Indian Railways: ಬೆಂಗಳೂರು ಭಾಗದಲ್ಲಿ ಸುಗಮ ರೈಲು ಸಂಚಾರಕ್ಕೆ ಸ್ವಯಂಚಾಲಿತ ಸಿಗ್ನಲಿಂಗ್ ಬಲ, ರೈಲ್ವೆ ಕಾರ್ಯಾಚರಣೆ ಸುಧಾರಣೆಗೆ 1043 ಕೋಟಿ
Indian Railways: ಭಾರತೀಯ ರೈಲ್ವೆಯ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಬೆಂಗಳೂರು ಭಾಗದಲ್ಲಿ ಪ್ರಮುಖ ಅಭಿವೃದ್ದಿ ಯೋಜನೆಗಳನ್ನು ಕೈಗೊಂಡಿದೆ.

Indian Railways: ಭಾರತೀಯ ರೈಲ್ವೆಯು ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ದಿಗೆ ಇನ್ನಿಲ್ಲದ ಒತ್ತು ನೀಡುತ್ತಿದೆ. ಬೆಂಗಳೂರು ಭಾಗದಲ್ಲಿ 1,043.63 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಮತ್ತು ಯಾರ್ಡ್ ಮರುವಿನ್ಯಾಸ ಯೋಜನೆಗಳು ಸುರಕ್ಷತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಹೊಂದಿವೆ. 485 ಕೋಟಿ ರೂ. ವೆಚ್ಚದಲ್ಲಿ 1,568 ರೂಟ್ ಕಿ ಮೀ ನಲ್ಲಿ ಕವಚ್ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದ್ದು, ಮತ್ತೊಂದು 2,148 ಕಿ ಮೀ ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ. 13.87 ಕಿ.ಮೀ ಡಬ್ಲಿಂಗ್ ಮತ್ತು 7.3 ಕಿ.ಮೀ ಹೊಸ ಮಾರ್ಗಗಳನ್ನು ನಿಯೋಜಿಸುವುದರೊಂದಿಗೆ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.
ಬೆಂಗಳೂರು ಬೈಪಾಸ್ ಮಾರ್ಗವನ್ನು (6.14 ಕಿ.ಮೀ) 248 ಕೋಟಿ ರೂ. ಅನುಮೋದಿಸಲಾಗಿದೆ. ಜೊತೆಗೆ 1,556 ಕಿ.ಮೀ ವ್ಯಾಪ್ತಿಯ 12 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ, ಇದರಲ್ಲಿ ಪ್ರಮುಖ ವಿಭಾಗಗಳನ್ನು ದ್ವಿಗುಣಗೊಳಿಸಲು ಮತ್ತು ಚತುಷ್ಪಥಗೊಳಿಸಲು ಯೋಜನೆಗಳಿವೆ. ಹೆಚ್ಚುವರಿ 1,128 ಕೋಟಿ ರೂ. ವೆಚ್ಚದಲ್ಲಿ 18 ರಸ್ತೆ ಮೇಲ್ಸೇತುವೆಗಳು (ROBs) ಮತ್ತು 12 ರಸ್ತೆ ಕೆಳ ಸೇತುವೆಗಳು (RuBs) ಮಂಜೂರು ಮಾಡಲಾಗಿದೆ. ರೈಲು ವೇಗವನ್ನು ಹೆಚ್ಚಿಸಲು, 200 ಟ್ರ್ಯಾಕ್ ಕಿ ಮೀ ನಲ್ಲಿ ವಿಭಾಗೀಯ ವೇಗವನ್ನು 100 ಕಿ.ಮೀ.ನಿಂದ 110 ಕಿ.ಮೀ.ಗೆ ಹೆಚ್ಚಿಸಲಾಗಿದೆ, ಹಾಗೂ ಕೆಎಸ್ಆರ್ ಬೆಂಗಳೂರು-ಜೋಲಾರ್ಪೆಟ್ಟೈ ವಿಭಾಗವನ್ನು 130 ಕಿ.ಮೀ ವೇಗದಲ್ಲಿ ಕಾರ್ಯಾಚರಣೆಗೆ ಅನುಮೋದಿಸಲಾಗಿದೆ ಎನ್ನುವುದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಶ್ರೀ ಅರವಿಂದ್ ಶ್ರೀವಾಸ್ತವ ನೀಡುವ ವಿವರಣೆ.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಪುನರಾಭಿವೃದ್ಧಿಗೆ 53 ನಿಲ್ದಾಣಗಳು ಒಳಗೊಂಡಿದ್ದು, 1,104 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ರೈಲ್ವೆ ಮಂಡಳಿಯು 40 ನಿಲ್ದಾಣಗಳಲ್ಲಿ 88 ಲಿಫ್ಟ್‌ಗಳನ್ನು ಮತ್ತು 32 ನಿಲ್ದಾಣಗಳಲ್ಲಿ 72 ಎಸ್ಕಲೇಟರ್‌ಗಳನ್ನು ಅನುಮೋದಿಸಿದೆ. 222 ಕೋಟಿ ರೂ. ವೆಚ್ಚದಲ್ಲಿ ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಎರಡು ಹೆಚ್ಚುವರಿ ಪ್ಲಾಟ್‌ಫಾರಂ ನಿರ್ಮಾಣ ಸೇರಿದಂತೆ ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸಲು 425 ಕೋಟಿ ರೂ.ಗಳ ಯೋಜನೆಗಳನ್ನು ಮಂಜೂರು ಮಾಡಲಾಗಿದೆ
ಕರ್ನಾಟಕ ಭಾಗದಲ್ಲಿ ವಿದ್ಯುದ್ದೀಕರಣ ಪ್ರಯತ್ನಗಳು ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿವೆ. 30 ರೂಟ್ ಕಿ ಮೀ ವಿದ್ಯುದ್ದೀಕರಣಗೊಂಡಿದ್ದು, ಎರಡು ಹೊಸ ಎಳೆತ ಉಪಕೇಂದ್ರಗಳನ್ನು ಸೇರಿಸಲಾಗಿದೆ. ಇದರಿಂದ ಒಟ್ಟು ವಿದ್ಯುದ್ದೀಕೃತ ಜಾಲವು 3,256 ರೂಟ್ ಕಿ ಮೀ ಗೆ ತಲುಪಿದ್ದು, ಇದು ಒಟ್ಟು ಜಾಲದ 88% ರಷ್ಟು ಆಗಿದೆ. 128 ಜೋಡಿ ರೈಲುಗಳನ್ನು ಎಲೆಕ್ಟ್ರಿಕ್ ಎಳೆತಕ್ಕೆ ಪರಿವರ್ತಿಸುವದೊರೊಂದಿಗೆ 170 ಕೋಟಿ ರೂ. ಮತ್ತು 32 ಲಕ್ಷ ಲೀಟರ್ ಡೀಸೆಲ್ ಉಳಿತಾಯವಾಗಿದೆ ಸೌರ ವಿದ್ಯುತ್ ಉಪಕ್ರಮಗಳ ಮೂಲಕ 382.65 ಕಿಲೋವ್ಯಾಟ್ ಶಕ್ತಿಯು ಕಾರ್ಯಾರಂಭಗೊಂಡಿದೆ, ಇದರಿಂದ ಒಟ್ಟು ಸಾಮರ್ಥ್ಯ 6.7 ಮೆಗಾವ್ಯಾಟ್‌ಗೆ ತಲುಪಿದ್ದು, 2.81 ಕೋಟಿ ರೂ. ಉಳಿತಾಯವಾಗಿದ್ದು. 90 ರೈಲುಗಳಲ್ಲಿ ಹೆಡ್-ಆನ್ ಜನರೇಷನ್ (ಎಚ್ಒಜಿ) ಅನುಷ್ಠಾನವು 124.62 ಲಕ್ಷ ಲೀಟರ್ ಡೀಸೆಲ್ ಉಳಿತಾಯಕ್ಕೆ ಕಾರಣವಾಗಿದೆ, ಇದರಿಂದ 91.54 ಕೋಟಿ ರೂ. ವೆಚ್ಚ ಕಡಿತವಾಗಿದೆ ಎನ್ನುತ್ತಾರೆ ಅವರು.
ನೈರುತ್ಯ ವಲಯವು ಪ್ರತಿದಿನ 214 ಮೇಲ್/ಎಕ್ಸ್ಪ್ರೆಸ್ ಮತ್ತು 174 ಪ್ಯಾಸೆಂಜರ್ ರೈಲುಗಳನ್ನು ನಿರ್ವಹಿಸುತ್ತಿದ್ದು, ಶೇ. 88.11 ಸಮಯಪ್ರಜ್ಞೆಯೊಂದಿಗೆ ಭಾರತೀಯ ರೈಲ್ವೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹೊಸ ಮೆಮು ಸೇವೆಯೊಂದಿಗೆ ಹತ್ತು ಜೋಡಿ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗಿದೆ. ಕುಂಭಮೇಳ 2025 ರ ಬೇಡಿಕೆಗಳನ್ನು ಪೂರೈಸಲು, ನೈರುತ್ಯ ರೈಲ್ವೆ ಒಂಬತ್ತು ರೇಕ್‌ಗಳು ಮತ್ತು 1,799 ಹೆಚ್ಚುವರಿ ಬೋಗಿಗಳನ್ನು ಸೇರಿಸಿದ್ದು, ಇದರಿಂದ 5.29 ಕೋಟಿ ರೂ. ಆದಾಯವನ್ನು ಗಳಿಸಲಾಗಿದೆ. ಡಿಸೆಂಬರ್ 2024 ರ ವೇಳೆಗೆ, 451 ವಿಶೇಷ ರೈಲುಗಳನ್ನು ಓಡಿಸಲಾಗಿದ್ದು, 179.95 ಕೋಟಿ ರೂ. ಆದಾಯ ಗಳಿಸಿದೆ ಮತ್ತು 14 ಆಸ್ಥಾ ವಿಶೇಷ ರೈಲುಗಳಿಂದ 2.27 ಕೋಟಿ ಆದಾಯ ಬಂದಿದೆ.
ನೈರುತ್ಯ ರೈಲ್ವೆ 32.38 ಮಿಲಿಯನ್ ಟನ್ ಸರಕುಗಳನ್ನು ಯಶಸ್ವಿಯಾಗಿ ಲೋಡ್ ಮಾಡಿದೆ. ಆಹಾರ ಧಾನ್ಯಗಳಲ್ಲಿ ಶೇ. 464.3, ಖನಿಜ ತೈಲದಲ್ಲಿ ಶೇ. 11.1, ರಸಗೊಬ್ಬರಗಳಲ್ಲಿ ಶೇ.9.7, ಮತ್ತು ಕಂಟೇನರ್ ಸರಕುಗಳಲ್ಲಿ ಶೇ. 8ಬೆಳವಣಿಗೆಯನ್ನು ಸಾಧಿಸಿದೆ. ರೈಲು ಕಾರ್ಯಾಚರಣೆಗಳಲ್ಲಿ ಶೇ2.6 ರಷ್ಟು ಇಂಟರ್ಚೇಂಜ್ ದಕ್ಷತೆಯ ಸುಧಾರಣೆಯೊಂದಿಗೆ ಪ್ರಗತಿ ಕಾಣಿಸಿದೆ, ಇದರ ಫಲವಾಗಿ ಪ್ರತಿದಿನ ಸರಾಸರಿ 57 ರೈಲುಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎನ್ನುವುದು 76 ನೇ ಗಣರಾಜ್ಯೋತ್ಸವ ಭಾಗವಾಗಿ ನೀಡುವ ವಿವರಣೆ.
