Indian Railways: ತುಮಕೂರು ನಂತರ ಹಾವೇರಿಯಲ್ಲೂ ಈಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲುಗಡೆ
Indian Railways: ಬಹುದಿನಗಳ ಬೇಡಿಕೆಯಂತೆ ಹಾವೇರಿ ನಗರದಲ್ಲಿ ಇನ್ನು ಮುಂದೆ ವಂದೇ ಭಾರತ್ ರೈಲು ನಿಲುಗಡೆಯಾಗಲಿದೆ. ಈ ಸೇವೆಗೆ ಶುಕ್ರವಾರದಂದು ಚಾಲನೆ ನೀಡಲಾಗಿದೆ.

Indian Railways: ಬೆಂಗಳೂರು ಹಾಗೂ ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಿದ ಬಳಿಕ ಈಗ ಕನಕದಾಸರ ನಾಡು, ಸಂತ ಶಿಶುನಾಳ ಷರೀಫರ ಬೀಡು, ಯಾಲಕ್ಕಿ ಹಾರದ ತವರು ಹಾವೇರಿಯಲ್ಲೂ ನಿಲುಗಡೆ ಆರಂಭಿಸಲಾಗಿದೆ. ಹಾವೇರಿ- ಗದಗ ಸಂಸದರಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿರಂತರ ಒತ್ತಡದ ಪ್ರಯತ್ನವಾಗಿ ಹಾವೇರಿಯಲ್ಲಿ ನಿಲುಗಡೆ ಸೇವೆಯನ್ನು ಶುಕ್ರವಾರ ಆರಂಭಿಸಲಾಯಿತು. ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ರೈಲು ಸಂಖ್ಯೆ 20662 ಧಾರವಾಡ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ನಿಲುಗಡೆಗೆ ಹಸಿರು ನಿಶಾನೆ ತೋರಿಸಿದರು.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಮಾತನಾಡಿ, ನಾನು ಲೋಕಸಭೆಗೆ ಆಯ್ಕೆಯಾದ ಮೇಲೆ ಹಲವಾರು ರೈಲ್ವೆ ಯೋಜನೆಗಳ ಬಗ್ಗೆ ಸಭೆ ಮಾಡುತ್ತಿದ್ದೇವು. ಹಲವಾರು ಓವರ್ ಬ್ರಿಡ್ಜ್, ಅಂಡರ್ ಬ್ರಿಡ್ಜ್ ಮಾಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವು ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲ್ಲಿಸಬೇಕೆಂಬ ಬೇಡಿಕೆ ಇತ್ತು. ಪ್ರತಿ ನಿತ್ಯ ನೂರಾರು ಜನ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಹಾವೇರಿ, ಬ್ಯಾಡಗಿ, ರಾಣೆಬೆನ್ನೂರಿನಿಂದ ಪ್ರತಿ ದಿನ ಹತ್ತು ಸಾವಿರ ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಅದನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ತಿಳಿಸಿದೆ. ಜಿಲ್ಲಾ ಕೇಂದ್ರವಾದ ಹಾವೇರಿಗೆ ವಂದೇ ಭಾರತ ರೈಲು ನಿಲುಗಡೆ ಮಾಡಬೇಕೆಂದು ಕೇಳಿದೆ. ಅವರು ಮಾಡುವುದಾಗಿ ಹೇಳಿದರು. ಅದರಂತೆ ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಯಾಗುತ್ತಿದೆ ಎಂದು ಹೇಳಿದರು.
