ಕರ್ನಾಟಕದ ಪ್ರಭಾರ ಡಿಜಿ- ಐಜಿಪಿಯಾಗಿ ಐಪಿಎಸ್ ಅಧಿಕಾರಿ ಡಾ ಎಂ ಎ ಸಲೀಂ, ಡಾ ಅಲೋಕ್ ಮೋಹನ್ ನಿವೃತ್ತಿ
ಸಿಐಡಿ ಡಿಜಿಪಿ ಡಾ ಎಂ ಎ ಸಲೀಂ ಅವರನ್ನು ಕರ್ನಾಟಕದ ಪ್ರಭಾರ ಡಿಜಿ-ಐಜಿಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಡಾ ಅಲೋಕ್ ಮೋಹನ್ ಅವರನ್ನು ಹೊಣೆಯಿಂದ ಮುಕ್ತಗೊಳಿಸಿದೆ. ಕರ್ನಾಟಕ ಡಿಜಿ- ಐಜಿಪಿಯಾಗಿ ಐಪಿಎಸ್ ಅಧಿಕಾರಿ ಡಾ ಎಂಎ ಸಲೀಂ ನೇಮಕವಾಗಿದ್ದಾರೆ.

ಬೆಂಗಳೂರು: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿ ಬುಧವಾರ ಮುಕ್ತಾಯವಾಗಿದ್ದು, ಸಿಐಡಿ ಡಿಜಿಪಿ ಡಾ ಎಂಎ ಸಲೀಂ ಅವರನ್ನು ಪ್ರಭಾರ ಡಿಜಿ-ಐಜಿಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಪ್ರಕಟಿಸಿದೆ. ಸಂಜೆ ಡಾ ಎಂಎ ಸಲೀಂ ಅವರು ಹಂಗಾಮಿ ಡಿಜಿ-ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದರು.ಅಲೋಕ್ ಮೋಹನ್ ಅವರು ಇಂದು ಸೇವೆಯಿಂದ ನಿವೃತ್ತರಾಗಿದ್ದು, ಬೆಳಿಗ್ಗೆ ಅವರಿಗೆ ಬೀಳ್ಕೊಡುಗೆ ಕವಾಯತನ್ನು ಏರ್ಪಡಿಸಲಾಗಿತ್ತು. ಡಿಜಿ-ಐಜಿಪಿ ಅವರ ನಿರ್ಗಮನ ನಿರ್ಗಮನ ಸೂಚನೆಯಾಗಿ ಪ್ರಶಂಸನಾ ಸೇವಾ ಪರೇಡ್ ಸಹ ಆಯೋಜನೆಯಾಗಿತ್ತು.
ಬೆಂಗಳೂರು ನಗರದ ನೃಪತುಂಗ ರಸ್ತೆಯಲ್ಲಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೇವೆಯಿಂದ ನಿರ್ಗಮಿತ ಡಿಜಿಪಿ ಅವರು ನೂತನ ಡಿಜಿಪಿಯವರಿಗೆ ಅಧಿಕಾರ ಹಸ್ತಾಂತರಿಸಿದರು.
ಡಾ ಎಂಎ ಸಲೀಂ ಅವರ ನಿವೃತ್ತಿ ಅವಧಿ 2 ವರ್ಷಗಳಿಗಿಂತಲೂ ಕಡಿಮೆ ಇದೆ. ಸೇವಾ ಹಿರಿತನ ಆಧಾರದ ಮೇರೆಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಸಿಐಡಿ ಡಿಜಿಪಿ ಸಲೀಂ, ಸೈಬರ್‌ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಸೇರಿ ಏಳು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿದ್ದರು. ಆದರೆ ಹಿರಿತನದ ಮಾನದಂಡದಲ್ಲಿ ಡಿಜಿ-ಐಪಿಪಿ ಹುದ್ದೆಗೆ ಸಲೀಂ ಹಾಗೂ ಪ್ರಶಾಂತ್ ಮುಂಚೂಣಿಯಲ್ಲಿದ್ದರು. ಸರ್ಕಾರ ಈಗ ಡಾ ಎಂಎ ಸಲೀಂ ಅವರನ್ನು ಪ್ರಭಾರ ಡಿಜಿ-ಐಜಿಪಿಯಾಗಿ ನೇಮಕ ಮಾಡಿ ಆದೇಶ ಪ್ರಕಟಿಸಿದೆ.
ಹಂಗಾಮಿ ಡಿಜಿ-ಐಜಿಪಿ ನೇಮಕ ಯಾಕೆ?
ಕರ್ನಾಟಕ ಸರ್ಕಾರವು ಈಗಾಗಲೇ ನೂತನ ಡಿಜಿ-ಐಜಿಪಿ ಆಯ್ಕೆ ಸಂಬಂಧ 7 ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಕೇಂದ್ರ ಲೋಕಸೇವಾ ಆಯೋಗಕ್ಕೆ ಸರ್ಕಾರ ಶಿಫಾರಸು ಮಾಡಿದೆ. ಆದರೆ, ಯುಪಿಎಸ್‌ಸಿ ನೇಮಕಾತಿ ಅಂತಿಮಗೊಳಿಸದ ಕಾರಣ, ಮುಂದಿನ ಮೂರು ತಿಂಗಳು ಪ್ರಭಾರ ಡಿಜಿ-ಐಜಿಪಿಯಾಗಿ ಡಾಎಂಎ ಸಲೀಂ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ವಾಸ್ತವದಲ್ಲಿ ಅಲೋಕ್ ಮೋಹನ್ ಅವರು ಏಪ್ರಿಲ್ 30ರಂದು ನಿವೃತ್ತಿಯಾಗಬೇಕಾಗಿತ್ತು. ಆದರೆ, ಸರ್ಕಾರ ಅವರ ಸೇವಾವಧಿಯನ್ನು ಮೇ 21ರ ತನಕ ವಿಸ್ತರಿಸಿದ ಕಾರಣ ಅವರು ಇಂದು ನಿವೃತ್ತರಾದರು. ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಿದ ಸರ್ಕಾರ, ಹಂಗಾಮಿ ಡಿಜಿ-ಐಜಿಪಿಯಾಗಿ ಡಾ ಎಂಎ ಸಲೀಂ ಅವರನ್ನು ನೇಮಕ ಮಾಡಿ ಆದೇಶ ಪ್ರಕಟಿಸಿದೆ.
ಡಾ ಎಂಎ ಸಲೀಂ ಯಾರು? ಅವರ ಹಿನ್ನೆಲೆ
ನೂತನ ಪ್ರಭಾರ ಡಿಜಿ-ಐಜಿಪಿಯಾಗಿ ನೇಮಕವಾಗಿರುವ ಡಾ ಎಂಎ ಸಲೀಂ ಅವರು ತುಮಕೂರು ಜಿಲ್ಲೆಯವರು. ಮೂರು ದಶಕಗಳಿಂದ ಉತ್ತಮ ಕಾರ್ಯನಿರ್ವಹಣೆ ಮೂಲಕ ಹೆಸರು ಮಾಡಿದವರು. . ಕುಶಾಲನಗರ ಎಎಸ್ಪಿ, ಉಡುಪಿ, ಹಾಸನ ಎಸ್ಪಿ, ಮೈಸೂರು ನಗರ ಪೊಲೀಸ್ ಆಯುಕ್ತ, ದಾವಣಗೆರೆ ಐಜಿಪಿ, ಬೆಂಗಳೂರು ನಗರ ಸಂಚಾರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಪ್ರಭಾರ ಡಿಜಿ-ಐಜಿಪಿಯಾಗಿ ನೇಮಕವಾಗುವ ಮೊದಲು ಅವರು ಸಿಐಡಿ ಡಿಜಿಪಿಯಾಗಿ ಕೆಲಸ ಮಾಡುತ್ತಿದ್ದರು.