Bidar Chamarajanagar Train: ಚಾಮರಾಜನಗರದಿಂದ ಬೀದರ್‌ಗೆ ರೈಲು, ಕರ್ನಾಟಕದ ಗಡಿ ಜಿಲ್ಲೆಗಳ ಸಂಪರ್ಕಕ್ಕೆ ಹೆಚ್ಚಿದ ಒತ್ತಡ
Train News ಬೀದರ್‌ನಿಂದ ಚಾಮರಾಜನಗರವರೆಗೆ ರೈಲು ಸೇವೆಯ ಬೇಡಿಕೆ( Bidar Chamarajanagar Train) ಹೆಚ್ಚಿದೆ. ಇದು ಕರ್ನಾಟಕದ ಎರಡು ಪ್ರದೇಶಗಳ ಪ್ರಗತಿಯ ಹಾದಿಯೂ ಹೌದು ಎನ್ನುವ ಅಭಿಪ್ರಾಯವಿದೆ.
ಬೆಂಗಳೂರು: ಕರ್ನಾಟಕ ಭೌಗೋಳಿಕವಾಗಿ ದೊಡ್ಡ ರಾಜ್ಯ. ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪಬೇಕು. ಗಡಿ ಜಿಲ್ಲೆಗಳ ನಡುವೆ ಸಂಪರ್ಕ ಸಾಧಿಸಬೇಕು ಎಂದರೆ ಅಷ್ಟಿಷ್ಟು ಕಷ್ಟಪಡಬೇಕಿಲ್ಲ. ಭಾರೀ ಪ್ರಯಾಸವನ್ನೇ ಪಡಬೇಕಾದ ಸ್ಥಿತಿಯಿದೆ. ಅದರಲ್ಲೂಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದ ಗಡಿ ಬೀದರ್ ನಿಂದ ಕೇರಳ ಹಾಗೂ ತಮಿಳುನಾಡಿನ ಗಡಿ ಭಾಗವಾದ ಚಾಮರಾಜನಗರ ಜಿಲ್ಲೆ ತಲುಪಬೇಕು ಎಂದು ಸಾಮಾನ್ಯರು ಸಾಕುಬೇಕಾಗಿ ಹೋಗಬಹುದು. ಇದಕ್ಕಾಗಿಯೇ ಬೀದರ್ ಹಾಗೂ ಚಾಮರಾಜನಗರಕ್ಕೆ ಈಗಾಗಲೇ ಇರುವ ರೈಲು ಮಾರ್ಗವನ್ನು ಬಳಸಿಕೊಂಡು ನೇರ ಸಂಪರ್ಕ ರೈಲನ್ನು ಆರಂಭಿಸುವ ಬೇಡಿಕೆ ಹೆಚ್ಚಿದೆ. ಈಗಾಗಲೇ ಈ ಮಾರ್ಗದ ರೈಲು ಆರಂಭದ ಪ್ರಸ್ತಾವನೆಗಳು ಹಿಂದಿನಿಂದ ಇದ್ದರೂ ಅದು ಜಾರಿಗೊಂಡಿಲ್ಲ. ಈಗ ಮತ್ತೊಮ್ಮೆ ಈ ಸಂಬಂಧದ ಕೂಗು ಜೋರಾಗಿಯೇ ಇದೆ.
ಯಾವುದೇ ಪ್ರದೇಶ ಬೆಳವಣಿಗೆ ಕಾಣಬೇಕೆಂದರೆ ಮುಖ್ಯವಾಗಿ ಅಲ್ಲಿಗೆ ಬೇಕಾಗಿರುವುದು ಸಂಪರ್ಕ ಸಾರಿಗೆ. ಅದರಲ್ಲೂ ಬಸ್, ರೈಲು ಹಾಗೂ ವಿಮಾನ ಸೇವೆ ಇದ್ದರೆ ಹೆಚ್ಚು ಬೆಳವಣಿಗೆ ಸಾಧ್ಯ, ಹೆದ್ದಾರಿಗಳ ರಚನೆ, ರೈಲು ಮಾರ್ಗಗಳ ರಚನೆ, ವಿಮಾನ ನಿಲ್ದಾಣಗಳ ನಿರ್ಮಾಣವೂ ಇದರಲ್ಲಿ ಪ್ರಮುಖವಾದದ್ದು. ಈಗಾಗಲೇ ಬೀದರ್‌ಗೆ ರೈಲು ಸಂಪರ್ಕ ಮಾತ್ರವಲ್ಲ ವಿಮಾನ ಸೇವೆಯೂ ಇದೆ. ಆದರೆ ಚಾಮರಾಜನಗರ ಈ ವಿಚಾರದಲ್ಲಿ ಕೊಂಚ ಹಿಂದೆಯೇ ಇದೆ. ಆದರೂ ಎರಡೂ ನಗರಗಳನ್ನು ಸಂಪರ್ಕ ಕಲ್ಪಿಸುವ ಕೆಲಸವಾದರೆ ಜನರ ಪ್ರಯಾಣಕ್ಕೂ ಸುಲಭವಾಗಲಿದೆ ಎನ್ನುವುದು ಜನರ ಅಭಿಮತ.
