Infosys Layoff: ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಿಂದ ಹೊಸದಾಗಿ ತರಬೇತಿಗೆ ಬಂದ ಉದ್ಯೋಗಿಗಳ ವಜಾ; ಕಾರ್ಮಿಕ ಇಲಾಖೆ ವಿಚಾರಣೆ
Infosys Layoff: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ತರಬೇತಿ ಹಂತದಲ್ಲಿದ್ದ ಐಟಿ ಉದ್ಯೋಗಿಗಳನ್ನು ನಿರೀಕ್ಷಿತ ಕಾರ್ಯಕ್ಷಮತೆ ತೋರದ ಆಧಾರದ ಮೇಲೆ ತೆಗೆದು ಹಾಕಿರುವುದು ಚರ್ಚೆ ಹುಟ್ಟು ಹಾಕಿದೆ.

Infosys Layoff: ಮೈಸೂರಿನಲ್ಲಿರುವ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನಲ್ಲಿ ತರಬೇತಿಗೆಂದು ಬಂದಿದ್ದ ಫ್ರೆಷರ್ಸ್ ಅಭ್ಯರ್ಥಿಗಳಲ್ಲಿ ಸುಮಾರು 500 ಮಂದಿಯನ್ನು ಏಕಾಏಕಿ ತೆಗೆದು ಹಾಕಿರುವುದು ತೀವ್ರ ವಿವಾದ ಸ್ವರೂಪ ಪಡೆದಿದೆ. ಕೋವಿಡ್ ಕಾಲದಲ್ಲಿ ನೇಮಕಗೊಂಡು ಎರಡು ವರ್ಷದ ಬಳಿಕ ಮೈಸೂರಿನಲ್ಲಿರುವ ಇನ್ಫೋಸಿಸ್‌ನ ಜಾಗತಿಕ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಆರಂಭಿಸಿದ್ದ ಹೊಸಬರನ್ನು ಕಳಪೆ ಕಾರ್ಯಕ್ಷಮತೆ ತೋರಿದ್ದಾರೆ ಎನ್ನುವ ಕಾರಣ ನೀಡಿ ತೆಗೆದು ಹಾಕಲಾಗಿದೆ. ಸುಮಾರು ಎರಡು ವಾರದಿಂದಲೂ ಈ ಪ್ರಕ್ರಿಯೆ ನಡೆದಿದೆ. ಈವರೆಗೂ ಸುಮಾರು 500 ಮಂದಿಯನ್ನು ಪಟ್ಟಿ ಮಾಡಿ ತೆಗೆದುಹಾಕಲಾಗಿದೆ ಎನ್ನುವ ದೂರು ಕೇಳಿ ಬಂದಿದೆ. ಈ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡವೂ ಭೇಟಿ ನೀಡಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಆದರೆ ಇನ್ಫೋಸಿಸ್ ಇದು ಸಂಸ್ಥೆಯಲ್ಲಿ ಸಾಮಾನ್ಯ ಪ್ರಕ್ರಿಯೆ. ಈವರೆಗೂ 300ಕ್ಕೂ ಅಧಿಕ ಮಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಮೈಸೂರಿನಲ್ಲಿ ಎರಡು ದಶಕದ ಹಿಂದೆಯೇ ಏಷ್ಯಾದಲ್ಲಿಯೇ ಅತಿ ದೊಡ್ಡ ಐಟಿ ತರಬೇತಿ ಸಂಸ್ಥೆಯನ್ನು ಇನ್ಫೋಸಿಸ್ ಆರಂಭಿಸಿದೆ. ಸುಮಾರು 350 ಎಕರೆ ವಿಶಾಲ ಕ್ಯಾಂಪಸ್ ಇದು. ಇಲ್ಲಿ ಏಕಕಾಲಕ್ಕೆ 10ಸಾವಿರ ಮಂದಿಗೆ ತರಬೇತಿ ನೀಡಬಹುದು. ಇನ್ಫೋಸಿಸ್ ಮೊದಲು ಯಾರನ್ನೇ ನೇಮಕ ಮಾಡಿಕೊಂಡರು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಇಲ್ಲಿಯೇ ಪ್ರಾಥಮಿಕ ತರಬೇತಿ ನೀಡಿ ಅವರ ಸಾಮರ್ಥ್ಯ ಆಧರಿಸಿ ಭಾರತ ಮಾತ್ರವಲ್ಲದೇ ಹೊರ ದೇಶಗಳಲ್ಲಿರುವ ಇನ್ಫೋಸಿಸ್‌ನ ಕ್ಯಾಂಪಸ್‌ಗೆ ನೇಮಕ ಮಾಡಿಕೊಳ್ಳುತ್ತದೆ. ಈ ಪ್ರಕ್ರಿಯೆ ಎರಡು ದಶಕಗಳಿಂದಲೂ ನಡೆದುಕೊಂಡು ಬಂದಿದೆ.
