IPL 2025 Betting: ಐಪಿಎಲ್ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್; ಬೆಂಗಳೂರಲ್ಲಿ ಮೂವರ ಬಂಧನ
IPL 2025 Betting: ಐಪಿಎಲ್ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಕೇಸ್ ಸಂಬಂಧ ಬೆಂಗಳೂರಲ್ಲಿ ಮೂವರ ಬಂಧನವಾಗಿದೆ. ಬಂಧಿತರಿಂದ 85 ಲಕ್ಷ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಐಪಿಎಲ್ ಟಿಕೆಟ್ ಮಾರಾಟ, ಬೆಟ್ಟಿಂಗ್ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

IPL 2025 Betting: ಐಪಿಎಲ್ ಕ್ರಿಕೆಟ್ ನಡೆಯುತ್ತಿರುವಾಗಲೇ ಆನ್‌ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಧ್ರುವ್ ಮಿತ್ತಲ್, ರೋಹಿತ್ ರಂಜನ್ ಹಾಗೂ ವಿಜಯ್ ಕುಮಾರ್ ಬಂಧಿತ ಆರೋಪಿಗಳು. ಇವರಿಂದ ರೂ. 85 ಲಕ್ಷ ನಗದು ಹಾಗೂ ಬೆಟ್ಟಿಂಗ್ ಟೋಕನ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಐಪಿಎಲ್ ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್; ಬೆಂಗಳೂರಲ್ಲಿ ಮೂವರ ಬಂಧನ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 10 ರಂದು ಆರ್ ಸಿ ಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮಧ್ಯೆ ಪಂದ್ಯ ನಡೆಯುವಾಗಲೇ ಈ ಮೂವರು ಆರೋಪಿಗಳು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಇವರ ಖಚಿತ ಮಾಹಿತಿ ಆಧರಿಸಿ ನಗರದ ವಿವಿಧ ಭಾಗಗಳಲ್ಲಿ ಮೂವರನ್ನೂ ಮೂರು ಕಡೆ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ರೋಹಿತ್ ರಂಜನ್ ಎಂಬಾತ ಏಪ್ರಿಲ್ 10ರಂದು ನಡೆದ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತುಕೊಂಡೇ ಮೊಬೈಲ್ ಮೂಲಕ ಪಂಟರ್‌ಗಳಿಗೆ ಪ್ರತಿಯೊಂದು ಎಸೆತದ ಬಾಲ್ ಟು ಬಾಲ್ ಮಾಹಿತಿ ನೀಡುತ್ತಿದ್ದ. ಈ ಮಾಹಿತಿ ಆಧರಿಸಿ ಪಂಟರ್ ಗಳು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.
ಒಂದು ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸುವುದಕ್ಕೂ ಅದೇ ಪಂದ್ಯ ಟಿ.ವಿ ನೇರ ಪ್ರಸಾರವಾಗುವುದಕ್ಕೂ ಕೆಲವು ಸೆಕೆಂಡ್ ಗಳ ಅಂತರವಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಪ್ರತಿ ಬಾಲ್ ನ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಓವರ್, ಫೋರ್, ಸಿಕ್ಸ್, ನೋ ಬಾಲ್, ವೈಡ್ ಎಸೆತದ ಮೇಲೂ ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಮತ್ತೊಬ್ಬ ಆರೋಪಿ ಧ್ರುವ ಮಿತ್ತಲ್ ಎಂಬಾತ ಮನೆಯಲ್ಲೇ ಕುಳಿತು ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಮಿತ್ತಲ್ ನಿಂದ ಎರಡು ಮೊಬೈಲ್, ಗೇಮಿಂಗ್ ಆ್ಯಪ್ ನಲ್ಲಿದ್ದ ರೂ.63 ಲಕ್ಷ ಮೌಲ್ಯದ ಟೋಕನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಕ್ಕೂರಿನ ತನ್ನ ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವಿಜಯ್ ಕುಮಾರ್ ಎಂಬಾತನನ್ನೂ ಬಂಧಿಸಲಾಗಿದೆ. ಆತನಿಂದ ರೂ. 10 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಟಿಕೆಟ್ ಮಾರಾಟ, ಬೆಟ್ಟಿಂಗ್ ಮೇಎಲ ಪೊಲೀಸರ ಹದ್ದಿನ ಕಣ್ಣು
ಐಪಿಎಲ್ ಟಿಕೆಟ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರು ಮತ್ತು ಬೆಟ್ಟಿಂಗ್ ನಡೆಸುತ್ತಿರುವವರ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಒಂದು ವಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಐದು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು 1.15 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಪಾರ್ಕರ್, ರಿಲೆಕ್ಸ್, ದುಬೈ ಎಕ್ಸ್‌ಚೇಂಜ್, ಲೋಟಸ್ ಮತ್ತು ಬಿಗ್‌ಬುಲ್- 24/7 ಸೇರಿದಂತೆ ಹಲವಾರು ಸಂಶಯಾಸ್ಪದ ನಕಲಿ ವೆಬ್ ಸೈಟ್ ಗಳು ಮತ್ತು ಮೊಬೈಲ್ ಫೋನ್ ಅಪ್ಲಿಕೇಶನ್ ಗಳನ್ನು ಪತ್ತೆ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ರಿಕೆಟ್ ನಡೆಯುವಾಗ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳು ಈ ಅಪ್ಲಿಕೇಶನ್‌ಗಳಿಗೆ ಲಾಗಿನ್ ಆಗುತ್ತಾರೆ. ಟಾಸ್ ನಿಂದ ಹಿಡಿದು ಪಂದ್ಯ ಮುಗಿಯುವವರೆಗೆ ಪ್ರತಿಯೊಂದು ಬೆಳವಣಿಗೆ ಮೇಲೂ ಬೆಟ್ಟಿಂಗ್ಗೆ ಅಪ್ಲಿಕೇಶನ್ ಗಳು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿವೆ ಎಂದು ತಜ್ಞರು ಹೇಳುತ್ತಾರೆ.
ಈ ಜೂಜಾಟವು ಬಾಲ್-ಟು-ಬಾಲ್ ಅಥವಾ ಕೇವಲ ಒಂದು ಬಾಲ್ ಗಾಗಿ ನಡೆಯುವುದರಿಂದ, ಪಂಟರ್‌ಗಳು ಈ ಖಾತೆಗಳನ್ನು 10-20 ನಿಮಿಷಗಳಿಗಷ್ಟೇ ಖರೀದಿಸುತ್ತಾರೆ ಎಂದು ಸಿಸಿಬಿಯ ಪೊಲೀಸ್ ಅಧಿಕಾರಿಯಬ್ಬರು ಮಾಹಿತಿ ನೀಡಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
