವದ ದಾಖಲೆ, ಯಂತ್ರೋಪಕರಣಗಳು, ಹಿರಿಯ ವಿಜ್ಞಾನಿಗಳು ಹಾಗೂ ಸಿಬ್ಬಂದಿ ಇದ್ದರು. ಕೊನೆಗೆ ಅತ್ಯಾಧುನಿಕ ಎರಡು ಹಡಗುಗಳನ್ನು ಅಲ್ಲಿಗೆ ಕಳುಹಿಸಲಾಯಿತು. ಐಸಿಜಿಎಸ್ ಸುಜಿತ್ ಹಾಗೂ ಐಸಿಜಿಎಸ್ ವರಾಹ ಎನ್ನುವ ಹಡಗಿನ ಜತೆಗೆ ಕೌಶಲ್ಯ ಹಾಗೂ ತಜ್ಞರ ತಂಡ ಕೂಡಲೇ ತೆರಳಿದ್ದರಿಂದ ಅನಾಹುತ ತಪ್ಪಿತು.
ಕೋಸ್ಟ್ ಗಾರ್ಡ್ ಡಿಇಜಿ ಕೆ.ಎಲ್.ಅರುಣ್ ಪ್ರಕಾರ, ಹಡಗು ಮಧ್ಯದಲ್ಲಿ ಸಿಲುಕಿರುವ ಮಾಹಿತಿ ದೊರಕಿತು. ಹಡಗು ಚಲಿಸದ ಸ್ಥಿತಿಗೆ ತಲುಪಿತ್ತು. ತೈಲ ಸೋರಿಕೆಯ ಅಪಾಯವೂ ಇದ್ದುದರಿಂದ ಕೂಡಲೇ ಮೊದಲ ತಂಡವನ್ನು ಗುರುವಾರ ಸಂಜೆ ಹೊತ್ತಿಗೆ ರವಾನಿಸಲಾಯಿತು. ರಾತ್ರಿ ಹೊತ್ತಿಗೆ ಇನ್ನೊಂದು ತಂಡವೂ ತಲುಪಿ ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು. ಮಳೆಗಾಲ ಇರುವುದರಿಂ ಸಮುದ್ರದಲ್ಲಿ ಭಾರೀ ಅಲೆಗಳೂ ಇದ್ದವು. ರಾತ್ರಿ ಸಮಯದಲ್ಲಂತೂ ಸಮುದಕ್ಕಿಳಿಯುವುದು ಸಾಹಸವೇ ಸರಿ. ಆದರೂ ಸಮುದ್ರದಲ್ಲಿ ಸಿಲುಕಿದ್ದು ರಾಷ್ಟ್ರೀಯ ಸಂಪತ್ತಾಗಿದ್ದರಿಂದ ತುರ್ತು ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ವಿವರಿಸಿದ್ದಾರೆ.