ಎರಡು ವರ್ಷಗಳ ಕಾಲ ಕೋವಿಡ್ ಉಲ್ಬಣಗೊಂಡ ನಂತರ ಇನ್ಫೋಸಿಸ್ ಕೂಡ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಜಾರಿಗೊಳಿಸಿತ್ತು. ಆ ವರ್ಷಗಳಲ್ಲಿ ಕ್ಯಾಂಪಸ್ ನೇಮಕ ಸಹಿತ ವಿವಿಧ ಹಂತದಲ್ಲಿ ನೇಮಕ ಮಾಡಿಕೊಂಡಿದ್ದರೂ ತರಬೇತಿಯನ್ನು ಆನ್‌ಲೈನ್‌ನಲ್ಲೇ ನೀಡಲಾಗಿತ್ತು. ಕೆಲವರ ಸಂದರ್ಶನ ಆಗಿದ್ದರೂ ತರಬೇತಿಗೂ ಬಂದಿರಲಿಲ್ಲ. ಹೀಗೆ ಎರಡು ವರ್ಷದಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಸಿದವರಿಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ಗೆ ಬರಲು ಸೂಚಿಸಲಾಗಿತ್ತು. ಮೂರು ತಿಂಗಳ ಅವಧಿಯಲ್ಲಿ ಅವರ ಸಾಮರ್ಥ್ಯ ಪರೀಕ್ಷೆ ಮಾಡಲಾಗಿತ್ತು. ಸಂಸ್ಥೆ ನೀಡಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ, ನಿರೀಕ್ಷಿತ ಸಾಧನೆ ಮಾಡದವರನ್ನು ಹಂತ ಹಂತವಾಗಿ ತೆಗೆದು ಹಾಕುವ ಪ್ರಕ್ರಿಯೆ ಫೆಬ್ರವರಿ ಮೊದಲ ವಾರದಲ್ಲಿ ಶುರುವಾಗಿತ್ತು. ಹೀಗೆ ಪಟ್ಟಿ ಮಾಡಿದವರಲ್ಲಿ ಸುಮಾರು 500 ಮಂದಿಯನ್ನು ಕಳಪೆ ಸಾಧನೆ ಆಧರಿಸಿ ತೆಗೆದು ಹಾಕಲಾಗಿದೆ ಎಂದು ವಜಾಗೊಂಡಿರುವವರ ದೂರು.
ಕೆಲವರು ಇನ್ನೊಂದು ಅವಕಾಶ ಕೊಟ್ಟರೆ ಉತ್ತಮ ಸಾಧನೆ ಮಾಡುವುದಾಗಿಯೂ ಕೇಳಿದ್ದರು. ಕೋವಿಡ್ ಕಾರಣದಿಂದ ಶಿಕ್ಷಣದಲ್ಲಿ ಅಡಚಣೆಯಾಗಿರುವುದರಿಂದ ಸಣ್ಣ ಪುಟ್ಟ ತೊಂದರೆಯಾಗಿರಬಹುದು. ನಮ್ಮ ಕಾರ್ಯಕ್ಷಮತೆ ತೋರುತ್ತೇವೆ ಎನ್ನುವುದನ್ನು ತಿಳಿಸಿದ್ದರು. ಆದರೆ ಇನ್ಫೋಸಿಸ್‌ನ ಮಾನವ ಸಂಪನ್ಮೂಲ ವಿಭಾಗದವರು ಇದಕ್ಕೆ ಅವಕಾಶ ನೀಡದೇ ಒಂದು ವಾರದಿಂದಲೂ ಫ್ರೆಷರ್ಸ್‌ಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಮುಂದುವರಿಸಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ.
