ಕನ್ನಡ ಸುದ್ದಿ  /  Karnataka  /  Issue Of Baseless Accusation Rohini Sindhuri Complained To Cs Against Ips Officer D Roopa

IAS vs IPS: 'ಆಧಾರ ರಹಿತ ಆರೋಪ' ವಿಚಾರ; ಐಪಿಎಸ್ ಅಧಿಕಾರಿ ಡಿ ರೂಪಾ ವಿರುದ್ಧ ಸಿಎಸ್ ಗೆ ದೂರು ನೀಡಿದ ರೋಹಿಣಿ ಸಿಂಧೂರಿ

ಐಪಿಎಸ್ ಅಧಿಕಾರಿ ಡಿ ರೂಪಾ ಅವರ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (ಫೋಟೋ-ANI)
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (ಫೋಟೋ-ANI)

ಬೆಂಗಳೂರು: ಐಎಎಸ್ ಹಾಗೂ ಐಪಿಎಸ್ ಮಹಿಳಾ ಅಧಿಕಾರಿಗಳು ನಡುವಿನ ಸಮರ ಅಂತಿಮ ಘಟ್ಟ ತಲುಪಿದ್ದು, ಐಪಿಎಸ್ ಅಧಿಕಾರಿ ಡಿ ರೂಪಾ ಅವರ ವಿರುದ್ಧ ರೋಹಿಣಿ ಸಿಂಧೂರಿ ಅವರು ಇಂದು ಸಿಎಸ್ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದಾರೆ.

ಬಳಿಕ ಮಾತನಾಡಿದ ರೋಹಿಣಿ ಸಿಂಧೂರಿ ಅವರು, ಡಿ ರೂಪಾ ಅವರು ತಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಎಸ್ ಅವರಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ತನ್ನ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಆಧಾರರಹಿತ, ಸುಳ್ಳು ಹಾಗೂ ವೈಯಕ್ತಿಕ ಆರೋಪ ಮಾಡಿರುವ ರೂಪಾ ಅವರು ಸೇವಾ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ರೂಪಾ ಮಾಡಿರುವ ಆರೋಪದ ಲಿಂಕ್​ಗಳನ್ನು ಲಗತ್ತಿಸಿರುವುದಾಗಿ ಅವರು ತಿಳಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳು, ನೌಕರರು ಮಾಧ್ಯಮದವರ ಮುಂದೆ ಮಾತನಾಡಬಾರದು ಅಂತ ನಿಯಮ ಇದೆ. ರೂಪಾ ಅವರು ಇಲ್ಲಸಲ್ಲದ ಆರೋಪ‌ ಮಾಡಿದ್ದಾರೆ. ಸಿಎಸ್‌ಗೆ ದೂರು ಕೊಡಲು ಬಂದಿದ್ದೇನೆ, ದೂರು ನೀಡಿದ್ದೇನೆ. ಅವರ ಕಾರ್ಯವ್ಯಾಪ್ತಿಯೇ ಬೇರೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ವೈಯಕ್ತಿಕ ಆರೋಪದ ಬಗ್ಗೆ ನನ್ನ ಗಂಡ‌ ಮಾತನಾಡಿದ್ದಾರೆ. ಹಾಗಾಗಿ ನಾನು ಮಾತನಾಡಿಲ್ಲ, ನಾನು ಸಿಎಸ್‌ಗೆ ವರದಿ ನೀಡಿದ್ದೇನೆ ಎಂದು ಹೇಳಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದೇನು?

ಮಾನಸಿಕ ಅಸ್ವಸ್ಥತೆ ಒಂದು ಬಹುದೊಡ್ಡ ಸಮಸ್ಯೆ. ಅದನ್ನು ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ಮೂಲಕ ಗುಣಪಡಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾನಸಿಕ ಅಸ್ವಸ್ಥತೆಗೆ ಒಳಗಾದರೆ, ಅದು ಸಮಾಜಕ್ಕೆ ಬಹುದೊಡ್ಡ ಅಪಾಯಕಾರಿ ಬೆಳವಣಿಗೆ.

