Indian Railways: ಬೆಂಗಳೂರಿನಿಂದ 2 ನಗರಗಳಿಗೆ ಸೆಮಿ ಹೈ ಸ್ಪೀಡ್ ನಮೋ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ, ಯಾವ ನಗರಗಳಿಗೆ ಈ ಸೌಲಭ್ಯ
Indian Railways Namo Bharat Train ಕರ್ನಾಟಕದಲ್ಲೂ ಸೆಮಿ ಹೈ ಸ್ಪೀಡ್ ನಮೋ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಸಿದ್ದತೆ ನಡೆದಿದ್ದು. ಬೆಂಗಳೂರಿನಿಂದ ಮೈಸೂರು ಹಾಗೂ ತುಮಕೂರು ನಗರಗಳಿಗೆ ಈ ರೈಲುಗಳು ಸಂಚರಿಸಲು ಯೋಜಿಸಲಾಗುತ್ತಿದೆ.
ಬೆಂಗಳೂರು: ಭಾರತೀಯ ರೈಲ್ವೆಯಲ್ಲಿ ಬದಲಾವಣೆಯ ಮನ್ವಂತರವೇ ಶುರುವಾಗಿರುವ ನಡುವೆ ಕರ್ನಾಟಕಕ್ಕೂ ಇದರ ಲಾಭ ಸಿಗುತ್ತಿದೆ. ಈಗಾಗಲೇ ಗುಜರಾತ್‌ನಲ್ಲಿ ಆರಂಭಗೊಂಡಿರುವ ಹೈ ಸ್ಪೀಡ್ ನಮೋ ಭಾರತ್ ಎಕ್ಸ್‌ಪ್ರೆಸ್ ರೈಲು ಕರ್ನಾಟಕದಲ್ಲೂ ಸಂಚರಿಸಿಲಿವೆ. ಬೆಂಗಳೂರಿನಿಂದ ಎರಡು ನಗರಗಳಿಗೆ ಈ ರೈಲು ಸೇವೆಯನ್ನು ಆರಂಭಿಸಲು ಸಿದ್ದತೆಗಳು ನಡೆದಿವೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿಗೆ ಭೇಟಿ ನೀಡಿ ಹೈ ಸ್ಪೀಡ್ ನಮೋ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಶೀಲಿಸಿದರು. ನಮೋ ಭಾರತ್ ರೈಲುಗಳನ್ನು ಪ್ರಸ್ತುತ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ನಲ್ಲಿ ತಯಾರಿಸಲಾಗುತ್ತಿದ್ದು. ಅಂತಿಮ ರೂಪ ನೀಡಲಾಗುತ್ತಿದೆ.
ಬೆಂಗಳೂರಿನಿಂದಲೂ ಸೆಮಿ ಹೈ ಸ್ಪೀಡ್ ನಮೋ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸುವ ಬೇಡಿಕೆ ಇತ್ತು. ಇದಕ್ಕೆ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನಿಂದ ತುಮಕೂರು ಹಾಗೂ ಬೆಂಗಳೂರಿನಿಂದ ಮೈಸೂರು ನಡುವೆ ಈ ರೈಲುಗಳನ್ನು ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ.
ಶೀಘ್ರದಲ್ಲೇ ಬೆಂಗಳೂರಿನಲ್ಲಿ ನಮೋ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು. ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರು ನಡುವೆ ಈ ಸೆಮಿ ಹೈಸ್ಪೀಡ್ ರೈಲುಗಳನ್ನು ಪರಿಚಯಿಸಲು ಸಚಿವಾಲಯ ಪರಿಶೀಲನೆ ನಡೆಸಿದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಂಗಳೂರು ದೊಡ್ಡ ಹಂತದಲ್ಲಿ ಬೆಳೆಯುತ್ತಿದೆ ಮತ್ತು ಟೆಕ್ ರಾಜಧಾನಿಯಲ್ಲಿ ರೈಲು ಸಾರಿಗೆಯನ್ನು ದಕ್ಷಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸಬ್ ಅರ್ಬನ್ ರೈಲು ಯೋಜನೆಯ ಜೊತೆಗೆ, ನಗರದಲ್ಲಿ ಹೊಚ್ಚ ಹೊಸ ನಮೋ ಭಾರತ್ ರೈಲುಗಳನ್ನು ಪರಿಚಯಿಸಲು ನಾವು ಯೋಜಿಸುತ್ತಿದ್ದೇವೆ. ನಾವು ಪ್ರಸ್ತುತ ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರು ನಡುವೆ ನಮೋ ಭಾರತ್ ರೈಲುಗಳನ್ನು ಪ್ರಾರಂಭಿಸಲು ಯೋಚಿಸುತ್ತಿದ್ದೇವೆ, ಇದು ರಾಜಧಾನಿ ಮತ್ತು ಸುತ್ತಮುತ್ತಲಿನ ನಗರಗಳ ನಡುವಿನ ಸಾರಿಗೆಯನ್ನು ಸುಲಭಗೊಳಿಸುತ್ತದೆ. ಕರ್ನಾಟಕದ ರಾಜಧಾನಿಯಲ್ಲಿ ಹೆಚ್ಚುತ್ತಿರುವ ದಟ್ಟಣೆಗೆ ಹೊಸ ಯೋಜನೆಗಳು ಉತ್ತಮ ಪರಿಹಾರವಾಗಿದೆ ಎನ್ನುವುದು ಅಶ್ವಿನಿ ವೈಷ್ಣವ್ ವಿವರಣೆ.
ಮಧ್ಯಮ ವರ್ಗದ ಜನರು ರೈಲು ಪ್ರಯಾಣವನ್ನು ತೆಗೆದುಕೊಳ್ಳುವಾಗ ಅವರಿಗೆ ಅಂತಿಮವಾಗಿ ಉತ್ತಮ ಸೌಕರ್ಯವನ್ನು ಒದಗಿಸುವ ಗುರಿಯನ್ನು ಭಾರತೀಯ ರೈಲ್ವೆ ಹೊಂದಿದೆ. ಈ ರೈಲುಗಳ ಶುಲ್ಕವು ಎಲ್ಲರಿಗೂ ಕೈಗೆಟುಕುವಂತೆ ಇರುತ್ತದೆ. ಇದರಲ್ಲೂ ಸುರಕ್ಷತೆಯು ನಮ್ಮ ಮೊದಲ ಆದ್ಯತೆಯಾಗಿದೆ. ಯಾವುದೇ ಅಪಾಯದ ಬಗ್ಗೆ ಲೋಕೋ ಪೈಲಟ್ ಅನ್ನು ಎಚ್ಚರಿಸುವ ಕವಚ್ ವ್ಯವಸ್ಥೆಯೂ ಇದರಲ್ಲಿ ಇರಲಿದೆ.. ಈ ರೈಲುಗಳು ವಿಶ್ವದ ಅತ್ಯುತ್ತಮ ರೈಲುಗಳಿಗೆ ಹೊಂದಿಕೆಯಾಗಲಿದೆ " ಎಂದು ಬೆಂಗಳೂರಿನಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ಅನ್ನು ಅನಾವರಣಗೊಳಿಸಿದ ನಂತರ ಅಶ್ವಿನಿ ವೈಷ್ಣವ್ ಹೇಳಿದರು.
ಭುಜ್ ಮತ್ತು ಅಹಮದಾಬಾದ್ ನಡುವಿನ 'ನಮೋ ಭಾರತ್ ರಾಪಿಡ್ ರೈಲು' ಎಂದು ಮರುನಾಮಕರಣ ಮಾಡುವ ಭಾರತದ ಮೊದಲ ವಂದೇ ಮೆಟ್ರೋ ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಹಸಿರು ನಿಶಾನೆ ತೋರಿದ್ದರು. ವರದಿಗಳ ಪ್ರಕಾರ, ಅಹಮದಾಬಾದ್-ಭುಜ್ ನಮೋ ಭಾರತ್ ರಾಪಿಡ್ ರೈಲು ಸೇವೆಯು ಒಂಬತ್ತು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಗಂಟೆಗೆ 110 ಕಿಲೋಮೀಟರ್ ಗರಿಷ್ಠ ವೇಗದಲ್ಲಿ 5 ಗಂಟೆ 45 ನಿಮಿಷಗಳಲ್ಲಿ 360 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ಬೆಂಗಳೂರಿನಿಂದ ತುಮಕೂರಿಗೆ ಈ ರೈಲು ಆರಂಭಿಸಿ ಇತರೆಡೆಗೂ ವಿಸ್ತರಿಸುವ ಸಾಧ್ಯತೆಯಿದೆ.
ಇದೇ ವೇಳೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರೈಲು ನಿಲ್ದಾಣ (ಹಾಲ್ಟ್) - ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಂಡೋ ಟ್ರೇಲಿಂಗ್ ತಪಾಸಣೆ ನಡೆಸಿದರು. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ರೈಲ್ವೆ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.