BBMP Chief Commissioner: 'ರಸ್ತೆ ಗುಂಡಿ ಮುಚ್ಚಲು 7 ಸಾವಿರ ಕೋಟಿ ಖರ್ಚು ಎಂಬುದು ಸುಳ್ಳು'
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು 7 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿರುವ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು 7 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿರುವ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗುಂಡಿ ಮುಚ್ಚಲು 7,121 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಉಲ್ಲೇಖಿಸಲಾಗಿದೆ. ಈ ಮೊತ್ತ ಸತ್ಯಕ್ಕೆ ದೂರವಾಗಿವೆ. ಬಿಬಿಎಂಪಿ ಇಷ್ಟೊಂದು ಮೊತ್ತ ಬರೀ ರಸ್ತೆ ಗುಂಡಿಗೆ ವೆಚ್ಚ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಈ ವರ್ಷ ಹೊರತುಪಡಿಸಿ, ಕಳೆದ ಮೂರು ವರ್ಷಗಳಲ್ಲಿ 119.23 ಕೋಟಿ ರೂಪಾಯಿ ಮಾತ್ರ ಖರ್ಚಾಗಿದೆ. ಈವರೆಗೆ 35 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ. ಈ ವರ್ಷದೊಳಗೆ 36 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಎಐಎಸಿಯಿಂದ ಮಾಹಿತಿ ಪಡೆಯಬೇಕು:
ಬಿಬಿಎಂಪಿ ಕಚೇರಿಯಿಂದಲೇ ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿವೆ. ಈ ಸಂಬಂಧ ಪರಿಶೀಲನೆ ನಡೆಸಲಾಗುವುದು. ಆದರೆ, ಯಾವುದೇ ರೀತಿಯ ಖರ್ಚು, ವೆಚ್ಚಗಳ ಮಾಹಿತಿ ಪಡೆಯಲು ಎಐಎಸಿಯಿಂದ ಮಾಹಿತಿ ಪಡೆಯಿರಿ ಎಂದು ಅಧಿಕಾರಿ, ಸಿಬ್ಬಂದಿಗಳಿಗೆ ಸಲಹೆ ನೀಡುತ್ತೇನೆ ಎಂದು ಆಯುಕ್ತರು ತಿಳಿಸಿದರು.
ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕಾನೂನು ಕ್ರಮ:
ಕೆಲವೊಂದು ತಪ್ಪು ಮಾಹಿತಿ, ಸುಳ್ಳು ಸುದ್ದಿಗಳಿಂದ ನಾಗರಿಕರಿಗೆ ತಪ್ಪು ಮಾಹಿತಿ ರವಾನೆ ಆಗುತ್ತದೆ. ಇಂತಹ ಮಾಹಿತಿ ಹಂಚಿಕೊಳ್ಳುವ ಮೊದಲು ಪರಿಶೀಲನೆ ನಡೆಸಬೇಕು. ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಸ್ತೆ ಗುಂಡಿಗಳಿಂದಾಗಿ ಬೆಂಗಳೂರಿನಲ್ಲಿ ಅನೇಕರು ಮೃತಪಟ್ಟಿದ್ದಾರೆ. ರಸ್ತೆ ಗುಂಡಿಯಿಂದ ಅಪಘಾತ ಆಗಿದೆ ಎಂದು ದೂರು ಬಂದರೆ ಕೂಡಲೇ ಆ ಕುರಿತು ಎಫ್‌ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯ ಗೃಹ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಈ ಹಿಂದೆ ನಿರ್ದೇಶನ ನೀಡಿತ್ತು. ರಸ್ತೆ ಅಪಘಾತ ಸಂಭವಿಸಿ ಗಾಯಗಳೋ ಅಥವಾ ಸಾವೋ ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟವರು ದೂರು ದಾಖಲಿಸಿದರೆ ಅಂತಹ ದೂರುಗಳನ್ನು ಪೊಲೀಸರು ಸ್ವೀಕರಿಸಬೇಕು. ಅದರ ಹಿಂದಿನ ತಾಂತ್ರಿಕತೆಯನ್ನು ಮನಗಾಣಬೇಕು ಮತ್ತು ಕೂಡಲೇ ಎಫ್‌ಐಆರ್ ದಾಖಲಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ರಸ್ತೆ ಮತ್ತು ಚರಂಡಿ ಸಮಸ್ಯೆಯಂತಹ ಅಭಿವೃದ್ಧಿ ಕಾಮಗಾರಿಗಳನ್ನು ಬಿಟ್ಟು “ಲವ್ ಜಿಹಾದ್” ವಿರುದ್ಧ ಹೋರಾಡುವತ್ತ ಗಮನಹರಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ವಿವಾದವನ್ನು ಹುಟ್ಟುಹಾಕಿದ್ದರು. "ಬಿಜೆಪಿ ತನ್ನ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು ಮರೆಮಾಚಲು ಬಳಸುವುದು ಕೋಮು ಕಲಹವನ್ನು. ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ವಿಷಯಗಳು ಬಿಜೆಪಿಗೆ "ಸಣ್ಣ ವಿಷಯಗಳು"! ಹೇಳಿಕೊಳ್ಳಲು ಅಭಿವೃದ್ಧಿಪರ ಸಾಧನೆಗಳಿಲ್ಲದ ಬಿಜೆಪಿ ಅವುಗಳ ಬಗ್ಗೆ ಮಾತೇ ಆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ" ಎಂದು ಕಾಂಗ್ರೆಸ್ ಛೀಮಾರಿ ಹಾಕಿತ್ತು.