Jana Sankalpa Yatre: ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ ಬೊಮ್ಮಾಯಿ-ಬಿಎಸ್‌ವೈ; ಉಪಾಹಾರಕ್ಕೇನು ಸ್ಪೆಷಲ್?
Bommai, BSY Karnataka Tour: ಜನಸಂಕಲ್ಪ ಯಾತ್ರೆ, ಪಕ್ಷ ಸಂಘಟನಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ವಿಜಯನಗರದಲ್ಲಿದ್ದಾರೆ. ಕಮಲಾಪುರ ಗ್ರಾಮದ ಅಂಬೇಡ್ಕರ್ ಕಾಲನಿಯ ದಲಿತ ಕುಟುಂಬದವರ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉಪಾಹಾರ ಸೇವಿಸಿದರು.
ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಐಕ್ಯತಾ ಯಾತ್ರೆ ಚಿತ್ರದುರ್ಗ ಜಿಲ್ಲೆಯಲ್ಲಿದ್ದರೆ, ಬಿಜೆಪಿಯ ಜನಸಂಕಲ್ಪ ಯಾತ್ರೆ ಪಕ್ಕದ ವಿಜಯನಗರದಲ್ಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ತಂಡ ಇಂದು ಬೆಳಗ್ಗೆ ವಿಜಯನಗರದಲ್ಲಿ ಯಾತ್ರೆ ಶುರುಮಾಡಿದೆ.
ದಲಿತರ ಆತಿಥ್ಯ ಸ್ವೀಕರಿಸಿದ ಸಿಎಂ, ಮಾಜಿ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದ ಅಂಬೇಡ್ಕರ್ ಕಾಲೋನಿಯ ದಲಿತ ಕುಟುಂಬದ ಹಿರಾಳ ಕೊಲ್ಲಾರಪ್ಪ ಅವರ ಮನೆಗೆ ತೆರಳಿ ಉಪಹಾರ ಸೇವಿಸಿದರು. ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆನಂದ್ ಸಿಂಗ್, ಶಾಸಕ ರಾಜುಗೌಡ ಹಾಜರಿದ್ದರು.
ಸಂಭ್ರಮದಲ್ಲಿದ್ದ ಹಿರಾಳ ಕೊಲ್ಲಾರಪ್ಪ ಕುಟುಂಬ
ಕಮಲಾಪುರ ಗ್ರಾಮದ ಅಂಬೇಡ್ಕರ್ ನಗರದ ಹಿರಾಳ ಕೊಲ್ಲಾರಪ್ಪ ಅವರ ಮನೆಯಲ್ಲಿ ಬೆಳಿಗ್ಗೆಯಿಂದಲೇ ಸಡಗರದ ವಾತಾವರಣ. ಅಡುಗೆ ಮನೆಯಲ್ಲಿ ಅವರ ಪುತ್ರಿಯರಾದ ಹುಲಿಗೆಮ್ಮ ಹಾಗೂ ರೇಣುಕಾ ಬೆಳಗಿನ ಉಪಾಹಾರದ ತಯಾರಿಯಲ್ಲಿ ನಿರತರಾಗಿದ್ದರು.
ಬೆಳಗ್ಗೆ ನಿಗದಿತ ಸಮಯಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೊಲ್ಲಾರಪ್ಪ ಕುಟುಂಬದವರೊಂದಿಗೆ ಕುಶಲೋಪರಿ ನಡೆಸಿದರು. ಕೊಲ್ಲಾರಪ್ಪ ನವರ ಮೊಮ್ಮಗಳು ಅಶ್ವಿನಿ ತಡಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿಷಯ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಅವಳ ಶಿಕ್ಷಣ, ಕಾಲೇಜು ವಾತಾವರಣ ಮೊದಲಾದ ಕುರಿತು ಮಾಹಿತಿ ಪಡೆದರು.
ಕಾಲೇಜು ಚೆನ್ನಾಗಿದೆ. ಆದರೆ ಮೆಸ್ ಬಿಲ್ ದುಬಾರಿ ಎಂದು ಆಕೆ ಮುಖ್ಯಮಂತ್ರಿಯವರ ಗಮನ ಸೆಳೆದಾಗ ಇದನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.
ಉಪಾಹಾರದ ಮೆನುವಿನಲ್ಲಿ ಏನೇನಿತ್ತು?
ಕೇಸರಿಬಾತ್, ಮಂಡಕ್ಕಿ ಒಗ್ಗರಣೆ, ಮಿರ್ಚಿ, ಉಪ್ಪಿಟ್ಟು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆನಂದ್ ಸಿಂಗ್ ಅವರೊಂದಿಗೆ ಆಗಮಿಸಿದ ಮುಖ್ಯಮಂತ್ರಿಗಳು ಕಮಲಾಪುರ ಅಂಬೇಡ್ಕರ್ ನಗರದ ದಲಿತ ಹಿರಾಳ ಕೊಲ್ಲಾರಪ್ಪ ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸವಿದರು.
ಮನೆಯವರು ಪ್ರೀತಿಯಿಂದ ಉಣಬಡಿಸಿದ ಉಪಾಹಾರ , ಚಹಾ ಸೇವಿಸಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು.