ಗ್ಯಾರೆಂಟಿ ಯೋಜನೆಗಳು ಸಾರ್ವತ್ರಿಕ ಕನಿಷ್ಠ ಆದಾಯದ ಪರಿಕಲ್ಪನೆಯವು; ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಪಾದನೆ
India Independence Day News; ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಂಗಳೂರಿನ ಮಾಣೀಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಗ್ಯಾರೆಂಟಿ ಯೋಜನೆಗಳು ಸಾರ್ವತ್ರಿಕ ಕನಿಷ್ಠ ಆದಾಯದ ಪರಿಕಲ್ಪನೆಯವು ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರತಿಪಾದಿಸಿದರು.
ಬೆಂಗಳೂರು: ಸಾರ್ವತ್ರಿಕ ಕನಿಷ್ಠ ಆದಾಯ (Universal Basic Income) ಪರಿಕಲ್ಪನೆಯಲ್ಲಿ, ಎಲ್ಲರಿಗೂ ಬದುಕಲು ಬೇಕಾದಷ್ಟು ಆದಾಯ ಸಿಗಬೇಕು ಎಂಬ ಕಾರಣದಿಂದಲೇ ನಾವು ಗ್ಯಾರಂಟಿ ಯೋಜನೆ (Guarantee Schemes) ಗಳನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಗ್ಯಾರೆಂಟಿ ಸ್ಕೀಮ್‌ಗಳನ್ನು ಸಮರ್ಥಿಸಿಕೊಂಡರು.
ಅವರು ಇಂದು (ಆಗಸ್ಟ್ 15) ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಕರ್ನಾಟಕದ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಬೆಲೆ ಏರಿಕೆ, ನಿರುದ್ಯೋಗದಿಂದ ತತ್ತರಿಸಿರುವ ಜನತೆಗೆ ಇವು ಆರ್ಥಿಕ ಶಕ್ತಿಯನ್ನು ನೀಡುತ್ತಿವೆ. ಅದರಲ್ಲೂ ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳು ನೇರವಾಗಿ ಹಣಕಾಸಿನ ನೆರವು ಒದಗಿಸುವ ಮೂಲಕ ಸಾರ್ವತ್ರಿಕ ಕನಿಷ್ಠ ಆದಾಯ ಮಾದರಿಯ ಕಲ್ಯಾಣ ಯೋಜನೆಗಳಾಗಿ ಗುರುತಿಸಲ್ಪಟ್ಟಿವೆ ಎಂದರು.
ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ಲಿಂಗ ಸಮಾನತೆಯತ್ತ ದೃಢ ಹೆಜ್ಜೆಯನ್ನು ಇರಿಸಿವೆ. ದುಡಿಯುವ ಮಹಿಳೆಯರಿಗೂ ಅವರ ಖರ್ಚಿನ ದೊಡ್ಡ ಮೊತ್ತವನ್ನು ಉಳಿಸಿ, ಅವರ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸಿದೆ. ಗ್ಯಾರಂಟಿ ಯೋಜನೆಗಳಿಗೆ ಕಳೆದ ವರ್ಷ ನಾವು 36 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಈ ವರ್ಷ ಈ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಿದ್ದೇವೆ. ಕರ್ನಾಟಕದ ಈ ಯೋಜನೆ ದೇಶಕ್ಕೆ ಮಾದರಿ ಎಂದರೆ ಖಂಡಿತಾ ಅತಿಶಯೋಕ್ತಿಯಾಗಲಾರದು ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಈ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು.
