Janardhan Reddy new party: ಜನಾರ್ದನ ರೆಡ್ಡಿಯವರ ಹೊಸ ಪಕ್ಷ ಕಾಂಗ್ರೆಸ್, ಬಿಜೆಪಿಗೆ ಹೊಡೆತ ನೀಡುವುದೇ? ಡಿಕೆಶಿ, ಶ್ರೀರಾಮುಲು ಹೇಳಿದ್ದೇನು
ರೆಡ್ಡಿಯವರ ಹೊಸ ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಚರ್ಚೆ ಆರಂಭವಾಗಿದೆ. ಜನಾರ್ದನ ರೆಡ್ಡಿಯವರ ಹೊಸ ಪಕ್ಷ ಕಾಂಗ್ರೆಸ್‌ಗೆ ಹೊಡೆತ ನೀಡುವುದೇ? ಎಂಬ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಬಳ್ಳಾರಿ ಗಣಿಧನಿ ಗಾಲಿ ಜನಾರ್ದನ ರೆಡ್ಡಿ ಇದೀಗ ತಮ್ಮ ಸ್ವಂತ ಪಕ್ಷ "ಕಲ್ಯಾಣ ರಾಜ್ಯ ಪ್ರಗತಿ ಪಕ್ಷʼʼ ಘೋಷಣೆ ಮಾಡಿದ್ದಾರೆ. ರೆಡ್ಡಿಯವರ ಹೊಸ ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಚರ್ಚೆ ಆರಂಭವಾಗಿದೆ. ಜನಾರ್ದನ ರೆಡ್ಡಿಯವರ ಹೊಸ ಪಕ್ಷ ಕಾಂಗ್ರೆಸ್‌ಗೆ ಹೊಡೆತ ನೀಡುವುದೇ? ಎಂಬ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ರೆಡ್ಡಿಗೆ ಶುಭವಾಗಲಿ ಎಂದ ಡಿಕೆಶಿ
ಜನಾರ್ದನರೆಡ್ಡಿ ಅವರು ಹೊಸ ಪಕ್ಷ ಸ್ಥಾಪಿಸಿರುವ ಬಗ್ಗೆ ಡಿಕೆ ಶಿವಕುಮಾರ್ ಅವರಲ್ಲಿ ಪ್ರಶ್ನೆ ಕೇಳಲಾಯಿತು. ' ಅವರಿಗೆ ಶುಭವಾಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರು ಬೆಳೆಯಬೇಕು. ಅವರು ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ. ಅವರು ಸಾಧ್ಯವಾದಷ್ಟು ಜನ ಸೇವೆ ಮಾಡಲಿ. ಈ ಸಮಯದಲ್ಲಿ ಟೀಕೆ ಮಾಡುವ ಪ್ರವೃತ್ತಿ ನನ್ನದಲ್ಲ. ಒಳ್ಳೆಯ ಕೆಲಸ ಮಾಡಲು ಯಾರೇ ಮುಂದೆ ಬಂದರೂ ನಾವು ಅಭಿನಂದಿಸುತ್ತೇವೆ ' ಎಂದು ಡಿಕೆ ಶಿವ ಕುಮಾರ್ ತಿಳಿಸಿದ್ದಾರೆ.
ಕೇಂದ್ರದ ಬಿಜೆಪಿ ನಾಯಕರನ್ನು ಕಠೋರವಾಗಿ ನಿಂದಿಸಿ, ಯಡಿಯೂರಪ್ಪ ಅವರನ್ನು ಹೊಗಳಿ ಪಕ್ಷ ಸ್ಥಾಪನೆ ಮಾಡಿದ್ದಾರೆ ಎಂದು ಹೇಳಿದಾಗ, 'ಅದು ಅವರ ವೈಯಕ್ತಿಕ ಹಾಗೂ ಅವರ ಪಕ್ಷದ ವಿಚಾರ. ನಾವು ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಹಾಗೂ ಜಾತ್ಯಾತೀತ ತತ್ವಕ್ಕೆ ಬೆಲೆ ಕೊಡುವವರನ್ನು ಗೌರವಿಸುತ್ತೇವೆ. ನಾವು ನೀತಿ ಮೇಲೆ ರಾಜಕಾರಣ ಮಾಡುತ್ತೇವೆ' ಎಂದು ತಿಳಿಸಿದರು.