ರೂಪಾ ಐಪಿಎಸ್ ಅವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನನ್ನ ಮೇಲೆ ವೈಯಕ್ತಿಕ ಹಗೆಯನ್ನ ಸಾಧಿಸಲು ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡಿರುವವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಐಪಿಎಸ್ ರೂಪಾ ಅವರಿಗೆ ಇದೊಂದು ಅಭ್ಯಾಸವಾಗಿ ಬಿಟ್ಟಿದೆ.

ಅವರು ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಹುದ್ದೆಗಳಲ್ಲಿ ಇದೇ ರೀತಿಯ ಆಧಾರ ರಹಿತ ಆರೋಪಗಳನ್ನು ಮಾಧ್ಯಮಗಳ ಗಮನ ಸೆಳೆಯುವ ಹಾಗೂ ತಾವು ದ್ವೇಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕವಾಗಿ ಹಗೆತನ ಸಾಧಿಸಲು ಕೀಳು ಮಟ್ಟದ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದ್ದಾರೆ.

ಅವರು ಯಾವಾಗಲೂ ಸುದ್ದಿಯಲ್ಲಿರಬೇಕು ಎನ್ನುವುದನ್ನು ಬಯಸುತ್ತಾರೆ. ಹಾಗೂ ಅದಕ್ಕೆ ಬೇಕಾದಂತಹ ಪೋಸ್ಟ್ ಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಪುಟಗಳಲ್ಲಿ ಹಾಕುವ ಮೂಲಕ ಸುದ್ದಿಯ ಕೇಂದ್ರ ಬಿಂದುವಾಗಲು ಯತ್ನಿಸುತ್ತಿದ್ದಾರೆ.

ಆ ಅಧಿಕಾರಿಗಳ ಹೆಸರನ್ನ ಬಹಿರಂಗಪಡಿಸಬೇಕು

ಸಾಮಾಜಿಕ ಮಾಧ್ಯಮ ಹಾಗೂ ವಾಟ್ಸಪ್ ಸ್ಟೇಟಸ್ ಗಳಿಂದ ಸ್ಕ್ರೀನ್ ಶಾಟ್ ಗಳ ಮೂಲಕ ಸಂಗ್ರಹಿಸಿರುವ ಫೋಟೋಗಳನ್ನು ನನ್ನ ತೇಜೋವಧೆ ಮಾಡಲು ರೂಪಾ ಐಪಿಎಸ್ ಅವರು ಬಳಸಿದ್ದಾರೆ. ಈ ಫೋಟೋಗಳನ್ನು ನಾನು ಕೆಲ ಅಧಿಕಾರಿಗಳಿಗೆ ಕಳುಹಿಸಿದ್ದೇನೆ ಎನ್ನುವ ಸುಳ್ಳು ಆರೋಪ ಮಾಡಿರುವ ಅವರು, ಸದರಿ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸುತ್ತೇನೆ.

ನನ್ನ ವಿರುದ್ಧ ಆರೋಪ ಮಾಡಿರುವ ರೂಪಾ ಐಪಿಎಸ್ ಅವರ ವಿರುದ್ಧ ಸರ್ವೀಸ್ ಕಂಡಕ್ಟ್ ರೂಲ್ಸ್ (ಸೇವಾ ನಡೆತೆ ನಿಮಯಗಳ) ಉಲ್ಲಂಘನೆಗಾಗಿ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ನಾನು ಸಕ್ಷಮ ಪ್ರಾಧಿಕಾರದ ಮುಂದೆ ದೂರು ಸಲ್ಲಿಸಿದ್ದೇನೆ. ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ರೂಪಾ ಐಪಿಎಸ್ ಅವರ ಮೇಲೆ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇನೆ.

ಇಂತಹ ಆಧಾರ ರಹಿತ ಆರೋಪಗಳಿಂದ ನಾನು ಸ್ವಲ್ಪವೂ ವಿಚಲಿತಳಾಗದೆ ಸರ್ಕಾರಿ ಅಧಿಕಾರಿಯಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮುಂದುವರೆಸುತ್ತೇನೆ ಎಂಬ ಅಂಶಗಳನ್ನು ಇಂತಹ ಕ್ಷಲ್ಲಕ ವ್ಯಕ್ತಿಗಳಿಂದ ಗಮನಕ್ಕೆ ತರಲು ಬಯಸುತ್ತೇನೆ ಎಂದಿದ್ದಾರೆ.

IPL_Entry_Point

ವಿಭಾಗ