ಸಂಪರ್ಕ ಜಾಲ ಬಲಪಡಿಸಿದ ನಂತರ ಆಯಾ ಭಾಗಗಳಲ್ಲಿ ಕೈಗಾರಿಕೆ, ಉದ್ಯಮ, ಉತ್ಪಾದನ ವಲಯದಲ್ಲೂ ನಿಧಾನವಾಗಿ ಪ್ರಗತಿ ಕಾಣಲಿದೆ. ಅಲ್ಲದೇ ಆ ಭಾಗದ ಉದ್ಯಮಗಳಿಗೂ ಹೆಚ್ಚಿನ ಬಲ ಬರಲಿದೆ. ಇದು ನೇರವಾಗಿ ಆರ್ಥಿಕ ಪ್ರಗತಿಗೂ ದಾರಿ ಮಾಡಿಕೊಡಲಿದೆ. ಆಯಾ ಜಿಲ್ಲೆಗಳ ಜಿಡಿಪಿ ದರದಲ್ಲೂ ಪ್ರಗತಿ ಕಂಡು ಸಮಗ್ರ ಅಭಿವೃದ್ದಿಯೂ ಅವಕಾಶವಾಗಲಿದೆ. ತಲಾ ಆದಾಯದಲ್ಲಿ ಉತ್ತಮವಾದರೆ ಸರ್ಕಾರದ ಆಶಯವೂ ಈಡೇರಿದಂತೆಯೇ ಹೌದು ಎನ್ನುವ ಅಭಿಪ್ರಾಯವೂ ಇದೆ.
ಚಾಮರಾಜನಗರದಿಂದ ಬೀದರ್ ಸುಮಾರು ಆರು ನೂರು ಕಿ.ಮಿ ದೂರವಿರುವ ಜಿಲ್ಲೆಗಳು. ಈ ಎರಡು ಜಿಲ್ಲೆಯನ್ನು ಸಂಪರ್ಕಿಸಲು ಕನಿಷ್ಠ ಹತ್ತು ಜಿಲ್ಲೆಗಳನ್ನೂ ದಾಟಿ ಹೋಗಬೇಕು. ಕನಿಷ್ಠ ಒಂದು ದಿನವಾದರೂ ಒಂದು ಕಡೆಯ ಪ್ರಯಾಣಕ್ಕೆ ಬೇಕಾಗುತ್ತದೆ. ಆದರೆ ಈ ಎರಡು ನಗರಗಳ ನಡುವೆ ನೇರ ರೈಲು ಸಂಪರ್ಕ ಶುರುವಾದರೆ ಪ್ರಯಾಣದ ಸಮಯವೂ ಉಳಿತಾಯವಾಗಲಿದೆ. ಜನರಿಗೂ ಒಳ್ಳೆಯದು ಆಗಲಿದೆ ಎಂಬ ಕಾರಣದಿಂದಲೇ ರೈಲು ಬೇಡಿಕೆ ಹೆಚ್ಚಿದೆ.
ಬೀದರ್‌ನಿಂದ ಚಾಮರಾಜನಗರ ಮಾರ್ಗದಲ್ಲಿ ಮೈಸೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳೂ ಬರಲಿವೆ. ಈ ಮಾರ್ಗದಲ್ಲಿನ ಉದ್ಯಮಗಳ ಸಂಪರ್ಕ ಸೇತುವೂ ಇದರಿಂದ ಬಲಗೊಳ್ಳಲಿದೆ.
ಈ ಜಿಲ್ಲೆಗಳು ಪ್ರವಾಸೋದ್ಯಮ ಮಹತ್ವವನ್ನೂ ಪಡೆದುಕೊಂಡಿವೆ. ಆಯಾ ಭಾಗದ ಪ್ರವಾಸಿ ಸ್ಥಳಗಳಿಗೆ ವರ್ಷವಿಡೀ ಪ್ರವಾಸಿಗರು ಭೇಟಿ ನೀಡಲು ಈ ರೈಲು ಸಂಪರ್ಕ ಸೇತುವೆಯಾಗಿಯೂ ಕೆಲಸ ಮಾಡಲಿದೆ.