ಈ ಭಾಗದಲ್ಲಿ ಜನರು ರೈಲ್ವೆ ಕ್ರಾಂತಿ ನಿರೀಕ್ಷೆ ಮಾಡುತ್ತಿದ್ದಾರೆ. ರೈಲ್ವೆ ಸ್ಟೇಷನ್ ನಲ್ಲಿ ಎಸ್ಕಲೇಟರ್ ಬೇಕು. ರೈಲು ಬಹಳ ಹೊತ್ತು ನಿಲ್ಲದಿರುವುದರಿಂದ ಎಸ್ಕಲೇಟರ್ ಅಗತ್ಯವಿದೆ. ಇದಕ್ಕೆ ಪ್ರಯಾಣಿಕರು ಎಷ್ಟು ಎಂದು ಯೋಚಿಸಬೇಡಿ, ಇದೊಂದು ವಿಶೇಷ ಪ್ರಕರಣ ಅಂತ ತಿಳಿದು ಜಾರಿ ಮಾಡಿ, ರಾಣೆಬೆನ್ನೂರಿನ ರೈಲ್ವೆ ಸ್ಟೇಷನ್ ಅನ್ನು ಅಮೃತ ಯೋಜನೆ ಅಡಿಯಲ್ಲಿ ಅಭಿವೃದ್ಧಿಗೆ ತೆಗೆದುಕೊಂಡಿದ್ದು, ರಾಣೆಬೆನ್ನೂರು ಗುಡ್ ಶೆಡ್ ವಿಸ್ತರಣೆ ಮಾಡಬೇಕು. ರಾಣೆಬೆನ್ನೂರು ಬಹಳ ಮಹತ್ವದ ವಾಣಿಜ್ಯ ಕೇಂದ್ರ ಅಲ್ಲಿಂದ ಅಹಾರ ಪದಾರ್ಥಗಳನ್ನು ಬಾಂಗ್ಲಾ, ಶ್ರೀಲಂಕಾಕ್ಕೆ ರಪ್ತು ಮಾಡಲಾಗುತ್ತಿದೆ. ಅಲ್ಲದೆ ಆಮದು ಮಾಡಿಕೊಳ್ಳಲಾಗುತ್ತಿದೆ. ಬ್ಯಾಡಗಿ ರೈಲ್ವೆ ಸ್ಟೇಷನ್ ಅಭಿವೃದ್ಧಿ ಮಾಡಲು ತೆಗೆದುಕೊಂಡಿದ್ದಿರಿ, ಬ್ಯಾಡಗಿ ಅಂತಾರಾಷ್ಟ್ರೀಯ ಮೆಣಸಿಕಾಯಿ ಮಾರುಕಟ್ಟೆ. ಶಿಕಾರಿಪುರ, ರಾಣೆಬೆನ್ನೂರು ಹೊಸ ಲೈನು ಬರುತ್ತಿದೆ. ಶಿವಮೊಗ್ಗದಿಂದ ಶಿಕಾರಿಪುರದವರೆಗೆ ಅಭಿವೃದ್ದಿ ಆಗುತ್ತಿದೆ. ಅದಷ್ಟು ಬೇಗ ಭೂಸ್ವಾಧೀನ ಮಾಡಬೇಕು. ಒಂದು ತಿಂಗಳಲ್ಲಿ ಭೂಸ್ವಾಧೀನ ಕಾರ್ಯ ನಾವು ಮಾಡಿಸಿಕೊಡುತ್ತೇವೆ. ಶೇ 90 ರಷ್ಟು ಭೂಸ್ವಾಧಿನ ಪ್ರಕ್ರಿಯೆ ಮುಗಿದ ತಕ್ಷ ಕೆಲಸ ಪ್ರಾರಂಭಿಸಿ, ಯಲವಿಗಿ ಗದಗ 690 ಕೋಟಿ ರೂ. ಮಂಜೂರಾಗಿದೆ.280 ಕೋಟಿ ರೂ. ಬಿಡುಗಡೆಯಾಗಿದೆ. ಮೇ ತಿಂಗಳಿನಲ್ಲಿ ಎರಡಕ್ಕೂ ಅನುಮೊದನೆ ಕೊಟ್ಟು ಕೆಲಸ ಆರಂಭಿಸಬೇಕು ಎಂದು ಮನವಿ ಮಾಡಿದರು.
ರಾಣೆಬೆನ್ನೂರು, ಚಳ್ಳಗೇರಿ, ಹಾವೇರಿಗೆ ಟ್ರೇನ್ ನಿಲ್ಲಬೇಕು ಎಂಬ ಬೇಡಿಕೆ ಇದೆ. ಹಾವೇರಿಗೆ ಮೂರು ಟ್ರೈನ್ ನಿಲ್ಲಬೇಕಿದೆ. ಯಲವಿಗಿ ಮೊದಲ ಹಂತ ಗದಗ ಕಡೆಗೆ ಆಗಿದೆ. ಹಾವೇರಿಗೆ ಸಂಪರ್ಕ ಮಾಡಿದರೆ, ಅದು ಕೊಪ್ಪಳ, ವಾಡಿವರೆಗೂ ಆಗುತ್ತದೆ. ಯಲವಿಗಿಯಿಂದ ಹಾವೇರಿಗೆ ಎರಡನೇ ಹಂತದಲ್ಲಿ ತೆಗೆದುಕೊಳ್ಳಬೇಕು. ಯಲವಿಗಿ ಹತ್ತಿರ ಎರಡು ಕೆಳ ಸೇತುವೆ ಮಾಡಿದರೂ ಪ್ರಯೋಜನ ಆಗಿಲ್ಲ, ಮೇಲು ಸೇತುವೆ ಆಗಬೇಕು. ಎರಡು ಆರ್ ಒಬಿ ಬ್ಯಾಡಗಿ ಮುಖ್ಯ ಲೈನ್ , ಕಾಕೋಳದಿಂದ ಎರಡು ಆರ್ ಒಬಿ ಆಗಬೇಕು. ಆರ್ ಒಬಿ ಆರ್ ಯುಬಿ ಎಷ್ಟು ಕೊಟ್ಟರೂ ಮಾಡುತ್ತೇನೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ ಎಂದರು.