ಈ ಪ್ರಕ್ರಿಯೆ ಸದ್ಯಕ್ಕೆ ಆರಂಭವಾಗಿದೆ. ಇನ್ನೂ ಹಲವು ಬ್ಯಾಚ್‌ಗಳಲ್ಲಿ ಇನ್ನಷ್ಟು ಫ್ರೆಷರ್ಸ್‌ಗಳನ್ನು ತೆಗೆದು ಹಾಕುವ ಸೂಚನೆಯಿದೆ. ಭಾರತದ ಬೇರೆ ಬೇರೆ ಭಾಗಗಳಿಂದ ಬಂದಿರುವ ಹಲವರನ್ನು ಹೀಗೆ ತೆಗೆದು ಹಾಕಲಾಗಿದೆ. ನೊಟೀಸ್ ಅನ್ನೂ ನೀಡದೇ ಕೆಲವರಿಗೆ ತೆಗೆದು ಹಾಕಲಾಗಿದೆ ಎಂದು ಕಾರ್ಮಿಕ ಇಲಾಖೆಗೆ ವಜಾಗೊಂಡಿರುವ ಕೆಲವರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿ ಐಟಿ ವಲಯದ ಉದ್ಯೋಗಿಗಳ ಸಂಘಟನೆ ನೈಟ್ಸ್( ನಾಸೆಂಟ್ ಇನ್‌ಫಾರ್ಮೇಷನ್ ಟೆಕ್ನಾಲಜಿ ಎಂಪ್ಲಾಯಸ್ ಸೆನೆಟ್)ನ ಅಧ್ಯಕ್ಷ ಹಪ್ರೀತ್ ಸಿಂಗ್ ಸಲೂಜಾ ಅವರು ಹೇಳುವಂತೆ, ಇನ್ಫೋಸಿಸ್ ಇಷ್ಟು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ತೆಗೆದು ಹಾಕುತ್ತಿರುವುದು ಇದೇ ಮೊದಲು. ಎರಡು ವರ್ಷದ ಹಿಂದೆಯೇ ಆಫರ್ ಲೆಟರ್ ಪಡೆದು ಕಾಯ್ದ ನಂತರ ಈಗ ತರಬೇತಿಗೆ ಬಂದಿದ್ದಾರೆ. ಈ ವೇಳೆ ಈ ರೀತಿ ನಡೆದುಕೊಳ್ಳಲಾಗಿದೆ. ಇದು ಕೈಗಾರಿಕೆಗಳ ವ್ಯಾಜ್ಯ ಕಾಯಿದೆ ಹಾಗೂ ಕಾರ್ಮಿಕ ಕಾನೂನು ಅಡಿಯಲ್ಲಿ ಹೀಗೆ ನೌಕರರನ್ನು ತೆಗೆದು ಹಾಕುವಂತಿಲ್ಲ. ಈ ಕುರಿತು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.
ಎಲ್ಲಾ ಬೆಳವಣಿಗೆಗೆಗಳ ಕುರಿತು ಸ್ಪಷ್ಟನೆ ನೀಡಿರುವ ಇನ್ಫೋಸಿಸ್, ಸಂಸ್ಥೆಗೆ ಸೇರಿದ ಉದ್ಯೋಗಿಗಳು ಮೂರು ತಿಂಗಳ ಕಠಿಣ ತರಬೇತಿಗೆ ಹಾಜರಾಗಬೇಕಾಗುತ್ತದೆ. ತರಬೇತಿಯಲ್ಲಿ ಕೆಲವು ವಿಷಯಗಳಲ್ಲಿ ನಿಗದಿತ ಕಾರ್ಯಕ್ಷಮತೆ ತೋರಬೇಕಾಗುತ್ತದೆ. ಅದರಲ್ಲಿ ತೇರ್ಗಡೆಯಾಗದವರನ್ನು ತೆಗೆದು ಹಾಕಲಾಗುತ್ತದೆ ಎನ್ನುವುದನ್ನು ಆಫರ್ ಪತ್ರಗಳಲ್ಲಿ ತಿಳಿಸಲಾಗಿದೆ. ಅದರಂತೆಯೇ ಈಗ ಕ್ರಮ ಆಗಿದೆ. 300 ಕ್ಕೂ ಅಧಿಕ ನಿರೀಕ್ಷಿತ ಸಾಧನೆ ತೋರದವರನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದೆ.
