ಕನ್ನಡ ಸುದ್ದಿ  /  Karnataka  /  It's Unfortunate That In London Questions Were Raised About India's Democracy Pm Modi On Rahul Gandhi

PM Modi: 'ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆಗಳು ಎದ್ದಿರುವುದು ದುರದೃಷ್ಟಕರ' - ರಾಹುಲ್​ ವಿರುದ್ಧ ಪಿಎಂ ಮೋದಿ ವಾಗ್ದಾಳಿ

ಇತ್ತೀಚೆಗಷ್ಟೇ ಲಂಡನ್​​ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೀಡಿದ ಹೇಳಿಕೆಗಳನ್ನು ಪರೋಕ್ಷವಾಗಿ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್​ ಗಾಂಧಿ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದಲ್ಲಿ ಪ್ರಧಾನಿ ಮೋದಿ
ಧಾರವಾಡದಲ್ಲಿ ಪ್ರಧಾನಿ ಮೋದಿ

ಧಾರವಾಡ: ಇತ್ತೀಚೆಗಷ್ಟೇ ಲಂಡನ್​​ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೀಡಿದ ಹೇಳಿಕೆಗಳನ್ನು ಪರೋಕ್ಷವಾಗಿ ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್​ ಗಾಂಧಿ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಬಳಿಕ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. ಶ್ರೀಗುರು ಸಿದ್ಧಾರೂಢರನ್ನು ಹಾಗೂ ಬಸವೇಶ್ವರರನ್ನು ಸ್ಮರಿಸಿದರು.

"ಗುರು ಬಸವೇಶ್ವರರ ಪ್ರತಿಮೆ ಇರುವ ಅದೇ ನೆಲದಲ್ಲಿ - ಲಂಡನ್‌ನಲ್ಲಿ ಕೆಲವರು ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನಿಸುತ್ತಿದ್ದಾರೆ. ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ಮಾತ್ರವಲ್ಲ, ಪ್ರಜಾಪ್ರಭುತ್ವದ ತಾಯಿ. ಇಡೀ ಜಗತ್ತು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಧ್ಯಯನ ಮಾಡುತ್ತದೆ. ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆಗಳು ಎದ್ದಿರುವುದು ದುರದೃಷ್ಟಕರ" ಎಂದು ಪರೋಕ್ಷವಾಗಿ ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

"ಇಂದು ನಾನು ಭಗವಾನ್ ಬಸವೇಶ್ವರರ ನಾಡಿನಲ್ಲಿದ್ದೇನೆ ಮತ್ತು ಇದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಅವರ ಗಮನಾರ್ಹ ಕೊಡುಗೆಯೆಂದರೆ ಅನುಭವ ಮಂಟಪದ ಸ್ಥಾಪನೆಯಾಯಿತು. ಭಗವಾನ್ ಬಸವೇಶ್ವರರ ಪ್ರತಿಮೆಯನ್ನು ಅನಾವರಣಗೊಳಿಸಲು ಲಂಡನ್‌ಗೆ ಹೋಗುವ ಅದೃಷ್ಟ ನನಗೆ ಸಿಕ್ಕಿತು" ಎಂದು ಹೇಳಿದರು.

"ಆದರೆ ಲಂಡನ್‌ನ ನೆಲದಿಂದ ಭಾರತದ ಪ್ರಜಾಪ್ರಭುತ್ವದ ಮೇಲೆ ಪ್ರಶ್ನೆಗಳು ಎದ್ದಿರುವುದು ದುರದೃಷ್ಟಕರ. ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಶಕ್ತಿ ಇಲ್ಲ. ಆದರೆ ಅದನ್ನು ಲೆಕ್ಕಿಸದೆ ಕೆಲವರು ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಜನ ಭಗವಾನ್ ಬಸವೇಶ್ವರರಿಗೆ, ಕರ್ನಾಟಕದ ಜನತೆಗೆ, ಭಾರತದ ಜನತೆಗೆ ಅವಮಾನ ಮಾಡುತ್ತಿದ್ದಾರೆ. ಇಂತಹವರಿಂದ ಕರ್ನಾಟಕ ದೂರವಿರಬೇಕು" ಎಂದು ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ಕಾಂಗ್ರೆಸ್​ಗೆ ವೋಟ್​ ಹಾಕದಂತೆ ಕರೆ ನೀಡಿದರು.

ಇಂದು ಕರ್ನಾಟಕ ಭೇಟಿಯಲ್ಲಿರುವ ಪ್ರಧಾನಿ ಮೋದಿ ಮಂಡ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೊಳಿಸಿದರು. ಬಳಿಕ ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಆಗಮಿಸಿದ ಅವರು ಜಿಲ್ಲೆಯ 5 ಸಾವಿರ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ.

ಧಾರವಾಡದಲ್ಲಿ ನಿರ್ಮಿಸಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕ್ಯಾಂಪಸ್ ಅನ್ನು ಪಿಎಂ ಮೋದಿ ಉದ್ಘಾಟಿಸಿದ್ದಾರೆ. 535 ಎಕರೆಯಲ್ಲಿ 852 ಕೋಟಿ ರೂ. ವೆಚ್ಚದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿ ಕ್ಯಾಂಪಸ್ ಅನ್ನು ಧಾರವಾಡದಲ್ಲಿ ನಿರ್ಮಿಸಲಾಗಿದೆ. ಹುಬ್ಬಳ್ಳಿ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದಾರೆ.

"ಧಾರವಾಡದಲ್ಲಿ ಐಐಟಿಯ ಹೊಸ ಕ್ಯಾಂಪಸ್ ಗುಣಮಟ್ಟದ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಇದು ಉತ್ತಮ ನಾಳೆಗಾಗಿ ಯುವ ಮನಸ್ಸುಗಳನ್ನು ಪೋಷಿಸುತ್ತದೆ. ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯೂ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅವಕಾಶವನ್ನು ಪಡೆಯಬೇಕು" ಎಂದು ಪಿಎಂ ಮೋದಿ ಹೇಳಿದರು.

"ಉತ್ತಮ ಮತ್ತು ಆಧುನಿಕ ಮೂಲಸೌಕರ್ಯಗಳು ಜೀವನವನ್ನು ಸುಲಭಗೊಳಿಸುತ್ತದೆ. ಆಧುನಿಕ ಮೂಲಸೌಕರ್ಯವು ಜೀವನ ಸೌಕರ್ಯವನ್ನು ಸುಧಾರಿಸುತ್ತದೆ ಮತ್ತು ನಮ್ಮ ಸಮಾಜದ ಪ್ರತಿಯೊಂದು ವರ್ಗಕ್ಕೂ ಪ್ರಯೋಜನವನ್ನು ನೀಡುತ್ತದೆ. ಕಳೆದ 9 ವರ್ಷಗಳಲ್ಲಿ ನಾವು ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಇದೇ ವೇಳೆ ಹೇಳಿದರು.

ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಸಿದ್ದಾರೂಢ ಸ್ವಾಮೀಜಿಯ ಮೂರ್ತಿ, ಕಲಘಟಗಿ ತೊಟ್ಟಿಲು ಧಾರವಾಡ ಪೇಡಾವನ್ನು ಉಡುಗೊರೆ ನೀಡಿ ಹಾವೇರಿಯ ಏಲಕ್ಕಿ ಮಾಲೆ ಹಾಕಿ ಸನ್ಮಾನಿಸಲಾಯಿತು.

IPL_Entry_Point