ಐಪಿಎಲ್ ಆನ್‌ಲೈನ್ ಫ್ಯಾಂಟಸಿ ಲೀಗ್ ಸ್ಪರ್ಧೆ: ಬೆಂಗಳೂರಿನ ನಿವೃತ್ತ ಐಪಿಎಸ್ ಅಧಿಕಾರಿ ಪುತ್ರ 2ನೇ ಟಾಪರ್
ಬೆಂಗಳೂರು ಕೇಂದ್ರಿತ ಆರ್‌ಸಿಬಿಗೆ ಈ ಬಾರಿ ಐಪಿಎಲ್ ದಕ್ಕಿದೆ. ಈ ಬಾರಿಯ ಐಪಿಎಲ್ ವೇಳೆ ನಡೆಸಿದ ಐಪಿಎಲ್ ಫ್ಯಾಂಟಸಿ ಲೀಗ್‌ನಲ್ಲಿ ವಿಶ್ವದ 4,42,384 ಮಂದಿ ಹಿಂದಿಕ್ಕಿ ಬೆಂಗಳೂರಿನ ಯುವಕ ಎರಡನೇ ರ‍್ಯಾಂಕ್ ಪಡೆದಿರುವುದು ವಿಶೇಷ.

ಬೆಂಗಳೂರು: ಈಗಷ್ಟೇ ಮುಗಿದ 2025 ನೇ ಸಾಲಿನ ಐಪಿಎಲ್ ಪಂದ್ಯಾವಳಿಯಲ್ಲಿ ಈ ಬಾರಿ ಕಪ್ ಗೆದ್ದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಕಳೆದ ವಾರ ಮುಕ್ತಾಯಗೊಂಡ ಈ ಸೀಸನ್‌ನ ಐಪಿಎಲ್ ಪಂದ್ಯಾವಳಿ ಬೆಂಗಳೂರು ತಂಡ ಗೆದ್ದಿರುವುದು ಒಂದು ಕಡೆಯಾದರೂ ಬೆಂಗಳೂರಿನವರೇ ಆದ ಎಂಜಿನಿಯರ್ ಒಬ್ಬರು ಐಪಿಎಲ್ ಆನ್‌ಲೈನ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ಧಾರೆ. ಈ ಮೂಲಕ ವಿಶ್ವಾದ್ಯಂತ ಆನ್‌ಲೈನ್‌ನಲ್ಲಿ ಐಪಿಎಲ್ ಆಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಡೆಸಲಾಗಿದ್ದ ಸ್ಪರ್ಧೆಯಲ್ಲಿ ಬರೋಬ್ಬರಿ 4,42,384 ಮಂದಿ ಭಾಗಿಯಾಗಿದ್ದರು. ಇದರಲ್ಲಿ ಬೆಂಗಳೂರಿನವರಾದ ಶುಭಂ ಅಗರವಾಲ್ ಅವರಿಗೆ ಎರಡನೇ ಸ್ಥಾನ ಲಭಿಸಿದೆ. ಇದಕ್ಕಾಗಿ ಶುಭಂ ಅಗರವಾಲ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ( ಬಿಸಿಸಿಐ) ಹಲವು ಬಹುಮಾನಗಳನ್ನು ಘೋಷಣೆ ಮಾಡಿದೆ.
ಸತತ ಎರಡೂವರೆ ತಿಂಗಳ ಕಾಲ ಈ ಬಾರಿಯ ಐಪಿಎಲ್ ಪಂದ್ಯಾವಳಿಗಳು ಭಾರತದ ನಾನಾ ಭಾಗಗಳಲ್ಲಿ ನಡೆದಿದ್ದವು. ನಡುವೆ ಆಪರೇಷನ್ ಸಿಂದೂರ್ ಕಾರಣದಿಂದ ಕೆಲ ದಿನ ಪಂದ್ಯಗಳು ರದ್ದಾದವು. ವಾತಾವರಣ ತಿಳಿಗೊಳ್ಳುತ್ತಿದ್ದಂತೆ ಉಳಿದ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಆಡಿಸಲಾಗಿತ್ತು. ಈ ಬಾರಿ ಫೈನಲ್ ಪ್ರವೇಶಿಸಿದ್ದ ಬೆಂಗಳೂರು ಕೇಂದ್ರಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯಶಾಲಿಯಾಗಿತ್ತು. ಮೊದಲ ಬಾರಿಗೆ ಬೆಂಗಳೂರು ಈ ಟ್ರೋಫಿ ಗೆದ್ದು ಹದಿನೆಂಟು ವರ್ಷದ ಸತತ ಪ್ರಯತ್ನದ ಫಲ ಪಡೆದುಕೊಂಡಿತ್ತು.
ಇದರ ನಡುವೆಯೇ ಐಪಿಎಲ್ ಪಂದ್ಯಾಟಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಐಪಿಎಲ್ ಫ್ಯಾಂಟಸಿ ಲೀಗ್ ಅನ್ನು(IPL Fantasy League) ಆನ್‌ಲೈನ್‌ನಲ್ಲಿ ನಡೆಸಲಾಗಿತ್ತು. ಇದರಲ್ಲಿ ವಿಶ್ವದ ನಾನಾ ಭಾಗಗಳಲ್ಲಿ 4,42,384 ಆಸಕ್ತರು ಭಾಗಿಯಾಗಿದ್ದರು. ಇದರಲ್ಲಿ ಮಂಗಳೂರಿನ ಸುರತ್ಕಲ್‌ನ ನಿಟ್ಟೆಯಲ್ಲಿ ಬಿಟೆಕ್ ಪದವಿ ಮುಗಿಸಿ ನಂತರ ಬೆಂಗಳೂರಿನ ಐಐಎಂಬಿಯಲ್ಲಿ ಎಂಬಿಎ ಪದವಿ ಪಡೆದು ಎಂಜಿನಿಯರ್ ಆಗಿರುವ ಶುಭಂ ಅಗರವಾಲ್ ಭಾಗಿಯಾಗಿದ್ದರು. ಕ್ರಿಕೆಟ್‌ನಲ್ಲಿ ವಿಶೇಷ ಆಸಕ್ತಿ ಹೊಂದಿರುವ ಶುಭಂ ಈ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಅದರಲ್ಲೂ ಮೆಟಡೋರ್ಸ್( MATADORS) ಹೆಸರಿನಲ್ಲಿ ಆಟವಾಡಿದ್ದರು. ಆನ್‌ಲೈನ್ ಸ್ಟ್ರಾಟಜಿ ಗೇಮ್ ಎಂದೇ ಕರೆಯಲ್ಪಡುವ ಇಲ್ಲಿ ಶುಭಂ ಯೋಜಿತವಾಗಿ ಆಟವಾಡಿದ್ದರು. ಅವರಿಗೆ ಇಲ್ಲಿ ಎರಡನೇ ರ್ಯಾಂಕ್ ಲಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನನ್ನ ಮಗ ಶುಭಂ ಅಗರ್ವಾಲ್, ಬಿ.ಟೆಕ್, ಎನ್.ಐ.ಟಿ.ಕೆ, ಸುರತ್ಕಲ್, ಎಂಬಿಎ, ಐ.ಐ.ಎಂ.ಬಿ., ನಮ್ಮ ಬೆಂಗಳೂರಿನ ಹುಡುಗ, ಪ್ರಪಂಚದಾದ್ಯಂತ 4,42,384 ಸ್ಪರ್ಧಿಗಳು ಆಡಿದ ಐಪಿಎಲ್ ಫ್ಯಾಂಟಸಿ ಲೀಗ್‌ನಲ್ಲಿ ಸಾಧನೆಯನ್ನು ಹಂಚಿಕೊಳ್ಳಲು ತುಂಬಾ ಹೆಮ್ಮೆಪಡುತ್ತೇನೆ. ಅವನು ತನ್ನ ಫ್ಯಾಂಟಸಿ ತಂಡವನ್ನು 'ಮ್ಯಾಟಾಡರ್ಸ್' ಎಂದು ಹೆಸರಿಸಿ ಆಡಿದ. ಅವನ ಕುಶಾಗ್ರಮತಿ ಮತ್ತು ತಂತ್ರದಿಂದ ಈ ತೀವ್ರ ಪೈಪೋಟಿಯ ಆನ್‌ಲೈನ್ ತಂತ್ರದ ಆಟದಲ್ಲಿ 2 ನೇ ರ‍್ಯಾಂಕ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿ ಅಪರ ಪೊಲೀಸ್ ಮಹಾನಿರ್ದೇಶಕರಾಗಿ ನಿವೃತ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಸುನೀಲ್ ಅಗರವಾಲ್ ಹೇಳುತ್ತಾರೆ.
ಶುಭಂ ಅಗರವಾಲ್ ಈ ಸಾಧನೆಯು ಆರ್‌ಸಿಬಿ ಐಪಿಎಲ್ ಟ್ರೋಫಿಯನ್ನು ಗೆದ್ದಿರುವ ಸಮಯದಲ್ಲಿಯೇ ಆಗಿರುವುದು ಒಂದು ವಿಶೇಷ ಘಟನೆ ಎನ್ನಿಸಿದೆ. ಇದು ನಮ್ಮ ಕರ್ನಾಟಕ ರಾಜ್ಯ ಮತ್ತು ಬೆಂಗಳೂರು ನಗರಕ್ಕೆ ತುಂಬಾ ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಈ ಸ್ಪರ್ಧೆಯಲ್ಲಿ ಎರಡನೇ ಟಾಪರ್ ಆಗಿ ಹೊರ ಹೊಮ್ಮಿರುವ ಶುಭಂಗೆ ರಾಯಲ್ ಎನ್‌ಫೀಲ್ಡ್ ಬೈಕ್, ಆಟೋಗ್ರಾಫ್ ಇರುವ ಟಾಟಾ ಐಪಿಎಲ್ ಟೀಂ ಜರ್ಸಿ, ಆಟೋಗ್ರಾಫ್ ಇರುವ ಕ್ರಿಕೆಟ್ ಬ್ಯಾಟ್‌ಹಾಗೂ ಟಾಟಾ ಐಪಿಎಲ್ 2025ರ ಕ್ಯಾಪ್ಟನ್‌ಗಳ ಮೀಟ್‌ಗೆ ಆಹ್ವಾನ ದೊರೆಯಲಿದೆ.
ವಿಭಾಗ