Indian Railways: ಬೆಳಗಾವಿಯಿಂದ ಬೆಂಗಳೂರಿಗೆ ಬೆಳಿಗ್ಗೆ ವೇಳೆ ವಂದೇ ಭಾರತ್‌ ರೈಲು: ಶೀಘ್ರವೇ ವೇಳಾಪಟ್ಟಿ ಬಿಡುಗಡೆ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಬೆಳಗಾವಿಯಿಂದ ಬೆಂಗಳೂರಿಗೆ ಬೆಳಿಗ್ಗೆ ವೇಳೆ ವಂದೇ ಭಾರತ್‌ ರೈಲು: ಶೀಘ್ರವೇ ವೇಳಾಪಟ್ಟಿ ಬಿಡುಗಡೆ ನಿರೀಕ್ಷೆ

Indian Railways: ಬೆಳಗಾವಿಯಿಂದ ಬೆಂಗಳೂರಿಗೆ ಬೆಳಿಗ್ಗೆ ವೇಳೆ ವಂದೇ ಭಾರತ್‌ ರೈಲು: ಶೀಘ್ರವೇ ವೇಳಾಪಟ್ಟಿ ಬಿಡುಗಡೆ ನಿರೀಕ್ಷೆ

Indian Railways: ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್‌ ರೈಲು ಆರಂಭಿಸಿ ಉತ್ತರ ಕರ್ನಾಟಕದ ಭಾಗದ ಸಂಪರ್ಕ ಜಾಲವನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನ ನಡೆದಿದೆ.

ಬೆಳಗಾವಿ ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಸಂಚಾರ ಆರಂಭಿಸುವ ಚರ್ಚೆಗಳು ನಡೆದಿವೆ.
ಬೆಳಗಾವಿ ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಸಂಚಾರ ಆರಂಭಿಸುವ ಚರ್ಚೆಗಳು ನಡೆದಿವೆ.

Indian Railways: ಬಹುದಿನಗಳ ಬೇಡಿಕೆಯಾದ ಬೆಳಗಾವಿಯಿಂದ ಬೆಂಗಳೂರುವರೆಗಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಬೆಳಿಗ್ಗೆ ರೈಲು ಆರಂಭಕ್ಕೆ ಕೇಂದ್ರ ರೈಲ್ವೆ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಇದಲ್ಲದೇ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಚರಿಸುತ್ತಿರುವ ವಂದೇಭಾರತ್‌ ರೈಲು ಸೇವೆಯನ್ನು ಬೆಳಗಾವಿವರೆಗೂ ವಿಸ್ತರಿಸುವ ಕುರಿತು ಚರ್ಚೆಗಳು ನಡೆದಿದ್ದು, ಸಾಧಕ ಬಾಧಕಗಳ ಚರ್ಚೆಗಳು ನಡೆದಿವೆ. ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಮತ್ತು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ವಂದೇ ಭಾರತ್ ರೈಲು ಬೆಳಗ್ಗೆ ಬೆಳಗಾವಿಯಿಂದ ಹೊರಟು ಬೆಂಗಳೂರು ತಲುಪಿ ಮತ್ತೆ ಬೆಂಗಳೂರಿಂದ ಬೆಳಗಾವಿಗೆ ರಾತ್ರಿ ತಲುಪುವ ಹಾಗೆ ವೇಳೆ ನಿಗದಿಗೊಳಿಸಿ ಎಂದು ಸಚಿವ ಪ್ರಲ್ಹಾದ ಜೋಶಿ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವ ಕುರಿತು ಈ ಹಿಂದೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಬೆಳಗಾವಿ ಶಾಸಕ ಅಭಯ ಪಾಟೀಲ್ ಸಹ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಸ್ಥಳೀಯವಾಗಿಯೂ ಬೇಡಿಕೆ ಇದೆ. ಇದಲ್ಲದೇ ಬೆಳಗಾವಿಯಿಂದ ಬೆಂಗಳೂರಿಗೂ ರೈಲು ಬೆಳಿಗ್ಗೆ ಆರಂಭಿಸಿ ಮಧ್ಯಾಹ್ನ ಬೆಂಗಳೂರಿನಿಂದ ಹೊರಡುವ ರೈಲು ರಾತ್ರಿ ಬೆಳಗಾವಿಗೆ ಬರುವಂತೆ ಯೋಜಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರ ದೆಹಲಿ ಸಂಸದೀಯ ಕಚೇರಿಯಲ್ಲಿ ಸಚಿವದ್ವಯರು ಮತ್ತು ಮಾಜಿ ಸಿಎಂ ಸೇರಿ ಬೆಂಗಳೂರಿನಿಂದ ಬೆಳಗಾವಿವರೆಗೆ ವಂದೇ ಭಾರತ್ ರೈಲು ಸಂಚಾರ ಕುರಿತ ಸಾಧಕ-ಬಾಧಕ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು. ಬೆಂಗಳೂರು- ಬೆಳಗಾವಿ ವಂದೇ ಭಾರತ್ ರೈಲು ಸಂಚಾರ ಶೀಘ್ರ ಆರಂಭಿಸುವ ಭಾಗವಾಗಿಬೆಳಗಾವಿವರೆಗೆ ರೈಲು ಸೇವೆ ವಿಸ್ತರಣೆಗೆ ಸಚಿವ ಅಶ್ವಿನಿ ವೈಷ್ಣವ್ ಸಮ್ಮತಿ ಸೂಚಿಸಿದರು.

ಕೆಲ ದಿನಗಳ ಹಿಂದಷ್ಟೇ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿಯ ತಮ್ಮ ಲೋಕಸಭಾ ಕ್ಷೇತ್ರದ ಕಾರ್ಯಾಲಯದಲ್ಲಿ ನೈರುತ್ಯ ವಲಯದ ರೇಲ್ವೆ ಜನರಲ್ ಮ್ಯಾನೇಜರ್ , ಡಿಆರ್‌ಎಂ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬೆಂಗಳೂರಿನಿಂದ ಬೆಳಗಾವಿವರೆಗೆ ವಂದೇ ಭಾರತ್ ರೈಲು ಸಂಚಾರ ವಿಸ್ತರಣೆ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು. ಇದರ ಮುಂದುವರೆದ ಭಾಗವಾಗಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ರೈಲ್ವೆ ಅಧಿಕಾರಿಗಳು ತಾಂತ್ರಿಕ ಅಂಶಗಳನ್ನು ವಿಶ್ಲೇಷಿಸಿ, ಸಾಧಕ-ಬಾಧಕಗಳನ್ನು ಅವಲೋಕಿಸಿ ವರದಿ ಸಲ್ಲಿಸಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ವರದಿ ಪರಿಗಣಿಸಿ ಬೆಂಗಳೂರು- ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು ಸಂಚಾರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ತೋರಿದ್ದಾರೆ.

ವೇಳಾಪಟ್ಟಿ ಶೀಘ್ರ ಬಿಡುಗಡೆ

ಅತೀ ಶೀಘ್ರದಲ್ಲಿಯೇ ಬೆಳಗಾವಿ - ಬೆಂಗಳೂರಿನ ಮಧ್ಯೆ ವಂದೇ ಭಾರತ್ ರೈಲಿನ ಆರಂಭದ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ರೈಲು ಸಂಚಾರದಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಭಾಗದ ಜನತೆಗೆ ಬೆಂಗಳೂರು ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದ ಸಚಿವರು, ನಮ್ಮ ಮನವಿಗೆ ಸ್ಪಂದಿಸಿ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಲು ಸಮ್ಮತಿ ಸೂಚಿಸಿದ ಕೇಂದ್ರ ರೈಲ್ವೆ ಸಚಿವರಿಗೆ ಧನ್ಯವಾದ ಅರ್ಪಿಸುವೆ ಎಂದಿದ್ದಾರೆ.

ಈಗಾಗಲೇ ಬೆಳಗಾವಿಗೆ ವಂದೇ ಭಾರತ್‌ ರೈಲು ಸಂಪರ್ಕವಿದೆ. ಪುಣೆ ಬೆಳಗಾವಿ ನಡುವೆ ವಂದೇ ಭಾರತ್‌ ರೈಲು ಕಳೆದ ವರ್ಷವೇ ಆರಂಭಗೊಂಡಿದೆ. ಬೆಳಗಾವಿ ಬೆಂಗಳೂರು ನಡುವೆ ವಂದೇ ಭಾರತ್‌ಗೆ ಬೇಡಿಕೆ ಹೆಚ್ಚಿದೆ.

Whats_app_banner