ವಿಜಯಪುರ-ಯಾದಗಿರಿಗೆ ಆಲಮಟ್ಟಿ ಮಾರ್ಗವಾಗಿ ರೈಲು ಸಂಪರ್ಕ; ಮತ್ತೆ ಚಿಗುರೊಡೆಯಿತು ಬಹುಕಾಲದ ಬೇಡಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ವಿಜಯಪುರ-ಯಾದಗಿರಿಗೆ ಆಲಮಟ್ಟಿ ಮಾರ್ಗವಾಗಿ ರೈಲು ಸಂಪರ್ಕ; ಮತ್ತೆ ಚಿಗುರೊಡೆಯಿತು ಬಹುಕಾಲದ ಬೇಡಿಕೆ

ವಿಜಯಪುರ-ಯಾದಗಿರಿಗೆ ಆಲಮಟ್ಟಿ ಮಾರ್ಗವಾಗಿ ರೈಲು ಸಂಪರ್ಕ; ಮತ್ತೆ ಚಿಗುರೊಡೆಯಿತು ಬಹುಕಾಲದ ಬೇಡಿಕೆ

Train Route: ವಿಜಯಪುರ-ಯಾದಗಿರಿಗೆ ಆಲಮಟ್ಟಿ ಮಾರ್ಗವಾಗಿ ರೈಲು ಸಂಪರ್ಕ ಬೇಕು ಎಂಬ ಬೇಡಿಕೆ ಮತ್ತೊಮ್ಮೆ ಬಲವಾದ ಆಗ್ರಹ ಕೇಳಿಬಂದಿದೆ. ಮತ್ತೆ ಚಿಗುರೊಡೆದ ಬಹುಕಾಲದ ಬೇಡಿಕೆಯ ಹಿನ್ನೆಲೆ ಮತ್ತು ಸದ್ಯದ ಚಿತ್ರಣ ಇಲ್ಲಿದೆ.

ವಿಜಯಪುರ-ಯಾದಗಿರಿಗೆ ಅಲಮಟ್ಟಿ ಮಾರ್ಗವಾಗಿ ರೈಲು ಸಂಪರ್ಕ ಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. (ಸಾಂಕೇತಿಕ ಚಿತ್ರ)
ವಿಜಯಪುರ-ಯಾದಗಿರಿಗೆ ಅಲಮಟ್ಟಿ ಮಾರ್ಗವಾಗಿ ರೈಲು ಸಂಪರ್ಕ ಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. (ಸಾಂಕೇತಿಕ ಚಿತ್ರ)

Train Route: ಆಲಮಟ್ಟಿ ಯಾದಗಿರಿ ರೈಲು ಮಾರ್ಗದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ರಾಯಚೂರು ಸಂಸದ ಜಿ ಕುಮಾರ ನಾಯ್ಕ್ ಅವರನ್ನು ಭೇಟಿ ಮಾಡಿದ ಆಲಮಟ್ಟಿ ಹುಣಸಗಿ ಯಾದಗಿರಿ ರೈಲ್ವೆ ಹೋರಾಟ ಸಮಿತಿ ಸದಸ್ಯರು ಲಮಟ್ಟಿ ಯಾದಗಿರಿ ರೈಲು ಮಾರ್ಗ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ. ನಾವು ಯಾದಗಿರಿಯಲ್ಲಿ ಸಂಸದ ಕುಮಾರ ನಾಯ್ಕ್‌ ಅವರನ್ನು ಭೇಟಿ ಮಾಡಿದ್ದು, ಆಲಮಟ್ಟಿ ಯಾದಗಿರಿ ರೈಲು ಮಾರ್ಗ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಡಿಸೆಂಬರ್ 9 ರಂದು ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಲು ಜತೆಗೆ ಬನ್ನಿ ಎಂದು ಸಂಸದರು ಆಹ್ವಾನಿಸಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ದಂಡಿನ್ ತಿಳಿಸಿದ್ದಾಗಿ ದ ಹಿಂದೂ ವರದಿ ಮಾಡಿದೆ. ಇದರೊಂದಿಗೆ ವಿಜಯಪುರ - ಯಾದಗಿರಿ (ವಯಾ ಆಲಮಟ್ಟಿ) ರೈಲು ಮಾರ್ಗದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.

ಆಲಮಟ್ಟಿ ದಾರಿಯಾಗಿ ವಿಜಯಪುರ - ಯಾದಗಿರಿ ರೈಲು ಮಾರ್ಗಕ್ಕೆ ಬೇಡಿಕೆ

ಆಲಮಟ್ಟಿ ದಾರಿಯಾಗಿ ವಿಜಯಪುರ - ಯಾದಗಿರಿ ರೈಲು ಮಾರ್ಗದ ಬೇಡಿಕೆ ಹೊಸದಲ್ಲ. ಆಲಮಟ್ಟಿ - ಯಾದಗಿರಿ ರೈಲು ಮಾರ್ಗ 1930ರಲ್ಲಿ ಬ್ರಿಟಿಷ್ ಆಳ್ವಿಕೆ ಇದ್ದಾಗಲೇ ರೂಪುಗೊಂಡ ಯೋಜನೆ. ಸ್ವಾತಂತ್ರ್ಯ ಹೋರಾಟ ಶುರುವಾದ ಬಳಿಕ ಮೂಲೆಗುಂಪಾಯಿತು.

