Indian Railway: ವಂದೇ ಭಾರತ್ ರೈಲಿನಲ್ಲಿ ಫಿಲ್ಟರ್ ಕಾಫಿ, ದಕ್ಷಿಣ ಭಾರತದ ತಿಂಡಿಗಳನ್ನೇ ನೀಡಿ: ಬೆಂಗಳೂರು ಮೂಲದ ಉದ್ಯಮಿ ಮನವಿ
Indian Railway: ವಂದೇ ಭಾರತ್ ರೈಲಿನಲ್ಲಿ ಫಿಲ್ಟರ್ ಕಾಫಿ, ದಕ್ಷಿಣ ಭಾರತದ ತಿಂಡಿಗಳನ್ನು ನೀಡುವಂತೆ ಬೆಂಗಳೂರು ಮೂಲದ ಉದ್ಯಮಿ ಕಾಫಿ ಬ್ರಾಂಡ್ ‘ವಿಎಸ್ ಮಣಿ ಮತ್ತು ಕೋ’ ಸಹ-ಸಂಸ್ಥಾಪಕ ಜಿಡಿ ಪ್ರಸಾದ್ ಒತ್ತಾಯಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು: ವಂದೇಭಾರತ್ ರೈಲಿಗೆ ದಕ್ಷಿಣ ಭಾರತದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ದಕ್ಷಿಣ ಭಾರತದ ಮೊಟ್ಟ ಮೊದಲ ರೈಲು 2022ರಲ್ಲಿ ಆರಂಭವಾಯಿತು. ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗವಾಗಿ ಪ್ರಾರಂಭವಾದ ರೈಲಿಗೆ ಜನರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದೀಗ ವಂದೇ ಭಾರತ್ ರೈಲುಗಳಲ್ಲಿ ದಕ್ಷಿಣ ಭಾರತೀಯ ತಿಂಡಿಗಳನ್ನು ಹೆಚ್ಚು ವಿತರಿಸುವಂತೆ ಬೆಂಗಳೂರು ಮೂಲದ ಕಾಫಿ ಬ್ರಾಂಡ್ ‘ವಿಎಸ್ ಮಣಿ ಮತ್ತು ಕೋ’ ಸಹ-ಸಂಸ್ಥಾಪಕ ಜಿಡಿ ಪ್ರಸಾದ್ ಒತ್ತಾಯಿಸಿದ್ದಾರೆ. ದಕ್ಷಿಣ ಭಾರತದಲ್ಲಿ ವಂದೇ ಭಾರತ್ ರೈಲು ಯಶಸ್ವಿಯಾಗಿದೆ ಎಂದು ಶ್ಲಾಘಿಸಿದ ಅವರು, ರೈಲಿನಲ್ಲಿ ದಕ್ಷಿಣ ಭಾರತದ ತಿಂಡಿಗಳನ್ನು ಹೆಚ್ಚು ವಿತರಿಸುವಂತೆ ಕೋರಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರೈಲಿನಲ್ಲಿ ಸಿಗುವ ತಿಂಡಿಗಳ ಫೋಟೋದೊಂದಿಗೆ ಬರಹವನ್ನು ಹಂಚಿಕೊಂಡಿದ್ದಾರೆ. ಹಲ್ದಿರಾಮ್ ಕಡಲೆಕಾಯಿ ಪ್ಯಾಕೆಟ್, ಬಿಕಾಜಿ ಭುಜಿಯಾ, ಗಿರ್ನಾರ್ ಮಸಾಲಾ ಟೀ ಸೇರಿದಂತೆ ತಿಂಡಿಗಳ (ಸ್ನಾಕ್ಸ್) ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ದಕ್ಷಿಣದಲ್ಲಿ ವಿಶ್ವ ದರ್ಜೆಯ ವಂದೇ ಭಾರತ ಎಕ್ಸ್ ಪ್ರೆಸ್ ರೈಲು ಓಡುತ್ತಿರುವುದರಿಂದ ನಾವು ಸಂತಷ್ಟರಾಗಿದ್ದೇವೆ. ನೀವು ನಮಗೆ ಅವಕಾಶ ನೀಡಿದರೆ ಫಿಲ್ಟರ್ ಕಾಫಿ ಮತ್ತು ದಕ್ಷಿಣ ಭಾರತೀಯ ತಿಂಡಿಗಳನ್ನು ವಿತರಿಸುವುದನ್ನು ಗೌರವಿಸುತ್ತೇವೆ. ಇದಕ್ಕೆ ಬೆಂಬಲ ಕೋರುವಂತೆ ವಿನಂತಿಸಿರುವ ಉದ್ಯಮಿ ಪ್ರಸಾದ್, ಪ್ರಧಾನಿ ಕಚೇರಿ (ಪಿಎಂಒ), ರೈಲ್ವೆ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ದಕ್ಷಿಣ ಭಾರತದ ಮೊದಲ ರೈಲು ಆರಂಭವಾಗಿದ್ದು 2022ರಲ್ಲಿ
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು 2022 ರಲ್ಲಿ ಚೆನ್ನೈ, ಮೈಸೂರು ಮತ್ತು ಬೆಂಗಳೂರು ನಡುವೆ ಪ್ರಾರಂಭಿಸಲಾಯಿತು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಇತ್ತೀಚೆಗಷ್ಟೇ ಎರಡನೇ ಚೆನ್ನೈ, ಮೈಸೂರು ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಏಪ್ರಿಲ್‌ನಿಂದ ಈ ಮಾರ್ಗದಲ್ಲಿ ಎರಡನೇ ವಂದೇ ಭಾರತ್ ರೈಲು ಸಂಚರಿಸಲಿದೆ.
ಕಲಬುರಗಿಯಿಂದ ಬೆಂಗಳೂರಿಗೆ ರೈಲು ಸೇವೆಗೆ ಪ್ರಧಾನಿ ಮೋದಿ ಇತ್ತೀಚೆಗೆ ಚಾಲನೆ ನೀಡಿದ್ದರು. ಈ ಮೂಲಕ ಕಲಬುರಗಿ ಜನತೆಯ ಬಹುದಿನಗಳ ಕನಸು ನನಸಾಗಿದೆ. ಮಂಗಳೂರು-ಗೋವಾ ವಂದೇ ಭಾರತ್ ರೈಲಿಗೂ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಬೆಂಗಳೂರು, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಚೆನ್ನೈ, ಕೊಯಮತ್ತೂರು, ಮೈಸೂರು ಮತ್ತು ಹೈದರಾಬಾದ್‌ಗೆ ವಂದೇ ಭಾರತ್ ರೈಲು ಸೇವೆಗಳನ್ನು ಹೊಂದಿದೆ. ವಂದೇ ಭಾರತ್ ರೈಲು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಯಾಗಿದ್ದು, ಇದನ್ನು ಭಾರತೀಯ ರೈಲ್ವೇಗಳು ನಿರ್ವಹಿಸುತ್ತವೆ. ಇದು ಹವಾನಿಯಂತ್ರಿತ ಚೇರ್ ಕಾರ್ ಸೇವೆಯಾಗಿದ್ದು, 800 ಕಿ.ಮೀ (500 ಮೈಲಿ) ಗಿಂತ ಕಡಿಮೆ ಅಂತರದಲ್ಲಿರುವ ಸ್ಥಳಗಳಿಗೆ ಪ್ರಯಾಣಿಸಲು 10 ಗಂಟೆಗಳಿಗಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ. ಭಾರತದಲ್ಲಿ ಮೊಟ್ಟ ಮೊದಲನೇ ಬಾರಿಗೆ ನವದೆಹಲಿ - ವಾರಣಾಸಿಗೆ ಫೆಬ್ರವರಿ 15, 2019 ರಂದು ಚಾಲನೆ ನೀಡಲಾಯಿತು.
ಅಂದಹಾಗೆ, ವಿಎಸ್ ಮಣಿ ಮತ್ತು ಕೋ ಅನ್ನು ಜಿಡಿ ಪ್ರಸಾದ್, ರಾಹುಲ್ ಬಜಾಜ್ ಮತ್ತು ಯಶಸ್ ಆಲೂರ್ ಸ್ಥಾಪಿಸಿದ್ದಾರೆ. ಕಳೆದ ವರ್ಷ ಜನಪ್ರಿಯ ರಿಯಾಲಿಟಿ ಶೋ ‘ಶಾರ್ಕ್ ಟ್ಯಾಂಕ್ ಇಂಡಿಯಾ’ ಎರಡನೇ ಸೀಸನ್‌ನಲ್ಲಿ ಈ ಮೂವರು ಉದ್ಯಮಿಗಳು ಕಾಣಿಸಿಕೊಂಡಿದ್ದರು.