ಕನ್ನಡ ಸುದ್ದಿ  /  Karnataka  /  It's Bjp's Culture To Attack, Kill And Assassinate: Siddaramaiah On K'taka Min

Siddaramaiah: ದಾಳಿ, ಕೊಲೆ ಬಿಜೆಪಿ ಸಂಸ್ಕೃತಿ, ಅಶ್ವತ್ಥ್‌ ನಾರಾಯಣ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಸಿದ್ದರಾಮಯ್ಯನನ್ನು ಫಿನಿಶ್‌ ಮಾಡಿ ಅಂದರೆ ಏನರ್ಥ? ಜನರನ್ನು ರಕ್ಷಣೆ ಮಾಡಬೇಕಾದ ಸಚಿವರೊಬ್ಬರು ಹೇಳುವ ಮಾತೇನ್ರಿ ಇದು? ಅಶ್ವತ್ಥ್‌ ನಾರಾಯಣರು ಹೇಳಿದ್ದು ಸರಿಯೇ? ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್‌ ಶಾ ಏನು ಹೇಳುತ್ತಾರೆ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Siddaramaiah: ದಾಳಿ, ಕೊಲೆ ಬಿಜೆಪಿ ಸಂಸ್ಕೃತಿ, ಅಶ್ವಥ್‌ ನಾರಾಯಣ್‌ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
Siddaramaiah: ದಾಳಿ, ಕೊಲೆ ಬಿಜೆಪಿ ಸಂಸ್ಕೃತಿ, ಅಶ್ವಥ್‌ ನಾರಾಯಣ್‌ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು (PTI)

ಬೆಂಗಳೂರು: ಮಂಡ್ಯದಲ್ಲಿ ಸಚಿವ ಅಶ್ವತ್ಥ್‌ ನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್‌ ರೀತಿ ಹೊಡೆದು ಹಾಕಬೇಕು ಎಂದು ಹೇಳಿದ್ದಾರೆ. ನೀವೆಲ್ಲ ನನ್ನನ್ನು ಹೊಡೆದುಹಾಕಲು ಬಿಡುತ್ತೀರ? ನಾನು ಟಿಪ್ಪು ಸುಲ್ತಾನ್‌, ಸಂಗೊಳ್ಳಿ ರಾಯಣ್ಣ, ಸಂತ ಸೇವಾಲಾಲ್‌, ಬಸವಣ್ಣ, ಕನಕದಾಸರು ಈ ಎಲ್ಲರನ್ನೂ ಗೌರವಿಸುತ್ತೇನೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಹೀಗೆ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತೇನೆ. ಎಲ್ಲ ಜನರನ್ನು ಪ್ರೀತಿ ಮಾಡುತ್ತೇನೆ. ಬಿಜೆಪಿಯವರು ಸಮಾಜದಲ್ಲಿ ದ್ವೇಷ ಹುಟ್ಟುಹಾಕುವವರು, ದಯವಿಟ್ಟು ಇಂಥಾ ಸ್ವಾರ್ಥಿಗಳಿಗೆ ನಿಮ್ಮ ಮತ ನೀಡಬೇಡಿ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಇಂತಹ ಹೇಳಿಕೆ ನೀಡಿದ ಅಶ್ವತ್ಥ್‌ ನಾರಾಯಣ್‌ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ಕ್ಯಾಬಿನೆಟ್‌ನಿಂದ ಹೊರಕ್ಕೆ ಹಾಕಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

"ಸಿದ್ದರಾಮಯ್ಯನನ್ನು ಫಿನಿಶ್‌ ಮಾಡಿ ಅಂದರೆ ಏನರ್ಥ? ಜನರನ್ನು ರಕ್ಷಣೆ ಮಾಡಬೇಕಾದ ಸಚಿವರೊಬ್ಬರು ಹೇಳುವ ಮಾತೇನ್ರಿ ಇದು? ಅಶ್ವತ್ಥ್‌ ನಾರಾಯಣರು ಹೇಳಿದ್ದು ಸರಿಯೇ? ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್‌ ಶಾ ಏನು ಹೇಳುತ್ತಾರೆ? ದಾಳಿ ಮಾಡುವುದು, ಕೊಲೆ ಮಾಡುವುದು, ಹತ್ಯೆ ಮಾಡುವುದು ಬಿಜೆಪಿಯ ಸಂಸ್ಕೃತಿ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

"ಮಹಾತ್ಮ ಗಾಂಧಿಯನ್ನು ಕೊಂದವರು ಅವರೇ. ಆರ್‌ಎಸ್‌ಎಸ್ ಹೇಳಿದ್ದನ್ನು ಅಶ್ವತ್ಥನಾರಾಯಣ ಹೇಳಿದರು. ರಾಜ್ಯಪಾಲರು ಈ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ನಾನು ದೂರು ನೀಡುವುದಿಲ್ಲ, ಪೊಲೀಸರೇ ಸಚಿವರ ವಿರುದ್ಧ ಪ್ರಕರಣ ದಾಖಲಿಸಬೇಕು. " ಎಂದು ಮಾಜಿ ಸಿಎಂ ಹೇಳಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ, ರೈತರ, ಬಡವರ, ದಲಿತರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಆದರೆ, ಬಿಜೆಪಿ ಮಾಡುವುದೇ ಬೇರೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬರುವ ಚುನಾವಣೆಯಲ್ಲಿ ಟಿಪ್ಪು ಹಾಗೂ ಸಾವರ್ಕರ್ ಎಂದು ಬರೆಯಲಿ. ಜನರಿಗೆ ಪ್ರಚೋದನೆ ನೀಡುವುದು ಖಂಡನೀಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಬುಧವಾರ ಸಚಿವ ಅಶ್ವತ್ಥ್‌ ನಾರಾಯಣ ಮಾತನಾಡಿರುವುದು ಈಗ ವಿವಾದವಾಗಿದೆ. "ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸುತ್ತಾರೆ. ನಿಮಗೆ ಟಿಪ್ಪು ಬೇಕಾ ಅಥವಾ ಸಾವರ್ಕರ್ ಬೇಕಾ? ಟಿಪ್ಪು ಸುಲ್ತಾನ್ ಅನ್ನು ಎಲ್ಲಿಗೆ ಕಳುಹಿಸಬೇಕು? ಹುರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದರು. ಅದೇ ರೀತಿ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು" ಎಂದು ಅಶ್ವತ್ಥ್‌ ನಾರಾಯಣ ಹೇಳಿದ್ದರು.

ಸಿದ್ದರಾಮಯ್ಯ ಸರಣಿ ಟ್ವೀಟ್‌

ಅಶ್ವತ್ಥ್‌ ನಾರಾಯಣರ ಹೇಳಿಕೆಯ ಬಳಿಕ ಸಿದ್ದರಾಮಯ್ಯನವರು ಈ ಮುಂದಿನಂತೆ ಸರಣಿ ಟ್ವೀಟ್‌ ಮಾಡಿದ್ದಾರೆ.

ಟಿಪ್ಪುವನ್ನು ಹೊಡೆದುಹಾಕಿದಂತೆ ನನ್ನನ್ನೂ ಹೊಡೆದುಹಾಕಬೇಕು ಎಂದು ಸಚಿವ ಅಶ್ವತ್ಥ್‌ ನಾರಾಯಣ ಜನರಿಗೆ ಕರೆನೀಡಿದ್ದಾರೆ. ಜನರನ್ನು ಯಾಕೆ ಪ್ರಚೋದಿಸುತ್ತೀರಿ ಸಚಿವರೇ? ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ. ನನ್ನ ಹತ್ಯೆಗೆ @drashwathcn ಅವರು ಕೊಟ್ಟ ಕರೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ. ಸಚಿವ @drashwathcn ಅವರು ನೀಡಿರುವ ಹತ್ಯೆಯ ಕರೆಯ ಬಗ್ಗೆ ಮುಖ್ಯಮಂತ್ರಿ @BSBommai ಮತ್ತು ಪ್ರಧಾನ ಮಂತ್ರಿ @narendramodi ಅವರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಮೌನ ಸಮ್ಮತಿಯ ಲಕ್ಷಣವೇ? ಎಂದು ಅವರು ಸರಣಿ ಟ್ವೀಟ್‌ ಮಾಡಿದ್ದಾರೆ.

IPL_Entry_Point