1) ಪ್ರಸ್ತಾವಿತ 154 ಕಿ.ಮೀ. ಉದ್ದದ ರೈಲು ಮಾರ್ಗವು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕವನ್ನು ಜೋಡಿಸುವಂಥದ್ದು. ಆಲಮಟ್ಟಿ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ, ಹುಣಸಗಿ, ಶೋರಾಪುರ, ಹಟ್ಟಿಗುದುರು, ವಡಗೇರಾ, ಯಾದಗಿರಿ ರೈಲು ಮಾರ್ಗ ಇದು. ಈ ರೈಲು ಮಾರ್ಗ ನಿರ್ಮಾಣ ನನಸಾದರೆ ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಪ್ರವಾಸೋದ್ಯಮ ಚೇತರಿಸಿಕೊಳ್ಳಬಹುದು ಎಂಬ ವಿಶ್ವಾಸ ಜನರಲ್ಲಿದೆ.

2) ಪ್ರಸ್ತುತ ವಿಜಯಪುರ ಮತ್ತು ಯಾದಗಿರಿ ನಡುವೆ ರೈಲು ಇದೆಯಾದರೂ, ಇದು 328 ಕಿ.ಮೀ. ಸುತ್ತು ಬಳಸಿ ಸಂಚರಿಸುವಂಥದ್ದು. ಹೋಟಗಿ, ಕಲಬುರಗಿ, ವಾಡಿ ಮೂಲಕ ಜನ ಸಂಚರಿಸಬೇಕು. ಆಲಮಟ್ಟಿ ಯಾದಗಿರಿ ಮಾರ್ಗ ನನಸಾದರೆ 165 ಕಿಮೀ ಸಂಚಾರ ಕಡಿಮೆಯಾಗಲಿದೆ.

3) ಆಲಮಟ್ಟಿ ಯಾದಗಿರಿ ರೈಲು ಮಾರ್ಗ ನನಸಾದರೆ ವಿಶಾಖಪಟ್ಟಣಂ ಮತ್ತು ಗೋವಾ ನಡುವಿನ ಅಂತರವೂ ಕಡಿಮೆಯಾಗಲಿದೆ.

4) 1933ರ ಜನವರಿ 1 ರಂದು ಅಂದಿನ ದಿ ಗ್ರೇಡ್ ರೈಲ್ ರೋಡ್‌ ಫೀಡರ್ ಲೈನ್ಸ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸಿ. ಸ್ಕೆಲ್ಟನ್ ಅವರು ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿ, ನೀಲನಕ್ಷೆ ತಯಾರಿಸಿದ್ದರು.

ಮುದ್ದೇಬಿಹಾಳದಲ್ಲೂ ಆಲಮಟ್ಟಿ - ಯಾದಗಿರಿ ರೈಲು ಮಾರ್ಗಕ್ಕೆ ಬೇಡಿಕೆ

ಈ ರೈಲು ಮಾರ್ಗ ಪ್ರಾರಂಭಿಸಲೇಬೇಕೆಂದು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಹಿಂದಿನ ಯುಪಿಎ ಸರ್ಕಾರವಾಗಲಿ, ಹಾಲಿ ಎನ್‌ಡಿಎ ಸರ್ಕಾರವಾಗಲಿ ಈ ಮಾರ್ಗ ನಿರ್ಮಾಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಪ್ರತಿವರ್ಷ ರೈಲ್ವೆ ಬಜೆಟ್‌ ವೇಳೆ ಸಂಬಂಧಿಸಿದ ರಾಜ್ಯ ಹಾಗೂ ಕೇಂದ್ರ ಸಚಿವರಿಗೆ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸುವ ಕಾರ್ಯ ಮಾತ್ರ ನಿಂತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಈ ಯೋಜನೆಗೆ ಚಾಲನೆ ನೀಡಬಹುದು ಎಂಬ ನಿರೀಕ್ಷೆ ಇದುವರೆಗೆ ಈಡೇರಿಲ್ಲ ಎಂದು ಮುದ್ದೇಬಿಹಾಳದ ಆಲಮಟ್ಟಿ ಯಾದಗಿರಿ ರೈಲ್ವೆ ಹೋರಾಟ ಸಮಿತಿ ಮುಖ್ಯಸ್ಥ ವಾಸುದೇವ ಶಾಸ್ತ್ರಿ ತಿಳಿಸಿದ್ದಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿದೆ. ಇನ್ನು, 2009 ಮತ್ತು 2011ರಲ್ಲಿ ಅಂದಿನ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಿಗೆ ಮುದ್ದೇಬಿಹಾಳದ ಆಲಮಟ್ಟಿ ಯಾದಗಿರಿ ರೈಲ್ವೆ ಹೋರಾಟ ಸಮಿತಿ ಎರಡು ಸಲ ದೆಹಲಿಗೆ ನಿಯೋಗ ತೆರಳಿ ಮನವಿ ಸಲ್ಲಿಸಿತ್ತು. ಅಂದು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ ಎಚ್ ಮುನಿಯಪ್ಪ ಅವರು, ವಿಶೇಷ ಅನುದಾನ ಬಿಡುಗಡೆ ಮಾಡಿಸಿ ರೈಲು ಮಾರ್ಗ ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಅದು ಈಡೇರಿಲ್ಲ. ಈ ಬಾರಿಯಾದರೂ ಇದು ಈಡೇರಬೇಕು ಎಂದು ವರದಿ ಹೇಳಿದೆ.

Whats_app_banner