ಹೊಸ ಪಕ್ಷ ಬಳ್ಳಾರಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡುವುದೇ ಎಂದು ಕೇಳಿದಾಗ, 'ಅವರು ಇಂದು ಪಕ್ಷದ ಘೋಷಣೆ ಮಾಡಿದ್ದಾರೆ. ಒಂದು ಗಿಡ ಮರವಾಗಲು ಸಾಕಷ್ಟು ಸಮಯಬೇಕು. ಅವರಿಗೆ ಒಳ್ಳೆಯದಾಗಲಿ ' ಎಂದು ತಿಳಿಸಿದರು. ಈ ಮೂಲಕ ಹೊಸ ಪಕ್ಷದಿಂದ ಸದ್ಯಕ್ಕೆ ಕಾಂಗ್ರೆಸ್‌ಗೆ ಯಾವುದೇ ತೊಂದರೆಯಾಗದು ಎನ್ನುವ ಹೇಳಿಕೆ ನೀಡಿದ್ದಾರೆ.
ರಾಜಕಾರಣ- ಸ್ನೇಹ ಬೇರೆಬೇರೆ ಎಂದ ಶ್ರೀರಾಮುಲು
ಜನಾರ್ದನ ರೆಡ್ಡಿಯವರ ಹೊಸ ಪಕ್ಷದ ಕುರಿತು ರೆಡ್ಡಿಯವರ ಸ್ನೇಹಿತ ಶ್ರೀರಾಮುಲು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಜನಾರ್ದನ ರೆಡ್ಡಿಯವರು ನನ್ನ ಆತ್ಮೀಯ ಗೆಳೆಯರಾಗಿ ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದರು. ಅವರು ಈಗ ಹೊಸ ಪಕ್ಷ ಕಟ್ಟಿದ್ದಾರೆ. ಅವರು ಸಾಕಷ್ಟು ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಪಕ್ಷದ ಸಿಪಾಯಿ. ನಾನು ಬಿಜೆಪಿಯ ಸಿದ್ದಾಂತದಂತೆ ಕೆಲಸ ಮಾಡುತ್ತೇನೆ. ರಾಜಕೀಯ ಬೇರೆ, ಸ್ನೇಹ ಬೇರೆ ಎಂದು ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
ಜನಾರ್ದನ ರೆಡ್ಡಿಯವರಿಗೆ ಪಕ್ಷವು ಬೆಂಬಲ ನೀಡಿದೆ. ಅವರನ್ನು ಪಕ್ಷ ಯಾವತ್ತಿಗೂ ಬಿಟ್ಟುಕೊಟ್ಟಿಲ್ಲ. ಈ ಕುರಿತು ಚರ್ಚಿಸಲು ನನಗೆ ಇಷ್ಟವಿಲ್ಲ. ರೆಡ್ಡಿಯವರು ಅನುಭವಿ ರಾಜಕಾರಣಿ. ಇಲ್ಲಿಯವರೆಗೆ ಈ ವಿಷಯದಲ್ಲಿ ಮನವೋಲಿಕೆಗೆ ಪ್ರಯತ್ನಿಸಿದ್ದೆ. ಈಗ ಆ ಕೆಲಸ ಮುಗಿದಿದೆ. ಈಗ ಸಿದ್ದಾಂತ ಬೇರೆ ಇರುವ ಕಾರಣ ಮನವೋಲಿಕೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿಯು ರಾಷ್ಟ್ರೀಯ ಪಕ್ಷ. ಪಕ್ಷದ ಹಿನ್ನೆಲೆ ಮತ್ತು ಸಿದ್ದಾಂತದ ಬೆಂಬಲವಿದೆ. ಹೀಗಾಗಿ, ಕಾರ್ಯಕರ್ತರು ನಮ್ಮ ಜತೆಗೆ ಇರಲಿದ್ದಾರೆ. ನಮ್ಮ ಪಕ್ಷದ ಮೇಲೆ ಹೊಸ ಪಕ್ಷ ಯಾವುದೇ ಪ್ರಭಾವ ಬೀರದು. ನಾನು ಸ್ನೇಹಿತನಾಗಿ ಅವರೊಂದಿಗೆ ಇರುವೆ. ಹೊಸ ಪಕ್ಷದ ಕುರಿತು ಹೆಚ್ಚೇನು ಹೇಳಲಾರೆʼʼ ಎಂದು ಶ್ರೀರಾಮುಲು ಹೇಳಿದ್ದಾರೆ.
"ಶ್ರೀರಾಮುಲು ನನ್ನ ಮನೆ ಮಗನಂತೆ. ಇದೀಗ ಅವರು ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದಾರೆ. ಅಧಿಕಾರ ಬಿಟ್ಟು ನನ್ನ ಪಕ್ಷಕ್ಕೆ ಸೇರಿ ಎಂದು ಹೇಳಲಾರೆʼʼ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ಈ ಮೂಲಕ ಶ್ರೀರಾಮುಲು ಅವರನ್ನು ನನ್ನ ಪಕ್ಷಕ್ಕೆ ಬರುವಂತೆ ಒತ್ತಾಯಿಸಲಾರೆ ಎಂದು ಜನಾರ್ದನ ರೆಡ್ಡಿಯವರು ಇಂದು ಹೊಸ ಪಕ್ಷ ಘೋಷಣೆ ಮಾಡಿದ ಸಂದರ್ಭದಲ್ಲಿ ಹೇಳಿದ್ದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ
ಬೆಂಗಳೂರಿನಲ್ಲಿರುವ ಜನಾರ್ದನ ರೆಡ್ಡಿಯವರ ನಿವಾಸ "ಪಾರಿಜಾತʼʼದಲ್ಲಿ ಇಂದು ನೂತನ ಪಕ್ಷದ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ತಮ್ಮ ಸ್ನೇಹಿತ ಶ್ರೀರಾಮುಲು ಕುರಿತೂ ಸಾಕಷ್ಟು ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಬಳ್ಳಾರಿ ಜನರ ಸೇವೆಗೆ ನಾನು ಸದಾ ಸಿದ್ಧ ಎಂದು ಜನಾರ್ದನ ರೆಡ್ಡಿಯವರು ಹೇಳಿದ್ದಾರೆ.
ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಘಟನೆಯನ್ನು ರಾಜ್ಯಾದ್ಯಾಂತ ಮಾಡುತ್ತೇನೆ. ರಾಜ್ಯದ ಅಭಿವೃದ್ಧಿ ನನ್ನ ಗುರಿಯಾಗಿದ್ದು, ಸಾರ್ವಜನಿಕ ಜೀವನದಲ್ಲಿ ಏನೇ ಸವಾಲು ಬರಲಿ, ಮುನ್ನುಗ್ಗುತ್ತೇನೆ ಎಂದು ಹೇಳಿದ್ದಾರೆ. ರಾಜ್ಯದ ಯಾವ ಯಾವ ಕ್ಷೇತ್ರಗಳಲ್ಲಿ ಸ್ಪರ್ದಿಸುತ್ತೇನೆ ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಗಾಗಿ ನಾನು ಸಾಕಷ್ಟು ಕೆಲಸ ಮಾಡಿದೆ. ಮೊದಲ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರಕಾರ ರಚಿಸುವಲ್ಲಿ ನನ್ನ ಪಾತ್ರ ಪ್ರಮುಖವಾಗಿತ್ತು. ಆದರೆ, ಕಷ್ಟದ ದಿನಗಳಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಹೊರತುಪಡಿಸಿ ಯಾರೊಬ್ಬರೂ ನನ್ನ ಪರವಾಗಿ ನಿಲ್ಲಲಿಲ್ಲ ಎಂದು ಜನಾರ್ದನ ರೆಡ್ಡಿಯವರು ಈ ಸಂದರ್ಭದಲ್ಲಿ ಹೇಳಿದರು.
ಈ ಹಿಂದೆಯೂ ಸರಕಾರ ನನ್ನನ್ನು ಟಾರ್ಗೆಟ್ ಮಾಡಿದೆ. ಮುಂದೆಯೂ ಟಾರ್ಗೆಟ್ ಮಾಡಲಿದೆ ಎನ್ನುವ ಸಂಗತಿ ಗೊತ್ತು. ನನ್ನ ಪತ್ನಿಯೂ ನನ್ನೊಂದಿಗೆ ಪಕ್ಷದಲ್ಲಿ ಇರಲಿದ್ದಾರೆ. ಶೀಘ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯನ್ನು ಪ್ರಕಟಿಸುತ್ತೇನೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ತಾನು ಸ್ಪರ್ಧಿಸುವ ಕ್ಷೇತ್ರದ ಕುರಿತು ಜನಾರ್ದನ ರೆಡ್ಡಿ ಪ್ರಕಟಿಸಿದ್ದಾರೆ. ನಾನು ಚುನಾವಣೆಗೆ ಗಂಗಾವತಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ.