Invest Karnataka 2025: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬೆಂಗಳೂರು ಅರಮನೆ ಸಜ್ಜು, ಕರ್ನಾಟಕದ ಹಲವು ಜಿಲ್ಲೆಗಳಿಗೆ ಹೂಡಿಕೆ ಬಂಪರ್‌
ಕನ್ನಡ ಸುದ್ದಿ  /  ಕರ್ನಾಟಕ  /  Invest Karnataka 2025: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬೆಂಗಳೂರು ಅರಮನೆ ಸಜ್ಜು, ಕರ್ನಾಟಕದ ಹಲವು ಜಿಲ್ಲೆಗಳಿಗೆ ಹೂಡಿಕೆ ಬಂಪರ್‌

Invest Karnataka 2025: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬೆಂಗಳೂರು ಅರಮನೆ ಸಜ್ಜು, ಕರ್ನಾಟಕದ ಹಲವು ಜಿಲ್ಲೆಗಳಿಗೆ ಹೂಡಿಕೆ ಬಂಪರ್‌

Invest Karnataka 2025: ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ ಬೆಂಗಳೂರಿನಲ್ಲಿ ಫೆಬ್ರವರಿ 11ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ. ಇದರ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆಗೊಂಡಿದೆ.
ಬೆಂಗಳೂರಿನಲ್ಲಿ ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆಗೊಂಡಿದೆ.

Invest Karnataka 2025: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್‌ ಕರ್ನಾಟಕ 2025ಕ್ಕೆ ಆತಿಥ್ಯ ವಹಿಸಲು ಕರ್ನಾಟಕ ರಾಜ್ಯ ಸರ್ಕಾರವು ಸಜ್ಜಾಗಿದ್ದು, ಫೆಬ್ರವರಿ 11 ಮಂಗಳವಾರ ಮಧ್ಯಾಹ್ನ ನಡೆಯಲಿರುವ ಭವ್ಯ ಉದ್ಘಾಟನಾ ಸಮಾರಂಭವು ಅರಮನೆ ಮೈದಾನದಲ್ಲಿ ನಾಲ್ಕು ದಿನಗಳ ಹೂಡಿಕೆ ಉತ್ಸವಕ್ಕೆ ಮುನ್ನುಡಿ ಬರೆಯಲಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಕೈಗಾರಿಕಾ ಬೆಳವಣಿಗೆ, ನಾವೀನ್ಯತೆ ಮತ್ತು ಜಾಗತಿಕ ಸಹಯೋಗ ಬೆಳೆಸುವ ರಾಜ್ಯದ ಬದ್ಧತೆಗೆ ನಿದರ್ಶನವಾಗಿದೆ. ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜೊತೆಗಿನ ಒಪ್ಪಂದಗಳ ಮೂಲಕ ಶೈಕ್ಷಣಿಕ ಹಾಗೂ ಉದ್ಯಮದ ಪಾಲುದಾರಿಕೆಗಳನ್ನು ಬಲಪಡಿಸುವಂತಹ ಪ್ರಮುಖ ಉಪಕ್ರಮಗಳನ್ನು ಮುನ್ನಡೆಸುವಲ್ಲಿ ಸಚಿವ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕವು ಅತ್ಯಾಧುನಿಕ ಕೈಗಾರಿಕೆಗಳಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನದಲ್ಲಿ ಮುಂದುವರೆಯುವುದನ್ನು ಖಚಿತಪಡಿಸಿಕೊಳ್ಳಲು ಇವರು ಕ್ವಿನ್‌ ಸಿಟಿ ಉಪಕ್ರಮವನ್ನು ಮುನ್ನಡೆಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಶೃಂಗಸಭೆಯು, ವಿವಿಧ ಕೈಗಾರಿಕಾ ವಲಯಗಳಲ್ಲಿ ಜಾಗತಿಕ ಪಾಲುದಾರಿಕೆ ಬೆಳೆಸುವುದರ ಜೊತೆಗೆ, ನಾವೀನ್ಯತೆ ಮತ್ತು ಹೂಡಿಕೆ ಕೇಂದ್ರವಾಗಿರುವ ಕರ್ನಾಟಕದ ಮಹತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆ. ಈ ಹೂಡಿಕೆದಾರರ ಸಮಾವೇಶವು, ಕರ್ನಾಟಕವನ್ನು ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ. ನಾವೀನ್ಯತೆ, ಕೈಗಾರಿಕಾ ಪ್ರಗತಿ ಮತ್ತು ಜಾಗತಿಕ ಪಾಲುದಾರಿಕೆಗೆ ರಾಜ್ಯದಲ್ಲಿನ ಸೌಲಭ್ಯಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಲಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್, ವಿಜಯಪುರದಲ್ಲಿ ಸೋಲಾರ್ ಸೆಲ್ ಆಗ್ರೋ ಪಾರ್ಕ್

ಕರ್ನಾಟಕ ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸಲು ವಲಯವಾರು ಕೈಗಾರಿಕಾ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಆಧುನಿಕ ಫಾರ್ಮಾ ಪಾರ್ಕ್, ವಿಜಯಪುರದಲ್ಲಿ ಸೋಲಾರ್ ಸೆಲ್ ಪಾರ್ಕ್ ಮತ್ತು ಕೃಷಿ ಉತ್ಪನ್ನಗಳನ್ನು ಆಧರಿಸಿದ ಆಗ್ರೋ ಪಾರ್ಕ್, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಜಂಗಮನಕೋಟೆಯಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಡೀಪ್-ಟೆಕ್ ಪಾರ್ಕ್, ಡಾಬಸಪೇಟೆಗೆ ಸಮೀಪದ ಹನುಮಂತಪುರದಲ್ಲಿ ಮೆಗಾ ಲಾಜಿಸ್ಟಿಕ್ಸ್ ಪಾರ್ಕ್, ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಧಾರವಾಡದಲ್ಲಿ ಇ.ವಿ ಕ್ಲಸ್ಟರ್ಸ್ ಸ್ಥಾಪಿಸಲಾಗುವುದು ಎಂದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಸಮಾವೇಶದ ಮೂಲಕ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಬರುವುದು ಖಾತ್ರಿಯಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ 400ಕ್ಕೂ ಹೆಚ್ಚು ನವೋದ್ಯಮಗಳಿಗೆ ಆಸರೆ ನೀಡಲಿರುವ 200 ಎಕರೆ ವಿಸ್ತಾರದ ಸ್ಟಾರ್ಟಪ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದೆ. ಅಲ್ಲದೆ, ವಿಜಯಪುರದ ತಿಡಗುಂದಿಯಲ್ಲಿ 1,200 ಎಕರೆ ವಿಸ್ತೀರ್ಣದಲ್ಲಿ ಸೋಲಾರ್ ಸೆಲ್ ಮತ್ತು ಅಗ್ರೊ ಟೆಕ್ ಪಾರ್ಕ್ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಮಾವೇಶದಲ್ಲಿ ಭವಿಷ್ಯದ ತಯಾರಿಕಾ ವಲಯ, ಸಾರಿಗೆ ಮತ್ತು ಪರಿಸರಸ್ನೇಹಿ ಇಂಧನ ಉತ್ಪಾದನೆ ವಲಯಗಳಿಗೆ ವಿಶೇಷ ಗಮನ ಕೊಡಲಾಗುತ್ತಿದೆ. ಇದರ ಅಂಗವಾಗಿ 60ಕ್ಕೂ ಹೆಚ್ಚು ಸ್ಟಾರ್ಟಪ್ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಮತ್ತು ಅವುಗಳನ್ನು ಆಧರಿಸಿ ರೂಪಿಸಿರುವ ಪರಿಹಾರೋಪಾಯಗಳನ್ನು ಪ್ರದರ್ಶಿಸಲಿವೆ. ಇವುಗಳಲ್ಲಿ ಕಾರ್ಬನ್ ನ್ಯಾನೋಟ್ಯೂಬ್, ಅಟಾನಮಸ್ ಸಿಸ್ಟಮ್ಸ್, ಮಾನವರಹಿತ ಏರಿಯಲ್ ವೆಹಿಕಲ್ಸ್ ಮತ್ತು ಸುಧಾರಿತ ರೋಬೋಟಿಕ್ಸ್ ಮುಂತಾದವು ಸೇರಿವೆ ಎಂದು ಅವರು ತಿಳಿಸಿದ್ದಾರೆ.

ಸಮಾವೇಶದಲ್ಲಿ 19 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು. ಈ ಪೈಕಿ 10 ರಾಷ್ಟ್ರಗಳೊಂದಿಗೆ ಸುಸ್ಥಿರ ಆರ್ಥಿಕ ಬೆಳವಣಿಗೆಗೆ, ಹೂಡಿಕೆಗೆ ಇರುವ ಅವಕಾಶಗಳು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಕರ್ನಾಟಕದ ಸ್ಥಾನಮಾನ, ರಾಜ್ಯದಲ್ಲಿ ಮರುಬಳಕೆ ಇಂಧನ ಕ್ಷೇತ್ರದ ಭವಿಷ್ಯ, ಆರೋಗ್ಯ ಸೇವೆ ಮುಂತಾದ ನಿರ್ಣಾಯಕ ಕ್ಷೇತ್ರಗಳನ್ನು ಕುರಿತು ಚರ್ಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾಧಕ ಕಂಪನಿಗಳಿಗೆ ಪುರಸ್ಕಾರ

ಕರ್ನಾಟಕದ ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ನಿರ್ಣಾಯಕ ಕೊಡುಗೆ ನೀಡುತ್ತಿರುವ 14 ಉದ್ಯಮಗಳನ್ನು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಗುರುತಿಸಿ, ಪುರಸ್ಕರಿಸಲಾಗುತ್ತಿದೆ. ಇವುಗಳಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣೆ, ಆಟೋ/ಇ.ವಿ., ಜೈವಿಕ ತಂತ್ರಜ್ಞಾನ ಮತ್ತು ಜೀವವಿಜ್ಞಾನ ವಲಯಗಳ ಸಾಧಕ ಉದ್ಯಮಗಳು ಇರಲಿವೆ. ಈ ಕಾರ್ಯಕ್ರಮ ಫೆ.12ರ ಸಂಜೆ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.

`ತಮ್ಮ ಉದ್ಯಮಗಳಿಗೆ ಒಂದು ಬಾರಿಯ ಗರಿಷ್ಠ ಬಂಡವಾಳ ಹೂಡಿಕೆ ಮಾಡಿರುವ ಕಂಪನಿಗಳು ಮತ್ತು ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಅಭಿವೃದ್ಧಿಗೆ (ಆರ್ & ಡಿ) ಆದ್ಯತೆ ನೀಡಿರುವ ಉದ್ದಿಮೆಗಳನ್ನೂ ವಿಶೇಷವಾಗಿ ಪರಿಗಣಿಸಿ, ಪುರಸ್ಕಾರ ನೀಡಲಾಗುವುದು. ಹಾಗೆಯೇ, ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ 35ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಸ್ತರದ ಕೈಗಾರಿಕೆಗಳು, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಮಹಿಳಾ ಉದ್ಯಮಿಗಳು, ವಲಯವಾರು ಕೈಗಾರಿಕಾ ಉತ್ಕೃಷ್ಟತೆ ಸಾಧಿಸಿರುವ ಉದ್ಯಮಗಳಿಗೆ ಫೆ.13ರ ಸಂಜೆ ಪ್ರಶಸ್ತಿ ಪುರಸ್ಕಾರ ಕೊಡಲಾಗುವುದು. `ವೆಂಚುರೈಸ್’ ಉಪಕ್ರಮದಡಿ ಒಟ್ಟು 3 ಲಕ್ಷ ಡಾಲರ್ ಮೌಲ್ಯದ 9 ಬಹುಮಾನಗಳನ್ನು ಪ್ರದಾನ ಮಾಡಲಾಗುವುದು. ಇದರಲ್ಲಿ ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ 50 ಸಾವಿರ ಡಾಲರ್, 30 ಸಾವಿರ ಡಾಲರ್ ಮತ್ತು 20 ಸಾವಿರ ಡಾಲರ್ ನಗದು ಪುರಸ್ಕಾರವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Whats_app_banner