ಸರ್ವರನ್ನೂ ಒಳಗೊಂಡ ಸುಸ್ಥಿರ ಅಭಿವೃದ್ಧಿ ಮಾದರಿ "ಕರ್ನಾಟಕ ಮಾದರಿ'
ನಮ್ಮ ರಾಜ್ಯದ ಸರ್ವರನ್ನೂ ಒಳಗೊಂಡ ಸುಸ್ಥಿರ ಅಭಿವೃದ್ಧಿ ಮಾದರಿ ಇಂದು "ಕರ್ನಾಟಕ ಮಾದರಿ' ಎಂದು ದೇಶಪ್ರಸಿದ್ಧವಾಗಿದೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಮ್ಮ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿದ್ದು, ಹಲವು ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿದೆ. ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಮೂಲಸೌಕರ್ಯಗಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ, ಕೌಶಾಲ್ಯಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಉದ್ಯೋಗ ಸೃಷ್ಟಿ, ಜನಸ್ನೇಹಿ ಆಡಳಿತ ನಮ್ಮ ಕನಸು ಮಾತ್ರವಲ್ಲ; ಇದೇ ಗುರಿಯಾಗಿದೆ. ಈ ಗುರಿ ಸಾಧನೆಯತ್ತ ಮುನ್ನಡೆಯುವುದೇ ನಮ್ಮ ಧ್ಯೇಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಶೋಷಿತರ ಅಭಿವೃದ್ಧಿ ನಮ್ಮ ಬದ್ಧತೆ. ಸ್ವಾತಂತ್ರ್ಯದ ಫಲವನ್ನು ಸಮಾಜದ ಕಟ್ಟಕಡೆಯ ಪ್ರಜೆಗೂ ತಲುಪಿಸುವುದು ನಮ್ಮ ಕನಸು. ಈ ನಿಟ್ಟಿನಲ್ಲಿ ಸರ್ಕಾರ ಯೋಜನಾಬದ್ಧವಾಗಿ ಹೆಜ್ಜೆ ಇರಿಸುತ್ತಿದೆ. ದುರ್ಬಲ ಹಾಗೂ ಶೋಷಿತ ಸಮುದಾಯಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಸತಿ ಶಾಲೆಗಳು, ಹಾಸ್ಟೆಲುಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯದ ಅರಿವು ಮತ್ತು ದೇಶದ ಮೇಲಿನ ಅಭಿಮಾನದ ಕಿಚ್ಚನ್ನು ಹೊತ್ತಿಸಿದ್ದು ರಾಷ್ಟ್ರೀಯ ಚಳುವಳಿ. ಅದರ ನೇತೃತ್ವವನ್ನು ಹೊತ್ತಿದ್ದು ಮಹಾತ್ಮ ಗಾಂಧೀಜಿಯವರ ಮುಂದಾಳತ್ವದ ರಾಷ್ಟ್ರೀಯ ಕಾಂಗ್ರೆಸ್. ಈ ರಾಷ್ಟ್ರೀಯ ಚಳುವಳಿಯ ಭದ್ರ ಬುನಾದಿ ಮೇಲೆ ರೂಪುಗೊಂಡಿದ್ದೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ್ದ ಭಾರತದ ಸಂವಿಧಾನ ಮತ್ತು ಅದನ್ನು ಆಧರಿಸಿದ ಪ್ರಜಾಪ್ರಭುತ್ವ. ನಮ್ಮ ಗುರಿ ಸ್ಪಷ್ಟವಾಗಿದೆ. ಬುದ್ಧ, ಬಸವಾದಿ ಶರಣರು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ನಾರಾಯಣ ಗುರು, ಸಾವಿತ್ರಿ ಬಾಯಿ ಪುಲೆಯಂತಹ ಮಹಾನರು, ದಾರ್ಶನಿಕರು ತೋರಿಸಿ ಕೊಟ್ಟ ಮಾನವೀಯತೆಯ ಹಾದಿಯಲ್ಲಿ ಮುನ್ನಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅತಿವೃಷ್ಟಿ ಅನಾವೃಷ್ಟಿ ಸಂತ್ರಸ್ತರಿಗೆ ಗ್ಯಾರೆಂಟಿ ಯೋಜನೆ ವರದಾನ
ಕಳೆದ ವರ್ಷ ಅನಾವೃಷ್ಟಿಯಿಂದಾಗಿ ನಮ್ಮ ರೈತರು ಸಂಕಷ್ಟ ಎದುರಿಸಬೇಕಾಯಿತು. ಕೇಂದ್ರ ಸರ್ಕಾರ ನೆರವು ನೀಡದಿದ್ದರೂ, ರೈತರ ನೆರವಿಗೆ ನಾವು ಕೈಜೋಡಿಸಿದ್ದೇವೆ. ಬೆಳೆ ನಷ್ಟ ಅನುಭವಿಸಿದ 38,58,737 ರೈತರಿಗೆ ಒಟ್ಟಾರೆಯಾಗಿ 3454.22 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.
ಪ್ರಸ್ತುತ ಅತಿ ಮಳೆಯಿಂದಾಗಿ ತೊಂದರೆಗೊಳಗಾದ ಜನತೆಯ ನೆರವಿಗೆ ಸರ್ಕಾರ ಧಾವಿಸಿದೆ. ಅತಿವೃಷ್ಟಿಯಿಂದ ಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 1 ಲಕ್ಷ 20 ಸಾವಿರ ರೂಪಾಯಿ ಪರಿಹಾರ ಒದಗಿಸುವುದರೊಂದಿಗೆ ಮನೆಯನ್ನು ನಿರ್ಮಿಸಿ ಕೊಡಲು ನಾವು ನಿರ್ಧರಿಸಿದ್ದೇವೆ. ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಚೇತೋಹಾರಿಯಾಗಿದ್ದರೆ, ಆರ್ಥಿಕ ಅಭಿವೃದ್ಧಿಯೆಡೆಗಿನ ನಮ್ಮ ಕಾರ್ಯಕ್ರಮಗಳು, ಪ್ರಯತ್ನಗಳು ಸ್ಥಿರತೆ ತರುವ ಸಾಧನಗಳಾಗಿವೆ ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮ ರಾಜ್ಯ ಹೂಡಿಕೆದಾರರ ನೆಚ್ಚಿನ ತಾಣವಾಗಿದ್ದು, 2023-24 ನೇ ಸಾಲಿನಲ್ಲಿ 54,427 ಕೋಟಿ ರೂಪಾಯಿ ವಿದೇಶಿ ಬಂಡವಾಳ ಹೂಡಿಕೆ ಆರ್ಕಷಿಸುವುದರೊಂದಿಗೆ ದೇಶದಲ್ಲಿ 3ನೇ ಸ್ಥಾನದಲ್ಲಿದೆ.
ಪ್ರಸ್ತುತ ಸಾಲಿನಲ್ಲಿ ರಾಜ್ಯದಲ್ಲಿ ವಿವಿಧ ಸಂಸ್ಥೆಗಳೊಂದಿಗೆ 42,915 ಕೋಟಿ ರೂಪಾಯಿ ಹೂಡಿಕೆಗೆ 13 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿ 22,600 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ರಾಜ್ಯದ ವಾಣಿಜ್ಯ ವಹಿವಾಟು ಕ್ಷೇತ್ರ ಅತ್ಯಂತ ಬಲಿಷ್ಠವಾಗಿದೆ. 2023-24ನೇ ಸಾಲಿನಲ್ಲಿ ರಾಜ್ಯವು 166,545 ಮಿಲಿಯನ್ ಯುಎಸ್ ಡಾಲರ್ ಮೊತ್ತದ ರಫ್ತು ಮಾಡಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ.
ರಾಜ್ಯದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಬಾರಿ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಎತ್ತಿನ ಹೊಳೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಈವರೆಗೆ 855.02 ಕೋಟಿ ರೂಪಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರಡಿ 151.16 ಕೋಟಿ ರೂಪಾಯಿ ವೆಚ್ಚ ಭರಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಪಿ.ಎಂ.ಜಿ.ಎಸ್.ವೈ, ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ವಿಶೇಷ ಅಭಿವೃದ್ಧಿ ಯೋಜನೆಗಳಡಿ ಒಟ್ಟು 803 ಕಿಮೀ ಉದ್ದದ ರಸ್ತೆಯನ್ನು 463.11 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.