ಮಲೆನಾಡಿಗೂ ಒಂದಾದರೂ ವಂದೇ ಭಾರತ್‌ ರೈಲು ಸಂಪರ್ಕ ಕೊಡಿ; ಶಿವಮೊಗ್ಗದಲ್ಲಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚಿದ ಕೂಗು-indian railways karnataka malnad center shimoga demand for vande bharat express train from 2 years kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಲೆನಾಡಿಗೂ ಒಂದಾದರೂ ವಂದೇ ಭಾರತ್‌ ರೈಲು ಸಂಪರ್ಕ ಕೊಡಿ; ಶಿವಮೊಗ್ಗದಲ್ಲಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚಿದ ಕೂಗು

ಮಲೆನಾಡಿಗೂ ಒಂದಾದರೂ ವಂದೇ ಭಾರತ್‌ ರೈಲು ಸಂಪರ್ಕ ಕೊಡಿ; ಶಿವಮೊಗ್ಗದಲ್ಲಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚಿದ ಕೂಗು

ಶಿವಮೊಗ್ಗ ಜಿಲ್ಲೆ ಮಲೆನಾಡಿನ ಕೇಂದ್ರ ಸ್ಥಾನ. ಈ ಜಿಲ್ಲೆಗೂ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲು ಸೇವೆ ಒದಗಿಸಿ ಎನ್ನುವ ಬೇಡಿಕೆಗೆ ಬಲವಾಗಿದೆ.

ಶಿವಮೊಗ್ಗ ಭಾಗಕ್ಕೂ ವಂದೇ ಭಾರತ್‌ ರೈಲು ಸೇವೆ ನೀಡುವಂತೆ ಬೇಡಿಕೆ ಹೆಚ್ಚಿದೆ.
ಶಿವಮೊಗ್ಗ ಭಾಗಕ್ಕೂ ವಂದೇ ಭಾರತ್‌ ರೈಲು ಸೇವೆ ನೀಡುವಂತೆ ಬೇಡಿಕೆ ಹೆಚ್ಚಿದೆ.

ಶಿವಮೊಗ್ಗ: ಕರ್ನಾಟಕದ ಎಲ್ಲಾ ಭಾಗಗಳಿಗೂ ವಂದೇ ಭಾರತ್‌ ದೊರತಿದೆ. ಮಲೆನಾಡು ಭಾಗಕ್ಕೆ ಮಾತ್ರ ವಂದೇ ಭಾರತ್‌ ಸಂಪರ್ಕ ಇಲ್ಲ. ಅದರಲ್ಲೂ ಪ್ರವಾಸೋದ್ಯಮ ಚುಂಬಕ ಶಕ್ತಿ ಹೊಂದಿರುವ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೂ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲು ಬೇಕೇಬೇಕು ಎನ್ನುವ ಕೂಗು ಹೆಚ್ಚಿದೆ. ಕರ್ನಾಟಕದವೇ ಆಗಿರುವ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಮೇಲೆ ಒತ್ತಡ ಹೇರಿ ಬೆಂಗಳೂರು- ಶಿವಮೊಗ್ಗ ನಡುವೆ ವಂದೇ ಭಾರತ್‌ ರೈಲು ಆರಂಭಿಸುವ ಕುರಿತು ಚರ್ಚೆಗಳು ನಡೆದಿವೆ. ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಕೂಡ ಭಾರತೀಯ ರೈಲ್ವೆ ಮೇಲೆ ಒತ್ತಡ ಹೇರುತ್ತಿವೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೂಡ ಈ ನಿಟ್ಟಿನಲ್ಲಿ ಗಟ್ಟಿಯಾಗಿಯೇ ಪ್ರಯತ್ನ ಆರಂಭಿಸಿದ್ದಾರೆ.

ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ, ದಾವಣಗೆರೆ, ತುಮಕೂರು, ಯಾದಗಿರಿ, ರಾಯಚೂರಿಗೆ ವಂದೇ ಭಾರತ್‌ ರೈಲು ಸಂಪರ್ಕವಿದೆ. ಅದರಲ್ಲೂ ಬೆಂಗಳೂರಿನಿಂದಲೇ ಏಳು ರೈಲುಗಳ ಸಂಪರ್ಕವಿದೆ. ಮಂಗಳೂರು ಹಾಗೂ ಕೇರಳ- ಗೋವಾ ನಡುವೆ ಎರಡು ರೈಲುಗಳಿವೆ. ಪುಣೆ-ಹುಬ್ಬಳ್ಳಿ ನಡುವೆ ಹೊಸ ರೈಲು ಈಗಷ್ಟೇ ಶುರುವಾಗಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ರೈಲು ಸಂಪರ್ಕ ಇದೆಯಾದರೂ ಅರಸೀಕೆರೆ, ಬೀರೂರು, ಚಿಕ್ಕಜಾಜೂರಿನಲ್ಲಿ ನಿಲುಗಡೆಯಿಲ್ಲ. ಇದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಂದೇ ಭಾರತ್‌ ರೈಲು ಹಾದು ಹೋದರೂ ಈ ಭಾಗದವರ ಬಳಕೆಗೆ ಅವಕಾಶ ಆಗಿಲ್ಲ.

ಆದರೆ ಮಲೆನಾಡಿನ ಕೇಂದ್ರ ಸ್ಥಾನವಾದ ಶಿವಮೊಗ್ಗಕ್ಕೆ ವಂದೇ ಭಾರತ್‌ ಸಂಪರ್ಕವಿಲ್ಲ. ಶಿವಮೊಗ್ಗವು ಬೆಂಗಳೂರು ಮಾತ್ರವಲ್ಲದೇ ಮೈಸೂರು,. ಮಂಗಳೂರು, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಯೊಂದಿಗೆ ಸಂಪರ್ಕ ಹೊಂದಿದೆ. ಶಿವಮೊಗ್ಗ ಅಡಕೆ ಸಹಿತ ಪ್ರಮುಖ ಉತ್ಪನ್ನಗಳ ವ್ಯಾಪಾರ ಕೇಂದ್ರ ಮಾತ್ರವಲ್ಲ. ಅತ್ಯುತ್ತಮ ಪ್ರವಾಸಿ ತಾಣಗಳಿರುವ ಜಿಲ್ಲೆಯೂ ಹೌದು. ಶಿವಮೊಗ್ಗ ನಗರ, ಸಾಗರದ ಜೋಗ, ತೀರ್ಥಹಳ್ಳಿಯ ಆಗುಂಬೆ, ಹೊಸನಗರ ತಾಲ್ಲೂಕಿನ ಕೊಡಚಾದ್ರಿ, ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ, ಭದ್ರಾವತಿ ತಾಲ್ಲೂಕಿನ ಬಿಆರ್‌ಪಿಯಲ್ಲಿರುವ ಭದ್ರಾ ಜಲಾಶಯವೂ ಸೇರಿದೆ. ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ರೈಲ್ವೆ ಮಾರ್ಗವೂ ಬಲಗೊಂಡಿದೆ. ಶಿವಮೊಗ್ಗದಿಂದ ಸಾಗರ ತಾಲ್ಲೂಕಿನ ತಾಳಗುಪ್ಪವರೆಗೂ ರೈಲು ಮಾರ್ಗವಿದೆ. ಚೆನ್ನೈ., ಮೈಸೂರು ಸಹಿತ ಹಲವು ಕಡೆಗಳಿಗೆ ರೈಲು ಸಂಪರ್ಕವಿದೆ.

ಎಲ್ಲಾ ಕಡೆಗಳಿಗೂ ವಂದೇ ಭಾರತ್‌ ರೈಲು ಬಂದರೂ ಮಲೆನಾಡು ಭಾಗಕ್ಕೆ ವಂದೇ ಭಾರತ್‌ ಬೇಕೇ ಬೇಕು ಎನ್ನುವುದು ಸ್ಥಳೀಯರ ಆಗ್ರಹ. ಶಿವಮೊಗ್ಗ-ಯಶವಂತಪುರ ರೈಲನ್ನು ಆರಂಭಿಸಿದರೆ ಬೆಂಗಳೂರಿಗೆ ಸಂಪರ್ಕ ಬಲಗೊಳ್ಳಲಿದೆ. ಕಡೂರು ಇಲ್ಲವೇ ಬೀರೂರಿನಲ್ಲಿ ನಿಲುಗಡೆಗೆ ಅವಕಾಶ ನೀಡಿದರೆ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಸಿಗಲಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಯಶವಂತಪುರ- ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಸಿದ್ಧತೆ ನಡೆಯುತ್ತಿದೆ. ಸಮಯ ಹೊಂದಾಣಿಕೆಯ ಪ್ರಯತ್ನದ ಹಂತದಲ್ಲಿದ್ದು, ಶೀಘ್ರವೇ ಇದು ನಿರ್ಧಾರವಾಗಲಿದೆ ಎಂದು ಕೆಲ ದಿನಗಳ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಘೋಷಿಸಿದ್ದರು. ಆದರೆ ಅದು ಆರಂಭವಾಗಲಿಲ್ಲ.

ಶಿವಮೊಗ್ಗದಿಂದ ಬೆಂಗಳೂರಿಗೆ ಕಡಿಮೆ ಅಂತರವಿದೆ. ಅದು ಮೂರು ನೂರು ಕಿ.ಮಿ ಕೂಡ ಆಗೋಲ್ಲ. ವಂದೇ ಭಾರತ್‌ ರೈಲು ಓಡಿಸಲು ಕನಿಷ್ಠ 500 ಕಿ. ಮೀ. ದೂರವಾದರು ಬೇಕು. ಯಶವಂತಪುರ ತಾಳಗುಪ್ಪ ಮಾರ್ಗ ಆರಂಭಿಸಲು ಅಲ್ಲಿ ತಿರುವುಗಳಿವೆ. ಶಿವಮೊಗ್ಗದಿಂದ ಸಾಗರವರೆಗೂ ವಂದೇ ಭಾರತ್‌ ಆರಂಭಿಸಿದರೆ ಹೇಗೆ ಎನ್ನುವ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಈಗಾಗಲೇ ಪ್ರತಿ ಬಾರಿ ವಂದೇ ಭಾರತ್‌ ರೈಲುಗಳನ್ನು ಘೋಷಿಸಿದಾಗ ನಮ್ಮೂರಿಗೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕೊಡಿ ಎಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಇನ್ನೂ ಅನುಮತಿ ಮಾತ್ರ ಸಿಕ್ಕಿಲ್ಲ. ಮುಂದಿನ ಬಾರಿ ಖಂಡಿತ ಸಿಗಬಹುದು ಎನ್ನುವ ವಿಶ್ವಾಸದೊಂದಿಗೆ ಸುಮ್ಮನಾಗುತ್ತಿದ್ದಾರೆ.

mysore-dasara_Entry_Point