Bangalore Ernakulam Vande Bharat: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜುಲೈ 31ರಿಂದ ಸಂಚಾರ ಆರಂಭ
Kerala Vande bharat ಕರ್ನಾಟಕ ಕೇರಳದ ನಡುವೆ ಸಂಪರ್ಕ ವೃದ್ದಿಗೊಳಿಸುವ ಎರ್ನಾಕುಲಂ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್(Bangalore Ernakulam Vande Bharat) ರೈಲು ಸಂಚಾರ ಜುಲೈ 31ರಂದು ಆರಂಭಗೊಳ್ಳಲಿದೆ.

ಬೆಂಗಳೂರು: ಬಹು ನಿರೀಕ್ಷಿತ ಹಾಗೂ ಆರು ತಿಂಗಳಿನಿಂದ ನಾನಾ ಕಾರಣಗಳಿಂದ ಸಂಚಾರ ಆರಂಭಕ್ಕೆ ವಿಳಂಬವಾಗುತ್ತಿದ್ದ ಕರ್ನಾಟಕದ ರಾಜಧಾನಿ ನಗರಿ ಬೆಂಗಳೂರು ಹಾಗೂ ಕೇರಳದ ಪ್ರಮುಖ ವಾಣಿಜ್ಯ ನಗರಿ ಎರ್ನಾಕುಲಂ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭ ದಿನಾಂಕ ಕೊನೆಗೂ ನಿಗದಿಯಾಗಿದೆ. ಈ ರೈಲು ತಮಿಳುನಾಡಿನ ಎರಡು ಪ್ರಮುಖ ನಗರಿಗಳಾದ ಈರೋಡ್ ಹಾಗೂ ಸೇಲಂಗೂ ಸಂಪರ್ಕ ಕಲ್ಪಿಸಲಿದೆ. ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜುಲೈ 31ರಿಂದ ಸಂಚಾರ ಆರಂಭಿಸಲಿದೆ. ಇದು ಮೂರು ವಾರಗಳ ವಿಶೇಷ ರೈಲು ಆಗಿದ್ದು, ವಿಶೇಷ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಸುಮಾರು 500 ಕಿ.ಮೀ ದೂರದಲ್ಲಿರುವ ತ್ರಿಶೂರ್ ಮತ್ತು ಎರ್ನಾಕುಲಂ ಪ್ರದೇಶದಿಂದ ಬೆಂಗಳೂರಿಗೆ ಆಗಾಗ್ಗೆ ಪ್ರಯಾಣಿಸುವ ಜನರಿಗೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ಸಹಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಎರ್ನಾಕುಲಂ ಜಂಕ್ಷನ್ ನಿಂದ ಮಧ್ಯಾಹ್ನ 12:50 ಕ್ಕೆ ಹೊರಡುವ ಎಂಟು ಬೋಗಿಗಳ ಸೆಮಿ ಹೈಸ್ಪೀಡ್ ರೈಲು ರಾತ್ರಿ 10 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪಲಿದೆ. ಈ ಸೇವೆ ಎರ್ನಾಕುಲಂನಿಂದ ಪ್ರತಿ ವಾರ ಬುಧವಾರ, ಶುಕ್ರವಾರ ಮತ್ತು ಭಾನುವಾರ ಲಭ್ಯವಿರಲಿದೆ.
ಬೆಂಗಳೂರು ಕಂಟೋನ್ಮೆಂಟ್ನಿಂದ ಬೆಳಿಗ್ಗೆ 5:30 ಕ್ಕೆ ಹೊರಡುವ ರೈಲು ಮಧ್ಯಾಹ್ನ 2.20 ಕ್ಕೆ ಎರ್ನಾಕುಲಂ ತಲುಪಲಿದೆ. ಈ ಸೇವೆ ಪ್ರತಿ ವಾರ ಗುರುವಾರ, ಶನಿವಾರ ಮತ್ತು ಸೋಮವಾರ ಲಭ್ಯವಿರಲಿದೆ. ಈ ರೈಲು ಎರ್ನಾಕುಲಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ತ್ರಿಶೂರ್, ಪಾಲಕ್ಕಾಡ್, ಪೊದನೂರು, ತಿರುಪುರ್, ಈರೋಡ್ ಮತ್ತು ಸೇಲಂನಲ್ಲಿ ನಿಲುಗಡೆಯಾಗಲಿದೆ.
ಕೇರಳದ ಪ್ರಮುಖ ನಗರವಾದ ಎರ್ನಾಕುಲಂಗೆ ವಂದೇ ಭಾರತ್ ರೈಲು ಬೇಕು ಎನ್ನುವ ಬೇಡಿಕೆ ವರ್ಷಕ್ಕೂ ಹಳೆಯದ್ದು. ಕಳೆದ ದೀಪಾವಳಿ ಹಬ್ಬದ ವೇಳೆಯೇ ರೈಲು ಆರಂಭದ ಪ್ರಕಟಣೆಯಾದರೂ ಹಲವಾರು ಕಾರಣಗಳಿಂದ ಮುಂದೆ ಹೋಗಿತ್ತು.ಈ ವರ್ಷದ ಮಾರ್ಚ್‌ನಲ್ಲಿಯೂ ಆರಂಭಿಸುವ ಸಾಧ್ಯತೆಗಳಿದ್ದರೂ ಚುನಾವಣೆಯಿಂದ ಆಗಿರಲಿಲ್ಲ. ಈಗಾಗಲೇ ಕೇರಳದ ತಿರುವನಂತಪುರಂ, ಕಾಸರಗೋಡಿನಿಂದ ಮಂಗಳೂರಿಗೆ ವಂದೇ ಭಾರತ್ ರೈಲು ಇದೆ. ಈಗ ಇನ್ನೊಂದು ರೈಲು ಸೇವೆ ಬೆಂಗಳೂರಿಗೆ ಆರಂಭಗೊಂಡಂತೆ ಆಗಲಿದೆ.
ವಿದ್ಯಾರ್ಥಿಗಳು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ಅನೇಕ ಸರ್ಕಾರಿ ಅಧಿಕಾರಿಗಳು ಈ ಸೇವೆಯಿಂದ ಪ್ರಯೋಜನ ಪಡೆಯುತ್ತಾರೆ. ಬೆಂಗಳೂರಿನಿಂದ ಮೈಸೂರು, ಚೆನ್ನೈ, ಹೈದರಾಬಾದ್, ಧಾರವಾಡ ಮತ್ತು ಕೊಯಮತ್ತೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿವೆ. ಈಗ ಕೇರಳಕ್ಕೂ ಸಂಪರ್ಕ ದೊರೆತಂತಾಗಲಿದೆ.
ರೈಲಿನ ಪ್ರಯಾಣ ದರವನ್ನು ಆರಂಭದ ದಿನವೇ ಘೋಷಿಸುವ ಸಾಧ್ಯತೆಗಳಿವೆ.

ವಿಭಾಗ