ಈ ಮನವಿಗೆ ಸ್ಪಂದಿಸಿದ ಸೋಮಣ್ಣ ಅವರು ಹಾವೇರಿ ನಿಲ್ದಾಣದಲ್ಲಿ ಶೀಘ್ರದಲ್ಲೇ ಎರಡು ಎಸ್ಕಲೇಟರ್‌ಗಳನ್ನು ಸ್ಥಾಪಿಸುವ ಭರವಸೆ ನೀಡಿದರು. ಜೊತೆಗೆ, ಹಾವೇರಿ-ಗದಗ ಪ್ರದೇಶದ ಎಲ್ಲಾ ಲೆವೆಲ್ ಕ್ರಾಸಿಂಗ್‌ಗಳನ್ನು ಬೇಗನೆ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಯ ವಿವರಗಳನ್ನು ಹಂಚಿಕೊಂಡ ಸೋಮಣ್ಣ, ದೇಶದಲ್ಲಿ ಈಗಾಗಲೇ 104 ವಂದೇ ಭಾರತ್ ರೈಲುಗಳು ಚಾಲನೆಯಲ್ಲಿವೆ ಎಂದು ತಿಳಿಸಿದರು, ಇದರಲ್ಲಿ 10 ರೈಲುಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೊರತಾಗಿ, ಬೆಳಗಾವಿ-ಹಾವೇರಿ-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಹಾಗೂ ಇನ್ನಷ್ಟು ಎರಡು ವಂದೇ ಭಾರತ್ ರೈಲುಗಳನ್ನು ರಾಜ್ಯಕ್ಕೆ ಪರಿಚಯಿಸುವ ಯೋಜನೆ ಇದೆ ಎಂದು ಹೇಳಿದರು. ಹೊಸ ಆಧುನಿಕ ಸೌಲಭ್ಯಗಳೊಂದಿಗೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳನ್ನು ಈ ಭಾಗಕ್ಕೂ ವಿಸ್ತರಿಸಲಾಗುವುದು ಎಂದು ಹೇಳಿದರು.
ಸೋಮಣ್ಣ ಅವರು ರೈಲ್ವೆ ಮತ್ತು ಕೇಂದ್ರ ಬಜೆಟ್ ಗಳನ್ನು ವಿಲೀನಗೊಳಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು, ಇದು ರೈಲ್ವೆ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು ಸಹಾಯ ಮಾಡಿದೆ. ಮೊದಲ ಹಂತದಲ್ಲಿ ಕರ್ನಾಟಕದಲ್ಲಿ ಕವಚ್ ಸುರಕ್ಷತಾ ವ್ಯವಸ್ಥೆಯನ್ನು ಸ್ಥಾಪಿಸಲು 1,900 ಮಾರ್ಗ ಕಿಲೋಮೀಟರ್ ಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಡಿಪಿಆರ್ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಯೋಜನೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಹಂಚಿಕೊಂಡ ಅವರು, ಹುಬ್ಬಳ್ಳಿ-ಮಾಯಕೊಂಡ ದ್ವಿಪಥ ಮಾರ್ಗವನ್ನು 1,674 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ದೇವರಗುಡ್ಡ-ಕರಜಗಿ ವಿಭಾಗದಲ್ಲಿ 55 ಕೋಟಿ ರೂ. ಹಾಗೂ ತೋಳಹುಣಸೆ-ದೇವರಗುಡ್ಡ ವಿಭಾಗದಲ್ಲಿ 56 ಕೋಟಿ ರೂ. ವೆಚ್ಚದ ವಿದ್ಯುತೀಕರಣ ಕಾಮಗಾರಿಗಳು ಪೂರ್ಣಗೊಂಡಿವೆ. ಜೊತೆಗೆ, ಹರಪನಹಳ್ಳಿ ಮಾರ್ಗವಾಗಿ ಕೊಟ್ಟೂರು-ಹರಿಹರ ನಡುವಿನ 65 ಕಿ.ಮೀ ಉದ್ದದ ಹೊಸ ರೈಲು ಮಾರ್ಗವು 4,676 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ ರೂ. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಶಿವಣ್ಣವರ್, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಸಿಸಿಎಂ/ಪಿಎಸ್ ಡಾ. ಅನೂಪ್ ದಯಾನಂದ ಸಾಧು, ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ಡಿ ಮತ್ತು ಇತರ ಹಿರಿಯ ರೈಲ್ವೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು.
