Indian Railways: ಮೈಸೂರು- ತಾಳಗುಪ್ಪ ರೈಲು ಸಂಚಾರದಲ್ಲಿ ವ್ಯತ್ಯಯ, ಬೆಂಗಳೂರು ಮಲ್ಲೇಶ್ವರಂ ನಿಲ್ದಾಣದಲ್ಲಿ ರೈಲು ನಿಲುಗಡೆ ಮುಂದುವರಿಕೆ
Indian Railways: ಮೈಸೂರು- ತಾಳಗುಪ್ಪ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಹಾಸನದ ಬಾಗೇಶಪುರ ಬಳಿ ಕಾಮಗಾರಿ ಇರುವುದರಿಂದ ಸಂಚಾರ ವಿಳಂಬವಾಗಲಿದೆ.

ಬೆಂಗಳೂರು: ಮೈಸೂರು ಹಾಗೂ ತಾಳಗುಪ್ಪ ರೈಲಿನ ಸಂಚಾರದಲ್ಲಿ ಮುಂದಿನ ವಾರ ವ್ಯತ್ಯಯವಾಗಲಿದೆ. ಹಾಸನ ಜಿಲ್ಲೆ ಬಾಗೇಶಪುರ ಯಾರ್ಡ್‌ನಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಮೈಸೂರು ತಾಳಗುಪ್ಪ ರೈಲು ಸಂಚಾರ ಸುಮಾರು ಒಂದು ಗಂಟೆ ವಿಳಂಬವಾಗಲಿದೆ. ಇದಲ್ಲದೇ ತಾಳಗುಪ್ಪ ಮೈಸೂರು ಡೈಲಿ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ನಗರದ ಮಲ್ಲೇಶ್ವರಂ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದ್ದು. ಈ ಸೌಲಭ್ಯ ಇನ್ನೂ ಎರಡು ತಿಂಗಳ ಕಾಲ ಮುಂದುವರೆಸಲಾಗುತ್ತದೆ ಎಂದು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈಲುಗಳ ನಿಯಂತ್ರಣ / ತಿರುವು
ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್‌ಪ್ರೆಸ್ 2025ರ ಜನವರಿ 27, ಫೆಬ್ರವರಿ 3 ಮತ್ತು 10 ರಂದು ಪ್ರಾರಂಭವಾಗುವ ಪ್ರಯಾಣವು ಬಾಗೇಶಪುರ ಯಾರ್ಡ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾರ್ಯದ ಕಾರಣ ಮಾರ್ಗದಲ್ಲಿ 50 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
ಉತ್ತರ ಮಧ್ಯ ರೈಲ್ವೆ, ರೈಲು ಸಂಖ್ಯೆ 22683 ಯಶವಂತಪುರ-ಲಕ್ನೋ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, 2025ರ ಜನವರಿ 27 ರಂದು ಪ್ರಾರಂಭವಾಗುವ ಪ್ರಯಾಣವನ್ನು ಓಹಾನ್ ಕ್ಯಾಬಿನ್, ಬಂದಾ, ಭೀಮಸೇನ್, ಕಾನ್ಪುರ್ ಸೆಂಟ್ರಲ್ ಮತ್ತು ಲಕ್ನೋ ನಿಲ್ದಾಣಗಳ ಮೂಲಕ ಚಲಿಸುವಂತೆ ಮಾರ್ಗ ಬದಲಿಸಲಾಗುತ್ತದೆ. ನೈನಿ ಜೂ., ಪ್ರಯಾಗ್‌ರಾಜ್, ಮಾ ಬೆಲ್ಹಾ ದೇವಿ ಧಾಮ್ ಪ್ರತಾಪಗಢ , ಅಮೇಥಿ ಮತ್ತು ರಾಯ್ ಬರೇಲಿ ನಿಲ್ದಾಣಗಳಲ್ಲಿ ಈ ರೈಲಿಗೆ ಅಂದು ನಿಲುಗಡೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಮಲ್ಲೇಶ್ವರಂನಲ್ಲಿ ರೈಲು ತಾತ್ಕಾಲಿಕ ನಿಲುಗಡೆ ಮುಂದುವರಿಕೆ
ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಈ ಹಿಂದೆ ಮಲ್ಲೇಶ್ವರಂ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿತ್ತು, ಈ ಸೌಲಭ್ಯವನ್ನು , 2025ರ ಮಾರ್ಚ್ 31 ರವರೆಗೆ ಮುಂದುವರಿಸಲಾಗುತ್ತಿದೆ.
ರೈಲುಗಳ ಸಂಚಾರ ಭಾಗಶಃ ರದ್ದು
1. ಜನವರಿ 28 ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ಹಾಸನ ಮತ್ತು ಮೈಸೂರು ನಿಲ್ದಾಣಗಳ ಮಧ್ಯ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಹಾಸನದಲ್ಲಿ ಕೊನೆಗೊಳ್ಳುತ್ತದೆ.
2. ಜನವರಿ 29 ರಂದು ರೈಲು ಸಂಖ್ಯೆ 56268 ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು ಮೈಸೂರಿನ ಬದಲು ಹಾಸನದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಈ ರೈಲು ಮೈಸೂರು ಮತ್ತು ಹಾಸನ ನಡುವೆ ಭಾಗಶಃ ರದ್ದಾಗಿದೆ.
3. ಜನವರಿ 28 ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರಿನ ಬದಲು ಹಾಸನದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಈ ರೈಲು ಮೈಸೂರು ಮತ್ತು ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
4. ಜನವರಿ 29 ರಂದು ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಹಾಸನ ಮತ್ತು ಮೈಸೂರು ನಡುವೆ ಭಾಗಶಃ ರದ್ದುಗೊಂಡಿದೆ. ಈ ರೈಲು ಹಾಸನದಲ್ಲಿ ಕೊನೆಗೊಳ್ಳುತ್ತದೆ.
ರೈಲುಗಳ ನಿಯಂತ್ರಣ
1. ಜನವರಿ 26 ರಂದು ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಡೈಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್ ಪ್ರೆಸ್ ರೈಲುಗಳನ್ನು ಮಾರ್ಗ ಮಧ್ಯದಲ್ಲಿ 45 ನಿಮಿಷಗಳ ಕಾಲ ಸಂಚಾರವನ್ನು ನಿಯಂತ್ರಿಸಲಾಗುವುದು.
2.ಜನವರಿ 29 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16207 ಯಶವಂತಪುರ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿತವಾಗಲಿದೆ.
