ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಚೆನ್ನೈ ಮೂರು ಜೋಡಿ ಎಕ್ಸ್‌ಪ್ರೆಸ್ ರೈಲುಗಳಿಗೆ ಎಲ್‌ಎಚ್‌ಬಿ ಬೋಗಿಗಳ ಸೇರ್ಪಡೆ
ರೈಲುಗಳ ಸುರಕ್ಷತೆ ಹಾಗು ಪ್ರಯಾಣದ ದೃಷ್ಟಿಯಿಂದ ಕರ್ನಾಟಕದಲ್ಲಿ ಸಂಚರಿಸುವ ಕೆಲವು ರೈಲುಗಳಿಗೆ ಅತ್ಯಾಧುನಿಕ ಲಿಂಕೆ ಹಾಫ್‌ಮನ್ ಬುಶ್ (ಎಲ್‌ಎಚ್‌ಬಿ) ಬೋಗಿಗಳನ್ನು ಅಳವಡಿಸಲಾಗುತ್ತಿದೆ.

ಬೆಂಗಳೂರು: ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ಮೂರು ಜೋಡಿ ಎಕ್ಸ್‌ಪ್ರೆಸ್ ರೈಲುಗಳ ಹಳೆಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಬೋಗಿಗಳ ಬದಲಿಗೆ ಸುಧಾರಿತ ಲಿಂಕೆ ಹಾಫ್‌ಮನ್ ಬುಶ್ (ಎಲ್‌ಎಚ್‌ಬಿ) ಬೋಗಿಗಳನ್ನು ಅಳವಡಿಸಲು ಹುಬ್ಬಳ್ಳಿ ಕೇಂದ್ರಿತ ನೈಋತ್ಯ ರೈಲ್ವೆಯು ನಿರ್ಧರಿಸಿದೆ. ಈ ನೂತನ ಬೋಗಿಗಳು ಪ್ರಯಾಣಿಕರಿಗೆ ಹೆಚ್ಚು ಭದ್ರತೆ ಮತ್ತು ಉತ್ತಮ ಪ್ರಯಾಣದ ಅನುಭವವನ್ನು ನೀಡಲಿವೆ. ಬೆಳಗಾವಿ -ಮೈಸೂರು, ಮೈಸೂರು- ಬೆಳಗಾವಿ, ಬಾಗಲಕೋಟೆ- ಮೈಸೂರು, ಮೈಸೂರು-ಬಾಗಲಕೋಟೆ, ಹುಬ್ಬಳ್ಳಿ ಹಾಗೂ ಚೆನ್ನೈ ನಡುವಿನ ರೈಲುಗಳಿಗೆ ಹೊಸ ವಿನ್ಯಾಸದ ಬೋಗಿಗಳು ಬರಲಿವೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.ಪರಿಷ್ಕೃತ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಕಾರ್ಯನಿರ್ವಹಿಸಲಿರುವ ರೈಲುಗಳ ವಿವರ ಹೀಗಿವೆ:
1. ರೈಲು ಸಂಖ್ಯೆ 17301 ಬೆಳಗಾವಿ - ಮೈಸೂರು ಎಕ್ಸ್‌ಪ್ರೆಸ್ ರೈಲು 2025 ರ ಜುಲೈ 1 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.
2. ರೈಲು ಸಂಖ್ಯೆ 17302 ಮೈಸೂರು - ಬೆಳಗಾವಿ ಎಕ್ಸ್‌ಪ್ರೆಸ್ ರೈಲು 2025 ರ ಜುಲೈ 4 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲು ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
3. ರೈಲು ಸಂಖ್ಯೆ 17307 ಮೈಸೂರು - ಬಾಗಲಕೋಟೆ ಎಕ್ಸ್‌ಪ್ರೆಸ್ ರೈಲು 2025 ರ ಜುಲೈ 2 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಕಾರ್ಯನಿರ್ವಹಿಸಲಿದೆ.
4.ರೈಲು ಸಂಖ್ಯೆ 17308 ಬಾಗಲಕೋಟೆ - ಮೈಸೂರು ಎಕ್ಸ್‌ಪ್ರೆಸ್ ರೈಲು 2025 ರ ಜುಲೈ 3 ರಿಂದ ಹೊಸ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಚಲಿಸಲು ಶುರು ಮಾಡಲಿದೆ.
ಈ ನವೀಕೃತ ಎಲ್‌ಎಚ್‌ಬಿ ರೇಕ್‌ನ ಸಂಯೋಜನೆಯು ಈ ಕೆಳಗಿನಂತಿರುತ್ತದೆ, 2 - ಎಸಿ 2-ಟೈರ್, 6 - ಎಸಿ 3-ಟೈರ್, 7 - ಸ್ಲೀಪರ್ ಕ್ಲಾಸ್, 4 - ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 2 - ಲಗೇಜ್/ಜನರೇಟರ್ ಕಾರ್‌ಗಳು.
ಈ ಹಿಂದೆ 22 ಬೋಗಿಗಳನ್ನು ಹೊಂದಿದ್ದ ಐಸಿಎಫ್ ರೇಕ್‌ನ ಬದಲಿಗೆ ಈಗ 21 ಹೊಸ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಲಾಗಿದೆ.
ಇದಲ್ಲದೆ, ಹುಬ್ಬಳ್ಳಿ ಮತ್ತು ಚೆನ್ನೈ ನಡುವಿನ ಜನಪ್ರಿಯ ರೈಲುಗಳಿಗೂ ಎಲ್‌ಎಚ್‌ಬಿ ಬೋಗಿಗಳನ್ನು ನೀಡಲಾಗುತ್ತಿದೆ:
5. ರೈಲು ಸಂಖ್ಯೆ 17313 ಎಸ್ಎಸ್ಎಸ್ ಹುಬ್ಬಳ್ಳಿ – ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು 2025 ರ ಜುಲೈ 2 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸೇವೆ ಸಲ್ಲಿಸಲಿದೆ.
6. ರೈಲು ಸಂಖ್ಯೆ 17314 ಎಂಜಿಆರ್ ಚೆನ್ನೈ ಸೆಂಟ್ರಲ್ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು 2025 ರ ಜುಲೈ 3 ರಿಂದ ನವೀಕೃತ ಎಲ್‌ಎಚ್‌ಬಿ ಬೋಗಿಗಳನ್ನು ಹೊಂದಿರಲಿದೆ.
ಈ ಎಲ್‌ಎಚ್‌ಬಿ ರೇಕ್‌ನ ಸಂಯೋಜನೆಯು ಈ ಕೆಳಗಿನಂತೆ ಇರುತ್ತದೆ: 1 - ಫಸ್ಟ್ ಕ್ಲಾಸ್ ಎಸಿ, 2 - ಎಸಿ 2-ಟೈರ್, 3 - ಎಸಿ 3-ಟೈರ್, 6 - ಸ್ಲೀಪರ್ ಕ್ಲಾಸ್, 4 - ಜನರಲ್ ಕ್ಲಾಸ್ ಬೋಗಿಗಳು,1 - ಲಗೇಜ್/ಜನರೇಟರ್ ಕಾರ್,1 - ಸೆಕೆಂಡ್ ಕ್ಲಾಸ್ ಲಗೇಜ್/ವಿಕಲಚೇತನರ ಕೋಚ್,1 - ಎಸಿ ಪ್ಯಾಂಟ್ರಿ ಕಾರ್. ಈ ಹಿಂದೆ 21 ಬೋಗಿಗಳನ್ನು ಹೊಂದಿದ್ದ ಐಸಿಎಫ್ ರೇಕ್‌ನ ಬದಲಿಗೆ ಈಗ 19 ಹೊಸ ಎಲ್‌ಎಚ್‌ಬಿ ರೇಕ್‌ಗಳನ್ನು ಅಳವಡಿಸಲಾಗಿದೆ.