ಕನ್ನಡದ ಸಾಹಿತಿ ಬಾನು ಮುಷ್ತಾಕ್ ಸಣ್ಣ ಕತೆಗಳ ಕೃತಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ, ಜಗತ್ತಿನ ಪ್ರಮುಖ ಭಾಷೆ ಕೃತಿ ಹಿಂದಿಕ್ಕಿದ ಗೌರವ
ಕನ್ನಡದ ಹಿರಿಯ ಸಾಹಿತಿ, ಹೋರಾಟಗಾರ್ತಿ ಬಾನು ಮುಷ್ತಾಕ್ ಅವರ ಅನುವಾದಿತ ಕೃತಿ ಹಾರ್ಟ್ ಲ್ಯಾಂಪ್‌ಗೆ ಪ್ರತಿಷ್ಠಿತ 2025ನೇ ಸಾಲಿನ ಬೂಕರ್ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಲಂಡನ್: ಕನ್ನಡದ ಹಿರಿಯ ಲೇಖಕಿ, ಹೋರಾಟಗಾರ್ತಿ ಬಾನು ಮುಷ್ತಾಕ್ ಅವರ ಅನುವಾದಿತ ಕೃತಿಯು ಸಾಹಿತ್ಯ ವಲಯದ ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿ ಎನ್ನಿಸಿರುವ 2025ನೇ ಸಾಲಿನ ಬೂಕರ್ ಪ್ರಶಸ್ತಿಗೆ ಅಯ್ಕೆಯಾಗಿದೆ. ಬಾನು ಮುಷ್ತಾಕ್ ಅವರ ಅನುವಾದಿತ ಹಾರ್ಟ್ ಲ್ಯಾಂಪ್ ಎನ್ನುವ ಸಣ್ಣ ಕತೆಗಳ ಅನುವಾದಿತ ಕೃತಿಗೆ ಈ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಬೂಕರ್ ಪ್ರಶಸ್ತಿಯೊಂದಿಗೆ 50 ಸಾವಿರ ಪೌಂಡ್ ಅಂದರೆ ಸುಮಾರು 57.28 ಲಕ್ಷ ರೂ.ನಗದು ಬಹುಮಾನವೂ ಬಾನು ಅವರಿಗೆ ಲಭಿಸಿದೆ. ಬಾನು ಮುಷ್ತಾಕ್ ಅವರು ಮೂರೂವರೆ ದಶಕಗಳ ಕಾಲ ಬರೆದಿರುವ ಸಣ್ಣ ಕಥೆಗಳನ್ನು ಆಧರಿಸಿ ಲೇಖಕಿ ದೀಪಾ ಭಾಸ್ತಿ ಅವರು ಇಂಗ್ಲೀಷ್‌ಗೆ ಹಾರ್ಟ್ ಲ್ಯಾಂಪ್ ಎನ್ನುವ ಹೆಸರಿನಲ್ಲಿ ಅನುವಾದಿಸಿದ್ದಾರೆ.
ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ 2025 ರ ಆಯ್ಕೆ ಸಮಿತಿ ಅಧ್ಯಕ್ಷರೂ ಹೆಚ್ಚು ಮಾರಾಟವಾದ ಬೂಕರ್ ಪ್ರಶಸ್ತಿ-ದೀರ್ಘಪಟ್ಟಿ ಮಾಡರ್ನ್ ಲೇಖಕ ಮ್ಯಾಕ್ಸ್ ಪೋರ್ಟರ್ ಅವರು ಮಂಗಳವಾರ, 2025 ರ ಮೇ 20 ರಂದು, ಅಂದರೆ ಭಾರತೀಯ ಕಾಲಮಾನ ಮಧ್ಯರಾತ್ರಿ 2.30 ರ ಹೊತ್ತಿಗೆ ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ನಡೆದ ಸಮಾರಂಭದಲ್ಲಿ ಘೋಷಣೆ ಮಾಡಿದರು.
ಕೆಲ ತಿಂಗಳಿನಿಂದ ಆಯ್ಕೆ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿ ನಡೆದಿತ್ತು.ಹದಿಮೂರು ಕೃತಿಗಳು ಬುಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿದ್ದು. ಈ ಪ್ರಶಸ್ತಿಯ 'ಲಾಂಗ್ ಲಿಸ್ಟ್'ಗೆ ಇದೇ ಮೊದಲ ಬಾರಿಗೆ ಕನ್ನಡದಿಂದ ಅನುವಾದಗೊಂಡ ಕೃತಿಯು ಆಯ್ಕೆಯಾಗಿತ್ತು ಈ ಪಟ್ಟಿಯಲ್ಲಿನ ಹದಿಮೂರು ಕೃತಿಗಳಲ್ಲಿ ಆರು ಕೃತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.ಕೊನೆಯ ಹಂತಕ್ಕೆ ಬಾನು ಮುಷ್ತಾಕ್ ಅವರ ಕೃತಿಯೂ ಆಯ್ಕೆಯಾಗಿತ್ತು. ಕೊನೆಯ ಹಂತದಲ್ಲೂ ಜಗತ್ತಿನ ಇತರೆ ಕೃತಿಗಳನ್ನು ಹಿಂದಿಕ್ಕಿ ಹಾರ್ಟ್‌ಲ್ಯಾಂಪ್ ಕೃತಿಗೆ ಅಂತರಾಷ್ಟ್ರೀಯ ಪ್ರ ಬೂಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಫ್ರೆಂಚ್, ಜಪಾನ್, ಇಟಾಲಿಯನ್ ಹಾಗೂ ಡ್ಯಾನಿಷ್ ಭಾಷೆಯ ಕೃತಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು.
1997ರಲ್ಲಿ ಅರುಂಧತಿರಾಯ್, 2006ರಲ್ಲಿ ಕಿರಣ್ ದೇಸಾಯಿ, 2022 ರಲ್ಲಿ ಗೀತಾಂಜಲಿ ಶ್ರೀ ಅವರು ಈ ಪ್ರಶಸ್ತಿಯನ್ನು ಪಡೆದಿದ್ದರು. ನಂತರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಭಾರತೀಯ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕನ್ನಡತಿ ಬಾನು ಮುಷ್ತಾಕ್. ವಿ.ಎಸ್.ನೈಪಾಲ್, ಸಲ್ಮಾನ್ ರಷ್ದೀ, ಅರವಿಂದ ಅಡಿಗ ಅವರಿಗೂ ಈ ಹಿಂದೆ ಈ ಪ್ರಶಸ್ತಿ ಲಭಿಸಿದೆ.
ಭಾರತದಲ್ಲಿನ ಅದರಲ್ಲೂ ದಕ್ಷಿಣ ಭಾರತದ ಪಿತೃಪ್ರಧಾನ ಸಮುದಾಯಗಳಲ್ಲಿನ ಮಹಿಳೆಯರ, ಯುವತಿಯರ ಜೀವನಗಾಥೆಯನ್ನು ಮುಖ್ಯ ವಿಷಯವಾಗಿಸಿ ರಚಿಸಿದ ಸಣ್ಣಕಥೆಗಳನ್ನೊಳಗೊಂಡ ಕೃತಿ ಹಾರ್ಟ್ ಲ್ಯಾಂಪ್. ಇದರಲ್ಲಿ ಹನ್ನೆರಡು ಕಥೆಗಳಿವೆ. ಬಾನು ಅವರು ಹೋರಾಟಗಾರ್ತಿ, ವಕೀಲರಾಗಿ ಸಮಾಜದೊಂದಿಗೆ ಬೆರೆತವರು. ಮಹಿಳಾ ಹಕ್ಕುಗಳ ಪ್ರಮುಖ ಪ್ರತಿಪಾದಕಿ ಮತ್ತು ಭಾರತದಲ್ಲಿ ಜಾತಿ ಮತ್ತು ಧಾರ್ಮಿಕ ದಬ್ಬಾಳಿಕೆಯ ವಿರುದ್ಧ ತಮ್ಮ ಬಳಿ ಸಹಾಯ ಕೋರಿ ಬಂದ ಮಹಿಳೆಯರ ಅನುಭವಗಳಿಗೆ ಕಥೆ ರೂಪ ನೀಡಿದ್ದಾರೆ. ಮನುಷ್ಯದ ಬದುಕಿನ ತಲ್ಲಣಗಳನ್ನು ಆಧರಿಸಿ ರಚಿಸಿರುವ ಕಥೆಗಳಿಗೆ ಇಂಗ್ಲೀಷ್‌ನ ಅನುವಾದಿತ ಕೃತಿ ಮೂಲಕವೂ ದೀಪಾ ಭಸ್ತಿ ಜೀವ ತುಂಬಿದ್ದಾರೆ. ಈ ಕಾರಣದಿಂದಲೇ ಈ ಕೃತಿ ಈ ಬಾರಿ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ತೀರ್ಪುಗಾರರು ತಿಳಿಸಿದ್ದಾರೆ.
ಭಾರತದ ಮೊದಲ ಅನುವಾದಕಿ ದೀಪಾ ಭಾಸ್ತಿ ಅವರಿಗೆ ಅಂತರ ರಾಷ್ಟ್ರೀಯ ಬೂಕರ್ ಪ್ರಶಸ್ತಿ ಈ ಮೂಲಕ ಲಭಿಸಿದೆ. ಸಾಹಿತ್ಯ ಲೋಕದಲ್ಲಿ ದೀಪಾಭಸ್ತಿ ಕೂಡ ಕೆಲ ವರ್ಷದಿಂದ ತಮ್ಮದೇ ಬರವಣಿಗೆ ಮೂಲಕ ಗುರುತಿಸಿಕೊಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ನೀಡಲಾಗುವ 50 ಸಾವಿರ ಪೌಂಡ್ ಬಹುಮಾನದ ಹಣವನ್ನು ಲೇಖಕರು ಮತ್ತು ಅನುವಾದಕರಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ.
ಸುಮಾರು ಆರೂವರೆ ಕೋಟಿ ಜನರು ಮಾತನಾಡುವ ಕನ್ನಡ ಭಾಷೆಯಿಂದ ಅನುವಾದಿಸಲಾದ 'ಹಾರ್ಟ್ ಲ್ಯಾಂಪ್' ಕೃತಿಯು ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಪುಸ್ತಕವಾಗಿದೆ. ದೀಪಾ ಭಾಸ್ತಿ ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಅನುವಾದಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಬುಕ್ ಬ್ರಹ್ಮ ವರದಿ ಮಾಡಿದೆ.
ವಿಭಾಗ