ಅಷ್ಟೇ ಅಲ್ಲದೇ ಬೀದರ್‌ನಿಂದ ಹಾಸನ ಮಾರ್ಗವಾಗಿ ಕರಾವಳಿ ಪ್ರದೇಶಕ್ಕೆ ಭೇಟಿ, ಈ ಭಾಗದವರು ಉತ್ತರ ಕರ್ನಾಟಕ ಭಾಗದ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡಲು ಖಂಡಿತವಾಗಿಯೂ ಇದು ನೆರವಾಗಲಿದೆ.
ಕರ್ನಾಟಕದವರು ಮಾತ್ರವಲ್ಲದೇ ದಕ್ಷಿಣ ರಾಜ್ಯದವರ ಪ್ರವಾಸಕ್ಕೂ ಬೀದರ್ ಚಾಮರಾಜನಗರ ರೈಲು ಸಂಪರ್ಕ ಸಹಕಾರಿಯೂ ಆಗಬಹುದು. ನಮ್ಮವರೂ ಹೊರ ರಾಜ್ಯಗಳಿಗೆ ಹೋಗಿ ಬರಲು ಸಹಕಾರಿಯಾಗಲಿದೆ.
ಚಾಮರಾಜನಗರ ಜಿಲ್ಲೆ ಪರಿಸರ ಪ್ರವಾಸೋದ್ಯಮ, ಬೆಟ್ಟಗುಡ್ಡಗಳ ಪ್ರವಾಸಿ ತಾಣಕ್ಕೆ ಹೆಸರುವಾಸಿ. ಅಲ್ಲದೇ ಕರಿಕಲ್ಲು ಉದ್ಯಮದಿಂದಲೂ ಗಮನ ಸೆಳೆದಿದೆ. ಈ ಜಿಲ್ಲೆಯಲ್ಲಿ ಬೆಳಯುವ ಈರುಳ್ಳಿ. ಅರಿಶಿಣ ಕೂಡ ಪ್ರಮುಖ ಬೆಳೆಗಳು. ಇವುಗಳ ಸಾಗಣೆಗೂ ರೈಲು ಸೇವೆ ರಹದಾರಿ ಮಾಡಿಕೊಡಲಿದೆ. ಅಷ್ಟೇ ಅಲ್ಲದೇ ಬೀದರ್ ಭಾಗದ ಉದ್ಯಮ, ಕೃಷಿ ಉತ್ಪನ್ನಗಳನ್ನು ದಕ್ಷಿಣ ಭಾಗಕ್ಕೆ ಸಾಗಿಸಲು ಉಪಯೋಗವಾಗಲಿದೆ. ಹಾಸನ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ ಭಾಗದ ಕೃಷಿ ಉತ್ಪನ್ನಗಳ ಸಾಗಣೆ, ಉದ್ಯಮ ಬಲಪಡಿಸಲು ಈ ಮಾರ್ಗದಿಂದ ನೆರವಾಗಲಿದೆ ಎನ್ನುವ ಅಭಿಪ್ರಾಯವನ್ನು ಮೈಸೂರು ಇನ್ಫ್ರಾ ಹಬ್(mysuru infrahub) ವ್ಯಕ್ತಪಡಿಸಿದೆ.
ಈಗಾಗಲೇ ಕಲ್ಯಾಣ ಪಥ ಮಾರ್ಗದಡಿ ರಸ್ತೆಗಳನ್ನು ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಅದೇ ರೀತಿ ರೈಲುಗಳನ್ನು ಆರಂಭಿಸುವ ಪ್ರಸ್ತಾವನೆಯನ್ನು ಸಲ್ಲಿಸಿವೆ. ಅದು ಪ್ರಗತಿ ಕಂಡಿಲ್ಲ. ಕರ್ನಾಟಕದವರೇ ವಿ.ಸೋಮಣ್ಣ ಅವರು ರೈಲ್ವೆ ರಾಜ್ಯ ಸಚಿವರಾಗಿರುವುದರಿಂದ ಈ ಎರಡು ಜಿಲ್ಲಾ ಕೇಂದ್ರಗಳ ರೈಲು ಸಂಚಾರ ಜಾರಿಗೊಳಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.